More

    ಬಾಕಿ ಪಾವತಿಸುವಂತೆ ಒತ್ತಾಯ

    ಬೀಳಗಿ: ರಾಜ್ಯ ರೈತ ಸಂಘ ಪದಾಧಿಕಾರಿಗಳು ಹಾಗೂ ಕಬ್ಬು ಬೆಳೆಗಾರರು ಸೋಮವಾರ ಬೆಳಗ್ಗೆ ತಾಲೂಕಿನ ಕುಂದರಗಿ ಜೆಮ್ ಸಕ್ಕರೆ ಕಾರ್ಖಾನೆಗೆ ಆಗಮಿಸಿ 2018-19ನೇ ಸಾಲಿನಲ್ಲಿ ಪೂರೈಸಿದ ಕಬ್ಬಿಗೆ 186 ರೂ. ಪಾವತಿಸುವಂತೆ ಒತ್ತಾಯಿಸಿ ಕಾರ್ಖಾನೆ ಮುಖ್ಯದ್ವಾರದ ಮುಂದೆ ಪ್ರತಿಭಟನೆ ನಡೆಸಿದರು.

    ಕಾರ್ಖಾನೆ ಜನರಲ್ ಮ್ಯಾನೇಜರ್ ಮತ್ತು ಸಿಬ್ಬಂದಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಾತುಕತೆ ನಡೆಸಿದರು. ಅಂತಿಮವಾಗಿ ಅವರು 111 ರೂ.ಗಿಂತ ಹೆಚ್ಚಿಗೆ ಕೊಡಲು ಆಗುವುದಿಲ್ಲವೆಂದು ತಿಳಿಸಿದ್ದರಿಂದ ಮಾತುಕತೆ ಯಶಸ್ವಿಗೊಳ್ಳದೆ ಮುರಿದು ಬಿದ್ದಿತು.

    ರೈತ ಮುಖಂಡ, ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ವಿಶ್ವನಾಥ ಉದಗಟ್ಟಿ, ಸಿದ್ದಪ್ಪ ಬಳಗಾನೂರ, ಬಸವಂತ ಕಾಂಬಳೆ, ಸದಾಶಿವ ಆಗೋಜಿ ಮಾತನಾಡಿ, ಜೆಮ್ ಸಕ್ಕರೆ ಕಾರ್ಖಾನೆಯವರು ಕೇವಲ ತಮಗೆ ಬೇಕಾದ ಮತ್ತು ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿಯನ್ನು ಮಾತ್ರ ಕರೆದು ಸಭೆ ಮಾಡಿ 2018-19ನೇ ಸಾಲಿನಲ್ಲಿ ಪೂರೈಸಿದ ಕಬ್ಬಿಗೆ 186 ರೂ. ಬದಲಿಗೆ ಒತ್ತಾಯದಿಂದ ಕೇವಲ 111 ರೂ. ಕೊಡಲು ಒಪ್ಪಿಸಿ ಪತ್ರಿಕಾ ಹೇಳಿಕೆ ನೀಡಿದ್ದು ಹಾಸ್ಯಾಸ್ಪದವಾಗಿದೆ ಎಂದು ದೂರಿದರು.

    111 ರೂ. ಕೊಡುವುದಕ್ಕೆ ರೈತ ಸಂಘಕ್ಕೆ ಒಪ್ಪಿಗೆ ಇಲ್ಲ. ಆದ್ದರಿಂದ ಕಾರ್ಖಾನೆ ಆಡಳಿತ ಮಂಡಳಿ 186 ರೂ. ಬಾಕಿ ಕೊಡಲು ಒಪ್ಪಿಕೊಂಡು ಕಾರ್ಖಾನೆ ಆರಂಭಿಸಬೇಕು. ಒಂದು ವೇಳೆ ಕಾರ್ಖಾನೆ ಆರಂಭಿಸಿದರೆ ಮುಂದೆ ಆಗುವ ಅನಾಹುತಕ್ಕೆ ಕಾರ್ಖಾನೆ ಆಡಳಿತ ಮಂಡಳಿಯೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
    ರೈತರು, ಹೋರಾಟಗಾರರು ಅಂತಿಮವಾಗಿ ಕಾರ್ಖಾನೆ ಆಡಳಿತ ಮಂಡಳಿಗೆ ಕಾರ್ಖಾನೆ ಆರಂಭಿಸದಂತೆ ತಾಕೀತು ಮಾಡಿ ತಾತ್ಕಾಲಿಕವಾಗಿ ಹೋರಾಟ ಮೊಟಕುಗೊಳಿಸಿದರು. ಸಿಪಿಐ ಸಂಜೀವ ಬಳಿಗಾರ ಸಿಬ್ಬಂದಿಯೊಂದಿಗೆ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.

    ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಶೈಲ ನಾಯಕ, ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಟಿ. ಪಾಟೀಲ, ಉದಯ ಸಾರವಾಡ, ದುಂಡಪ್ಪ ಯರಗಟ್ಟಿ, ಸುಭಾಸ ಶಿರಬೂರ, ಪರಶುರಾಮ ಮಂಟೂರ, ಡಿ.ಎಂ. ನದಾಫ್, ಎಸ್.ವಿ. ಜೀರಗಾಳ, ಗೋವಿಂದಪ್ಪ ಸೊಕನಾದಗಿ, ಹನುಮಂತ ಸಾಲಳ್ಳಿ, ಸಿದ್ದಪ್ಪ ಚಂಡಕಿ, ಎ.ಎಂ. ಗಾಜನ್ನವರ, ಬಾಳು ಹೊಸಮನಿ, ಬಸವರಾಜ ನಾಯಕ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts