More

    ಜನರು ಮಧ್ಯವರ್ತಿಗಳ ಜತೆ ಬರುವುದನ್ನು ನಿಲ್ಲಿಸಿ

    ಕೆ.ಎಂ.ದೊಡ್ಡಿ: ಮದ್ದೂರು ಕ್ಷೇತ್ರದ ಜನರು ತಮ್ಮ ಕೆಲಸ, ಕಾರ್ಯಗಳನ್ನು ಮಾಡಿಸಿಕೊಳ್ಳಲು ಮಧ್ಯವರ್ತಿಗಳ ಜತೆ ಬರುವುದನ್ನು ನಿಲ್ಲಿಸಿ ನೇರವಾಗಿ ನನ್ನನ್ನು ಭೇಟಿ ಮಾಡುವಂತೆ ಶಾಸಕ ಕದಲೂರು ಉದಯ್ ಸಲಹೆ ನೀಡಿದರು.


    ಇಲ್ಲಿನ ಶಾಸಕರ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಜನರಿಂದ ಅಹವಾಲು ಸ್ವೀಕರಿಸಿದ ನಂತರ ಮಾತನಾಡಿ, ಸಮಸ್ಯೆಗಳು ಇದ್ದರೆ ನನ್ನ ಜತೆ ಮಾತನಾಡಿ ಇತ್ಯರ್ಥ ಪಡಿಸಿಕೊಳ್ಳುವಂತೆ ಹೇಳಿದರು.


    ಚಿಕ್ಕರಸಿನಕೆರೆ ಹೋಬಳಿ ಸೇರಿದಂತೆ ಮದ್ದೂರು ಕ್ಷೇತ್ರದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚು ದೂರುಗಳು ಬರುತ್ತಿದ್ದವು. ಆದರೆ ಈಗಿನ ತಹಸೀಲ್ದಾರ್ ಸೋಮಶೇಖರ್ ಕಂದಾಯ ಇಲಾಖೆಯನ್ನು ಸುಧಾರಣೆ ಮಾಡುತ್ತಿದ್ದಾರೆ ಎಂದರು.


    ರೈತರನ್ನು ತಾಲೂಕು ಕಚೇರಿಗೆ ಅಲೆಸದೆ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮ ಕೈಗೊಂಡು ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಕರ್ತವ್ಯ ನಿರ್ವಹಿಸಿ ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ತಹಸೀಲ್ದಾರ್ ಕ್ರಮ ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


    ಮದ್ದೂರು ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಈ ಬಗ್ಗೆ ಸಾರ್ವಜನಿಕರು ಅಹವಾಲುಗಳನ್ನು ನೀಡುತ್ತಿದ್ದು ಹಂತ ಹಂತವಾಗಿ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಗುರಿಯಾಗಿದ್ದು ಜನರಿರುವ ಸ್ಥಳಕ್ಕೆ ತೆರಳಿ ಸಮಸ್ಯೆಗಳನ್ನು ಆಲಿಸುತ್ತೇನೆ ಎಂದು ತಿಳಿಸಿದರು.


    ಯಾವುದೇ ಇಲಾಖೆಯಲ್ಲಿ ಸಾರ್ವಜನಿಕರಿಗೆ ದೊರಕುವ ಸೌಲಭ್ಯಗಳಿಗೆ ಅಧಿಕಾರಿಗಳು ಅಲೆಸಬಾರದು. ಅವರ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ಮಾಡಬೇಕು. ಇಲ್ಲವಾದಲ್ಲಿ ಸೂಕ್ತ ಕ್ರಮ ವಹಿಸುವುದಾಗಿ ಎಚ್ಚರಿಕೆ ನೀಡಿದರು.


    ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಬಸವರಾಜು, ತಾ.ಪಂ. ಮಾಜಿ ಸದಸ್ಯ ಯಲಾದಹಳ್ಳಿ ದ್ಯಾವೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟ್ಟನಹಳ್ಳಿ ಶಿವಲಿಂಗೇಗೌಡ, ಮುಖಂಡರಾದ ಪೂಜಾರಿ ಮಹೇಶ್, ಕದಲೂರು ತಿಮ್ಮೇಗೌಡ, ಆರ್‌ಸಿಎಸ್ ಶಿವು, ಯತೀಶ್‌ಬಾಬು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts