More

    ಹರಪನಹಳ್ಳಿ ತಾಲೂಕು ಕ್ರೀಡಾಂಗಣಕ್ಕೆ ಬೇಕಿದೆ ಕಾಯಕಲ್ಪ

    ಕರಿಬಸಪ್ಪ ಪರಶೆಟ್ಟಿ ಹರಪನಹಳ್ಳಿ
    ತಾಲೂಕು ಕ್ರೀಡಾಂಗಣ ಮಾತ್ರ ಅನೇಕ ಮೂಲ ಸೌಲಭ್ಯದಿಂದ ವಂಚಿತಗೊಂಡಿದ್ದು, ಶೈಕ್ಷಣಿಕವಾಗಿ ಹೆಸರನ್ನು ಹೊಂದಿರುವ ತಾಲೂಕಿನ ಛಾಪನ್ನು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿರುವ ಇಲ್ಲಿನ ಕ್ರೀಡಾಪಟುಗಳು ಪರಿತಪಿಸುವಂತಾಗಿದೆ.

    ಪಟ್ಟಣದ ಅಯ್ಯನಕೆರೆಗೆ ಹೊಂದಿಕೊಂಡಿರುವ ತಾಲೂಕು ಕ್ರೀಡಾಂಗಣದ ಜಾಗ 7 ಎಕರೆಯಷ್ಟಿದೆ. ಮೊದಲು ಬಳ್ಳಾರಿಜಿಲ್ಲೆಯಲ್ಲಿದ್ದ ತಾಲೂಕು, ದಾವಣಗೆರೆಗೆ, ಅಲ್ಲಿಂದ ಬಳ್ಳಾರಿಗೆ ಪ್ರಸ್ತುತ ವಿಜಯನಗರ ಜಿಲ್ಲೆಗೆ ಬದಲಾವಣೆಯಾಗುತ್ತ ಬಂದಿದೆ.

    ಹರಪನಹಳ್ಳಿ ತಾಲೂಕು ಕ್ರೀಡಾಂಗಣಕ್ಕೆ ಬೇಕಿದೆ ಕಾಯಕಲ್ಪ
    ಹರಪನಹಳ್ಳಿ ತಾಲೂಕು ಕ್ರೀಡಾಂಗಣದ ವಿಹಂಗಮ ನೋಟ.

    ತಾಲೂಕಿನಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವತ್ತ ಕ್ರೀಡಾ ಇಲಾಖೆ ಗಮನ ಹರಿಸದಿರವುದೇ ಮೂಲ ಸೌಕರ್ಯದ ಕೊರತೆಗೆ ಕಾರಣವಾಗಿದೆ. 2019ರಲ್ಲಿ ಒಮ್ಮೆ ಜಿಲ್ಲಾ ಕ್ರೀಡಾಧಿಕಾರಿ ಇಲ್ಲಿಗೆ ಭೇಟಿ ನೀಡಿರುವುದು ಬಿಟ್ಟರೆ ಇಲ್ಲಿಯವರೆಗೂ ಯಾವೊಬ್ಬ ಅಧಿಕಾರಿ ಭೇಟಿ ನೀಡಿಲ್ಲ. ಇಲ್ಲಿನ ಮೂಲ ಸೌಕರ್ಯಗಳ ಕೊರರೆ ಬಗ್ಗೆ ವಿಚಾರಿಸಿಲ್ಲ.

    ಇದನ್ನೂ ಒದಿ: ಹೂವಿನಹಡಗಲಿ ಸ್ಟೇಡಿಯಂಗೆ ಬೇಕು ಕಾಯಕಲ್ಪ

    ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ಅಯ್ಯನಕೆರೆ ತುಂಬಾ ಕಸ, ಪ್ಲಾಸ್ಟಿಕ್ ತ್ಯಾಜ್ಯ ತುಂಬಿಕೊಂಡಿದೆ. ಇದರಿಂದ ದುರ್ವಾಸನೆ ಬೀರುತ್ತಿರುವ ಪರಿಣಾಮ ನಿತ್ಯ ಸಂಜೆ-ಬೆಳೆಗ್ಗೆ ವಾಯು ವಿಹಾರಕ್ಕಾಗಿ ಬರುತ್ತಿರುವ ನೂರಾರು ಜನ ಬೇಸತ್ತಿದ್ದಾರೆ. ನೀರಿನ ದಂಡೆಗೆ ಪ್ಲಾಸ್ಟಿಕ್ ತ್ಯಾಜ್, ಕೋಳಿ ತ್ಯಾಜ್ಯ, ಕೂದಲು ತ್ಯಾಜ್ಯ ಸೇರಿದಂತೆ ಇತರೆ ತ್ಯಾಜ್ಯದ ಸಂಗ್ರಹಣೆಯ ಕೇಂದ್ರವಾಗಲಿದ್ದು, ಶುದ್ದಗಾಳಿ ಸೇವನೆ ಬದಲು ಕೆಟ್ಟ ಗಾಳಿ ಸೇವನೆ ಮಾಡಿ ಮರಳುವಂತಾಗಿದೆ. ಸ್ಥಳೀಯರು ಸಾಂಕ್ರಾಮಿಕ ರೋಗಕ್ಕೆ ಹೆದರುವಂತಾಗಿದೆ.

    ಹರಪನಹಳ್ಳಿ ತಾಲೂಕು ಕ್ರೀಡಾಂಗಣಕ್ಕೆ ಬೇಕಿದೆ ಕಾಯಕಲ್ಪ
    ಹರಪನಹಳ್ಳಿ ತಾಲೂಕು ಕ್ರೀಡಾಂಗಣದಲ್ಲಿ ಓಟದ ಮೈದಾನದ ಟ್ರ್ಯಾಕಿಂಗ್ ಕಾಮಗಾರಿ ಪ್ರಗತಿಯಲ್ಲಿದೆ.

    ಕುಡಿಯಲು ನೀರಿಲ್ಲ

    ಕ್ರೀಡಾಂಗಣಕ್ಕೆ ವಾಯುವಿಹಾರ ಹಾಗೂ ವಲಯ, ತಾಲೂಕು, ವಿ.ವಿ., ಜಿಲ್ಲಾ ಮಟ್ಟದಂತಹ ಕ್ರೀಡೆಗಳು ನಡೆಯುತ್ತವೆ. ಆದರೆ, ಇಲ್ಲಿಗೆ ಬರುವವರ ದಾಹ ತೀರಿಸಲು ಕುಡಿಯಲು ನೀರಿನ ಸೌಲಭ್ಯವಿಲ್ಲ. ಇದರಿಂದ ಅನೇಕರು ನೀರಿನ ಬಾಟಲ್‌ಗಳನ್ನು ಜತೆಯಲ್ಲೇ ತರುತ್ತಾರೆ. ದೊಡ್ಡ ಮಟ್ಟದ ಕ್ರೀಡೆಗಳು ನಡೆಯುವಾಗ ಪುರಸಭೆಯವರು ಖಾಸಗಿ ನೀರಿನ ಸೌಲಭ್ಯ ಮಾಡುತ್ತಾರೆ.

    ಹೆಸರಿಗೆ ಹೈಟೆಕ್ ಶೌಚಗೃಹ

    ಕ್ರೀಡಾಂಗಣದ ಪ್ರೇಕ್ಷಕ ಗ್ಯಾಲರಿಯ ಬಲ ಭಾಗದಲ್ಲಿ ಮಹಿಳಾ, ಪುರುಷರಿಗೆ ಹೈಟೆಕ್ ಶೌಚಗೃಹ ನಿರ್ಮಾಣವನ್ನು 5 ವರ್ಷದ ಹಿಂದೆ ಮಾಡಲಾಗಿದೆ. ಸಮರ್ಪಕವಾದ ಸೌಲಭ್ಯ ಇಲ್ಲದಂತಾಗಿದೆ. ಶೌಚಗೃಹಯಕ್ಕೆ ಕೇವಲ 500 ಲೀಟರ್ ನೀರಿನ ಸೌಲಭ್ಯ ಇವೆ. ಬಳಕೆ ಹೆಚ್ಚಾಗುತ್ತಿರುವುದರಿಂದ ಕನಿಷ್ಠ 1 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಅಗತ್ಯವಿದೆ. ನೀರಿನ ಅಭಾವದಿಂದ ನಿರ್ವಹಣೆ, ಬಳಕೆ ಮಾತ್ರ ಅಷ್ಟಕಷ್ಟೆ.

    ಹರಪನಹಳ್ಳಿ ತಾಲೂಕು ಕ್ರೀಡಾಂಗಣಕ್ಕೆ ಬೇಕಿದೆ ಕಾಯಕಲ್ಪ
    ಹರಪನಹಳ್ಳಿ ತಾಲೂಕು ಕ್ರೀಡಾಂಗಣದಲ್ಲಿನ ಶೌಚಗೃಹದ ಬಳಿ ಇರುವ ರಕ್ಷಣಾ ಗೋಡೆ ಥಿಲಗೊಂಡಿರುವುದು.

    ಇಲ್ಲಿಲ್ಲ ಒಳಕ್ರೀಡಾಂಗಣಗಳು

    ತಾಲೂಕಿನ ಕ್ರೀಡಾಂಗಣದಲ್ಲಿ ಚದುರಂಗ, ಷಟಲ್‌ಬ್ಯಾಡ್ಮಿಂಟನ್, ಬಾಲ್‌ಬ್ಯಾಡ್ಮಿಂಟನ್, ಬಾಸ್ಕೇಟ್‌ಬಾಲ್, ವಾಲಿಬಾಲ್, ಕಬ್ಬಡ್ಡಿ, ವೇಟ್‌ಲಿಫ್ಟಿಂಗ್, ಕೇರಂ ಮೊದಲಾದ ಕ್ರೀಡೆಗಳು ಒಳಾಂಗಣದ ಕ್ರೀಡಾಂಗಣದಲ್ಲಿ ನಡೆಯಲಿವೆ. ಆದರೆ, ಒಳಾಂಗಡಣ ಕ್ರೀಡಾಂಗಣಕ್ಕೆ ಒತ್ತಾಯಿಸಿ ತಾಲೂಕು ದೈಹಿಕ ಶಿಕ್ಷಕ್ಷರ ಸಂಘ, ಸಾರ್ವಜನಿಕರು, ಕ್ರೀಡಾಪಟುಗಳು ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ. ಒಳಾಂಗಣ ಕ್ರೀಡಾಂಗಣ ಹಾಗೂ ಈಜುಕೋಳ ನಿರ್ಮಾಣಕ್ಕಾಗಿ 2008ರಿಂದಲೂ ಇಲ್ಲಿನ ಶಾಸಕರ ಮೂಲಕ ಇಲಾಖೆಗೆ ಪ್ರಸ್ತಾವನೆ ಕಳಿಸುತ್ತ ಬರಲಾಗಿದೆ. ಆದರೆ, ಕ್ರೀಡಾ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ.

    ಸ್ವಚ್ಚತೆಗೆ ಬೇಕು ಕಸದ ಬುಟ್ಟಿಗಳು

    ತಾಲೂಕು ಕ್ರೀಡಾಂಗಣದಲ್ಲಿ ಸಿಬ್ಬಂಧಿಗಳು ಸ್ವಚ್ಚತೆ ಕಾಪಾಡಿಕೊಳ್ಳುತ್ತಾರೆ ಯಾದರೂ ಕಸ ಸಂಗ್ರಹಣೆಯ ಬುಟ್ಟಿಗಳು ಮಾತ್ರ ಇಲ್ಲದಂತಾಗಿ ಅವುಗಳನ್ನು ಬೇರ್ಪಡಿಸಿ ಬೆಂಕಿಹಾಕಿ ಸುಡಲಾಗುತ್ತಿದೆ. ಎಲೆಗಳ ಕಸವನ್ನು ಗೀಡಗಳಿಗೆ ಹಾಕಿ ಪೋಷಣೆ ಮಾಡಲಾಗುತ್ತಿದೆ.

    ಹರಪನಹಳ್ಳಿ ತಾಲೂಕು ಕ್ರೀಡಾಂಗಣಕ್ಕೆ ಬೇಕಿದೆ ಕಾಯಕಲ್ಪ
    ಹರಪನಹಳ್ಳಿ ತಾಲೂಕು ಕ್ರೀಡಾಂಗಣದಲ್ಲಿ ಸಮರ್ಪಕವಾಗಿ ನೀರು ಇಲ್ಲದ, ಹೈಟೆಕ್ ಶೌಚಗೃಹ.
    ಕ್ರೀಡಾ ಸಾಮಗ್ರಿಗಳ ಕೊರತೆ

    ಬಾಲ್‌ನೆಟ್, ಹೈಜಂಪ್‌ಸ್ಟಾೃಂಡ್ ವಿತ್‌ಬಾರ್, ಗುಂಡು ಎಸೆತ, ಚಕ್ರ ಎಸೆತ, ಭಲ್ಲೆ ಎಸೆತಗಳ ಅಂಕಣ, ಹ್ಯಾಮರ್ ಥ್ರೋ, ಹ್ಯಾಡಲ್ಸ್, ಖೋಖೋ ಪೋಲ್‌ಗಳು ಬೇಕಾಗಿವೆ. ಇವು ಯಾವವೂ ಇಲ್ಲಿಯವರೆಗೂ ಸಿಕ್ಕಿಲ್ಲ. ಜಿಮ್ ಸಾಮಾಗ್ರಿಗಳು ದುರಸ್ತಿಯಲ್ಲಿವೆ. ಇವರಲ್ಲದೇ ವ್ಯಾಯಾಮ ಸಾಮಗ್ರಿಗಳೂ ಅಗತ್ಯವಾಗಿವೆ.

    ಟ್ರಾೃಕ್ ಕಾಮಗಾರಿ ಪ್ರಗತಿ

    ಕ್ರೀಡಾಂಗಣದ ಒಳಗೆಮತ್ತು ಹೊರಗೆ ಬಾರ್ಡರ್ ರನ್ನಿಂಗ್ ಟ್ರಾೃಕ್ ನಿರ್ಮಾಣ ಕಾಮಗಾರಿಯನ್ನು ಈಗಾಗಲೇ ಕಲ್ಯಾಣ ಕರ್ನಾಟಕ ಯೋಜನೆಯಲ್ಲಿ ಪ್ರಾರಂಭಿಸಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ. ಇದರ ಜತೆಗೆ ವಾಲಿಬಾಲ್, ಖೋಖೋ, ಕಬಡ್ಡಿ, ಥ್ರೋಬಾಲ್ ಅಂಕಣಗಳಿದ್ದು, ಅವು ದುರಸ್ತಿಯಲ್ಲಿವೆ. ಇವುಗಳನ್ನು ದುರಸ್ತಿ ಇಲ್ಲವೇ ಸುಸಜ್ಜಿತವಾಗಿ ಪುನರ್ ನಿರ್ಮಾಣಬೇಕಾದ ಅಗತ್ಯವಿದೆ.

    ಹರಪನಹಳ್ಳಿ ತಾಲೂಕು ಕ್ರೀಡಾಂಗಣಕ್ಕೆ ಬೇಕಿದೆ ಕಾಯಕಲ್ಪ
    ಹರಪನಹಳ್ಳಿಯ ಅಯ್ಯನಕೆರೆಗೆ ತಾಲೂಕು ಕ್ರೀಡಾಂಗಣಕ್ಕೆ ಹೊಂದಿಕೊಂಡು ತ್ಯಾಜ್ಯದಿಂದ ಕೂಡಿರುವುದು.
    ಸೂಕ್ತ ತರಬೇತುದಾರರಿಗೆ ಬೇಡಿಕೆ

    ತಾಲೂಕಿಗೆ ಕ್ರೀಡಾಂಗಣ ಇದೆಯಾದರೂ ರಾಜ್ಯ ಮತ್ತು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಲು ಸೂಕ್ತ ತರಬೇತುದಾರರು ಇಲ್ಲದಂತಾಗಿದೆ. ಇದರಿಂದ ಕ್ರೀಡಾಪಟುಗಳು ಅನಿವಾರ್ಯವಾಗಿ ಬೇರೆ ಜಿಲ್ಲೆಗಳಲ್ಲಿ ತರಬೇತಿಯನ್ನು ಪಡೆಯುವ ಸ್ಥಿತಿ ಇದೆ. ಕೂಡಲೇ ತರಬೇತುದಾರರ ನೇಮಕ ಮಾಡುವ ಅಗತ್ಯವಿದೆ. ತಾಲೂಕು ಕ್ರೀಡಾಂಗಣಕ್ಕೆ ಕನಿಷ್ಠ 3 ಸಿಬ್ಬಂದಿ ಬೇಕು. ತಾಲೂಕಿನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಗುರುತುಗಾರ, ಕಾವಲುಗಾರ ಸೇರಿ ಇಬ್ಬರು ಸಿಬ್ಬಂದಿ ಇದ್ದಾರೆ. ಸರಿಯಾದ ವೇತನ ಸಿಗುತ್ತಿಲ್ಲ. ಸಮಾನ ವೇತನ ಅಗತ್ಯವಿದೆ.

    ಇದನ್ನೂ ಓದಿ: ನಿರ್ಮಾಣ ಹಂತದಲ್ಲಿ ಕೊಟ್ಟೂರು ಕ್ರೀಡಾಂಗಣ

    ಕಾಂಪೌಂಡ್ ಶಿಥಿಲ

    ಒಟ್ಟು ಕ್ರೀಡಾಂಣದ ವಿಸ್ತೀರ್ಣ 6.30 ಎಕರೆಯಷ್ಟಿದೆ. ಸುತ್ತಲೂ ಕಾಂಪೌಂಡ್ ನಿರ್ಮಾಣಗೊಂಡಿದೆ. ಆದರೆ, ಅದು ಶಿಥಿಲಗೊಂಡಿದ್ದು ಈಗಾಗಲೇ ಶೌಚಗೃಹದ ಹಿಂಭಾಗ ಕರೆಗೆ ಹೊಂದಿಕೊಂಡು ಬಿದ್ದುಹೋಗಿದೆ. ಪ್ರೇಕ್ಷಕರ ಗ್ಯಾಲರಿ ಇದೆ. ಎಡ, ಬಲದಲ್ಲಿ ಹೈಮಾಸ್ಟ್ ವಿದ್ಯುತ್ ಬೆಳಕಿನ ವ್ಯವಸ್ಥೆ ಇದೆ. ರಾತ್ರಿ ಸಮಯದಲ್ಲಿ ಸಮಪರ್ಕವಾದ ಬೆಳಕು ಇಲ್ಲ. ಹೊನಲು ಬೆಳಕಿನ ಕ್ರೀಡೆಗಳಿಗೆ ಬೆಳಕಿನ ವ್ಯವಸ್ಥೆ ಅಗತ್ಯವಿದೆ.

    ಹರಪನಹಳ್ಳಿ ತಾಲೂಕು ಕ್ರೀಡಾಂಗಣಕ್ಕೆ ಮೂಲಸೌಕರ್ಯ, ಕ್ರೀಡಾ ಸಾಮಗ್ರಿ, ತರಬೇತುದಾರರ ಅಗತ್ಯವಿದೆ. ಅಂಕಣಗಳ ದುರಸ್ತಿಯಾಗಬೇಕು. ಇದರಿಂದ ಉತ್ತಮ ಕ್ರೀಡಾಂಗಣವಾಗಲಿದೆ.
    ಮಂಜುನಾಥ, ಗುರುತುಗಾರ, ಹರಪನಹಳ್ಳಿ

    ಕ್ರೀಡಾ ಸಾಮಗ್ರಿಗಳು ವಿತರಣೆ ಸಂಬಂಧ ಟೆಂಡರ್ ಹಂತದಲ್ಲಿದೆ. ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಗುವುದು. ಇನ್ನೂ ತಾಲೂಕು ಕ್ರೀಡಾಂಗಣಕ್ಕೆ ತರಬೇತುದಾರರ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರ ಸದ್ಯದಲ್ಲೆ ಕ್ರಮ ಕೈಗೊಳ್ಳಲಿದೆ.
    ಹರಿಸಿಂಗ್ ರಾಥೋಡ್, ಸಹಾಯಕ ನಿರ್ದೇಶಕ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಬಳ್ಳಾರಿ-ವಿಜಯನಗರ

    ಕ್ರೀಡಾಧಿಕಾರಿಗಳ ಉದ್ಯೋಗ ಕೊರತೆ ಇದೆ. ತಾಲೂಕು ಕ್ರೀಡಾಂಗಣವನ್ನು ಅಭಿವೃದ್ಧಿಗೊಳಿಸಲು ಕಾಯಂ ಸಿಬ್ಬಂದಿ ನೇಮಕವಾಗಬೇಕು. ತರಬೇತುದಾರರು ಬೇಕು, ಫುಟ್ಬಾಲ್, ಹ್ಯಾಂಡ್‌ಬಾಲ್, ಹಾಕಿ ಇತರೆ ಕ್ರೀಡೆಗಳನ್ನು ತಾಲೂಕು ಮಟ್ಟದಲ್ಲಿ ಕ್ಯಾಂಪ್ ಆಯೋಜಿಸಬೇಕು. ಇದರಿಂದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಸಿಗಲಿದೆ. ತಾಲೂಕು ಕ್ರೀಡಾಂಗಣ ಅಭಿವೃದ್ಧಿಯಾಗಿ ಉತ್ತಮ ಕ್ರೀಡಾಪಟುಗಳು ಹೊರಹೊಮ್ಮಲು ಸಹಕಾರಿಯಾಗಲಿದೆ.
    ಜಿ.ರೇವಣ್ಣ, ದೈಹಿಕ ಶಿಕ್ಷಣ ಪರಿವೀಕ್ಷಕರು, ಹರಪನಹಳ್ಳಿ

    ಹರಪನಹಳ್ಳಿ ತಾಲೂಕಿನ ಕ್ರೀಡಾಂಗಣದಲ್ಲಿ ಸಮರ್ಪಕವಾದ ಮೂಲಸೌಕರ್ಯಗಳಿಲ್ಲ. ಯಾವುದೇ ಕ್ರೀಡೆಗಳಿಗೆ ತರಬೇತುದಾರರು ಇಲ್ಲ. ಇದರಿಂದ ಉದ್ಯೋನ್ಮುಖ ಆಟಗಾರರಿಗೆ ತೊಂದರೆಯಾಗಲಿದೆ. ತಾಲೂಕು ಕ್ರೀಡಾಂಗಣವನ್ನು ಅಭಿವೃದ್ದಿಗೊಳಿಸಬೇಕು.
    ಡಿ.ಎಸ್.ನಂದಿನಿ ಒಡೆಯರ್, ಖೋಖೋ ರಾಷ್ಟ್ರೀಯ ಕ್ರೀಡಾಪಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts