More

    ಅಧಿಕಾರಕ್ಕೆ ಬಂದ ತಕ್ಷಣ ಸ್ತ್ರೀಶಕ್ತಿ ಸಾಲಮನ್ನಾ

    ವಿಜಯವಾಣಿ ಸುದ್ದಿಜಾಲ ರಾಮನಗರ
    ಕಳೆದ ಬಾರಿ ರೈತರ ಸಾಲಮನ್ನಾ ಮಾಡಿದಂತೆ ಈ ಬಾರಿ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಎಚ್.ಡಿ. ಕುಮಾರ ಸ್ವಾಮಿ ಅವರು ಸ್ತ್ರೀಶಕ್ತಿ ಸಾಲಮನ್ನಾ ಮಾಡಲಿದ್ದಾರೆ ಎಂದು ರಾಮನಗರ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದರು.

    ಕ್ಷೇತ್ರ ವ್ಯಾಪ್ತಿಯ ಮರಳವಾಡಿಯ ತಟ್ಟೆಕೆರೆಯಲ್ಲಿ ಮಂಗಳವಾರ ರೋಡ್ ಶೋ ನಡೆಸಿ ಮಾತನಾಡಿದ ಅವರು, ಮೇ 13ಕ್ಕೆ ಚುನಾವಣೆ ಫಲಿತಾಂಶ ಬರಲಿದೆ. ಈ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದರಲ್ಲಿ ಅನುಮಾನ ಇಲ್ಲ. ಕಳೆದ ಬಾರಿ ಸಿಎಂ ಆಗಿದ್ದಾಗ ರೈತರ ಸಾಲಮನ್ನಾ ಮಾಡಿದ್ದರು, ಈ ಬಾರಿಯೂ ಮಾತು ಕೊಟ್ಟಂತೆ ಸ್ತ್ರೀಶಕ್ತಿ ಗುಂಪಿನ ಸಾಲ ಮನ್ನಾ ಮಾಡುತ್ತಾರೆ ಎಂದು ಅಭಯ ನೀಡಿದರು.

    ಪಂಚರತ್ನ ಯೋಜನೆ ಜಾರಿ ಜೆಡಿಎಸ್‌ನ ಬಹುಮುಖ್ಯ ಕನಸಾಗಿದ್ದು, ಇದನ್ನು ಜಾರಿಗೆ ತರುವ ಮೂಲಕ ಜನರ ನೆಮ್ಮದಿ ಬದುಕಿಗೆ ಕುಮಾರಸ್ವಾಮಿ ಆಸರೆ ಆಗುತ್ತಾರೆ. ಗರ್ಭಿಣಿಯರಿಗೆ ಅರ್ಥಿಕ ನೆರವು, ವೃದ್ಧಾಪ್ಯ ವೇತನ 5000 ರೂ.ಗಳಿಗೆ ಹೆಚ್ಚಳ, ವರ್ಷಕ್ಕೆ 5 ಸಿಲಿಂಡರ್ ಉಚಿತವಾಗಿ ನೀಡುವ ಕಾರ್ಯಕ್ರಮ, ಶಿಕ್ಷಣ, ಆರೋಗ್ಯ, ವಸತಿ, ಕೃಷಿ, ಉದ್ಯೋಗ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಲಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕುಮಾರಸ್ವಾಮಿ ಅವರು ಸಿಎಂ ಆಗಲು ಜನತೆ ಆರ್ಶೀವಾದ ಮಾಡಬೇಕು ಎಂದು ನಿಖಿಲ್ ಮನವಿ ಮಾಡಿದರು.

    ಎರಡು ರಾಷ್ಟ್ರೀಯ ಪಕ್ಷಗಳಿಗೆ ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆಯಿಲ್ಲ, ಪಂಚರತ್ನ ಸೇರಿ ಜನಪರ ಯೋಜನೆಗಳನ್ನು ಕುಮಾರಸ್ವಾಮಿ ರೂಪಿಸಿದ್ದಾರೆ, ಮರಳವಾಡಿ ವ್ಯಾಪ್ತಿಯಲ್ಲಿ ಗಾರ್ಮೆಂಟ್ಸ್ ಸ್ಥಾಪನೆ, ರಸ್ತೆ, ಸಮುದಾಯ ಭವನ, ಮೂಲಸೌಕರ್ಯ ಸೇರಿ ಹಲವು ಅಭಿವೃದ್ಧಿ ಕೆಲಸಗಳನ್ನು ಶಾಸಕಿ ಅನಿತಾ ಕುಮಾರಸ್ವಾಮಿ ಮಾಡಿದ್ದಾರೆ. ಅಭಿವೃದ್ಧಿ ನಿಂತ ನೀರಲ್ಲ. ಅಭಿವೃದ್ಧಿ ಕೆಲಸಗಳು ನಿರಂತರ. ಯುವಕನಾಗಿ ಕ್ಷೇತ್ರದ ಮತದಾರರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತೇನೆ ಎಂದು ನಿಖಿಲ್ ಭರವಸೆ ನೀಡಿದರು.

    ಮರಳವಾಡಿ ಗ್ರಾಪಂ ವ್ಯಾಪ್ತಿಯ ಉರಗನದೊಡ್ಡಿ, ಕಣಿವೆ ಶಿವಪುರ, ತಟ್ಟೆಕೆರೆ, ಬನವಾಸಿ, ಮರಸಹಳ್ಳಿ, ವಡೇರಹಳ್ಳಿ ಗೋದೂರು, ನರಿಪುರ, ಕಮಲಪುರ, ಬೆಳಗನಕುಪ್ಪೆ, ಟಿ.ಮಣಿಯಂಬಾಳ್ ಸೇರಿ 15ಕ್ಕೂ ಹೆಚ್ಚು ಹಳ್ಳಿಗಳಲ್ಲಿ ರೋಡ್‌ಶೋ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts