More

    ಬಿರುಗಾಳಿ ಮಳೆಗೆ ಮರ, ವಿದ್ಯುತ್ ಕಂಬಗಳು ಧರೆಗೆ

    ಹುಣಸೂರು : ಬುಧವಾರ ಸಂಜೆ ತಾಲೂಕಿನಾದ್ಯಂತ ಬಿರುಗಾಳಿಯೊಂದಿಗೆ ಸುರಿದ ಮಳೆಗೆ ಮನೆಗಳು, ಮರಗಳು, ವಿದ್ಯುತ್‌ಕಂಬಗಳು ನೆಲಕ್ಕುರುಳಿದ್ದು ಬಿರುಗಾಳಿಯ ಅವಾಂತರಕ್ಕೆ ಜನತೆ ತತ್ತರಿಸಿದ್ದಾರೆ.


    ಸಂಜೆ 7 ಗಂಟೆಗೆ ಮಳೆ ಆರಂಭವಾದರೂ ಅರ್ಧಗಂಟೆಯ ನಂತರ ಬಲವಾದ ಬಿರುಗಾಳಿಯಿಂದಾಗಿ ಮಳೆ ಕಾಣೆಯಾಯಿತು. ಆದರೆ ಬಲವಾಗಿ ಬೀಸಿದ ಬಿರುಗಾಳಿಗೆ ಆಸ್ತಿಪಾಸ್ತಿಯ ಅನಾಹುತ ಹೆಚ್ಚಾಯಿತು. ಜೀವಭಯದಿಂದ ಜನರು ಕಂಗಾಲಾದರು.


    ಬಿರುಗಾಳಿ ಸಹಿತ ಮಳೆಗೆ ತಾಲೂಕಿನಾದ್ಯಂತ 8ಕ್ಕೂ ಹೆಚ್ಚು ಮನೆಗಳು ಜಖಂಗೊಂಡಿವೆ. 5 ಎಕರೆ ಭೂಮಿಯಲ್ಲಿ ಬೆಳೆದ ಬಾಳೆ ನೆಲಕಚ್ಚಿದೆ. 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದಿವೆ. ತಾಲೂಕಿನ ಕಟ್ಟೆಮಳಲವಾಡಿಯ ಸುಬ್ಬನಾಯ್ಕ ಮತ್ತು ಚಿಕ್ಕಚೆಮ್ಮನಾಯ್ಕ ಎಂಬವರ ಮನೆ ಜಖಂಗೊಂಡಿದೆ. ಗಾವಡಗೆರೆಯ ಜೋಗಿನಾಯ್ಕ ಎಂಬವರ ಮನೆ ಸಂಪೂರ್ಣ ನೆಲಕ್ಕಚ್ಚಿದೆ. ಹುಣಸೇಗಾಲದಲ್ಲಿ ಒಂದು ಮನೆ ಮತ್ತು ಹೊಸೂರು ಗೇಟ್‌ನಲ್ಲಿ ಎರಡು ಮನೆಗಳು ಜಖಂಗೊಂಡಿವೆ. ಸಿಬಿಟಿ ಕಾಲನಿಯ ಚನ್ನ ಎಂಬವರ ಮನೆಯ ಮೇಲೆ ಫಲಭರಿತ ತೆಂಗಿನ ಮರ ಬಿದ್ದಿದೆ. ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಮನೆಯ ಛಾವಣಿಗಳು ಹಾರಿ ಹೋಗಿವೆ. ಮನೆಯಲ್ಲಿದ್ದ ದವಸ ಧಾನ್ಯ ನೀರುಪಾಲಾಗಿದೆ. ತಾಲೂಕಿನ ತಮ್ಮಡಹಳ್ಳಿ, ಚನ್ನಸೋಗೆ ಮತ್ತು ಉದ್ದೂರು ಗ್ರಾಮದಲ್ಲಿ 5 ಎಕರೆ ಭೂಮಿಯಲ್ಲಿ ಬೆಳೆದಿದ್ದ ಬಾಳೆ ಮತ್ತು ಮೆಣಸಿಕಾಯಿ ಬೆಳೆ ನೆಲಕ್ಕಚ್ಚಿದೆ. ಹುಣಸೂರು ಪಟ್ಟಣದ ಎಸ್‌ಜೆ ರಸ್ತೆ, ರೋಟರಿ ವೃತ್ತ, ಹುಣಸೂರು-ಮೈಸೂರು ರಸ್ತೆಯ ಪೆಟ್ರೋಲ್ ಬಂಕ್ ಬಳಿ ಮರಗಳು ಬುಡಸಮೇತ ಉರುಳಿಬಿದ್ದಿವೆ.


    ಧರೆಗುರುಳಿದ 23 ವಿದ್ಯುತ್ ಕಂಬಗಳು:
    ಬಿರುಗಾಳಿಗೆ ತಾಲೂಕಿನಾದ್ಯಂತ 23 ವಿದ್ಯುತ್ ಕಂಬಗಳು ಧರೆಗುರುಳಿವೆ. ತಾಲೂಕಿನ ಚಿಲ್ಕುಂದ ವ್ಯಾಪ್ತಿಯಲ್ಲಿ 2, ಗೋವಿಂದನಹಳ್ಳಿ ವ್ಯಾಪ್ತಿಯಲ್ಲಿ 5, ಗಾವಡಗೆರೆ 3, ಹನಗೋಡು 1, ರತ್ನಪುರಿ 5 ಹಾಗೂ ಹುಣಸೂರು ಪಟ್ಟಣದಲ್ಲಿ 7 ಕಂಬಗಳು ಬಿದ್ದಿವೆ. ಪಟ್ಟಣದ ಸೆಸ್ಕ್ ಕಚೇರಿ ಮುಂಭಾಗ ಮರವೊಂದು ಬಿದ್ದು ವಿದ್ಯುತ್ ಕಂಬದ ಮೇಲೆ ಮುರಿದು ಬಿದ್ದಿದೆ. ಮಧ್ಯರಾತ್ರಿವರೆಗೆ ಪಟ್ಟಣದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ರಾತ್ರಿಯೇ ಸೆಸ್ಕ್ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿ ವಿದ್ಯುತ್ ಪೂರೈಕೆ ಮಾಡಿದರು. ಸ್ಥಳಕ್ಕೆ ತಹಸೀಲ್ದಾರ್ ಐ.ಇ.ಬಸವರಾಜ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಪ್ರಕೃತಿ ವಿಕೋಪ ನಿಧಿಯಡಿ ಸಂತ್ರಸ್ತರಿಗೆ ಶೀಘ್ರ ಪರಿಹಾರ ಒದಗಿಸುವುದಾಗಿ ತಹಸೀಲ್ದಾರ್ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts