More

    ಸೃಜನಶೀಲ ಪ್ರತಿಭಾ ಪ್ರದರ್ಶನಕ್ಕೆ ಮಕ್ಕಳ ಜಗಲಿ

    ಮಂಗಳೂರು: ಇಲ್ಲಿ ಎರಡೂವರೆ ವರ್ಷದ ಪುಟಾಣಿ ಚಿತ್ರಕಲಾವಿದೆಯಿದ್ದಾಳೆ.. ಐದು ವರ್ಷದ ಪೋರ ಕವಿತೆ ಓದುತ್ತಾನೆ.. ಕತೆ ಹೇಳುವ ಪುಟ್ಟ ಕಂದಮ್ಮಗಳೂ ಹಾಜರ್…

    ಇದಕ್ಕೆ ವೇದಿಕೆಯಾಗಿರುವುದು ಮಕ್ಕಳ ಜಗಲಿ. ಸೃಜನಶೀಲ ಕಲಾಶಿಕ್ಷಕ ತಾರಾನಾಥ ಕೈರಂಗಳ ವೆಬ್‌ತಾಣದ ಮೂಲಕ ಮಕ್ಕಳಿಗೆ ಅಂತರ್ಜಾಲದಲ್ಲೇ ಹಾಡು, ಕುಣಿತ, ಕವನ, ಚಿತ್ರರಚನೆ, ಲೇಖನ ಬರೆಯುವುದರ ಮೂಲಕ ಕಲಿಕಾಸಕ್ತಿ ಹೆಚ್ಚಿಸುವ ರಚನಾತ್ಮಕ ಚಟುವಟಿಕೆ ಮಾಡುತ್ತಿದ್ದಾರೆ.

    ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲೇ ಕುಳಿತಿದ್ದ ಮಕ್ಕಳನ್ನು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಬಂಟ್ವಾಳ ತಾಲೂಕಿನ ಮಂಚಿ ಕೊಳ್ನಾಡು ಸರ್ಕಾರಿ ಪ್ರೌಢಶಾಲೆ ಶಿಕ್ಷಕ ತಾರಾನಾಥ ಕೈರಂಗಳ ಯೋಜನೆ ರೂಪಿಸಿದ್ದರು. ಅಪ್ಪಟ ಗ್ರಾಮೀಣ ಪರಿಸರದಲ್ಲಿರುವ ಶಾಲಾ ಮಕ್ಕಳಿಗೆ ಆನ್‌ಲೈನ್ ಮೂಲಕ ಚಿತ್ರ, ಹಾಡು, ಕತೆ, ಕವನ ರಚಿಸುವ ವಾರಾಂತ್ಯದ ಟಾಸ್ಕ್ ನೀಡುತ್ತಿದ್ದರು. ಮಕ್ಕಳು ರಚಿಸಿದ ಕತೆ, ಕವನ, ಚಿತ್ರಗಳನ್ನು ವಾಟ್ಸಾೃಪ್ ಮೂಲಕ ಶಿಕ್ಷಕರಿಗೆ ಕಳುಹಿಸುತ್ತಿದ್ದರು. ಬಳಿಕ ಅದರ ಸರಿ, ತಪ್ಪುಗಳ ವಿಮರ್ಶೆ ನಡೆಯುತ್ತಿತ್ತು. ಮಕ್ಕಳಿಂದ ದೊರೆತ ಪ್ರತಿಕ್ರಿಯೆ ಗಮನಿಸಿ ಇದಕ್ಕಾಗೇ ಒಂದು ವೇದಿಕೆ ನಿರ್ಮಿಸಿದರೆ ಹೇಗೆ ಎಂಬ ಚಿಂತನೆ ಮೊಳಕೆಯೊಡೆಯಿತು. ಅದರ ಪರಿಣಾಮ ರೂಪುಗೊಂಡಿದ್ದೇ ಮಕ್ಕಳ ಜಗಲಿ (Makkalajagali.com).

    ಶಾಲೆ ಗಡಿ ದಾಟಿ ವಿಸ್ತರಣೆ: ಆರಂಭದಲ್ಲಿ ಒಂದು ಶಾಲೆಯ ಮಕ್ಕಳಿಗಷ್ಟೇ ಸೀಮಿತವಾಗಿದ್ದ ಈ ವೇದಿಕೆಯಲ್ಲಿ ಪ್ರಸ್ತುತ ಇಡೀ ಜಿಲ್ಲೆಯ ಮಕ್ಕಳು ಕೌಶಲ ಪ್ರದರ್ಶಿಸುತ್ತಿದ್ದಾರೆ. ಇತರ ಸಮಾನಮನಸ್ಕ ಆಸಕ್ತ ಶಿಕ್ಷಕರ ಸಂಪರ್ಕದಿಂದ ಜಗಲಿ ಜನಪ್ರಿಯಗೊಂಡಿವೆ. ಮಕ್ಕಳ ಸಾಹಿತ್ಯ, ಕತೆ, ಕವನ, ಲೇಖನ, ಆರ್ಟ್ ಮತ್ತು ಕ್ರಾಫ್ಟ್, ಸಾಧಕ ಮಕ್ಕಳ ಲೇಖನ, ಹಿರಿಯರ ಲೇಖನಗಳನ್ನು ಒಳಗೊಂಡು ಪುಟಗಳು ಸಮೃದ್ಧವಾಗಿವೆ. ಪಾಲಕರು, ಶಿಕ್ಷಕರು ವಾಟ್ಸಾೃಪ್ ಗುಂಪುಗಳಲ್ಲಿ ಇದನ್ನು ಹಂಚಿಕೊಳ್ಳುತ್ತಿದ್ದಾರೆ.

    ಶೀರ್ಷಿಕೆ ಗೀತೆ: ಜಗಲಿ ಪ್ರಚಾರಕ್ಕಾಗಿಯೇ ಅಣ್ಣ-ತಮ್ಮ, ಅಕ್ಕ-ತಂಗಿ ಸೇರಿದಂತೆ ಗೆಳೆಯರೆಲ್ಲ ಬನ್ನಿ… ಪೆನ್ನು, ಹಾಳೆ, ಬಣ್ಣ, ಕುಂಚ ಎಲ್ಲವನ್ನು ತನ್ನಿ… ಇದು ನಮ್ಮದೇ ಜಗಲಿ ಎಂದು ಕವಿ, ಸಾಹಿತಿ ಚಂದ್ರಶೇಖರ ಪಾತೂರು ರಚಿಸಿರುವ ಕವನವನ್ನು ಶ್ರೀರಕ್ಷಾ ಎಚ್.ಎಸ್.ಪೂಜಾರಿ ಹಾಡಿರುವ ವಿಡಿಯೋ ರಚಿಸಲಾಗಿದೆ.

    ಪ್ರತಿಯೊಂದು ಮಗುವಿನಲ್ಲೂ ಒಂದೊಂದು ಪ್ರತಿಭೆ ಸುಪ್ತವಾಗಿರುತ್ತದೆ. ಅದಕ್ಕೆ ಸೂಕ್ತ ವೇದಿಕೆ ದೊರೆತಾಗ ಪ್ರಕಾಶಿಸತೊಡಗುತ್ತದೆ ಎನ್ನುತ್ತಾರೆ ತಾರಾನಾಥ ಕೈರಂಗಳ. ಇವರ ಈ ಕಾರ್ಯಕ್ಕೆ ಮುಖ್ಯ ಶಿಕ್ಷಕಿ ಸುಶೀಲಾ, ವಿಜ್ಞಾನ ಶಿಕ್ಷಕ ಶ್ರೀರಾಮ ಮೂರ್ತಿ, ಕಲಾವಿದರಾದ ಜೀವನ್‌ರಾಮ್ ಸುಳ್ಯ, ಗೋಪಾಡ್ಕರ್, ದಿನೇಶ್ ಹೊಳ್ಳ, ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕ ಮಲ್ಲೇಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಪ್ರೋತ್ಸಾಹ ನೀಡಿದ್ದಾರೆ. ಪತ್ರಕರ್ತ ವಿನೋದ್ ಕುಮಾರ್ ಪುದು ತಾಂತ್ರಿಕ ನಿರ್ವಹಣೆ ಮಾಡುತ್ತಿದ್ದಾರೆ. ಮಕ್ಕಳು ತಮ್ಮ ಅಭಿವ್ಯಕ್ತಿಗಳನ್ನು 9844820979 ವಾಟ್ಸಾೃಪ್‌ಗೆ ಕಳುಹಿಸಬಹುದು.

    ಲಾಕ್‌ಡೌನ್ ಸಂದರ್ಭ ಮಂಚಿ ಕೊಳ್ನಾಡು ಶಾಲೆಯ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ವಿವಿಧ ಟಾಸ್ಕ್‌ಗಳನ್ನು ಆರಂಭಿಸಿದೆವು. ಸುಮಾರು 100ಕ್ಕೂ ಅಧಿಕ ಗ್ರಾಮೀಣ ಮಕ್ಕಳು ಈ ಟಾಸ್ಕನ್ನು ಯಶಸ್ವಿಯಾಗಿ ಪೂರೈಸಿದಾಗ ಇ-ಪೇಪರ್ ಮಾಡುವ ಚಿಂತನೆ ಹುಟ್ಟಿತು. ಮಿತ್ರರ ಸಹಕಾರದಿಂದ ಮಕ್ಕಳ ಜಗಲಿ ರೂಪುಗೊಂಡಿತು.
    ತಾರಾನಾಥ ಕೈರಂಗಳ ಮಕ್ಕಳ ಜಗಲಿ ರೂವಾರಿ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts