More

    ಭಾವೈಕ್ಯ ಸಂದೇಶದೊಂದಿಗೆ ರಾಜ್ಯಾದ್ಯಂತ ಸಂಚಾರ, ರಥಯಾತ್ರೆಗೆ ಶಿರಹಟ್ಟಿಯಲ್ಲಿ ಚಾಲನೆ


    ಶಿರಹಟ್ಟಿ: ಶಿರಹಟ್ಟಿ ಸಂಸ್ಥಾನಮಠದ ಪೀಠಾಧಿಪತಿ ಶ್ರೀ ಫಕೀರಸಿದ್ಧರಾಮ ಸ್ವಾಮೀಜಿ ಅವರ ಅಮೃತ ಮಹೋತ್ಸವ ಅಂಗವಾಗಿ ಹುಬ್ಬಳ್ಳಿಯಲ್ಲಿ ಬುಧವಾರದಿಂದ ಜ. 30ರ ವರೆಗೆ ಆಯೋಜಿಸಿರುವ ಭಾವೈಕ್ಯ ರಥಯಾತ್ರೆಗೆ ಶ್ರೀಗಳು ಚಾಲನೆ ನೀಡಿದರು.


    ಈ ವೇಳೆ ಮಾತನಾಡಿದ ಶ್ರೀ ಫಕೀರ ಸಿದ್ಧರಾಮ ಸ್ವಾಮೀಜಿ, 500 ವರ್ಷಗಳ ಹಿಂದೆ ಕೃರ್ತೃ ಶ್ರೀ ಫಕೀರೇಶ್ವರರು ನಾಡಿನಾದ್ಯಂತ ಸಂಚರಿಸಿ ಹಿಂದು-ಮುಸ್ಲಿಮರಲ್ಲಿ ಐಕ್ಯತೆ ಹಾಗೂ ಕೋಮು ಸೌಹಾರ್ದತೆಯಿಂದ ಬದುಕುವಂತೆ ಸಂದೇಶ ಸಾರಿದ್ದರು. ಅವರು ನುಡಿದಂತೆ ನಡೆದು ಮಾನವತಾ ತತ್ವದಡಿಯಲ್ಲಿ ಬದುಕಿ ಉಭಯ ಕೋಮಿನ ಜನರ ಆರಾಧ್ಯ ದೇವ ಸ್ವರೂಪಿಯಾಗಿ ಹರನ ಭಕ್ತರಿಗೆ ಹರಿಯಾಗಿ, ಹಜರತನ ಭಕ್ತರಿಗೆ ಹಜರತರಾಗಿ ವಿಶ್ವಾಸದಿಂದ ಬಾಳುವ ಮೂಲಕ ಧರ್ಮದ ಮಾರ್ಗದಲ್ಲಿ ನಡೆಯಲು ಸಾರಿದ ಸಂದೇಶ ನಿತ್ಯ ನೂತನವಾಗಿದೆ. ಈ ನಿಟ್ಟಿನಲ್ಲಿ ಕೃರ್ತೃ ಶ್ರೀ ಫಕೀರೇಶ್ವರರ ಭಾವೈಕ್ಯತಾ ಸಂದೇಶದ ಅರಿವನ್ನು ಜನರಲ್ಲಿ ಜಾಗೃತಗೊಳಿಸುವ ನಿಟ್ಟಿನಲ್ಲಿ ಇಂದಿನಿಂದ ಒಂದು ವರ್ಷ ರಾಜ್ಯದ ವಿವಿಧ ಭಾಗಗಳಲ್ಲಿ ಭಾವೈಕ್ಯ ರಥ ಸಂಚರಿಸಲಿದೆ ಎಂದರು.


    ಹುಬ್ಬಳ್ಳಿಯಲ್ಲಿ 21 ದಿನಗಳವರೆಗೆ ರಥಯಾತ್ರೆ ಸಂಚಾರ, ಧಾರ್ವಿುಕ ಸಭೆ, ಹೆಡಿಗೆ ಪರ್ವ (ಸಹಭೋಜನ) ಸಾಧಕರ ಸತ್ಕಾರ, ಹಾಗೂ ನಾಡಿನ ಭಕ್ತ ಜನರ ಕಣ್ಮನ ಸೆಳೆಯುವ ರೀತಿಯಲ್ಲಿ ಪೀಠಾಧಿಪತಿ ಶ್ರೀಗಳ ಸಹಿತ ಅಂಬಾರಿ ಆನೆ ತುಲಾಭಾರ ನಡೆಯಲಿದೆ. ನಾಡಿನ ಮಠಾಧೀಶರ ನೇತೃತ್ವ, ಹರ-ಗುರು ಚರಮೂರ್ತಿಗಳು, ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಸಮಾರಂಭ ಆಯೋಜಿಸಲಾಗಿದೆ ಎಂದರು.


    ಮಠದ ಉತ್ತರಾಧಿಕಾರಿ ಶ್ರೀ ಫಕೀರ ದಿಂಗಾಲೇಶ್ವರ ಶ್ರೀಗಳು ಮಾತನಾಡಿ, ಪೀಠಾಧಿಪತಿ ಶ್ರೀಗಳ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ಶ್ರೀಗಳ ಸಹಿತ ಅಂಬಾರಿ ಆನೆ ತುಲಾಭಾರ ಹಾಗೂ ಭಾವೈಕ್ಯ ಸಂದೇಶ ಸಾರುವ ಸಮಾರಂಭ ನಃಭೂತೋ.. ನಃಭವಿಷ್ಯತಿ ಎಂಬಂತೆ ಭಕ್ತಗಣದ ಸಮ್ಮುಖದಲ್ಲಿ ಆಚರಿಸಲಾಗುತ್ತಿದೆ. ಇದಕ್ಕೆ ಮಠದ ಭಕ್ತರು. ಗಣ್ಯಮಾನ್ಯರ ಸಹಾಯ, ಸಹಕಾರ ಹಾಗೂ ಮಾರ್ಗದರ್ಶನ ಕಾರಣವಾಗಿದೆ. ಜಾತಿ ಜಂಜಾಟದಿಂದ ಕಲುಷಿತಗೊಂಡ ಜನರ ಮನಸಿನಲ್ಲಿ ಸೌಹಾರ್ದತೆಯಿಂದ ಸಮಾಜದಲ್ಲಿ ಬದುಕಲು ಕೃರ್ತೃ ಶ್ರೀ ಫಕೀರೇಶ ಅಂದು ನೀಡಿದ ಸಂದೇಶ ಸಾರ್ವಕಾಲಿಕ ಸತ್ಯವಾಗಿದೆ ಎಂದರು.
    ಸಿ.ಸಿ. ನೂರಶೆಟ್ಟರ್, ಅಜ್ಜನಗೌಡ ಪಾಟೀಲ, ಎಂ.ಸಿ. ಹಿರೇಮಠ, ಬಸವರಾಜ ಹೊಸೂರ, ಬಿ.ಎಸ್. ಹಿರೇಮಠ, ಎನ್.ಆರ್. ಕುಲಕರ್ಣಿ, ಸುರೇಶ ಕಪ್ಪತ್ತನವರ, ಬಸವರಾಜ ಬೋರಶೆಟ್ಟರ, ಎಸ್.ಎಂ. ಮೋಹರೇಕರ, ಭಾವೈಕ್ಯತಾ ರಥ ನಿರ್ವಿುಸಿದ ಕಲಾವಿದ ಮುತ್ತು ಕುಳಗೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts