More

    ರಾಜ್ಯಾದ್ಯಂತ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

    ಕಡೂರು: ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಒಂದಾಗಿ ಕಾಂಗ್ರೆಸ್ಸಿನ ದುರಾಡಳಿತವನ್ನು ಕಿತ್ತೊಗೆಯಲು ತೀರ್ಮಾನಿಸಿದ್ದು, ಇದಕ್ಕೆ ಮೋದಿ ಹಾಗೂ ನಾನು ಶಕ್ತಿ ತುಂಬಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

    ಪಟ್ಟಣದ ಲಕ್ಷ್ಮೀವೆಂಕಟೇಶ್ವರ ಗೀತಾ ಮಂದಿರದಲ್ಲಿ ಶುಕ್ರವಾರ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, 150 ಕೋಟಿ ಜನಸಂಖ್ಯೆಯುಳ್ಳ ಈ ದೇಶದಲ್ಲಿ ಪ್ರಧಾನಿ ಆಗುವ ಯೋಗ್ಯತೆ ಮೋದಿ ಅವರಿಗಿದೆ. ಕಳೆದ 10 ವರ್ಷಗಳಲ್ಲಿ ದೇಶಕ್ಕೆ ನೀಡಿರುವ ಕೊಡುಗೆಗಳು ಮತ್ತು ಅಭಿವೃದ್ಧಿ ಕಾರ್ಯಗಳು ಜನಮನ್ನಣೆ ನೀಡಿವೆ ಎಂದರು.
    ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಕ್ತಿ ತುಂಬಲು ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದೇನೆ. ಇಡೀ ದೇಶದಲ್ಲಿ ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಆಡಳಿತದಲ್ಲಿದೆ. 15 ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ನೀಡಿ ಜನರ ಸಮಸ್ಯೆಗಳನ್ನು ನಿವಾರಣೆ ಮಾಡುವಲ್ಲಿ ವಿಫಲವಾಗಿದೆ. ದೇಶದಲ್ಲಿ ಮೋದಿ ಸರ್ಕಾರ 8.50 ಕೋಟಿ ಜನಕ್ಕೆ ಉಚಿತವಾಗಿ 5 ಕೆ.ಜಿ. ಅಕ್ಕಿ ನೀಡುತ್ತಿದೆ. ರಾಜ್ಯಸಭಾ ಸದಸ್ಯನಾಗಿ ಇನ್ನೂ ಎರಡೂವರೆ ವರ್ಷ ಇರಲಿದ್ದು, ಕಡೂರು ಕ್ಷೇತ್ರಕ್ಕೆ ಅನುದಾನ ದೊರಕಿಸಿಕೊಡುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.
    ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡಲು ಎರಡೂ ಪಕ್ಷಗಳು ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದು. ಮೋದಿ ಅವರು ಹಾಸನ ಹಾಗೂ ಚಿಕ್ಕಮಗಳೂರು ಕ್ಷೇತ್ರಗಳಿಗೆ 12 ಸಾವಿರ ಕೋಟಿ ರೂ. ಅನುದಾನ ನೀಡಿದ್ದಾರೆ. ನಾನು ಲೋಕೋಪಯೋಗಿ ಸಚಿವನಾಗಿದ್ದಾಗ 350 ಕೋಟಿ ರೂ. ಅನುದಾನ ನೀಡಿದ್ದೆ. ಹಾಸನದ ಕೆಎಂಎಫ್‌ನ್ನು ಎತ್ತರಕ್ಕೆ ಕೊಂಡೊಯ್ದಿದ್ದೇನೆ. ಸಿಎಂ ಸಿದ್ದರಾಮಯ್ಯ ಈ ಅಂಕಿ-ಅಂಶಗಳನ್ನು ತೆರೆದು ನೋಡಲಿ. ರಾಜ್ಯ ಸರ್ಕಾರ ಗ್ಯಾರಂಟಿ ಎಂದು ಹೇಳಿ ರೈತರ ಮನೆಹಾಳು ಮಾಡುತ್ತಿದೆ. ಅವುಗಳ ವೆಚ್ಚದಿಂದ ಸರ್ಕಾರಕ್ಕೆ ನಷ್ಟವಾಗುತ್ತಿದೆ ಎಂದು ದೂರಿದರು.

    ನಂಬಿದವರ ಕೈ ಬಿಟ್ಟಿಲ್ಲ
    ನಾನು ವೈ.ಎಸ್.ವಿ.ದತ್ತ ಅವರನ್ನು ಬೆಳೆಸಿದೆ. ದಿ. ಕೆ.ಎಂ.ಕೃಷ್ಣಮೂರ್ತಿ ಅವರಿಗೆ ಅಂದಿನ ಜಿಲ್ಲಾ ಪರಿಷತ್ ಅಧ್ಯಕ್ಷ ಸ್ಥಾನ ಕೂಡಿಸಿದ್ದು ಇದೇ ದೇವೇಗೌಡ ಎಂಬುದನ್ನು ಮರೆಯಬಾರದು. ನಂಬಿದವರನ್ನು ನಾನೆಂದೂ ಕೈಬಿಟ್ಟಿಲ್ಲ. ಈ ಹಿಂದೆ ಕೆ.ಎಂ.ಕೃಷ್ಣಮೂರ್ತಿ ಅವರನ್ನು ಮಂತ್ರಿ ಮಾಡಲು ಮುಂದಾದಾಗ ಇದೇ ಸಿದ್ದರಾಮಯ್ಯ ಅಡ್ಡಿಪಡಿಸಿ ಶಿವಣ್ಣನನ್ನು ಮಂತ್ರಿ ಮಾಡಿಸಿದರು. ಸಿದ್ದರಾಮಯ್ಯ ಅವರ ಕೆಟ್ಟ ಆಡಳಿತ ಕೊನೆಗಾಣಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕಿಡಿಕಾರಿದರು. ವಿರೋಧಿಗಳು ದೇವೇಗೌಡರಿಗೆ ವಯಸ್ಸಾಗಿದೆ ಎಂದು ದೂರುತ್ತಾರೆ. ನಾನು ಎಂದಿಗೂ ಕೂರುವ ವ್ಯಕ್ತಿಯಲ್ಲ. ದೇವೇಗೌಡನಿಗಿನ್ನೂ ಶಕ್ತಿ ಇದೆ ಎಂದು ಮೇಜು ಗುದ್ದಿ ಸವಾಲು ಹಾಕಿದ ಗೌಡರು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತೇನೆ. ಕಡೂರು ಜನತೆ ಪ್ರಜ್ವಲ್ ಅವರನ್ನು ಮತ್ತೊಮ್ಮೆ ಸಂಸದನನ್ನಾಗಿಸಲು ಹೆಚ್ಚಿನ ಮತ ನೀಡಿ ಬೆಂಬಲ ನೀಡಬೇಕಿದೆ ಎಂದು ಕೋರಿದರು.


    ಸಂಸದ ಪ್ರಜ್ವಲ್ ಮಾತನಾಡಿ, ಕಡೂರಿನಂತಹ ಊರಿನಲ್ಲಿ ರಾಜಕೀಯ ಮಾಡುವುದು ಕಷ್ಟಕರವಾದಂತಹ ಪರಿಸ್ಥಿತಿಯಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಸ್ವಾರ್ಥ ರಹಿತ ರಾಜಕಾರಣಿ ವೈ.ಎಸ್.ವಿ.ದತ್ತ ಅವರು ಇಂದಿಗೂ ನಮ್ಮ ಆಶಾಕಿರಣವಾಗಿದ್ದಾರೆ. ನಮ್ಮ ಕೆಲ ತಪ್ಪುಗಳಿಂದ ಮತ್ತು ದತ್ತ ಅವರ ಮೈಮರೆವೆಯಿಂದ ಅವರಿಗೆ ಸೋಲಾಯಿತು. ಆದರೆ ಅದು ಸೋಲಲ್ಲ. ಕಡೂರಿನ ಕೆರೆಗಳಿಗೆ ನೀರುಣಿಸುವ ಭಧ್ರಾ ಮೇಲ್ದಂಡೆ ಯೋಜನೆ ಇಂದು ರಾಷ್ಟ್ರೀಯ ಯೋಜನೆಯಾಗಿ 52 ಸಾವಿರ ಕೋಟಿ ರೂ. ದೊರಕಲು ದೇವೇಗೌಡರು ಹಾಗೂ ವೈ.ಎಸ್.ವಿ.ದತ್ತ ಅವರ ಶ್ರಮ ಕಾರಣ.ಕಡೂರು ಕ್ಷೇತ್ರದ ಜತೆಗಿನ ಸಂಬಂಧ ನಿರಂತರವಾಗಿರುತ್ತದೆ ಎಂದರು.
    ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ಕಡೂರು ಕ್ಷೇತ್ರದಲ್ಲಿ ಸೊನ್ನೆಯಿಂದ ಆರಂಭವಾದ ಜೆಡಿಎಸ್ ಇಂದು ಕಾರ್ಯಕರ್ತರಿಂದಲೇ ಉಳಿದಿದೆ. ಸಂಸದ ಪ್ರಜ್ವಲ್ ಅವರನ್ನು ಮತ್ತೊಮ್ಮೆ ಗೆಲ್ಲಿಸುತ್ತಾರೆ. ಬಿಜೆಪಿ ಕಾರ್ಯಕರ್ತರೂ ಸಹ ಕೈಜೋಡಿಸಿರುವುದು ನಮ್ಮ ಬಲ ಹೆಚ್ಚಿಸಿದೆ ಎಂದರು.
    ಜೆಡಿಎಸ್ ತಾಲೂಕು ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಮುಖಂಡರಾದ ಕೆ.ಎಂ.ವಿನಾಯಕ, ವೈ.ಎಸ್. ರವಿಪ್ರಕಾಶ್, ರಂಜನ್ ಅಜಿತ್ ಕುಮಾರ್, ಬಿ.ಟಿ.ಗಂಗಾಧರ ನಾಯ್ಕ, ಮಂಜುನಾಥ್ ಮತ್ತಿತರಿದ್ದರು.

    ಸಿದ್ದು ಆಪ್ತನ ಪುತ್ರ ಜೆಡಿಎಸ್ ತೆಕ್ಕೆಗೆ
    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಕೆ.ಎಂ.ಕೆಂಪರಾಜ್ ಅವರ ಪುತ್ರ ಹಾಗೂ ತರೀಕೆರೆ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಅವರ ಅಳಿಯ, ಯುವ ಮುಖಂಡ ಚೇತನ್ ಕೆಂಪರಾಜು ಅವರು ಎಚ್.ಡಿ.ದೇವೇಗೌಡ ಅವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts