More

    ವಿಟ್ಲದಲ್ಲಿ ಬೀದಿನಾಯಿ ಕಾಟ

    ವಿಟ್ಲ: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಕಾಟ ಹೆಚ್ಚಾಗಿದ್ದು, ಸ್ಥಳಿಯಾಡಳಿತ ಅಗತ್ಯ ಕ್ರಮಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವಾಕಿಂಗ್ ಹಾಗೂ ದೇವಸ್ಥಾನಗಳಿಗೆ ತೆರಳುವ ಮಕ್ಕಳು, ಹಿರಿಯರನ್ನು ಹಿಂಬಾಲಿಸುವ ನಾಯಿಗಳು, ಸಾರ್ವಜನಿಕ ಸ್ಥಳಗಳಲ್ಲೇ ಠಿಕಾಣಿ ಹೂಡಿ ಜನರನ್ನು ಭೀತಿಗೊಳಿಸುತ್ತಿವೆ.

    ಖಾಸಗಿ ಬಸ್ ನಿಲ್ದಾಣದ ಹಿಂಭಾಗದಲ್ಲೇ ಇರುವ ಪಟ್ಟಣ ಪಂಚಾಯಿತಿ ಅಂಗಳದಲ್ಲೇ 5ಕ್ಕೂ ಅಧಿಕ ನಾಯಿಗಳು ನಿತ್ಯ ಮಲಗಿಕೊಂಡಿರುತ್ತವೆ. ಪ್ರಯಾಣಿಕರು ಎಸೆಯುವ ತಿಂಡಿಗಳನ್ನು ತಿಂದು ಅಲ್ಲೇ ವಾಸವಾಗಿದ್ದು, ಪಂಚಾಯಿತಿ ಕೆಲಸಕ್ಕೆ, ಗ್ರಂಥಾಲಯಕ್ಕೆ ಬರುವವರನ್ನು ಭಯದಿಂದ ನಡೆಯುವಂತೆ ಮಾಡುತ್ತಿವೆ. ಬೀದಿನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮತ್ತು ಹುಚ್ಚು ನಾಯಿ ರೋಗದ ವಿರುದ್ಧ ಲಸಿಕೆ ಹಾಕುವ ಜವಾಬ್ದಾರಿ ಪಂಚಾಯಿತಿ ಮೇಲೆ ಇದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ದೂರು ಸಾರ್ವಜನಿಕರದ್ದು.

     ಹುಚ್ಚು ನಾಯಿ ಕಾಟ: ವಿಟ್ಲ ಪೇಟೆಯಲ್ಲಿ ಎರಡು ದಿನಗಳ ಹಿಂದೆ ಕಾಣಿಸಿಕೊಂಡ ಹುಚ್ಚುನಾಯಿಯೊಂದು 6ಕ್ಕೂ ಅಧಿಕ ಜನರಿಗೆ ಕಡಿದು ಗಾಯಗೊಳಿಸಿದೆ. ಬೀದಿನಾಯಿಗಳಿಗೂ ಕಡಿದಿದೆ ಎಂಬುದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

    ಪೇಟೆಯಲ್ಲಿ ಬೀದಿನಾಯಿಗಳ ಕಾಟ ಅಧಿಕವಾಗಿದ್ದು ಸ್ಥಳಿಯಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು. ಸಮಸ್ಯೆ ನಿವಾರಿಸಲು ಕಾನೂನಿನಲ್ಲಿ ಅವಕಾಶವಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.
    ಸಂಜೀವ ಕಬಕ ಸಾಮಾಜಿಕ ಹೋರಾಟಗಾರರು

    ಬೀದಿನಾಯಿಗಳ ಕಾಟದ ಬಗ್ಗೆ ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಎಲ್ಲರ ಅಭಿಪ್ರಾಯಗಳನ್ನು ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
    ಮಾಲಿನಿ ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts