More

    ಪಕ್ಷದ ಅಂಕುಡೊಂಕು ತಿದ್ದಲು ಹೋರಾಟ

    ಶಿವಮೊಗ್ಗ: ನನ್ನ ರಾಜಕೀಯ ಭವಿಷ್ಯಕ್ಕಾಗಿ ಹಾಗೂ ಪಕ್ಷದ ಅಂಕುಡೊಂಕುಗಳನ್ನು ತಿದ್ದುವ ಹಿನ್ನೆಲೆಯಲ್ಲಿ ಹೋರಾಟ ನಡೆಸಿರುವುದಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

    ಪುತ್ರ ಕೆ.ಇ.ಕಾಂತೇಶ್‌ಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್‌ಗೆ ಬೇಡಿಕೆ ಇಟ್ಟಿರುವ ಈಶ್ವರಪ್ಪ ಈ ದಿಸೆಯಲ್ಲಿ ಹೋರಾಟ ಮುಂದುವರಿಸುವುದಾಗಿ ಘೊಷಿಸಿದರಲ್ಲದೆ, ಮಾ.15ರಂದು ಶಿವಮೊಗ್ಗದಲ್ಲಿ ಅಭಿಮಾನಿಗಳು ಕರೆದಿರುವ ಸಭೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ. ಈ ಮೂಲಕ ಹೋರಾಟದಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.
    ಪಕ್ಷದ ಜಿಲ್ಲಾ ಕಚೇರಿಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಹಾಗೂ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಹಾಜರಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯವಾಗಿ ಬಲಿಪಶು ಆಗುತ್ತಿರುವುದಾಗಿ ನಾನೇನು ಭಾವಿಸಿಲ್ಲ. ಆದರೆ ಪಕ್ಷದ ಅಂಕುಡೊಂಕುಗಳನ್ನು ಸರಿಪಡಿಸುವುದಕ್ಕಾಗಿ ಈ ಹೋರಾಟ ಎಂದು ಪುನರುಚ್ಚರಿಸಿದರು.
    ಪಕ್ಷ ಸರಿಯಾದ ಹಾದಿಯಲ್ಲಿ ಸಾಗಬೇಕು ಮತ್ತು ಭವಿಷ್ಯದ ಬಗ್ಗೆ ಚರ್ಚೆಯಾಗಬೇಕಿದೆ. ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಾವ ಕಾರಣದಿಂದ ಪಕ್ಷಕ್ಕೆ ಹಿನ್ನಡೆಯಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಮತ್ತೆ ಅದು ಮರುಕಳಿಸಬಾರದು ಎನ್ನುವ ಮೂಲಕ ಪಕ್ಷದ ಹಿರಿಯ ನಾಯಕರನ್ನು ಕಡೆಗಣಿಸಿದರೆ ಏನಾಗುತ್ತದೆ ಎಂಬುದನ್ನು ಸೂಚ್ಯವಾಗಿ ಹೇಳಿದರು.
    ವಿಧಾನಸಭೆ ಸೋಲಿನಿಂದ ನಾವು ಪಾಠ ಕಲಿಯಬೇಕಿದೆ. ಈ ಬಗ್ಗೆ ಪುನರಾವಲೋಕನ ಆಗಿದೆ. ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಹಿಂದೆಯೇ ಹೇಳಿದ್ದೇನೆ. ಹಾಗಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸುವ ಮಾತೇ ಇಲ್ಲ. ನನ್ನ ಪುತ್ರ ಕಾಂತೇಶ್‌ಗೆ ಟಿಕೆಟ್ ಕೇಳಿದ್ದೇನೆ. ಏನಾಗುತ್ತದೆ ಎಂಬುದನ್ನು ಮುಂದೆ ನೋಡೋಣ ಎಂದರು.
    ಮಾ.15ರಂದು ಶಿವಮೊಗ್ಗದ ಬಂಜಾರ ಸಮುದಾಯ ಭವನದಲ್ಲಿ ಸಭೆ ನಡೆಯಲಿದೆ. ಅಂದು ಜಿಲ್ಲೆ ಸೇರಿ ರಾಜ್ಯದ ಎಲ್ಲಡೆಯಿಂದಲೂ ಅಭಿಮಾನಿಗಳು ಬರಲಿದ್ದಾರೆ. ನಾನೂ ಕೂಡ ಭಾಗವಹಿಸುತ್ತೇನೆ. ಆ ಸಭೆಯಲ್ಲಿ ಕೇಳಿಬಂದ ಅಭಿಪ್ರಾಯದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.
    ತಾವು ಎಲ್ಲಿಯೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿಲ್ಲ. ಕಾರ್ಯಕರ್ತರು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ನಾಲ್ಕು ಗೋಡೆಗಳ ನಡುವೆ ಚರ್ಚಿಸಿದ ನಂತರ ತೀರ್ಮಾನ ತೆಗೆದುಕೊಳ್ಳುತ್ತೇನೆ. ಬಹಿರಂಗವಾಗಿ ಏನನ್ನೂ ಹೇಳುವುದಿಲ್ಲ. ತಮಗೆ ಅನ್ಯಾಯವಾಗಿದೆ ಎಂದು ಹಿತೈಷಿಗಳು, ಅಭಿಮಾನಿಗಳು, ಕಾರ್ಯಕರ್ತರು ಹೇಳುತ್ತಿದ್ದಾರೆ. ಹಿಂದುಳಿದ ವರ್ಗದ ಮುಖಂಡರು ರಾಜ್ಯದ ಹತ್ತಾರು ಕಡೆಗಳಿಂದ ದೂರವಾಣಿ ಮೂಲಕ ನನ್ನೊಂದಿಗೆ ಮಾತನಾಡುತ್ತಿದ್ದಾರೆ. ಎಲ್ಲರಿಗೂ ನೋವಾಗಿದೆ. ಆ ಕಾರಣಕ್ಕಾಗಿ ಸಭೆ ಕರೆದಿದ್ದಾರೆ ಎಂದರು.
    ಬಿಎಸ್‌ವೈ ನೀಡಿದ್ದರು ಭರವಸೆ: ಸಂಸದ ಶಿವಕುಮಾರ್ ಉದಾಸಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪ್ರಕಟಿಸಿದಾಗ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಹಾವೇರಿ ಕ್ಷೇತ್ರದಿಂದ ಸ್ಪರ್ಧಿಸಲು ಪುತ್ರ ಕಾಂತೇಶ್ ಅವಕಾಶ ನೀಡುವಂತೆ ಮಾನವಿ ಮಾಡಿದ್ದೆ. ಕಾಂತೇಶ್‌ಗೆ ಟಿಕೆಟ್ ಕೊಡಿಸುವುದಲ್ಲದೆ, ಪ್ರಚಾರ ನಡೆಸುವುದಾಗಿಯೂ ಭರವಸೆ ನೀಡಿದ್ದರು. ಅದರಂತೆ ಕಾಂತೇಶ್ ಕಳೆದ ಎರಡು ವರ್ಷದಿಂದಲೂ ಹಾವೇರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ನನ್ನ ಪುತ್ರನ ಪರವಾಗಿ ಹೋರಾಟ ನಡೆಸಿರುವುದಾಗಿ ಈಶ್ವರಪ್ಪ ಹೇಳಿದರು. ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ನನಗೆ ಟಿಕೆಟ್ ನೀಡದೆ ಸೊಸೆಗೆ ಕೊಡುವುದಾಗಿ ಪಕ್ಷದ ಮುಖಂಡರು ಹೇಳಿದ್ದರು. ಆಗ ತಮ್ಮ ಕುಟುಂಬದ ಮಹಿಳೆಯರು ರಾಜಕೀಯಕ್ಕೆ ಬರುವುದಿಲ್ಲ. ಮಗನಿಗೆ ಕೊಡಿ ಎಂದು ಕೇಳಿದ್ದೆ. ಆಗ ಟಿಕೆಟ್ ಕೊಟ್ಟಿರಲಿಲ್ಲ. ಈಗ ಮತ್ತೊಮ್ಮೆ ಮಗನಿಗಾಗಿ ಕೇಳಿದ್ದೇನೆ ಅಷ್ಟೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts