More

    ಮಾಸಾಶನಕ್ಕಾಗಿ ವೃದ್ಧರ ಧರಣಿ

    ಯಡ್ರಾಮಿ: ಎರಡ್ಮೂರು ತಿಂಗಳಿಂದ ಸಂಧ್ಯಾ ಸುರಕ್ಷಾ ಯೋಜನೆಯಡಿ ಮಾಸಾಶನ ಸ್ಥಗಿತಗೊಂಡಿದ್ದು, ಕೂಡಲೇ ಸಮಸ್ಯೆ ಸರಿಪಡಿಸಿ ಪಿಂಚಣಿ ನೀಡುವಂತೆ ಆಗ್ರಹಿಸಿ ತಹಸಿಲ್ ಕಚೇರಿ ಎದುರು ಬಳಬಟ್ಟಿ ಗ್ರಾಮದ ವೃದ್ಧರು ಸೋಮವಾರ ಧರಣಿ ನಡೆಸಿದರು.

    ಮೂರು ತಿಂಗಳಿಂದ ಬಳಬಟ್ಟಿ ಇತರ ಹಳ್ಳಿ ವೃದ್ಧರಿಗೆ ಮಾಸಾಶನ ಬರುತ್ತಿಲ್ಲ. ಕೇಳಲು ಹೋದರೆ ಕಚೇರಿಗಳಲ್ಲಿ ಸಿಬ್ಬಂದಿ ಇರಲ್ಲ. ಕಳೆದೊಂದು ತಿಂಗಳಿಂದ ಕಚೇರಿಗೆ ಅಲೆದಾಡಿ ಸಾಕಾಗಿದೆ. ಮೊದಲು ನಿಮ್ಮ ಅಕೌಂಟ್‌ಗೆ ಇ-ಕೆವೈಸಿ ಮಾಡಿಸಿಕೊಳ್ಳಿ ಎಂದು ಹೇಳಿ ವಾಪಸ್ ಕಳಿಸುತ್ತಿದ್ದಾರೆ. ಅಂಚೆ ಕಚೇರಿಗೆ ಹೋಗಿ ಖಾತೆಯನ್ನು ಇ-ಕೆವೈಸಿ ಮಾಡಿಸಿಕೊಂಡು ಬಂದರೂ ಸುಮ್ಮನೆ ತಿರುಗಾಡಿಸುತ್ತಿದ್ದಾರೆ. ಕಂದಾಯ ಇಲಾಖೆಯಲ್ಲಿ ಯಾರೊಬ್ಬರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದರು.

    ಬಳಬಟ್ಟಿ ಗ್ರಾಮದಲ್ಲಿ ೧೫ಕ್ಕೂ ಅಧಿಕ ವೃದ್ಧರ ಪಿಂಚಣಿ ಸ್ಥಗಿತಗೊಂಡಿದ್ದರಿಂದ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಹಣ ನೀಡಿದವರಿಗೆ ಮಾಸಾಶನ ನೀಡಲಾಗುತ್ತಿದೆ. ನಾವು ಎಲ್ಲಿಂದ ದುಡ್ಡು ತರಬೇಕು? ತಾಲೂಕು ಕಚೇರಿಗೆ ಬರುವುದಕ್ಕೂ ಸರಿಯಾದ ಬಸ್ ವ್ಯವಸ್ಥೆಯಿಲ್ಲ. ಅತ್ಯಧಿಕ ದುಡ್ಡು ನೀಡಿ ಖಾಸಗಿ ವಾಹನಗಳಲ್ಲಿ ಅಲೆದಾಡುತ್ತಿದ್ದೇವೆ. ನಮ್ಮ ಸಮಸ್ಯೆಗೆ ಸ್ಪಂದಿಸುವವರು ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು.

    ಪ್ರಮುಖರಾದ ಮಡಿವಾಳಪ್ಪ ಹೊಸೂರ, ಶಂಕ್ರಮ್ಮ ಶಹಾಪುರ, ಶರಣಮ್ಮ ಕಾರನೂರ, ಸಂಗಣ್ಣ ದೊರಿ, ಥಾವರು ದೇವಲು, ಚನ್ನಬಸ್ಸಪ್ಪ ಮಲ್ಲೇದ, ಸುಮಂಗಲಾ, ಶ್ರೀದೇವಿ ರಾಠೋಡ್, ಮಲ್ಲಿನಾಥ ದೇವಲು, ಶಾಂತಾಬಾಯಿ ರಾಠೋಡ್ ಇತರರಿದ್ದರು.

    ಮೂರು ತಿಂಗಳಿಂದ ಸಂಧ್ಯಾ ಸುರಕ್ಷಾ ಯೋಜನೆ ಮಾಸಾಶನ ಬಂದ್ ಆಗಿದೆ. ಇದರಿಂದ ನಿತ್ಯ ಜೀವನ ನಡೆಸುವುದು ಕಷ್ಟಕರವಾಗಿದೆ. ತಾಲೂಕು ಕಚೇರಿಗೆ ಹೋಗಿ ಕೇಳಿದರೆ ಇಲ್ಲದ ಸಿಬ್ಬಂದಿ ಹೆಸರು ಹೇಳುವುದು, ಸರ್ವರ್ ಇಲ್ಲ ಇತರ ಸಬೂಬು ಹೇಳಿ ಕಳಿಸುತ್ತಿದ್ದಾರೆ. ನಿತ್ಯ ಆಫೀಸ್‌ಗಳಿಗೆ ಅಲೆದಾಡಿ ಸಾಕಾಗಿದೆ.
    | ದೊಡ್ಡಪ್ಪ ಮದರಿ, ಬಳಬಟ್ಟಿ

    ಸಂಧ್ಯಾ ಸುರಕ್ಷಾ ಯೋಜನೆ ಮಾಸಾಶನ ಬಂದ್ ಮಾಡಲು ನಮಗೇನು ಕೆಲಸವಿಲ್ಲವೆ? ಇ-ಕೆವೈಸಿ ಸಮಸ್ಯೆ ಇರಬಹುದು, ಒಮ್ಮೆ ಖಾತರಿಪಡಿಸಿಕೊಳ್ಳಲಿ. ಸರ್ವರ್ ತೊಂದರೆ ಇದ್ದು, ಎರಡು ದಿನ ಬಳಿಕ ಸಿಬ್ಬಂದಿ ಹತ್ತಿರ ಬಂದು ಪರೀಕ್ಷಿಸಿಕೊಳ್ಳಲಿ.
    | ಸತ್ಯಪ್ರಸಾದ ಗ್ರೇಡ್-೨ ತಹಸೀಲ್ದಾರ್, ಯಡ್ರಾಮಿ

    ವೃದ್ಧರ ಸಮಸ್ಯೆ ಆಲಿಸದ ತಾಲೂಕು ಆಡಳಿತ: ತಹಸಿಲ್ ಎದುರು ಬಳಬಟ್ಟಿ ಗ್ರಾಮದ ೧೫ಕ್ಕೂ ಹೆಚ್ಚು ವೃದ್ಧರು ಬಿಸಿಲು ಲೆಕ್ಕಿಸದೆ ಧರಣಿ ನಡೆಸುತ್ತಿದ್ದರೂ ತಾಲೂಕು ಆಡಳಿತದ ಯಾವೊಬ್ಬ ಅಧಿಕಾರಿ ಬಂದು ಸಮಸ್ಯೆ ಕೇಳುವ ಗೋಜಿಗೆ ಹೋಗಿಲ್ಲ. ಬೆಳಗ್ಗೆ ೧೧ರಿಂದ ಸಂಜೆ ೪ರವರೆಗೆ ಧರಣಿ ನಡೆಸಿದರೂ ಯಾರೊಬ್ಬರೂ ಮಾತನಾಡಿಸಲಿಲ್ಲ. ಕೊನೆಗೆ ಗ್ರಾಮದ ಕೆಲವರು ತಹಸೀಲ್ದಾರ್ ಅವರನ್ನು ಭೇಟಿ ಮಾಡಿ ಸಮಸ್ಯೆ ಹೇಳಿದರು. ಅವರು ಗ್ರೇಡ್-೨ ತಹಸೀಲ್ದಾರ್ ಬಳಿ ಹೋಗಲು ಸೂಚಿಸಿದರು. ಬಳಿಕ ಗ್ರೇಡ್-೨ ತಹಸೀಲ್ದಾರ್ ಸತ್ಯಪ್ರಸಾದ ಅವರನ್ನು ಕೇಳಿದರೆ ನಮಗೇನು ಮಾಡಲು ಬೇರೆ ಕೆಲಸ ಇಲ್ವಾ? ಎಲ್ಲವನ್ನು ನಮ್ಮನ್ನೇ ಕೇಳಿದ್ರೆ ಹೇಗೆ ಎಂದು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts