More

    ರಾಜ್ಯಕ್ಕೆ ಕೊನೆಗೂ ದಕ್ಕಿದೆ ಜಿಎಸ್‌ಟಿ ಪರಿಹಾರ !

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇ ಪದೆ ಪತ್ರ, ರಾಜ್ಯ ಸಚಿವರ ನಿಯೋಗ ಭೇಟಿ, ನಿರಂತರ ಅರಿಕೆಗೆ ಕೇಂದ್ರ ಸರ್ಕಾರ ಓಗೊಟ್ಟಿದೆ. ಮೂರ‌್ನಾಲ್ಕು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಜಿಎಸ್‌ಟಿ ಪರಿಹಾರ ಬಾಕಿ ಮೊತ್ತ 2,300 ಕೋಟಿ ರೂ.ಗಳಲ್ಲಿ 1,190 ಕೋಟಿ ರೂ. ಬಿಡುಗಡೆ ಮಾಡಿದೆ. ಸಿಎಜಿ ಪ್ರಮಾಣಪತ್ರ ಸಲ್ಲಿಕೆಯಾದ ಬಳಿಕ ಉಳಿದ ಅರ್ಧ ಮೊತ್ತವನ್ನು ಬಿಡುಗಡೆ ಮಾಡುವುದಾಗಿ ರಾಜ್ಯ ಸರ್ಕಾರಕ್ಕೆ ತಿಳಿಸಿದೆ.

    ಉದ್ಯೋಗ ಖಾತರಿ ಯೋಜನೆಯಡಿ ಪ್ರಸಕ್ತ ಹಣಕಾಸು ವರ್ಷದ ಕೂಲಿ ವೆಚ್ಚದ ಮೊತ್ತ ಆಗಸ್ಟ್‌ನಿಂದ ಉಳಿಸಿಕೊಂಡಿತ್ತು. ಬಾಕಿ ಕೂಲಿ ವೆಚ್ಚ 600 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದೆ ಎಂದು ಆರ್ಥಿಕ ಇಲಾಖೆ ಉನ್ನತ ಮೂಲಗಳು ಮಾಹಿತಿ ನೀಡಿವೆ.

    ಕೇಂದ್ರ ಬರಬೇಕಾದ ಬಾಕಿ ಪೈಕಿ ಸಮಗ್ರ ಬಾಲ ವಿಕಾಸ ಯೋಜನೆ, ಮಧ್ಯಾಹ್ನದ ಬಿಸಿಯೂಟ, ರೂಸಾ ಅನುದಾನ ಪಾವತಿಸಿದೆ. ಬೆಂಬಲ ಯೋಜನೆಯಡಿ ಆಹಾರಧಾನ್ಯ ಖರೀದಿ ಮೊತ್ತ 1,850 ಕೋಟಿ ರೂ., ಜಿಎಸ್‌ಟಿ ಪರಿಹಾರದ ಅರ್ಧ ಹಣ ನೀಡಬೇಕಾಗಿದೆ.

    ಕೇಂದ್ರ ಪುರಸ್ಕೃತ ಯೋಜನೆಯಡಿ ರಾಜ್ಯ ಸಲ್ಲಿಸುವ ಬಳಕೆ ಪ್ರಮಾಣಪತ್ರದ ಅನುಸಾರ ಹಣ ಬಿಡುಗಡೆಯಾಗಲಿದ್ದು, ಇದೊಂದು ನಿರಂತರ ಪ್ರಕ್ರಿಯೆಯಾಗಿದೆ. ರಾಜ್ಯ ತನ್ನ ಪಾಲಿನ ಮೊತ್ತ ವಿನಿಯೋಗಿಸಿದ ಬಗ್ಗೆ ಯುಸಿ ಸಲ್ಲಿಸಿದ ನಂತರ ಕೇಂದ್ರ ತನ್ನ ಪಾಲಿನ ವೆಚ್ಚ ಭರಿಸುತ್ತದೆ ಎಂದು ಮೂಲಗಳು ತಿಳಿಸಿವೆ.

    ಹೆಚ್ಚುವರಿ ಆದಾಯದ ನೆರವು

    ರಾಜ್ಯದ ಆರ್ಥಿಕ ಪರಿಸ್ಥಿತಿ ಕ್ಲಿಷ್ಟಕರವಾಗಿಲ್ಲ, ವೆಚ್ಚ ನಿರ್ವಹಣೆಗೆ ಸಮಸ್ಯೆಯಾಗಿಲ್ಲ. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 92 ಸಾವಿರ ಕೋಟಿ ರೂ. ಆದಾಯ ಜಮೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ ಜಮೆಯಾಗಿದ್ದ 2 ಸಾವಿರ ಕೋಟಿ ರೂ.ಗಳಿಗೆ ಹೋಲಿಸಿದರೆ 10 ಸಾವಿರ ಕೋಟಿ ರೂ. ಹೆಚ್ಚುವರಿ ಆದಾಯ ಹರಿದುಬಂದಿದೆ.

    ರಾಜ್ಯದ ಪಾಲಿನ ಜಿಎಸ್‌ಟಿ 52,760 ಕೋ. ರೂ. (ಕಳೆದ ವರ್ಷ 47 ಸಾವಿರ ಕೋ. ರೂ.), ಅಬಕಾರಿ ಮೂಲದಿಂದ 19 ಸಾವಿರ ಕೋ. ರೂ. (ಕಳೆದ ವರ್ಷ 17 ಸಾವಿರ ಕೋ. ರೂ.), ಗಣಿ ಇಲಾಖೆಯಿಂದ 3,900 ಕೋಟಿ ರೂ. (ಕಳೆದ ವರ್ಷ ಮೂರು ಸಾವಿರ ಕೋ.) ಆದಾಯ ಬಂದಿದ್ದು, ಹೆಚ್ಚುವರಿ ಆದಾಯ ಸಂಗ್ರಹದಿಂದ ಗ್ಯಾರಂಟಿಗಳ ವೆಚ್ಚ ಭರಿಸಲು ನೆರವಾಗಿದೆ ಎಂದು ಮೂಲಗಳು ತಿಳಿಸಿವೆ.

    ಹೊಸ ಯೋಜನೆಗಳಿಗೆ ಸದ್ಯಕ್ಕೆ ಬ್ರೇಕ್

    ಬಾಕಿ ಬಿಲ್ 25 ಸಾವಿರ ಕೋಟಿ ರೂ., ಚಾಲ್ತಿ ಕಾಮಗಾರಿಗಳ ಮೊತ್ತ 27 ಸಾವಿರ ಕೋಟಿ ರೂ. ಭರಿಸುವುದು ದೊಡ್ಡ ಸವಾಲಾಗಿದೆ. ಹಿಂದಿನ ಸರ್ಕಾರ ಅಂದಾಜು ವೆಚ್ಚದ ಯೋಜನೆಗಳಿಗೆ ಸಾಂಕೇಕಿಕ ಅನುದಾನ ಕಾದಿರಿಸಿ ಕಾಮಗಾರಿಗೆ ಚಾಲನೆ ನೀಡಿರುವುದು ಈ ತಾಪತ್ರಯಕ್ಕೆ ಕಾರಣ.

    ಈ ಹಿನ್ನೆಲೆಯಲ್ಲಿ ಹೊಸ ಯೋಜನೆಗಳಿಗೆ ಸದ್ಯಕ್ಕೆ ಬ್ರೇಕ್ ಹಾಕಲಾಗಿದೆ. ತುರ್ತು ಅಗತ್ಯವೆನಿಸಿದ ಕಾಮಗಾರಿಗಳಿಗೆ ಮಾತ್ರ ಅನುವು ಮಾಡಿಕೊಡಲಾಗುತ್ತಿದೆ. ಬಾಕಿ ಬಿಲ್ ಪಾವತಿ, ಅಂತಿಮ ಘಟ್ಟಕ್ಕೆ ತಲುಪಿರುವ ಚಾಲ್ತಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

    ವೇತನ, ಪಿಂಚಣಿ, ಸಾಲ, ಬಡ್ಡಿ ಮತ್ತು ಸಾಮಾಜಿಕ ಭದ್ರತಾ ಯೋಜನೆ ಭದ್ರತಾ ವೆಚ್ಚದ ವ್ಯಾಪ್ತಿಗೆ ಬರುತ್ತದೆ. ನೀರಾವರಿ ಪಂಪ್ ಸೆಟ್‌ಗಳಿಗೆ ಪೂರೈಸುವ ಉಚಿತ ವಿದ್ಯುತ್‌ಗೆ ವಾರ್ಷಿಕ 15 ಸಾವಿರ ಕೋಟಿ ರೂ. ವೆಚ್ಚವಾಗುತ್ತಿತ್ತು, ಈ ಬಾರಿ 21 ಸಾವಿರ ಕೋಟಿ ರೂ.ಗಳಿಗೇರಲಿದೆ.

    ಇಂಧನ ಇಲಾಖೆ ಮೂಲಗಳು ಈಗಾಗಲೇ ಮಾಹಿತಿ ನೀಡಿವೆ. ವಿದ್ಯುತ್ ಬೇಡಿಕೆ ಸರಿದೂಗಿಸಲು ಖರೀದಿಗೆ ವ್ಯಯಿಸಲಿರುವ ಮೊತ್ತ ಪ್ರತ್ಯೇಕವಾಗಿರಲಿದೆ. ಅಸಲು 18 ಸಾವಿರ ಕೋ.ರೂ. ಬಡ್ಡಿ 25 ಸಾವಿರ ಕೋಟಿ ರೂ. ಸೇರಿ 43 ಸಾವಿರ ಕೋಟಿ ರೂ. ವಾರ್ಷಿಕ ವಿನಿಯೋಗವಾಗಿದೆ.

    ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಮಾಸಾಶನಗಳ 52 ಲಕ್ಷ ಲಾನುಭವಿಗಳಿಗೆ ರಾಜ್ಯ ಸರ್ಕಾರ 9,500 ಕೋಟಿ ರೂ. ಭರಿಸಿದರೆ, ಕೇಂದ್ರ ಸರ್ಕಾರ ಕೇವಲ 450 ಕೋಟಿ ರೂ. ಪಾವತಿ ಮಾಡುತ್ತದೆ ಎಂದು ಮೂಲಗಳು ವಿವರಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts