More

    ಎಗ್ಗಿಲ್ಲದೆ ಸಾಗಿದೆ ಕಲ್ಲು ಗಣಿಗಾರಿಕೆ

    ಗುತ್ತಲ: ಸಮೀಪದ ಅಕ್ಕೂರ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ.

    ಅಕ್ಕೂರ ಗ್ರಾಮದ ಸರ್ವೆ ನಂ. 98/2ಇ ಯಲ್ಲಿ ಸುಮಾರು 150 ಎಕರೆ 15 ಗುಂಟೆ ಹಾಗೂ 15.66 ಆಣೆ ಸರ್ಕಾರಿ ಜಮೀನು ಇದೆ. ಇದರಲ್ಲಿ 146 ಎಕರೆ 20 ಗುಂಟೆ ಹಾಗೂ 03 ಆಣೆ ಜಮೀನಿನಲ್ಲಿ ಗ್ರಾಮದ ಸುಮಾರು 3 ಜನರಿಗೆ ತಲಾ 3 ಎಕರೆಯಷ್ಟು ಸರ್ಕಾರ ಭೂಮಿ ನೀಡಿದೆ. ಉಳಿದ ಬಹುತೇಕ ಜಮೀನನ್ನು ಅನೇಕರು ಉಳುಮೆ ಮಾಡುತ್ತಿದ್ದಾರೆ. ಹೊಸರಿತ್ತಿ-ಬಮ್ಮನಕಟ್ಟಿ- ಗುತ್ತಲ ರಸ್ತೆ ಪಕ್ಕದಲ್ಲಿಯೇ ಇರುವ ಈ ಜಮೀನಿನಲ್ಲಿ ಸುಮಾರು 10-15 ಎಕರೆ ಪ್ರದೇಶದಲ್ಲಿ ಅನೇಕರು ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡುತ್ತಿದ್ದಾರೆ.

    ಈ ಮೊದಲು ಕಾರ್ವಿುಕರಿಂದ ಗಣಿಗಾರಿಕೆ ಕೆಲಸ ನಡೆಯುತ್ತಿತ್ತು. ಈಗ ಯಂತ್ರಗಳನ್ನು ಬಳಸಿ ರಾಜಾರೋಷವಾಗಿ ಅಕ್ರಮ ನಡೆಸುತ್ತಿದ್ದಾರೆ. ಇಲ್ಲಿನ ಅಕ್ರಮ ಗಣಿಗಾರಿಕೆಯ ಕಲ್ಲನ್ನು ಒಂದು ಟ್ರಿಪ್​ಗೆ ರೂ. 800-900 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ನಿತ್ಯ ಸುಮಾರು 10-15 ಟ್ರಿಪ್​ನಷ್ಟು ಅಕ್ರಮವಾಗಿ ಕಲ್ಲು ಸಾಗಿಸುತ್ತಿದ್ದರೂ, ಕಂದಾಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ.

    ಪ್ರವಾಹ ಪೀಡಿತರ ಮನೆ ಸ್ಥಳಾಂತರಕ್ಕೆ ಜಾಗದ ಸರ್ವೆ: ಪ್ರವಾಹ ಪೀಡಿತ ಚನ್ನೂರ, ಹೊಸರಿತ್ತಿ ಹಾಗೂ ಅಕ್ಕೂರ ಗ್ರಾಮದ ಜನರ ಸುಮಾರು 250ಕ್ಕೂ ಅಧಿಕ ಮನೆಗಳ ಸ್ಥಳಾಂತರಕ್ಕೆ ಈ ಸರ್ಕಾರಿ ಜಮೀನಿನ ಸರ್ವೆ ಕಾರ್ಯ ಈಗಾಗಲೇ 2 ಬಾರಿ ನಡೆದಿದೆ. ಆದರೆ, ಪೂರ್ಣ ಪ್ರಮಾಣದ ಸರ್ವೆ ಆದ ಬಳಿಕವೇ ಸ್ಥಳಾಂತರ ಕಾರ್ಯ ಆರಂಭಿಸಲಾಗುವುದು ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ. ಅಲ್ಲಿಯವರೆಗೂ ಅಕ್ರಮ ಕಲ್ಲು ಗಣಿಗಾರಿಕೆಗೆ ಕಂದಾಯ ಇಲಾಖೆ ಕಡಿವಾಣ ಹಾಕಬೇಕಿದೆ.

    ಅಕ್ಕೂರ ಗ್ರಾಮದಲ್ಲಿ ಪ್ರವಾಹ ಪೀಡಿತ ಪ್ರದೇಶದ ಜನರಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸರ್ವೆಗೆ ಸೂಚಿಸಿದ್ದೆ. ಅದು ಪ್ರಗತಿಯಲ್ಲಿದೆ. ಈ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ ಏಕಲವ್ಯ ಶಾಲೆ ಆರಂಭ ಮಾಡಲಾಗುವುದು. ಅಲ್ಲದೆ, ಪದವಿ ಕಾಲೇಜ್ ಸೇರಿ ವಿವಿಧ ಶೈಕ್ಷಣಿಕ ಹಾಗೂ ಸಾರ್ವಜನಿಕ ಉದ್ದೇಶಕ್ಕೆ ಉಳಿದ ಜಾಗ ಮೀಸಲಿಡಲಾಗುವುದು. ಅಕ್ರಮ ಕಲ್ಲು ಗಣಿಗಾರಿಕೆಯನ್ನು ನಿಲ್ಲಿಸಲಾಗುವುದು.

    | ನೆಹರು ಓಲೇಕಾರ, ಶಾಸಕ ಹಾವೇರಿ

    ಅಕ್ರಮ ಕಲ್ಲು ಗಣಿಗಾರಿಕೆಯ ಬಗ್ಗೆ ಶೀಘ್ರದಲ್ಲಿಯೇ ಸ್ಥಳ ಪರಿಶೀಲನೆ ಕೈಗೊಂಡು ಸೂಕ್ತ ಕ್ರಮ ಕೈಗೊಳ್ಳುತ್ತೇನೆ.

    | ಶಂಕರ ಜಿ.ಎಸ್, ತಹಸೀಲ್ದಾರ್ ಹಾವೇರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts