More

    ಸಕಾಲಿಕ: ಭಾರತ-ಚೀನಾ ಗಡಿಬಿಡಿಯ ಹಿಂದೆ…

    ಸಕಾಲಿಕ: ಭಾರತ-ಚೀನಾ ಗಡಿಬಿಡಿಯ ಹಿಂದೆ...

    ಪಶ್ಚಿಮ ವಲಯದ ವಾಸ್ತವ ಹತೋಟಿ ರೇಖೆ, ಮಧ್ಯ ವಲಯದ ಗಡಿರೇಖೆ ಮತ್ತು ಪೂರ್ವ ವಲಯದ ಮೆಕ್​ವುಹೋನ್ ರೇಖೆ ಸೇರಿದಂತೆ ಭಾರತ ಮತ್ತು ಚೀನಾಗಳನ್ನು ಇಂದು ವಿಭಜಿಸುವ ರೇಖೆ ಒಟ್ಟು 4056 ಕಿಲೋಮೀಟರ್ ಉದ್ದವಿದೆ. ಈ ಗಡಿ ಐವತ್ತರ ದಶಕದ ಉತ್ತರಾರ್ಧದಲ್ಲಿ ಹೆಚ್ಚಿನ ಮುನ್ಸೂಚನೆಯಿಲ್ಲದೇ ಸ್ಪೋಟಿಸಿ, 1962ರ ಯುದ್ಧಕ್ಕೆ ಕಾರಣವಾಯಿತು.

    ಭಾರತ ಮತ್ತು ಚೀನಾಗಳ ನಡುವೆ ಅಭೇದ್ಯ ಹಿಮಾಲಯ ಪರ್ವತಗಳು ಶತಮಾನಗಳಿಂದ ಗಡಿಪ್ರದೇಶಗಳ ಸ್ವರೂಪ ಹಾಗೂ ಸ್ಥಾನವನ್ನು ಪಡೆದುಕೊಂಡಿದ್ದವು. ನೂರಿನ್ನೂರು ಕಿಲೋಮೀಟರ್​ಗಳಷ್ಟು ಅಗಲದ ಈ ಪರ್ವತೀಯ ಗಡಿಪ್ರದೇಶದಲ್ಲಿ ಗಡಿರೇಖೆ ಅಥವಾ ರೇಖಾಗಡಿ (linear boundary) ಎನ್ನುವುದು ಇತಿಹಾಸದ ಯಾವ ಕಾಲದಲ್ಲೂ ಅಸ್ತಿತ್ವದಲ್ಲಿರಲಿಲ್ಲ. ಗಡಿರೇಖೆ ಎನ್ನುವುದು ಮೂಲತಃ ಯೂರೋಪಿಯನ್ ಪರಿಕಲ್ಪನೆ. ಏಷಿಯಾಟಿಕ್ ಸಾಮ್ರಾಜ್ಯಗಳನ್ನು ಬೇರ್ಪಡಿಸುತ್ತಿದ್ದಂತಹವು ಸಾಮಾನ್ಯವಾಗಿ ಭೌಗೋಳಿಕ ಹೆಗ್ಗುರುತುಗಳಾದ ಪರ್ವತಸ್ತೋಮಗಳು, ಮರುಭೂಮಿಗಳು ಮುಂತಾದುವು. ಸೀಮಾಪ್ರದೇಶಗಳ ಮೇಲಿನ ಹತೋಟಿ ನಿರಂತರವಾಗಿ ಬದಲಾಗುತ್ತಿದ್ದುದು ಏಷಿಯಾದಲ್ಲಿ ರೇಖಾಗಡಿಗಳ ಅನುಪಸ್ಥಿತಿಗೆ ಬಹುಮುಖ್ಯ ಕಾರಣ.

    ಭಾರತ ಮತ್ತು ಚೀನಾಗಳ ನಡುವಿನ ಗಡಿಪ್ರದೇಶಗಳ ಸಂಬಂಧದಲ್ಲಿ ಆದದ್ದೂ ಇದೇ. ಉನ್ನತ ಹಿಮಾಲಯ ಪರ್ವತಶ್ರೇಣಿಗಳು ಸಾಂಪ್ರದಾಯಿಕ ಗಡಿಪ್ರದೇಶಗಳಾಗಿದ್ದುದೇನೋ ನಿಜ. ಆದರೆ, ಟಿಬೆಟ್, ನೇಪಾಳ, ಪಂಜಾಬ್ (ಸಿಖ್), ಕಾಂಗ್ರಾ, ಜಮ್ಮು, ಲಡಾಖ್, ಹುಂಝಾ, ಬಾಲ್ಟಿಸ್ತಾನ್, ಮತ್ತು (ಆಗೊಮ್ಮೆ ಈಗೊಮ್ಮೆ) ಚೀನಾದ ಸೇನೆಗಳು ಈ ಪ್ರದೇಶದಲ್ಲಿ ಕಾಳಗನಿರತವಾಗಿರುತ್ತಿದ್ದವು. ಪರಿಣಾಮವಾಗಿ ಹಿಮಾಲಯ ಗಡಿಪ್ರದೇಶದಲ್ಲಿ ಹತೋಟಿ ರೇಖೆಗಳು ನಿರಂತರವಾಗಿ ಬದಲಾಗುತ್ತಿದ್ದವು ಮತ್ತು ಯಾವೊಂದು ನಿರ್ದಿಷ್ಟ ಅಧಿಕೃತ ಗಡಿರೇಖೆಯೂ ಅಸ್ತಿತ್ವಕ್ಕೆ ಬರಲಾಗಲಿಲ್ಲ. ಆ ದಿನಗಳಲ್ಲಿ ಟಿಬೆಟ್​ನ ಮೇಲೆ ಚೀನಾದ ಸಾರ್ವಭೌಮತ್ವವಿತ್ತು ಮತ್ತು ಈಗಿನ ಅರುಣಾಚಲದ ವಿವಿಧ ಬುಡಕಟ್ಟುಗಳ ನಾಯಕರು ಟಿಬೆಟ್​ನ ದಲಾಯಿಲಾಮಾರ ಸಾಮಂತರಾಗಿದ್ದರು. ಅಂದರೆ ಸರಿಸುಮಾರು ಈಗಿನ ಅಸ್ಸಾಂ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳ ನಡುವಿನ ಗಡಿ ಭಾರತ ಮತ್ತು ಟಿಬೆಟ್​ಗಳ ನಡುವಿನ ಅಂತಾರಾಷ್ಟ್ರೀಯ ಗಡಿಯಾಗಿತ್ತು. ಹೀಗೆ ಬ್ರಹ್ಮಪುತ್ರಾ ಬಯಲಿನಲ್ಲಿ ಸಾಗುವ ಗಡಿರೇಖೆ ಭಾರತದ ಸುರಕ್ಷೆಗೆ ತಕ್ಕುದಾದುದಲ್ಲ ಎಂದು ಬ್ರಿಟಿಷ್ ಭಾರತ ಈಗಿನ ಅರುಣಾಚಲ ಪ್ರದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡು ಭಾರತ-ಟಿಬೆಟ್ ಗಡಿಯನ್ನು ಹಿಮಾಲಯ ಪರ್ವತಶ್ರೇಣಿಗಳವರೆಗೆ ವಿಸ್ತರಿಸಿತು. ಆಗ ಸೃಷ್ಟಿಯಾದದ್ದೇ ಮೆಕ್​ವುಹೋನ್ ಗಡಿರೇಖೆ. ಆದರೆ 1914ರ ಶಿಮ್ಲಾ ಸಮ್ಮೇಳನದಲ್ಲಿ ಭಾರತ ಮುಂದಿಟ್ಟ ಈ ಗಡಿರೇಖೆಯನ್ನು ಚೀನಾ ಒಪ್ಪಿಕೊಳ್ಳಲಿಲ್ಲ. ಇನ್ನು ಪಶ್ಚಿಮದ ಅಕ್ಸಾಯ್ ಚಿನ್ ಪ್ರಸ್ಥಭೂಮಿಯನ್ನು ಬ್ರಿಟಿಷ್ ಭಾರತ ಕೇವಲ ಭೂಪಟದಲ್ಲಷ್ಟೇ ತನ್ನದೆಂದು ತೋರಿಸಿಕೊಂಡಿತೇ ವಿನಾ ಆ ಪ್ರದೇಶದ ಮೇಲೆ ವಾಸ್ತವ ಅಧಿಕಾರ ಸ್ಥಾಪಿಸುವ ಯಾವುದೇ ಪ್ರಯತ್ನವನ್ನೂ ಮಾಡಲಿಲ್ಲ. 1947ರಲ್ಲಿ ಬ್ರಿಟಿಷರಿಂದ ಸ್ವತಂತ್ರ ಭಾರತಕ್ಕೆ ಸಿಕ್ಕಿದ ಬಳುವಳಿ ಈ ಅನಿಶ್ಚಿತ ಗಡಿಗಳು.

    ಹೀಗಾಗಿ 20ನೆಯ ಶತಮಾನದ ಮಧ್ಯಭಾಗದಲ್ಲಿ ಭಾರತ ಗಣರಾಜ್ಯ (Republic of India) ಮತ್ತು ಚೀನೀ ಜನತಾ ಗಣರಾಜ್ಯ (People’s Republic of China) ಅಸ್ತಿತ್ವಕ್ಕೆ ಬಂದಾಗ ಅವುಗಳ ಮುಂದೆ ಎದುರಾದ ಸಮಸ್ಯೆ- ‘ತಮ್ಮ ನಡುವಿನ ಅನಿಶ್ಚಿತ ಗಡಿಗಳನ್ನು ಕಾನೂನುಬದ್ಧ ಗಡಿಗಳಾಗಿ ಬದಲಾಯಿಸುವುದು ಹೇಗೆ?’ ಆ ಪ್ರಯತ್ನದಲ್ಲಿ ಅವೆರಡೂ ಎಪ್ಪತ್ತು ವರ್ಷಗಳಾದರೂ ಇನ್ನೂ ಯಶಸ್ವಿಯಾಗಿಲ್ಲ. ಅದರ ಪರಿಣಾಮವೇ ಗಲ್ವಾನ್ ಕಣಿವೆಯಲ್ಲಿ ಘಟಿಸಿದ ರಕ್ತಪಾತ.

    ಇವುಗಳ ಭೌಗೋಳಿಕ ಹಾಗೂ ಜನಸಂಖ್ಯೀಯ ಆಯಾಮಗಳನ್ನು ಅವಲೋಕಿಸೋಣ.

    ಪಶ್ಚಿಮ ವಲಯ: ಭಾರತದ ಲಡಾಖ್ ಮತ್ತು ಚೀನೀ ಆಕ್ರಮಿತ ಅಕ್ಸಾಯ್ ಚಿನ್ ಪ್ರದೇಶಗಳನ್ನು ಬೇರ್ಪಡಿಸುವ ವಾಸ್ತವ ಹತೋಟಿ ರೇಖೆ ಅಸ್ತಿತ್ವಕ್ಕೆ ಬಂದದ್ದು 1962ರ ಯುದ್ಧದ ಪರಿಣಾಮವಾಗಿ. ಉತ್ತರದಲ್ಲಿ ಕಾರಾಕೊರಂ ಕಣಿವೆಯಿಂದ ಆರಂಭವಾಗಿ ಆಗ್ನೇಯಕ್ಕೆ ಸಾಗುತ್ತಾ ದೌಲತ್ ಬೇಗ್ ಓಲ್ದಿ, ಗಲ್ವಾನ್ ಕಣಿವೆ, ಕೊಂಗ್ಕಾ ಕಣಿವೆ ಮೂಲಕದ ಹಾದು ದಕ್ಷಿಣಕ್ಕೆ ಹೊರಳಿ ಪಂಗೊಂಗ್ ತ್ಸೋ ಸರೋವರವನ್ನು ಎರಡಾಗಿ ಕತ್ತರಿಸಿ ಚುಶಾಲ್ ಮೂಲಕ ಮತ್ತೆ ಆಗ್ನೇಯದತ್ತ ಸಾಗುವ ಈ ರೇಖೆ, ಸಮುದ್ರಮಟ್ಟದಿಂದ 14-23 ಸಾವಿರ ಅಡಿಗಳ ಎತ್ತರದಲ್ಲಿ ಆಳ ಕಮರಿಗಳು ಮತ್ತು ರಭಸವಾಗಿ ಹರಿಯುವ ಹೊಳೆಗಳನ್ನು ಹಾದು ಸಾಗುತ್ತದೆ. ಪೂರ್ವಕ್ಕೆ ಚೀನೀ ವಶದಲ್ಲಿರುವ ಅಕ್ಸಾಯ್ ಚಿನ್ ಪ್ರಧಾನಿ ಜವಾಹರ್​ಲಾಲ್ ನೆಹರೂ ಸಂಸತ್ತಿನಲ್ಲಿ ವರ್ಣಿಸಿದಂತೆ ‘ಹುಲ್ಲಿನ ಎಸಳೂ ಬೆಳೆಯದಂತಹ’ ಬರಡು ಪ್ರದೇಶ. ಆ ಕಾರಣದಿಂದಲೆ ಚೀನಿಯರು ಆ ಪ್ರದೇಶವನ್ನು ಆಕ್ರಮಿಸಿಕೊಂಡಿರುವುದರಿಂದ ನಮಗೇನೂ ನಷ್ಟವಿಲ್ಲ ಎಂದು ನೆಹರೂ ಹೇಳಿದ್ದಕ್ಕೆ ಪ್ರತಿಯಾಗಿ ಜನಸಂಘದ ಸಂಸದ ಮಹಾವೀರ್ ತ್ಯಾಗಿ ‘ನಿಮ್ಮ ತಲೆಯ ಮೇಲೂ ಏನೂ ಬೆಳೆಯುತ್ತಿಲ್ಲ, ಅದನ್ನೂ ಚೀನೀಯರಿಗೆ ಒಪ್ಪಿಸಿಬಿಡೋಣವೇ?’ ಎಂದು ಪ್ರಶ್ನಿಸಿದ್ದೀಗ ಇತಿಹಾಸ.

    19ನೇ ಶತಮಾನದ ಮಧ್ಯಭಾಗದಲ್ಲಿ ಯೂರೋಪಿಯನ್ನರು ಇಲ್ಲಿಗೆ ಕಾಲಿಡುವ ಮೊದಲು ಅಕ್ಸಾಯ್ ಚಿನ್ ಉತ್ತರ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಜೇಡ್ ಗಣಿಗಾರಿಕೆ ನಡೆಯುತ್ತಿತ್ತು. ಮುಂದಿನ ಒಂದು ಶತಮಾನದಲ್ಲಿ ಅದು ನಿಂತುಹೋಗಿ ಈಗ ಅಲ್ಲಿರುವ ಜನರೆಂದರೆ ಚೀನೀ ಸೈನಿಕರು ಮಾತ್ರ. ಹತೋಟಿ ರೇಖೆಗೆ ಸನಿಹದಲ್ಲೇ ಅವರು ವ್ಯವಸ್ಥಿತ ರಸ್ತೆಗಳನ್ನು ನಿರ್ವಿುಸಿದ್ದಾರೆ. ರೇಖೆಯ ಪಶ್ಚಿಮದಲ್ಲಿ ವಿರಳ ಜನಸಾಂದ್ರತೆಯಿದೆ, ಯಾಕ್ ಮತ್ತು ಕುರಿ ಸಾಕಣೆಯ ವೃತ್ತಿಯ ಜನರ ಪುಟ್ಟ ಹಳ್ಳಿಗಳಿರುವ ಈ ಪ್ರದೇಶ ಜಗತ್ತಿನ ಅತಿ ಎತ್ತರದ ಮಾನವ ವಸತಿಗಳಲ್ಲೊಂದು. ದೊಡ್ಡ ಸೇನಾ ಠಿಕಾಣೆಗಳಾದ ದೌಲತ್ ಬೇಗ್ ಓಲ್ದಿ ಮತ್ತು ಚುಶಾಲ್​ನಂತಹ ಹಲವು ಸಣ್ಣ ಠಿಕಾಣೆಗಳು ಇಲ್ಲಿವೆ. ಕಳೆದ ಐದು ವರ್ಷಗಳಲ್ಲಿ ಭಾರತದ ಬಾರ್ಡರ್ ರೋಡ್ ಆರ್ಗನೈಜೇಷನ್ ದಕ್ಷಿಣದ ದರ್ಪಕ್​ನಿಂದ ಗಲ್ವಾನ್ ಕಣಿವೆಯ ಮೂಲಕ ಹಾದು ದೌಲತ್ ಬೇಗ್ ಓಲ್ದಿ ತಲುಪುವ ರಸ್ತೆಯನ್ನೂ, ಅದಕ್ಕೆ ಒಳನಾಡಿನಿಂದ ಫೀಡರ್ ರಸ್ತೆಗಳನ್ನೂ ನಿರ್ವಿುಸಿದೆ. ಇಲ್ಲಿ ಜನರು ಸಿಗದ ಕಾರಣ ಉತ್ತರ ಭಾರತದಿಂದ ಇಲ್ಲಿಗೆ ಕೆಲಸಗಾರರನ್ನು ಕರೆದೊಯ್ಯಲಾಯಿತು. ವಾರದ ಹಿಂದೆ ಸಹ ಜಾರ್ಖಂಡ್​ನಿಂದ 12,000 ಕೆಲಸಗಾರರನ್ನು ಗಲ್ವಾನ್ ಕಣಿವೆ ಪ್ರದೇಶಕ್ಕೆ ಕರೆದೊಯ್ಯಲಾಯಿತು. ಚೀನೀಯರನ್ನು ಹುಚ್ಚೆಬ್ಬಿಸಿರುವ ಕಾರಣಗಳಲ್ಲಿ ಇದೂ ಒಂದು.

    ಹಿಮಾಚಲ ಪ್ರದೇಶ ಮತ್ತು ಟಿಬೆಟ್ ನಡುವಿನ ಸುಮಾರು 300 ಕಿಮೀ ಉದ್ದದ ಗಡಿಯೂ ಪಶ್ಚಿಮ ವಲಯಕ್ಕೇ ಸೇರಿದೆ. ಇಲ್ಲಿನ ಶಿಪ್ಕಿ ಲಾ ಭಾರತ ಮತ್ತು ಚೀನಾ ನಡುವೆ ವ್ಯಾಪಾರಕ್ಕಾಗಿ ತೆರೆದಿರುವ ಮೂರು ಮಾರ್ಗಗಳಲ್ಲೊಂದು. ಇನ್ನೆರಡು ಉತ್ತರಾಖಂಡದಲ್ಲಿರುವ, ಈಗ ನೇಪಾಳ ತಗಾದೆಯೆತ್ತಿರುವ ಲಿಪುಲೆಖ್ ಕಣಿವೆ ಮತ್ತು ಸಿಕ್ಕಿಂನಲ್ಲಿರುವ ನಥೂ ಲಾ.

    ಮಧ್ಯ ವಲಯ: ಉತ್ತರಾಖಂಡ ಮತ್ತು ಟಿಬೆಟ್ ನಡುವೆ ಸುಮಾರು 400 ಕಿಮೀ ಉದ್ದದ ಗಡಿಯಿದೆ. ಅತ್ಯುನ್ನತ ಪರ್ವತಶ್ರೇಣಿ, ಹತ್ತಾರು ಕಣಿವೆಗಳು ಹಾಗೂ ನೂರೊಂದು ಹೊಳೆಹಳ್ಳಗಳ ಮೂಲಕ ಸಾಗುವ ಈ ಗಡಿ ವಿವಾದಕ್ಕೊಳಗಾಗಿಲ್ಲ. ಅತಿ ಹೆಚ್ಚು ಭೂಕಂಪಗಳಾಗುವ ಪ್ರದೇಶಗಳಲ್ಲೊಂದು. ಈ ಪ್ರದೇಶದಲ್ಲಿ ಹಿಂದೂಗಳ ಹಲವಾರು ಪುಣ್ಯಕ್ಷೇತ್ರಗಳಿವೆ.

    ಪೂರ್ವ ವಲಯ: ಮೂರೂ ವಲಯಗಳಲ್ಲಿ ಇದು ಅತಿ ದೀರ್ಘವಾದುದು ಮತ್ತು ಇದು ಸಿಕ್ಕಿಂ-ಟಿಬೆಟ್ ಹಾಗೂ ಅರುಣಾಚಲ ಪ್ರದೇಶ-ಟಿಬೆಟ್ ಗಡಿಗಳನ್ನೊಳಗೊಂಡಿದೆ. ಸಿಕ್ಕಿಂ-ಟಿಬೆಟ್ ಗಡಿ 225 ಕಿಮೀ ಉದ್ದವಾಗಿದೆ ಮತ್ತು ಇದು ಬಹುಪಾಲು ಪರ್ವತಸಾಲುಗಳ ನೆತ್ತಿಯ ಮೇಲೆ ಸಾಗುವುದರಿಂದ ವಿವಾದಕ್ಕೆಡೆಯಾಗಿಲ್ಲ. ಆದರೆ ಸಿಕ್ಕಿಂ ಮತ್ತು ಭೂತಾನದ ನಡುವೆ ದಕ್ಷಿಣಕ್ಕೆ ಸಾಗಿದಂತೆ ಕಿರಿದಾಗುವ ಚುಂಬಿ ಕಣಿವೆ ಎಂಬ ಚೀನೀ ಪ್ರದೇಶವಿದೆ. ಇದು ಚೀನೀಯರಿಗೆ ಸಾಮರಿಕ ಅನುಕೂಲ ಒದಗಿಸುವುದರಿಂದ ಇದನ್ನು ‘ಭಾರತದ ಹೆಗಲಿಗೆ ಚುಚ್ಚಿ ನಿಂತ ಕಠಾರಿ’ ಎಂದು ಬಣ್ಣಿಸಲಾಗುತ್ತದೆ. ಚೀನಾ 1967ರಲ್ಲಿ ಇಲ್ಲಿನ ನಥೂ ಲಾ ಕಣಿವೆಯನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸಿತ್ತು. ಆದರೆ ಭಾರತೀಯ ಸೇನೆ ಚೀನೀಯರನ್ನು ಸೋಲಿಸಿದ್ದಷ್ಟೇ ಅಲ್ಲ, ಸುಮಾರು ಮೂರು ಕಿಮೀಗಳಷ್ಟು ದೂರಕ್ಕೆ ಅವರನ್ನು ಅಟ್ಟಿಸಿಕೊಂಡು ಹೋಯಿತು. ಆಗ ಕಳೆದುಕೊಂಡ ಪ್ರದೇಶವನ್ನು ಮರಳಿ ಪಡೆಯುವ ಪ್ರಯತ್ನವನ್ನು ಚೀನೀಯರು ಇದುವರೆಗೂ ಮಾಡಿಲ್ಲ.

    ಅರುಣಾಚಲ ಪ್ರದೇಶ ಮತ್ತು ಟಿಬೆಟ್ ಅನ್ನು ಬೇರ್ಪಡಿಸುವ ಮೆಕ್​ವುಹೋನ್ ರೇಖೆ ಪಶ್ಚಿಮದಲ್ಲಿ ಮಿಗ್ಯುತ್ತೆಂ ಮತ್ತು ಟಿಬೆಟನ್ ಯಾತ್ರಾಸ್ಥಳಗಳಾದ ತ್ಸೊಕಾರೋ ಹಾಗೂ ಸ್ತಾರಿ ಸೆರ್ಪಾಗಳ ಹೊರತಾಗಿ ಉಳಿದೆಲ್ಲೆಡೆ ಪರ್ವತಶ್ರೇಣಿಯ ನೆತ್ತಿಯ ಮೇಲೆ ಸಾಗುವುದರಿಂದ ಅದನ್ನು ಬದಲಾಯಿಸುವ ಪ್ರಯತ್ನವನ್ನು ಚೀನೀಯರು ಮಾಡುತ್ತಿಲ್ಲ. 1987-88ರ ಚಳಿಗಾಲದಲ್ಲಿ ಮಾಡಿದ ಪ್ರಯತ್ನ ಅವರ ಇನ್ನೂರರಷ್ಟು ಸೈನಿಕರ ಸಾವಿನಿಂದ ವಿಫಲವಾಯಿತು. ಅತ್ಯಧಿಕವಾಗಿ ಮಳೆಯಾಗುವ ಈ ಗಡಿಯಲ್ಲಿ ಭಾರತ ಆಯಕಟ್ಟಿನ ಗಡಿ ರಸ್ತೆಗಳು, ಜತೆಗೆ ಯುದ್ಧವಿಮಾನ ನಿಲ್ದಾಣಗಳನ್ನೂ ನಿರ್ವಿುಸಿಕೊಂಡು ಚೀನೀಯರಿಗಿಂತ ಹೆಚ್ಚು ಮಜಬೂತು ಸ್ಥಿತಿಯಲ್ಲಿದೆ. ಜತೆಗೆ ಗಡಿಗೆ ಹತ್ತಿರದಲ್ಲೇ ಜನವಸತಿಯ ಪ್ರದೇಶಗಳು ಹೆಚ್ಚಿಗೆಯಿದೆ. ಇವರೆಲ್ಲರೂ ಟಿಬೆಟನ್ ಮೂಲದವರಾದರೂ ಈಗ ಅಪ್ಪಟ ಭಾರತೀಯರಾಗಿದ್ದಾರೆ. 2008ರಲ್ಲಿ ತವಾಂಗ್ ಪ್ರದೇಶದಲ್ಲಿ ಚೀನಾ ತಂಟೆ ತೆಗೆಯುವ ಸೂಚನೆ ಕಂಡುಬಂದಾಗ ಅಂದಿನ ಅರುಣಾಚಲ ಮುಖ್ಯಮಂತ್ರಿ ದೋರ್ಜಿ ಖಂಡು ಗುಡುಗಿದ್ದು ‘ನಾವು ಭಾರತೀಯ ಟಿಬೆಟನ್ನರು. ಚೀನಾವೇನಾದರೂ ತವಾಂಗ್ ಮೇಲೆ ಆಕ್ರಮಣವೆಸಗಿದರೆ ನಾವು ಅವರ ವಿರುದ್ಧ ಹೋರಾಡಲು ತಯಾರಿದ್ದೇವೆ.’

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts