More

    ಸಿದ್ಧಗಂಗಾ ಮಠದಲ್ಲಿ ವಸ್ತು ಪ್ರದರ್ಶನ ಆರಂಭ

    ತುಮಕೂರು: ಸಿದ್ಧಗಂಗಾ ಕ್ಷೇತ್ರದ ಜಾತ್ರೆಗೆ ಮೆರುಗು ತಂದಿರುವ ಕೃಷಿ ಹಾಗೂ ಕೈಗಾರಿಕಾ ವಸ್ತುಪ್ರದರ್ಶನ ಇನ್ನೂ ವೈಭವವಾಗಿ ನಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

    ಸಿದ್ಧಗಂಗಾ ಮಠದ ವಸ್ತುಪ್ರದರ್ಶನದ ಆವರಣದಲ್ಲಿ ಬುಧವಾರ ‘ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಾತ್ರೆಯ ನಿಜವಾದ ವೈಭವ ಸಿದ್ಧಗಂಗೆಯಲ್ಲಿ ಕಾಣಸಿಗುತ್ತದೆ ಎಂದರು.

    ಕೃಷಿಯನ್ನು ಲಾಭದಾಯಕವಾಗಿಸಿಕೊಳ್ಳುವ ಜತೆಗೆ ಅನ್ನದಾತ ಸ್ವಾವಲಂಬಿಯಾಗಬೇಕು. ಈ ನಿಟ್ಟಿನಲ್ಲಿ ಶ್ರೀಕ್ಷೇತ್ರ ಗುರುವಾರ ಅರಿವು ಮೂಡಿಸುತ್ತಿದೆ, ಮಕ್ಕಳಿಗೆ ಅಕ್ಷರ ಹಾಗೂ ರೈತರಿಗೆ ಬದುಕು ರೂಪಿಸಿಕೊಳ್ಳಲು ಕಲಿಸುತ್ತಿದೆ ಎಂದರು. ಶ್ರಮ ಕಡಿಮೆ ಮಾಡಿಕೊಂಡು ಕೃಷಿಯನ್ನು ಲಾಭವಾಗಿಸಿಕೊಳ್ಳಲು ಜಾತ್ರೆಯಲ್ಲಿ ಅರಿವು ಮೂಡಿಸುವುದು ಕ್ರಾಂತಿಕಾರಕ ಬೆಳವಣಿಗೆ. ಸರ್ಕಾರಿ ಇಲಾಖೆಗಳು ಮಾಡಬೇಕಾದ ಕೆಲಸವನ್ನು ಶ್ರೀಮಠ ಮಾಡುತ್ತಿದೆ ಎಂದು ಶ್ಲಾಸಿದರು. ಬೆಳೆದ ಬೆಳೆಗೆ ನೈಜ ಬೆಲೆ ಸಿಗದೆ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕಿದೆ. ದೂರದೃಷ್ಟಿ ಇಟ್ಟುಕೊಂಡು ಡಾ.ಶಿವಕುಮಾರ ಸ್ವಾಮೀಜಿ ಅವರು ಆರಂಭಿಸಿದ್ದ ವಸ್ತುಪ್ರದರ್ಶನದ ಉಪಯೋಗವನ್ನು ರೈತರು ಪಡೆಯಬೇಕು ಎಂದರು.

    ಬ್ರಾಂಡ್‌ಗಳ ಹಿಂದೆ ಮಾರುಕಟ್ಟೆ ಇದ್ದು ಇದನ್ನು ಬದಲಾಯಿಸಿಕೊಂಡು ನಮ್ಮ ವಸ್ತುಗಳು ಶ್ರೇಷ್ಠ ಎಂಬ ಭಾವನೆ ಮೂಡಿಸುವ ಮೂಲಕ ಮಾರುಕಟ್ಟೆ ವಿಸ್ತರಣೆ ಮಾಡಿಕೊಳ್ಳಬೇಕು, ರೈತರ ಬದುಕು ಉಳಿದರಷ್ಟೇ ದೇಶಕ್ಕೆ ಭವಿಷ್ಯ ಎಂದರು.ಸುಗ್ಗಿಯ ನಂತರ ಜಾನುವಾರ ಬದಲಾವಣೆಗೆ ಜಿಲ್ಲೆಯಲ್ಲಿ ಉಳಿದಿರುವ ಪ್ರಮುಖ ಜಾತ್ರೆ ಸಿದ್ಧಗಂಗೆ ನಡೆಯುತ್ತಿದೆ. ರೈತರಿಗೂ ಜ್ಞಾನ ಮೂಡಿಸುವ ಕೆಲಸ ಇಲ್ಲಿ ನಡೆಯುತ್ತಿದೆ, ಅರಿವೇ ಗುರು ಎಂಬ ಮಾತು ಇಲ್ಲಿ ಸಾಕಾರವಾಗುತ್ತಿದೆ ಎಂದರು.

    ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಡಾ.ಶಿವಕುಮಾರ ಸ್ವಾಮೀಜಿ ಅವರ ದೂರದೃಷ್ಟಿಯ ಫಲವಾಗಿ 1964ರಲ್ಲಿ ಆರಂಭವಾದ ಪ್ರದರ್ಶನ ರೈತಸ್ನೇಹಿಯಾಗಿದೆ ಎಂದರು. ಮೇಯರ್ ಫರಿದಾ ಬೇಗಂ ಮಾತನಾಡಿ, ಸಿದ್ಧಗಂಗಾ ಮಠದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ನಡೆದ ದಾರಿ ನಮಗೆಲ್ಲ ಸಾರ್ವಕಾಲಿಕ ಮಾರ್ಗದರ್ಶಕವಾಗಿದೆ ಎಂದರು. ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಪಂ ಅಧ್ಯಕ್ಷೆ ಎಂ.ಲತಾ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ ಇದ್ದರು.

    164ಕ್ಕೂ ಹೆಚ್ಚು ಮಳಿಗೆ: ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನದಲ್ಲಿ 164ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿತ್ತು. ಕೇಂದ್ರ ಸರ್ಕಾರದ 3, ರಾಜ್ಯ ಸರ್ಕಾರದ 14 ಇಲಾಖೆಗಳು, 147 ಖಾಸಗಿ ಹಾಗೂ ಇತರ ಮಳಿಗೆಗಳು ವಸ್ತುಪ್ರದರ್ಶನದಲ್ಲಿದ್ದವು. ಉತ್ತಮ ಮಳಿಗೆಗಳಿಗೆ 3 ಪಾರಿತೋಷಕ, 12 ಪ್ರಥಮ ಬಹುಮಾನ, 12 ದ್ವಿತೀಯ, 11 ಸಮಾಧಾನಕರ ಬಹುಮಾನ ನೀಡಲಾಗುತ್ತದೆ.

    ಪ್ರದರ್ಶನ ಹಾಗೂ ಪ್ರಚಾರ ಈ ಯುಗದ ಶ್ರೇಷ್ಠ ವಿಷಯಗಳಾಗಿವೆ, ಪ್ರಚಾರಕ್ಕೆ ಮಾರು ಹೋಗುವ ಕಾಲ ಇದಾಗಿದೆ, ಕೃಷಿ ಉತ್ಪನ್ನಗಳಿಗೂ ಪ್ರಚಾರದ ಅವಶ್ಯಕತೆಯಿದೆ. ನಾವು ಮಾರುವುದನ್ನು ಹೊಗಳಬೇಕು, ಕೊಳ್ಳುವುದನ್ನು ಜರಿಯುವ ಕೌಶಲ ರೈತರಿಗೂ ಕಲಿಸಬೇಕು.
    ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts