More

    ಬೀದಿ ಬದಿ ವ್ಯಾಪಾರಿಗಳ ಗೋಳು

    ಚಿಂಚಲಿ: ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಸರ್ಕಾರ ವಿವಿಧ ಯೋಜನೆ ಜಾರಿಗೊಳಿಸಿದ್ದರೂ ಸ್ಥಳೀಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವ್ಯಾಪಾರಿಗಳ ಗೋಳು ಮುಗಿಯುವಂತೆ ಕಾಣುತ್ತಿಲ್ಲ. ಸರ್ಕಾರದ 10 ಸಾವಿರ ರೂಪಾಯಿ ಸಹಾಯಧನ ಪಡೆಯಲು ಕಚೇರಿಗೆ ಎಡತಾಕುತ್ತಿದ್ದರೂ ಸಮಸ್ಯೆಗೆ ಸೂಕ್ತ ಪರಿಹಾರ ಸಿಕ್ಕಿಲ್ಲ.

    ವ್ಯಾಪಾರವೇ ಜೀವನಾಧಾರ: ಬೀದಿಬದಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿರುವ ವ್ಯಾಪಾರಸ್ಥರಿಗೆ ಪಟ್ಟಣದಲ್ಲಿ ಸಮರ್ಪಕ ಸೌಲಭ್ಯ ಸಿಗುತ್ತಿಲ್ಲ. ಲಾಕ್ ಡೌನ್‌ನಿಂದಾಗಿ ಬದುಕು ಅಕ್ಷರಶಃ ಮೂರಾ ಬಟ್ಟೆ ಯಾಗಿದೆ. ಲಾಕ್ ಡೌನ್ ಸಡಿಲಗೊಂಡಿ ದ್ದರೂ ಗ್ರಾಹಕರಿಲ್ಲದೆ ವ್ಯಾಪಾ ರ ಕುದುರುತ್ತಿಲ್ಲ. ಸೂಕ್ತ ಮುನ್ನೆಚ್ಚರಿಕೆ ವಹಿಸಿ ವ್ಯಾಪಾರ ಮಾಡುತ್ತೇವೆ ಎಂದರೂ ಗ್ರಾಹಕರು ಸುಳಿಯುತ್ತಿಲ್ಲ. ಸಾಲ ಮಾಡಿ ತರಕಾರಿ, ಹಣ್ಣು ಮತ್ತಿತರ ತರಕಾರಿ ಬೆಳೆ ಖರೀದಿಸಿ ವ್ಯಾಪಾರಕ್ಕೆ ಕುಳಿತರೆ ಕೆಲವೊಮ್ಮೆ ಹಾಕಿದ ಬಂಡವಾಳ ಸಹ ಕೈ ಸೇರುತ್ತಿಲ್ಲ ಎಂಬುದು ವ್ಯಾಪಾರಿಗಳ ಅಳಲಾಗಿದೆ.

    ಸಿಗದ ಸಹಾಯಧನ: ಬೀದಿ ಬದಿ ವ್ಯಾಪಾರಿಗಳಿಗೆ ತಲಾ 10 ಸಾವಿರ ರೂ. ನಂತೆ ಸಹಾಯ ಧನ ನೀಡುವ ಯೋಜನೆ ಜಿಲ್ಲೆಯ ಹಲವು ಪಪಂಗಳಲ್ಲಿ ಪ್ರಧಾನಮಂತ್ರಿ ಆತ್ಮನಿರ್ಭರ ನಿಧಿಯಡಿ ಕಿರುಸಾಲ ಯೋಜನೆ ಹಾಗೂ ಕೇಂದ್ರ ಸರ್ಕಾರದ ಪಂಡಿತ್ ದೀನದಯಾಳ್ ಅಂತ್ಯೋದಯ-ರಾಷ್ಟ್ರೀಯ ನಗರ ಜೀವನೋಪಾಯ ಮಿಶನ್ ಯೋಜನೆ (ಡೇ-ನಲ್ಮ್) ಅಡಿಯಲ್ಲಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗುತ್ತಿದೆ, ಆದರೂ, ತಮಗೆ ಅರಿವಿಲ್ಲದವರಂತೆ ವರ್ತಿಸುತ್ತಿರುವ ಪಟ್ಟಣ ಪಂಚಾಯಿತಿ ಅಧಿಕಾರಿ ಮತ್ತು ಸಿಬ್ಬಂದಿ ವ್ಯಾಪಾರಿಗಳಿಗೆ ಅನುಕೂಲವಾಗುವ ಯೋಜನೆಗಳನ್ನು ಯಾವ ರೀತಿ ಅನುಷ್ಠಾನ ಮಾಡಬೇಕೆನ್ನುವ ಗೊಂದಲದಲ್ಲಿದ್ದಂತಿದೆ. ಇದರಿಂದ ಒಟ್ಟು 92 ನೋಂದಾಯಿತ ಬೀದಿಬದಿ ವ್ಯಾಪಾರಿಗಳು ಪದೇ ಪದೆ ಪಟ್ಟಣ ಪಂಚಾಯಿತಿ ಕಚೇರಿಗೆ ಭೇಟಿ ಕೊಡುತ್ತಿದ್ದರೂ ಸರಿಯಾದ ಮಾಹಿತಿ ಇಲ್ಲದೆ ಹಿಂತಿರುಗಿ ಹಿಡಿಶಾಪ ಹಾಕುತ್ತಿದ್ದಾರೆ. ಸಂಬಂಧಪಟ್ಟವರು ಬೀದಿಬದಿ ವ್ಯಾಪಾರಿಗಳಿಗೆ ಇರುವ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಬೇಕೆನ್ನುವುದು ವ್ಯಾಪಾರಿಗಳ ಆಗ್ರಹ.

    ಮರು ಸಮೀಕ್ಷೆಗೆ ಆಗ್ರಹ

    6 ತಿಂಗಳ ಹಿಂದೆ ಪಪಂ ವ್ಯಾಪ್ತಿಯಲ್ಲಿನ ನೋಂದಾಯಿತ ಬೀದಿಬದಿ ವ್ಯಾಪಾರಿಗಳಿಗೆ ಪಟ್ಟಣ ವ್ಯಾಪಾರ ಸಮಿತಿ ರಚಿಸುವ ಹಿನ್ನೆಲೆಯಲ್ಲಿ ಸಮಿತಿಗೆ ಚುನಾವಣೆ ನಡೆಸಿತ್ತಾದರೂ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ 10 ಚುನಾಯಿತ ಅಭ್ಯರ್ಥಿಗಳಿಗೆ ಅಂದಿನ ರಿಟರ್ನಿಂಗ್ ಅಧಿಕಾರಿ ಪ್ರಮಾಣ ಪತ್ರ ವಿತರಿಸದಿರುವುದು ವಿಪರ್ಯಾಸ. ಪಪಂನಿಂದ ಕೆಲ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ನೀಡಲಾಗಿದೆ. ಆದರೆ, ಚೀಟಿಯಲ್ಲಿ ಯಾವೊಬ್ಬ ಅಧಿಕಾರಿಯ ಸಹಿಯಾಗಲಿ, ಕಚೇರಿಯ ಮೊಹರಾಗಲೀ ದಾಖಲಿಸಿಲ್ಲ. ನೋಂದಾಯಿತ ವ್ಯಾಪಾರಿಗಳನ್ನು ಹೊರತುಪಡಿಸಿ ಮತ್ತೊಮ್ಮೆ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ಮಾಡಿ ಅರ್ಹರನ್ನು ಗುರುತಿಸಿ ನೋಂದಾಯಿಸಿಕೊಳ್ಳಬೇಕೆಂದು ಸಮೀಕ್ಷೆಯಲ್ಲಿ ಬಿಟ್ಟುಹೋದ ವ್ಯಾಪಾರಿಗಳು ಸರ್ಕಾರ, ಅಧಿಕಾರಿಗಳನ್ನು ಆಗ್ರಹಿಸುತ್ತಿದ್ದಾರೆ.

    ಬೀದಿ ಬದಿ ವ್ಯಾಪಾರಸ್ಥರಿಗೆ ಸಂಬಂಧಪಟ್ಟ ಮಾಹಿತಿಯನ್ನು ಈಗಾಗಲೇ ರಾಜ್ಯ ಸರ್ಕಾರಕ್ಕೆ ಆನ್‌ಲೈನ್ ಮೂಲಕ ಸಲ್ಲಿಸಲಾಗಿದೆ. ಅವರ ಅನುಕೂಲಕ್ಕಾಗಿ ಇರುವ ಯೋಜನೆಗಳನ್ನು ಮಾರ್ಗಸೂಚಿ ಪ್ರಕಾರ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
    | ಎಸ್.ಜಿ.ಪೂಜೇರಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಿಂಚಲಿ

    ಹಲವು ಬೀದಿ ಬದಿ ವ್ಯಾಪಾರಸ್ಥರು ಸಮೀಕ್ಷೆಯಿಂದ ಹೊರಗುಳಿದಿದ್ದಾರೆ. ಅಂಥವರನ್ನು ಗುರುತಿಸಿ ಮರು ಸಮೀಕ್ಷೆ ಮಾಡಿ ಬಿಟ್ಟುಹೋದ ಬೀದಿ ವ್ಯಾಪಾರಸ್ಥರನ್ನು ನೋಂದಾಯಿಸಿಕೊಂಡು ಆರ್ಥಿಕವಾಗಿ ನೆರವು ಕಲ್ಪಿಸಿಕೊಡಬೇಕು
    | ಸಿದ್ದಪ್ಪ ಮಲಾಜುರೆ ಸಮೀಕ್ಷೆಯಲ್ಲಿ ಬಿಟ್ಟುಹೋದ ಬೀದಿ ಬದಿ ವ್ಯಾಪಾರಿ

    ಚಿಂಚಲಿ ಪಟ್ಟಣದ ವ್ಯಾಪಾರ ಸಮಿತಿಗೆ ಚುನಾವಣೆ ನಡೆಸಿ 6 ತಿಂಗಳಾದರೂ ಇಲ್ಲಿಯವರೆಗೆ ಚುನಾಯಿತ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡಿಲ್ಲ. ಕರೊನಾ ಭಯದಿಂದ ಗ್ರಾಹಕರಿಲ್ಲದೆ ವ್ಯಾಪಾರ ನಡೆಸುವುದೇ ಕಷ್ಟವಾಗಿದೆ. ಸಾಲ ಸಿಕ್ಕರೆ ಅನುಕೂಲವಾಗುತ್ತದೆ. ಶೀಘ್ರ ವ್ಯಾಪಾರಿಗಳಿಗೆ ಸಾಲ ಹಾಗೂ ಪ್ರಮಾಣಪತ್ರ ವಿತರಿಸುವ ಕ್ರಮ ಕೈಗೊಳ್ಳಬೇಕು.
    | ಶಕೀಲ್ ಐನಾಪುರೆ ಅಧ್ಯಕ್ಷರು, ಪಟ್ಟಣ ವ್ಯಾಪಾರ ಸಮಿತಿ, ಚಿಂಚಲಿ

    | ಸುನೀಲ ಮಾಂಜರಿ ಚಿಂಚಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts