More

    ಶಿಕ್ಷಣ ಸಚಿವರ ಜಿಲ್ಲೆಗೆ ‘ಎ’ ಶ್ರೇಣಿ ಗರಿ: ಜಿಲ್ಲೆಯ 7 ವಿದ್ಯಾರ್ಥಿಗಳಿಗೆ ಪೂರ್ಣಾಂಕ ; ಟಾಪರ್‌ಗಳಲ್ಲಿ ಅವಳಿ ಸಹೋದರಿಯರು

    ತುಮಕೂರು : ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುವುದು ಈ ಬಾರಿಯ ವಿಶೇಷ. ಅವಳಿ ಸಹೋದರಿಯರು ಸೇರಿ 7 ವಿದ್ಯಾರ್ಥಿಗಳು ಪೂರ್ಣಾಂಕ ಪಡೆದು ಟಾಪರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದು ಶೈಕ್ಷಣಿಕ ಜಿಲ್ಲೆಗೆ ಹೆಗ್ಗಳಿಕೆ ತಂದಿದ್ದಾರೆ. ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಗಳು ಎ ಶ್ರೇಣಿ ಪಡೆದಿವೆ.

    ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಪಡೆದ ಜಿಲ್ಲೆಯವರೇ ಆದ ಬಿ.ಸಿ.ನಾಗೇಶ್ ಪ್ರಾಥಮಿಕ, ಪ್ರೌಢ ಶಿಕ್ಷಣ ಇಲಾಖೆ ಜವಾಬ್ದಾರಿ ಪಡೆದಿದ್ದು, ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಿಸುವ ಅವಕಾಶ ಅವರ ಪಾಲಿಗೆ ಒದಗಿಬಂದಿದ್ದು ವಿಶೇಷವೆನಿಸಿದೆ. ಕಳೆದ ವರ್ಷ ಮಧುಗಿರಿ ಶೈಕ್ಷಣಿಕ ಜಿಲ್ಲೆ 3ನೇ ಸ್ಥಾನ ಪಡೆದಿತ್ತು. ತುಮಕೂರು ಶೈಕ್ಷಣಿಕ ಜಿಲ್ಲೆ 14ನೇ ಸ್ಥಾನಗಳಿಸಿತ್ತು. ಈ ಬಾರಿ ಜಿಲ್ಲೆಗಳಿಗೆ ರ‌್ಯಾಂಕಿಂಗ್ ನೀಡದೆ ಎ ಶ್ರೇಣಿ ನೀಡಲಾಗಿದೆ.

    ಕಳೆದ ಜುಲೈ 29 ಹಾಗೂ 31 ರಂದು ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತುಮಕೂರು ಶೈಕ್ಷಣಿಕ ಜಿಲ್ಲೆಯ ಒಟ್ಟು 23602 ವಿದ್ಯಾರ್ಥಿಗಳು ಹಾಜರಾಗಿದ್ದರು. ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 12775 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕರೊನಾ ಹಿನ್ನೆಲೆಯಲ್ಲಿ ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ಮೊದಲೇ ನಿರ್ಧರಿಸಲಾಗಿತ್ತು. ಹಾಗಾಗಿ, ಶೇ.100 ಫಲಿತಾಂಶ ಬಂದಿದೆ.

    7 ವಿದ್ಯಾರ್ಥಿಗಳಿಗೆ ಪೂರ್ಣಾಂಕ: ತುಮಕೂರು ಶೈಕ್ಷಣಿಕ ಜಿಲ್ಲೆಯ ನಾಲ್ವರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಮೂವರು ಪೂರ್ಣಾಂಕ (625ಕ್ಕೆ 625) ಪಡೆದು ರಾಜ್ಯದ ಟಾಪರ್‌ಗಳ ಪಟ್ಟಿಯಲ್ಲಿ ಸ್ಥಾನಗಳಿಸಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಕೆರೆ ಪಬ್ಲಿಕ್ ಶಾಲೆಯ ಅವಳಿ ಸಹೋದರಿಯರಾದ ಧನುಶ್ರೀ ಹಾಗೂ ಧನ್ಯಶ್ರೀ ಪೂರ್ಣಾಂಕ ಗಳಿಸಿದ್ದಾರೆ. ಕುಣಿಗಲ್ ತಾಲೂಕಿನ ಭಕ್ತರಹಳ್ಳಿಯ ಸರ್ಕಾರಿ ಜೂನಿಯರ್ ಕಾಲೇಜಿನ ಡಿ.ಚೈತ್ರಾ, ತುರುವೇಕೆರೆಯ ಜೆಪಿ ಶಾಲೆಯ ಟಿ.ಎಂ.ನಿತಿನ್ ಪೂರ್ಣಾಂಕ ಸಾಧನೆ ಮಾಡಿದ್ದಾರೆ. ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಕಾರ್ಡಿಯಲ್ ಇಂಗ್ಲೀಷ್ ಮೀಡಿಯಂ ಶಾಲೆಯ ಎಸ್.ಹರ್ಷಿತಾ, ಪಾವಗಡ ತಾಲೂಕಿನ ಕೋಟಗುಡ್ಡದ ಸಹನಾ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್‌ನ ಎಚ್.ಎಸ್.ಲತಾ ಹಾಗೂ ಪಾವಗಡ ಪಟ್ಟಣದ ಎಸ್‌ಎಂಬಿಆರ್ ಇಂಗ್ಲೀಷ್ ಹೈಸ್ಕೂಲ್‌ನ ಕೆ.ವಿ.ಸತ್ಯಶ್ರೀ ಪೂರ್ಣಾಂಕ ಪಡೆದು ಟಾಪರ್‌ಗಳೆನಿಸಿದ್ದಾರೆ.

    ಮಧುಗಿರಿ ಶೈಕ್ಷಣಿಕ ಜಿಲ್ಲೆ : ಮಧುಗಿರಿ ಶೈಕ್ಷಣಿಕ ಜಿಲ್ಲೆಯ 4 ತಾಲೂಕುಗಳಿಂದ ಈ ಸಾಲಿನ ಪರಿಕ್ಷೆಯನ್ನು 12775 ವಿದ್ಯಾರ್ಥಿಗಳು ಬರೆದಿದ್ದು ಎಲ್ಲ ಶಾಲೆಗಳು ಶೇ.100 ಫಲಿತಾಂಶ ಪಡೆದಿವೆ. 6326 ಬಾಲಕರು ಹಾಗೂ 5606 ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದರು. ಎ+ಶ್ರೇಣಿ – 3980 ವಿದ್ಯಾರ್ಥಿಗಳು, ಎ ಶ್ರೇಣಿ – 5321 ವಿದ್ಯಾರ್ಥಿಗಳು, ಬಿ+, ಬಿ ಶ್ರೇಣಿ- 2313 ವಿದ್ಯಾರ್ಥಿಗಳು, ಸಿ-ಶ್ರೇಣಿ-318 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕೊರಟಗೆರೆಯ 44 ಶಾಲೆಗಳು, ಮಧುಗಿರಿಯ 68, ಪಾವಗಡದ 75 ಹಾಗೂ ಶಿರಾದ 80 ಶಾಲೆಗಳು ಎ ಗ್ರೇಡ್ ಪಡೆದಿವೆ. ಶಿರಾದ 2 ಶಾಲೆಗಳು ಬಿ-ಗ್ರೇಡ್‌ಗಳಿಸಿವೆ.

    ತುಮಕೂರು ಶೈಕ್ಷಣಿಕ ಜಿಲ್ಲೆ :ಪ್ರಸಕ್ತ ವರ್ಷ ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ 23602 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 13152 ಬಾಲಕರು, 10450 ಬಾಲಕಿಯರು ಪರೀಕ್ಷೆ ಎದುರಿಸಿದ್ದರು. ಶೇ.100 ತೇರ್ಗಡೆ ಹೊಂದಿದ್ದಾರೆ. ಎ+ಶ್ರೇಣಿ-3353 ವಿದ್ಯಾರ್ಥಿಗಳು, ಎ ಶ್ರೇಣಿ-7609 ವಿದ್ಯಾರ್ಥಿಗಳು, ಬಿ ಶ್ರೇಣಿ-8493 ವಿದ್ಯಾರ್ಥಿಗಳು, ಸಿ-ಶ್ರೇಣಿ ಯನ್ನು 2190 ವಿದ್ಯಾರ್ಥಿಗಳು ಪಡೆದಿದ್ದಾರೆ. ತುಮಕೂರು-152, ಚಿಕ್ಕನಾಯಕನಹಳ್ಳಿ -56, ಗುಬ್ಬಿ-70, ಕುಣಿಗಲ್-67, ತಿಪಟೂರು-44 ಹಾಗೂ ತುರುವೇಕೆರೆಯ 55 ಶಾಲೆಗಳು ಎ ಗ್ರೇಡ್ ಪಡೆದಿವೆ. ಒಟ್ಟು 15 ಶಾಲೆಗಳು ಬಿ ಗ್ರೇಡ್ ಗಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts