More

    ಲೋಪವಾಗದಂತೆ ಎಸ್‌ಎಸ್‌ಎಲ್ಸಿ ಪರೀಕ್ಷೆ ನಡೆಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

    ಮಂಡ್ಯ: ಜಿಲ್ಲೆಯಲ್ಲಿ ಮಾ.25ರಿಂದ ಏ.6ರವರೆಗೆ ನಡೆಯಲಿರುವ ಎಸ್‌ಎಸ್‌ಎಲ್ಸಿ ವಾರ್ಷಿಕ ಪರೀಕ್ಷೆಯಲಿ ಯಾವುದೇ ಲೋಪದೋಷಗಳಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
    ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷೆಯಲ್ಲಿ ಅಕ್ರಮ, ಅನಗತ್ಯ ಗೊಂದಲ, ಅನಾನುಕೂಲಗಳು ಉಂಟಾಗದಂತೆ ಅಚ್ಚುಕಟ್ಟು ವ್ಯವಸ್ಥೆ ಕಲ್ಪಿಸಿ, ಪರೀಕ್ಷಾ ನಿಯೋಜಿತ ಸಿಬ್ಬಂದಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ. ವಿದ್ಯಾರ್ಥಿಗಳಲ್ಲಿ ಯಾವುದೇ ರೀತಿ ಆತಂಕ, ಭಯ ಆಗದಂತೆ ಪರೀಕ್ಷೆ ನಡೆಸಬೇಕು ಎಂದರು.
    ವಿದ್ಯಾರ್ಥಿಗಳಿಗೆ ಸೂಕ್ತ ಆಸನ, ಕುಡಿಯುವ ನೀರು, ಕೊಠಡಿಗಳಲ್ಲಿ ಗಡಿಯಾರ, ಸಿ.ಸಿ ಕ್ಯಾಮೆರಾ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಬೇಕು. ಪರೀಕ್ಷೆ ನಡೆಯುವ ದಿನಗಳಂದು ಕೇಂದ್ರಗಳ ಸುತ್ತಲೂ 200 ಮೀ ಸುತ್ತಳತೆಯಲ್ಲಿ 144 ನೇ ಕಲಂ ಜಾರಿಗೊಳಿಸಬೇಕು. ಅಂತೆಯೇ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಬೇಕು. ಕೇಂದ್ರದೊಳಗೆ ಯಾವುದೇ ಬಗೆಯ ಮೊಬೈಲ್ ಫೋನ್, ಕ್ಯಾಲ್ಕುಲೇಟರ್ ಅಥವಾ ಇನ್ನಿತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸೂಕ್ತ ಆಸನದ ವ್ಯವಸ್ಥೆಯನ್ನು ಆಯಾ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
    ಬ್ಲಾಕ್ ಹಂತದಲ್ಲಿ ಒರ್ವ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ 62 ಪರೀಕ್ಷೆ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರನ್ನು ನಿಯೋಜಿಸಲಾಗಿದೆ. ಜಿಲ್ಲಾಹಂತದಲ್ಲಿ ಮೂರು ಸಂಚಾರ ಜಾಗೃತ ದಳ ಹಾಗೂ ಪ್ರತಿ ಕೇಂದ್ರಕ್ಕೆ ಒರ್ವ ಸ್ಥಾನಿಕ ಜಾಗೃತ ಅಧಿಕಾರಿಯನ್ನು ನೇಮಿಸಲಾಗಿದೆ. ಪ್ರಶ್ನೆಪತ್ರಿಕೆಗಳ ಬಂಡಲ್ಗಳನ್ನು ಪರೀಕ್ಷಾ ಮಂಡಳಿಯ ನಿಯಮದ ಪ್ರಕಾರ ಬ್ಲಾಕ್ ಹಂತದಲ್ಲಿ ಉಪಖಜಾನೆಯಲ್ಲಿ ಠೇವಣಿ ಮಾಡಲು ಕ್ರಮ ವಹಿಸಬೇಕು. ವಿಷಯ ಶಿಕ್ಷಕರಲ್ಲದವರನ್ನು ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕರನ್ನಾಗಿ ನಿಯೋಜನೆ ಮಾಡಬೇಕು. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ನೆಲಮಹಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಳ್ಳಬೇಕು ಎಂದರು.
    ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಒಂದು ವೇಳೆ ವಿದ್ಯಾರ್ಥಿಗಳು ತಂದಲ್ಲಿ ಅವುಗಳನ್ನು ಸಂರಕ್ಷಿಸಿಡಲು ಪರೀಕ್ಷಾ ಕೇಂದ್ರಗಳಿಗೆ ಒರ್ವ ಮೊಬೈಲ್ ಸ್ವಾಧೀನಾಧಿಕಾರಿಗಳನ್ನು ಮಾಡಲಾಗಿದೆ. ಐದು ಪರೀಕ್ಷಾ ಕೇಂದ್ರಗಳಿಗೆ ಒಬ್ಬರಂತೆ ಸಿಸಿಟಿವಿ ವೀಕ್ಷಣೆಗಾಗಿ ಸಿಬ್ಬಂದಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ ನಿಯೋಜಿಸಬೇಕು. ಎಲ್ಲ ಬ್ಲಾಕ್‌ಗಳಲ್ಲಿ ಪ್ರಶ್ನೆ ಪತ್ರಿಕೆಗಳ ಬಂಡಲ್ಗಳನ್ನು ಕೇಂದ್ರಗಳಿಗೆ ರವಾನಿಸಲು ಮಾರ್ಗಾಧಿಕಾರಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಈ ವೇಳೆ ಬಿಗಿ ಬಂದೋಬಸ್ತ್‌ಗಾಗಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.
    ಸಭೆಯಲ್ಲಿ ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಡಯಟ್ ಪ್ರಾಂಶುಪಾಲ ರಾಮು, ಡಿಡಿಪಿಐ ಎಚ್.ಶಿವರಾಮೇಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts