More

    ಕಣ್ಮರೆಯಾಗುತ್ತಿವೆ ಬೀದಿ ನಾಯಿಗಳು ! ಹೊಸಪೇಟೆಯಲ್ಲಿ ನಕಲಿ ಆಪರೇಷನ್ ? ಶ್ವಾನಪ್ರಿಯರಲ್ಲಿ ಹೆಚ್ಚಿದ ಆತಂಕ

    ವೀರೇಂದ್ರ ನಾಗಲದಿನ್ನಿ ಹೊಸಪೇಟೆ
    ನೀವು ಶ್ವಾನ ಪ್ರಿಯರೇ, ಬೀದಿನಾಯಿಗಳನ್ನು ಸಾಕಿದ್ದೀರಾ ? ಹಾಗಾದರೆ, ನಿಮ್ಮ ನಾಯಿ ಕಳುವಾದೀತು ಜೋಕೆ !

    ನಗರದಲ್ಲಿ ಬೀದಿನಾಯಿಗಳನ್ನು ಅನಧಿಕೃತವಾಗಿ ಬೇರೆಡೆ ಸ್ಥಳಾಂತರಿಸುವ ಜಾಲವೊಂದು ಸಕ್ರಿಯವಾಗಿದೆ. ರಾತ್ರಿ ಕಳೆದು ಬೆಳಗಾಗುವುದರೊಳಗೆ ಶ್ವಾನಗಳು ನಾಪತ್ತೆಯಾಗುತ್ತಿವೆ. ಅನೇಕರು ಬೀದಿ ನಾಯಿಗಳನ್ನೂ ಮುದ್ದಾಗಿ ಸಾಕಿರುತ್ತಾರೆ. ಇದ್ದಕ್ಕಿದ್ದಂತೆ ನಾಯಿಗಳು ಕಣ್ಣಿಗೆ ಬೀಳದಿದ್ದರಿಂದ ಅನೇಕರು ಹುಡುಕಾಡುತ್ತಿದ್ದಾರೆ. ಅಕ್ಕಪಕ್ಕದ ಓಣಿಯಲ್ಲಿ ವಿಚಾರಿಸಿದರೆ ‘ಇತ್ತೀಚೆಗೆ ರಾತ್ರಿ ನಾಯಿಗಳನ್ನು ವಾಹನವೊಂದರಲ್ಲಿ ಎಳೆದೊಯ್ದಿದ್ದಾರೆ’ ಎಂಬ ಮಾಹಿತಿ ಸಿಗುತ್ತಿದೆ. ಆದರೆ, ಕರೆದೊಯ್ದಿದ್ದು ಯಾರು ? ಅದರ ಉದ್ದೇಶವೇನು ? ಮತ್ಯಾವಾಗ ತಂದು ಬಿಡುತ್ತಾರೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರವೇ ಇಲ್ಲದಂತಾಗಿದೆ. ‘ಇದಕ್ಕೂ ನಮಗೂ ಸಂಬಂಧವೇ ಇಲ್ಲ. ಆದರೂ, ಪರಿಶೀಲಿಸುತ್ತೇವೆ’ ಎಂದು ನಗರಸಭೆ ಅಧಿಕಾರಿಗಳು ಭರವಸೆ ನೀಡಿ ಸಾಗಹಾಕುತ್ತಿದ್ದಾರೆ.

    ನಗರಸಭೆಯಿಂದ ಆಪರೇಷನ್ ಡಾಗ್ಸ್ ಆರಂಭಿಸಿದ್ದರೂ ಹಗಲಲ್ಲಿ ಮಾತ್ರ ನಾಯಿಗಳನ್ನು ಸೆರೆ ಹಿಡಿಯಲಾಗುತ್ತದೆ. ಆ ತಂಡದ ಸದಸ್ಯರು ತಮ್ಮ ಸಂಸ್ಥೆಯ ಟಿಶರ್ಟ್ ಧರಿಸಿ, ಶಿಸ್ತು ಬದ್ಧವಾಗಿ ವಾಹನದಲ್ಲಿ ಕರೆದೊಯ್ಯುತ್ತಾರೆ. ಆದರೆ, ಎಂ.ಜೆ.ನಗರದಲ್ಲಿ ರಾತ್ರೋರಾತ್ರಿ ನಾಯಿಗಳು ಮರೆಯಾಗುತ್ತಿವೆ. ಹೆಣ್ಣು-ಗಂಡು ಎಂಬ ಭೇದವಿಲ್ಲದೆ ನಾಯಿಗಳು ಕಣ್ಮರೆಯಾಗುತ್ತಿವೆ. ಎಂ.ಜಿ.ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೀದಿನಾಯಿಗಳ ಹಾವಳಿ ತುಸು ಹೆಚ್ಚಿತ್ತು. ಆದರೆ, ಕಳೆದೊಂದು ವಾರದಲ್ಲಿ ಬೀದಿನಾಯಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿವೆ. ರಾತ್ರಿ 10 ರಿಂದ 11 ಗಂಟೆ ಅವಧಿಯಲ್ಲಿ ಬರುವ ಆಗುಂತಕರು ಸದ್ದಿಲ್ಲದೆ ನಾಯಿಗಳನ್ನು ಎಳೆದೊಯ್ಯುತ್ತಿದ್ದಾರೆ. ಈ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ನಗರಸಭೆಯತ್ತ ಬೊಟ್ಟು ಮಾಡುತ್ತಿದ್ದಾರೆ. ಹೀಗೆ ಎಳೆದೊಯ್ದ ನಾಯಿಗಳು ವಾರ ಕಳೆದರೂ, ವಾಪಸಾಗದಿರುವುದು ಪ್ರಾಣಿ ಪ್ರಿಯರಲ್ಲಿ ಆತಂಕ ಮೂಡಿಸಿದೆ.

    ನಗರದ ಬಹುತೇಕ ವಾರ್ಡ್‌ಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಿದೆ. ಚಿತ್ತವಾಡಗಿಯ ಪ್ರತ್ಯೇಕ ಘಟನೆಗಳಲ್ಲಿ ಓರ್ವ ಬಾಲಕಿ-ಬಾಲಕ ನಾಯಿ ದಾಳಿಗೆ ಒಳಗಾಗಿದ್ದರಿಂದ ನಗರ ನಿವಾಸಿಗಳು ಬೆಚ್ಚಿಬಿದ್ದಿದ್ದರು. ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಹಿಂದೇಟು ಹಾಕುವಂತಾಗಿತ್ತು. ಹೀಗಾಗಿ ನಗರಸಭೆಯಿಂದ ಆಪರೇಷನ್ ಡಾಗ್ಸ್ ಆರಂಭಿಸಿದೆ. ಹೆಣ್ಣು ನಾಯಿಗಳನ್ನು ಗುರುತಿಸಿ, ಅವುಗಳ ಸಂತಾನ ಶಕ್ತಿ ಹರಣ ಚಿಕಿತ್ಸೆ ನಡೆಸುತ್ತಿದೆ. ಚಿಕಿತ್ಸೆ ನಂತರ ಯಥಾ ಪ್ರಕಾರ ನಾಯಿಗಳು ಇದ್ದ ಬೀದಿಗಳಲ್ಲೇ ತಂದು ಬಿಡುತ್ತಿದೆ. ಆದರೆ, ಇದ್ದಕ್ಕಿದ್ದಂತೆ ನಾಯಿಗಳು ಮರೆಯಾಗುತ್ತಿರುವುದು ಶ್ವಾನ ಪ್ರಿಯರಿಗೆ ಗಾಭರಿ ಹುಟ್ಟಿಸಿದೆ.

    • ಹೈವೇಯಲ್ಲಿ ಕಳೇಬರ: ನಗರದಲ್ಲಿ ನಕಲಿ ಆಪರೇಷನ್‌ಗೆ ಒಳಗಾದ ನಾಯಿಗಳು ಹೊಸಪೇಟೆ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ಹೆಣವಾಗಿ ಪತ್ತೆಯಾಗುತ್ತಿವೆ. ಹೀಗಾಗಿ ಬೀದಿನಾಯಿಗಳನ್ನು ಸಾಯಿಸುವ ಉದ್ದೇಶದಿಂದಲೇ ರಾತ್ರೋರಾತ್ರಿ ಕದ್ದೊಯ್ಯುತ್ತಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿದೆ. ಆದರೆ, ನಾಯಿಗಳನ್ನು ಸಾಗಿಸುತ್ತಿರುವವರನ್ನು ಪತ್ತೆ ಮಾಡಿ, ಇದರ ಹಿಂದಿನ ಉದ್ದೇಶವನ್ನು ಬಯಲಿಗೆಳೆಯಬೇಕು ಎಂಬುದು ಸ್ಥಳೀಯರ ಒತ್ತಾಯ.

    ದೇಸಿ ತಳಿಯ ನಾಯಿಯನ್ನೇ ನಾಲ್ಕೈದು ವರ್ಷಗಳಿಂದ ಮುದ್ದಾಗಿ ಸಾಕಿದ್ದೆವು. ಕಳೆದ 23 ರ ರಾತ್ರಿ ಎಂ.ಜೆ.ನಗರದ ಬೀದಿನಾಯಿಗಳನ್ನು ಯಾರೋ ಎಳೆದೊಯ್ದಿದ್ದಾರೆ. ಅದರಲ್ಲಿ ನಿಮ್ಮದೂ ಇರಬಹುದು ಎಂದು ಅನೇಕರು ಹೇಳಿದರು. ಅಕಪಕ್ಕದ ಓಣಿಯಲ್ಲಿ ಹುಡುಕಾಡಿದ್ದೇವೆ. ನಗರಸಭೆ ಪೌರಾಯುಕ್ತರು ಮತ್ತು ಬಡಾವಣೆ ಠಾಣೆ ಪೊಲೀಸರ ಗಮನಕ್ಕೆ ತಂದಿದ್ದೇವೆ. ಚಿತ್ರದುರ್ಗ ಹೆದ್ದಾರಿಯಲ್ಲಿ ನಾಯಿಗಳು ಸತ್ತು ಬಿದ್ದಿವೆ ಎಂಬ ಸುದ್ದಿಕೇಳಿ ರಸ್ತೆಯುದ್ದಕ್ಕೂ ಪರಿಶೀಲಿಸಿದ್ದೇವೆ. ಎಲ್ಲೂ ನಮ್ಮ ನಾಯಿ ಸಿಕ್ಕಿಲ್ಲ. ವಾರ್ಡ್‌ನಲ್ಲಿರುವ ಸಿಸಿಟಿವಿಗಳನ್ನು ಪರಿಶೀಲಿಸಿದರೆ ಇದರ ಹಿಂದಿನ ಸತ್ಯ ಬಯಲಾಗುತ್ತದೆ.
    ಶ್ರೀದೇವಿ ರೆಡ್ಡಿ, ಎಂ.ಜೆ. ನಗರ ನಿವಾಸಿ.

    ನಮ್ಮಿಂದ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಿರ್ವಹಿಸುತ್ತಿದ್ದೇವೆ. ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ. ಅನಧಿಕೃತವಾಗಿ ನಾಯಿಗಳನ್ನು ಸೆರೆಯಿಡಿಯುವುದು ಅಕ್ಷಮ್ಯ. ಈ ಬಗ್ಗೆ ನನಗೂ ಗಮನಕ್ಕೆ ಬಂದಿದೆ. ಆಯಾ ಪ್ರದೇಶದಲ್ಲಿ ನಿಗಾ ವಹಿಸುವಂತೆ ನಮ್ಮ ಸಿಬ್ಬಂದಿಗೂ ಸೂಚಿಸಿದ್ದೇನೆ. ಆಯಾ ಸ್ಥಳದಲ್ಲಿ ಇರುವ ಸಿಸಿಟಿವಿಗಳನ್ನು ಪರಿಶೀಲಿಸಿ, ಸೂಕ್ತ ಕಾನೂನು ಕ್ರಮ ಜರುಗಿಸುತ್ತೇವೆ.
    ಮನೋಹರ, ಪೌರಾಯುಕ್ತ, ಹೊಸಪೇಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts