More

    ಹಾರಂಗಿಯಲ್ಲಿ ನೀರು ಸೋರಿಕೆಗೆ ಕಡಿವಾಣ

    ಸುನಿಲ್ ಪೊನ್ನೇಟಿ ಮಡಿಕೇರಿ:

    ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿಯಿಂದ ಕೃಷಿ ಉದ್ದೇಶಕ್ಕೆ ನೀರುವ ಬಿಡುವ ಸಂದರ್ಭ ಆಗುತ್ತಿದ್ದ ದೊಡ್ಡ ಪ್ರಮಾಣದ ನೀರಿನ ಸೋರಿಕೆಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಜಲಾಶಯ ನಿರ್ಮಾಣದ ನಂತರ ಇದೇ ಮೊದಲ ಬಾರಿಗೆ ಮುಖ್ಯ ನಾಲೆಯ ದುರಸ್ಥಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ೦-೬.೮೫ ಕಿಲೋಮೀಟರ್ ತನಕ ನಾಲೆಯ ಆಧುನೀಕರಣ ನಡೆಯುತ್ತಿದ್ದು, ಕಾಮಗಾರಿ ಬಿರುಸಿನಿಂದ ಸಾಗಿದೆ. ಮಳೆಗಾಲ ಶುರುವಾಗುವ ಮೊದಲು ಕಾಮಗಾರಿ ಮುಗಿಸುವ ಗುರಿ ಇಟ್ಟುಕೊಳ್ಳಲಾಗಿದೆ.

    ಜಿಲ್ಲೆಯ ಹುದುಗೂರು ಗ್ರಾಮದಲ್ಲಿರುವ ಹಾರಂಗಿ ಅಣೆಕಟ್ಟೆ ನಿರ್ಮಾಣ ಕಾಮಗಾರಿ ೧೯೬೯ರಲ್ಲಿ ಆರಂಭವಾಗಿ ೧೯೮೨ರಲ್ಲಿ ಪೂರ್ಣಗೊಂಡಿತು. ಕೊಡಗು, ಮೈಸೂರು ಹಾಗೂ ಹಾಸನ ಜಿಲ್ಲೆಗಳ ಒಟ್ಟು ೧,೩೪,೮೯೫ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಹಾರಂಗಿ ಜಲಾಶಯದಿಂದ ನೀರಾವರಿಯ ಅನುಕೂಲತೆ ಇದೆ. ಜೀವನದಿ ಕಾವೇರಿಯ ಪ್ರಮುಖ ಉಪನದಿಯಾಗಿರುವ ಹಾರಂಗಿ ಪುಷ್ಪಗಿರಿ, ಕೋಟೆಬೆಟ್ಟ, ಮುಕ್ಕೋಡ್ಲು, ಕಾಲೂರು, ಹಟ್ಟಿಹೊಳೆ, ಮಾದಾಪುರ ಸೇರಿದಂತೆ ೪೧೯.೫೮ ಚ.ಕಿ.ಮೀ.ಗಳಷ್ಟು ವಿಶಾಲವಾದ ಜಲಾನಯನ ಪ್ರದೇಶ ಹೊಂದಿದೆ. ೮.೫ ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ಜಲಾಶಯ ಕಾವೇರಿ ಕಣಿವೆಯ ಮಹತ್ವದ ಜಲಾಶಯಗಳಲ್ಲಿ ಒಂದಾಗಿದ್ದು, ಮಳೆಗಾಲದಲ್ಲಿ ರಾಜ್ಯದಲ್ಲೇ ಅತ್ಯಂತ ಬೇಗ ಭರ್ತಿ ಆಗುವ ಅಣೆಕಟ್ಟೆಗಳಲ್ಲಿ ಒಂದಾಗಿದೆ.
    ವಿಶೇಷ ಎಂದರೆ ಅಣೆಕಟ್ಟೆ ನಿರ್ಮಾಣ ಆಗಿ ೪೨ ವರ್ಷ ಕಳೆದರೂ ಈತನಕ ಮುಖ್ಯ ಕಾಲುವೆಯ ದುರಸ್ಥಿ ಆಗಿರಲಿಲ್ಲ. ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸುವಲ್ಲಿ ಈ ಕಾಲವೆಯ ಪಾತ್ರ ಪ್ರಮುಖವಾಗಿದ್ದು, ಹಾಸನ ಜಿಲ್ಲೆಗೆ ನೀರು ಪೂರೈಸಲು ಎಡದಂಡೆ ಮತ್ತು ಮೈಸೂರ ಜಿಲ್ಲೆಗೆ ನೀರು ಪೂರೈಸಲು ಬಲದಂಡೆ ನಾಲೆಗೆ ಕಣಿವೆ ಬಳಿಯಿಂದ ಈ ಮುಖ್ಯ ನಾಲೆಯಿಂದಲೇ ನೀರು ಸರಬರಾಜು ಆಗುತ್ತದೆ. ಆದರೆ ಮುಖ್ಯ ನಾಲೆ ಬಹುತೇಕ ಕಡೆಗಳಲ್ಲಿ ಹಾನಿಯಾಗಿದ್ದ ಕಾರಣ ಭಾರಿ ಪ್ರಮಾಣದಲ್ಲಿ ನೀರು ಸೋರಿಕೆಯಾಗಿ ಹರಿದು ನದಿ ಸೇರಿ ವ್ಯರ್ಥವಾಗುತ್ತಿತ್ತು.

    ಮುಖ್ಯ ಕಾಲುವೆಯಲ್ಲಿ ಹರಿಯುವ ನೀರಿನಲ್ಲಿ ಶೇ.೨೦-೩೦ರಷ್ಟು ಭಾಗ ಸೋರಿಕೆಯಾಗಿ ಅಚ್ಚುಕಟ್ಟು ಪ್ರದೇಶಕ್ಕೆ ಉಪಯೋಗ ಇಲ್ಲದಂತೆ ಆಗುತ್ತಿದ್ದ ಕಾರಣದಿಂದ ಎಚ್ಚೆತ್ತುಕೊಂಡ ಹಾರಂಗಿ ಅಣೆಕಟ್ಟೆ ವಿಭಾಗದ ಅಧಿಕಾರಿಗಳು ಕಾಲುವೆ ದುರಸ್ಥಿ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು. ಅಚ್ಚುಕಟ್ಟು ಪ್ರದೇಶದ ರೈತರೂ ಮುಖ್ಯ ಕಾಲುವೆ ದುರಸ್ಥಿಯ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕರು ಪೂರಕವಾಗಿ ಸ್ಪಂದಿಸಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದರಿಂದ ಭಾರಿ ನೀರಾವರಿ ಸಚಿವರು ಕೂಡ ಈ ಮುಖ್ಯ ಕಾಲುವೆ ದುರಸ್ಥಿತಿಯ ಅಗತ್ಯತೆ ಮನಗಂಡು ನಾಲೆಯ ಆಧುನೀಕರಣಕ್ಕೆ ಅನುಮೋದನೆ ಕೊಟ್ಟಿದ್ದಾರೆ.

    ಮೊದಲ ಹಂತದಲ್ಲಿ ಹಾರಂಗಿ ಮುಖ್ಯನಾಲೆಯ ೦-೬.೮೫ ಕಿಲೋಮೀಟರ್ ತನಕ ಆಧುನೀಕರಣ ಕಾರ್ಯಕ್ಕೆ ಸರ್ಕಾರ ೫೦ ಕೋಟಿ ರೂ. ಬಿಡುಗಡೆ ಮಾಡಿದ್ದು, ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ಆಂಧ್ರ ಮೂಲದ ಗುತ್ತಿಗೆದಾರರು ಕಾಮಗಾರಿಯ ಜವಾಬ್ದಾರಿ ವಹಿಸಿಕೊಂಡಿದ್ದು, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ಎಂಜಿನಿಯರ್‌ಗಳ ಮಾರ್ಗದರ್ಶನದಲ್ಲಿ ಕೆಲಸಗಳು ನಡೆಯುತ್ತಿದೆ. ಮೊದಲ ಹಂತದ ಕಾಮಗಾರಿ ಪೈಕಿ ಬಹುತೇಕ ಕೆಲಸಗಳು ಮುಗಿದಿದ್ದು, ಅಚ್ಚುಕಟ್ಟು ಪ್ರದೇಶಕ್ಕೆ ಈ ಮಳೆಗಾಲದಲ್ಲಿ ಸರಾಗವಾಗಿ ನೀರು ಹರಿಸಲು ಸಾಧ್ಯವಾಗಲಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

    ೫೦ ಕೊಟಿ ರೂ. ವೆಚ್ಚದ ಮುಖ್ಯ ನಾಲೆಯ ದುರಸ್ಥಿ ಕಾಮಗಾರಿಯ ಜೊತೆಗೆ ೮ ಕೋಟಿ ರೂ. ವೆಚ್ಚದಲ್ಲಿ ಬ್ಲಾಕ್ ಮಾದರಿಯ ನಾಲೆಯ ಕಟ್ ಆ್ಯಂಡ್ ಕವರ್ ಪ್ರಮುಖ ಕಾಮಗಾರಿಯೂ ನಡೆದಿದೆ. ಹಾರಂಗಿ ಅಣೆಕಟ್ಟೆಯ ಮುಖ್ಯ ನಾಲೆಯ ಒಂದನೆಯ ತೂಬಿನಿಂದ ಆರನೇ ತೂಬಿನವರೆಗೆ ದುರಸ್ತಿ, ಮುಖ್ಯ ನಾಲೆಯ ಮೇಲ್ಭಾಗದಲ್ಲಿ ರಸ್ತೆಯ ನಿರ್ಮಾಣ ಸೇರಿದಂತೆ ವಿವಿಧ ಭಾಗಗಳಲ್ಲಿ ಕಿರು ಸೇತುವೆ ನಿರ್ಮಾಣ, ಮುಖ್ಯ ನಾಲೆಯ ಎರಡೂ ಬದಿಗಳಲ್ಲಿ ಕಾಂಕ್ರಿಟೀಕರಣ, ಮುಖ್ಯ ನಾಲೆಯು ಕಿರಿದಾದ ಸ್ಥಳಗಳಲ್ಲಿ ಬೆಟ್ಟ ಕುಸಿಯದ ಹಾಗೆ ತಡೆಗೋಡೆ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಲಾಗುತ್ತಿದೆ.

    ಇಲ್ಲಿ ನಡೆಯುತ್ತಿರುವ ಎಲ್ಲಾ ಕೆಲಸಗಳು ಇಲಾಖೆಯ ಕ್ರಿಯಾ ಯೋಜನೆಗೆ ಅನುಗುಣವಾಗಿ ಆಗುತ್ತಿರುವುದನ್ನು ಖಾತರಿಪಡಿಸಿಕೊಳ್ಳಲು ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ಗಳನ್ನು ಕಾಮಗಾರಿಯ ಸ್ಥಳದಲ್ಲೇ ನಿಯೋಜಿಸಲಾಗಿದೆ. ಬೃಹತ್ ಕಾಮಗಾರಿ ಮಾದರಿಯ ಯೋಜನೆ ಅಡಿಯಲ್ಲಿ ಕಾಂಕ್ರಿಟೀಕರಣ ಕೆಲಸಗಳನ್ನು ಗುತ್ತಿಗೆದಾರರು ಆಧುನಿಕ ತಂತ್ರಜ್ಞಾನ ಮತ್ತು ಅತ್ಯಾಧುನಿಕ ಯಂತ್ರಗಳನ್ನು ಬಳಸಿ ಮಾಡುತ್ತಿದ್ದಾರೆ. ಮೂರನೆಯ ತೂಬಿನ ತನಕ ಕಾಮಗಾರಿ ಬಹುತೇಕ ಮುಗಿದಿದೆ. ೬ನೇ ತೂಬಿನ ತನಕದ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಮುಗಿಸಲು ಯಂತ್ರಗಳ ಜತೆಗೆ ಕಾರ್ಮಿಕರು ಹಗಲು, ರಾತ್ರಿ ಕೆಲಸ ಮಾಡುತ್ತಿದ್ದಾರೆ.

    ಕುಶಾಲನಗರ ತಾಲೂಕು ಬ್ಯಾಡಗೊಟ್ಟ ಗ್ರಾಮದ ಸಮೀಪ ಬೆಟ್ಟದ ಬುಡದಲ್ಲಿ ಆಳದಲ್ಲಿ ಹೋಗಿರುವ ಸುಮಾರು ೧೫೦ ಮೀಟರ್ ಉದ್ದದ ಮುಖ್ಯ ನಾಲೆಯ ಬ್ಲಾಕ್ ಮಾದರಿ ಕಟ್ ಆ್ಯಂಡ್ ಕವರ್ ಪ್ರಮುಖ ಕಾಮಗಾರಿಯೂ ಶುರುವಾಗಿದೆ. ನಾಲ್ಕೂ ಭಾಗಗಳಲ್ಲಿ ಸಂಪೂರ್ಣವಾಗಿ ಮುಚ್ಚಲ್ಪಟ್ಟು ಚೌಕಾಕಾರದಲ್ಲಿ ಕಾಲುವೆಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಮಾದರಿಯ ಕಾಮಗಾರಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಈ ಕಾಮಗಾರಿ ನಡೆದ ನಂತರ ಈ ಭಾಗದಲ್ಲಿ ಮುಖ್ಯ ನಾಲೆಗೆ ಬೆಟ್ಟ ಕುಸಿತ ಅದರೂ ಯಾವುದೇ ತೊಂದರೆಗಳು ಆಗದೆ ಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯಲು ಅನುಕೂಲ ಆಗುತ್ತದೆ.

    ಏಪ್ರಿಲ್ ಒಳಗೆ ಕಾಮಗಾರಿ ಮುಗಿಸುವಂತೆ ಮತ್ತು ಮುಂಗಾರು ಹಂಗಾಮಿನ ಬೇಸಾಯಕ್ಕೆ ಯಾವುದೇ ಸಮಸ್ಯೆ ಆಗದಂತೆ ಕೆಲಸ ನಡೆಸಬೇಕು ಎಂದು ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರು ಮತ್ತು ಈ ವ್ಯಾಪ್ತಿಯ ಗ್ರಾಮಸ್ಥರು ಅಧಿಕಾರಿಗಳ ಮುಂದೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಇಲಾಖೆಯಿಂದ ಗುತ್ತಿಗೆದಾರರಿಗೆ ಸ್ಪಷ್ಟ ಸೂಚನೆ ನೀಡಲಾಗಿದ್ದು, ಬೇಸಾಯ ಚಟುವಟಿಕೆಗಳಿಗೆ ನೀರು ಹರಿಸಲು ಸಮಸ್ಯೆ ಆಗದ ರೀತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿಕೊಡುವಂತೆ ತಿಳಿಸಲಾಗಿದೆ. ಹಾಗಾಗಿ ಮಳೆಗಾಲ ಶುರುವಾಗುವ ಮೊದಲೇ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರು ಆದ್ಯತೆ ನೀಡಿದ್ದಾರೆ.

    ಮುಖ್ಯ ಕಾಲುವೆಯಲ್ಲಿ ನೀರಿನ ವ್ಯರ್ಥ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ನಾಲೆಗಳ ಆಧುನೀಕರಣಕ್ಕೆ ಕಾವೇರಿ ನೀರಾವರಿ ನಿಗಮ ಒತ್ತುಕೊಟ್ಟಿದೆ. ಮೊದಲ ಹಂತದಲ್ಲಿ ೦-೬.೮೫ ಕಿಲೋಮೀಟರ್ ತನಕ ನಾಲೆಯ ಆಧುನೀಕರಣ ಕಾರ್ಯ ಮುಗಿಯುತ್ತಿದ್ದಂತೆಯೇ ೨ನೇ ಹಂತದಲ್ಲಿ ೬.೮೫-೧೪.೭೫ ಕಿಲೋಮೀಟರ್ ತನಕ ನಾಲೆಯ ಆಧುನೀಕರಣಕ್ಕೆ ಮುಂದಾಗಿದೆ. ಇದಕ್ಕಾಗಿ ಸರ್ಕಾರ ಈಗಾಗಲೇ ೭೨.೭೫ ಕೋಟಿ ರೂ.ಗಳ ಯೋಜನೆಗೆ ಮಂಜೂರಾತಿ ಕೊಟ್ಟಿದೆ. ಯೋಜನೆಗೆ ಸಂಬಂಧಿಸಿಂತೆ ಟೆಂಡರ್ ಪ್ರಕ್ರಿಯೆಗಳು ನಡೆದಿದ್ದು, ಮುಂದಿನ ಬೇಸಿಗೆಯಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹಾರಂಗಿ ಅಣೆಕಟ್ಟೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಹಾರಂಗಿ ಜಲಾಶಯದಿಂದ ಕೊಡಗು, ಮೈಸೂರು ಹಾಗೂ ಹಾಸನ ಜಿಲ್ಲೆಗಳ ಒಟ್ಟು ೧,೩೪,೮೯೫ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿಯ ಅನುಕೂಲತೆ ಮಾತ್ರವಲ್ಲದೆ ಜಲಾಶಯದ ನೀರನ್ನು ಬಳಸಿ ಖಾಸಗಿ ಸಂಸ್ಥೆಯೊಂದು ಇಲ್ಲಿ ವಿದ್ಯುತ್ ಕೂಡ ಉತ್ಪಾದಿಸುತ್ತದೆ. ಕೃಷಿ ಉದ್ದೇಶಕ್ಕೆ ಕಾಲುವೆಗೆ ಹರಿಸುವ ನೀರು ಈ ವಿದ್ಯುತ್ ಉತ್ಪಾದನಾ ಕೇಂದ್ರದ ಮೂಲಕವೇ ಹಾದುಹೋಗುತ್ತದೆ. ಕಾಲುವೆ ಮೂಲಕ ನದಿಗೆ ಬಿಡುವ ನೀರಿನಿಂದಲೂ ಇಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಸೋಮವಾರಪೇಟೆ ಪಟ್ಟಣಕ್ಕೆ ಕುಡಿಯುವ ನೀರು ಇದೇ ಜಲಾಶಯದಿಂದ ಪೂರೈಕೆ ಆಗುತ್ತದೆ.

    ಹಾರಂಗಿ ಅಣೆಕಟ್ಟೆ ನಿರ್ಮಾಣ ಆದ ೪೨ ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮುಖ್ಯ ನಾಲೆಯ ದುರಸ್ಥಿ ಕಾರ್ಯ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ ಈಗ ೦-೬.೮೫ ಕಿಲೋಮೀಟರ್ ತನಕ ನಾಲೆಯ ಆಧುನೀಕರಣ ಕಾರ್ಯ ನಡೆದಿದೆ. ಮಳೆಗಾಲ ಶುರುವಾಗುವುದರೊಳಗೆ ಈ ಕೆಲಸ ಮುಗಿಯಲಿದೆ. ನಂತರ ೨ನೇ ಹಂತದಲ್ಲಿ ೬.೮೫-೧೪.೭೫ ಕಿಲೋಮೀಟರ್ ತನಕ ನಾಲೆಯ ಆಧುನೀಕರಣ ಕಾಮಗಾರಿ ನಡೆಯುತ್ತದೆ. ಆಧುನಿಕ ತಂತ್ರಜ್ಞಾನ ಬಳಸಿ ಇಲಾಖೆಯ ಮಾನದಂಡಗಳಿಗೆ ಅನುಗುಣವಾಗಿ ಗುಣಮಟ್ಟದ ಕಾಮಗಾರಿ ನಡೆಸಲಾಗುತ್ತಿದೆ. ಮುಖ್ಯ ಕಾಲುವೆ ಆಧುನೀಕರಣವಾದ ನಂತರ ನೀರಿನ ಸೋರುವಿಕೆಗೆ ದೊಡ್ಡ ಪ್ರಮಾಣದಲ್ಲಿ ತಡೆ ಆಗಲಿದೆ.
    ಪುಟ್ಟಸ್ವಾಮಿ, ಕಾರ್ಯಪಾಲಕ ಅಭಿಯಂತರ, ಕಾವೇರಿ ನೀರಾವರಿ ನಿಗಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts