More

    ಸೇಂಟ್ ಮೇರಿಸ್ ಟು ಮಲ್ಪೆ ಬೀಚ್ ಈಜು, 41 ಈಜುಪಟುಗಳು ಭಾಗಿ

    ಉಡುಪಿ: ಈಜುಗಾರಿಕೆ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಭಾನುವಾರ ಮುಂಜಾನೆ ಸೇಂಟ್ ಮೇರಿಸ್ ದ್ವೀಪದಿಂದ ಮಲ್ಪೆ ಬೀಚ್‌ವರೆಗೆ 41 ಈಜುಪಟುಗಳು ಈಜುವ ಮಾಡುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ.

    ಕಡೆಕಾರು ಜೈದುರ್ಗಾ ಸ್ವಿಮ್ಮಿಂಗ್ ಕ್ಲಬ್ ವತಿಯಿಂದ ಹಿರಿಯ ಈಜುಪಟು ಗಂಗಾಧರ್ ಜಿ.ನೇತೃತ್ವದಲ್ಲಿ ಈಜು ಕಲಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಸೇಂಟ್ ಮೇರಿಸ್‌ನಿಂದ ಬೆಳಗ್ಗೆ 7 ಗಂಟೆಗೆ ನಾಲ್ಕು ತಂಡವಾಗಿ 41 ಮಂದಿ 3.8 ಕಿ.ಮೀ. ದೂರದ ಮಲ್ಪೆ ಬೀಚ್‌ವರೆಗೆ ಈಜಿಕೊಂಡು ಬೆಳಗ್ಗೆ 9.45 ಗಂಟೆಗೆ ತಲುಪಿದರು. ಶಿವಮೊಗ್ಗದ ಹಿರಿಯ ನಾಗರಿಕ ಸುಬ್ಬಣ್ಣ ಹಸಿರು ನಿಶಾನೆ ತೋರಿದರು.

    ಹಿರಿಯ ಈಜುಪಟು ಸೀತಾರಾಮ ಮುಂದಾಳತ್ವದಲ್ಲಿ ಮಂಗಳೂರಿನಿಂದ ಆಗಮಿಸಿದ 11 ಈಜುಗಾರರು ಪಾಲ್ಗೊಂಡಿದ್ದರು. ಕಿರಿಯರು, ಹಿರಿಯರು ಸಮುದ್ರದ ಅಲೆಗಳ ಮತ್ತು ಗಾಳಿಯ ಒತ್ತಡದ ಮಧ್ಯೆ ಒತ್ತಡಕ್ಕೆ ಒಳಗಾಗದೆ ಉತ್ಸಾಹದಿಂದ ಈಜಿ ಗುರಿ ಮುಟ್ಟಿದರು. ಈಜಿದ 41 ಮಂದಿಗೆ ಪ್ರಮಾಣಪತ್ರ ಮತ್ತು ಪದಕ ನೀಡಿ ಗೌರವಿಸಲಾಯಿತು.

    ಎಡಿಸಿ ಸದಾಶಿವ ಪ್ರಭು, ಎಎಸ್‌ಪಿ ಅಧೀಕ್ಷಕ ಕುಮಾರಚಂದ್ರ, ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್, ಲೆಕ್ಕ ಪರಿಶೋಧಕ ಮಲ್ಲೇಶ್, ಮಂದಿರದ ಅಧ್ಯಕ್ಷ ವಿಜಯ ತಿಂಗಳಾಯ, ಮಂಗಳೂರಿನ ಈಜುಪಟು ಡಾ.ಸುರೇಶ್ ಶಾಸ್ತ್ರಿ, ಕ್ಲಬ್‌ನ ಉಪಾಧ್ಯಕ್ಷ ಚಂದ್ರ ಕುಂದರ್ ಉಪಸ್ಥಿತರಿದ್ದರು.
    ಇನ್ನೊಂದೆಡೆ, ಪಡುಕೆರೆ ಕಡಲತೀರದಲ್ಲಿ ಇತ್ತೀಚೆಗೆ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿ ಸಮುದ್ರದಲ್ಲಿ ಈಜುವ ಮೂಲಕ ವಿಶೇಷ ಸಾಧನೆ ಮಾಡಿದ್ದ ಗಂಗಾಧರ ಕಡೆಕಾರು ಅವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಮಾಣಪತ್ರ ಹಸ್ತಾಂತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts