More

    16 ಅಭ್ಯರ್ಥಿಗಳಿಗೆ ಶಿಕ್ಷಣವೇ ಇಲ್ಲ

    ಮೂಡಿಗೆರೆ: ತಾಲೂಕಿನಲ್ಲಿ ವಿವಿಧ ಯೋಜನೆಗಳನ್ನು ವಿರೋಧಿಸಿ ಮತದಾನ ಬಹಿಷ್ಕಾರ ನಿರ್ಧಾರ ಮತ್ತಿತರ ಸಮಸ್ಯೆ ನಡುವೆಯೂ ಗ್ರಾಪಂ ಚುನಾವಣಾ ಕಣ ರಂಗೇರುತ್ತಿದೆ. ಪ್ರಜ್ಞಾವಂತ ಮತದಾರರು ಉತ್ತಮ ಅಭ್ಯರ್ಥಿ ಆಯ್ಕೆಗೆ ಚಿಂತನೆ ನಡೆಸಿದ್ದಾರೆ.

    ಕಸ್ತೂರಿ ರಂಗನ್ ವರದಿ ಜಾರಿಗೊಳ್ಳುವ ಆತಂಕದಲ್ಲಿರುವ ಪಶ್ಚಿಮಘಟ್ಟದ ರೈತರು ಮತ್ತು ಕೂಲಿ ಕಾರ್ವಿುಕರು ತಮ್ಮ ಬದುಕು ತೂಗುಯ್ಯಾಲೆಯಲ್ಲಿ ತೇಲಾಡುತ್ತಿದೆ ಎಂದು ರೊಚ್ಚಿಗೆದ್ದು ಗ್ರಾಪಂ ಚುನಾವಣೆ ಬಹಿಷ್ಕರಿಸಿ ಹೋರಾಟದ ಹಾದಿ ಹಿಡಿದಿದ್ದರೆ ಮತ್ತೊಂದೆಡೆ ಚುನಾವಣೆ ಕಾವು ಪ್ರತಿದಿನ ಏರತೊಡಗಿದೆ.

    22 ಗ್ರಾಪಂನ 244 ಸ್ಥಾನಕ್ಕೆ 373 ಪುರುಷರು, 333 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅದರಲ್ಲಿ 37 ಮಂದಿ ಮಾಜಿ ಗ್ರಾಪಂ ಅಧ್ಯಕ್ಷರು, 26 ಮಂದಿ ಮಾಜಿ ಉಪಾಧ್ಯಕ್ಷರು, 174 ಮಂದಿ ಮಾಜಿ ಸದಸ್ಯರಿದ್ದಾರೆ. ತಾಲೂಕಿನ ಹಂತೂರು ಗ್ರಾಪಂನ 12 ಸ್ಥಾನದ ಪೈಕಿ 4ರಲ್ಲಿ ಅವಿರೋಧ ಆಯ್ಕೆ ನಡೆದಿದೆ.

    ಅಭ್ಯರ್ಥಿಗಳಲ್ಲಿ 300 ಮಂದಿ ಎಸ್​ಎಸ್​ಎಲ್​ಸಿಯಿಂದ ಪದವಿವರೆಗೆ ಶಿಕ್ಷಣ ಪಡೆದವರಿದ್ದಾರೆ. 390 ಮಂದಿ 10 ತರಗತಿಗಿಂತ ಕಡಿಮೆ ಶಿಕ್ಷಣ ಪಡೆದವರಿದ್ದಾರೆ. 16 ಮಂದಿ ಶಿಕ್ಷಣವನ್ನೇ ಪಡೆಯದವರಿದ್ದಾರೆ. 175 ಕೃಷಿಕರು, 240 ಮಂದಿ ಗ್ರಾಮೀಣ ರಾಜಕೀಯದ ಅರಿವಿದ್ದವರು, 291 ಮಂದಿ ಹೊಸಬರು ಸ್ಪರ್ಧಿಸಿದ್ದಾರೆ.

    ಈ ಬಾರಿ ತಾಲೂಕಿನಲ್ಲಿ ಬಹುತೇಕ ಕಡೆ ಅತಿವೃಷ್ಟಿ ಇನ್ನಿಲ್ಲದಂತೆ ಬಾಧಿಸಿದೆ. ಅಲ್ಲಿ ಇನ್ನೂ ಅರ್ಧದಷ್ಟು ಅಭಿವೃದ್ಧಿಯಾಗಿಲ್ಲ. ಮತಯಾಚನೆಗೆ ಹೋಗುವ ಅಭ್ಯರ್ಥಿಗಳು ಮತ್ತವರ ಹಿಂಬಾಲಕರನ್ನು ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಪ್ರಚಾರದ ವೇಳೆ ಅಭ್ಯರ್ಥಿಗಳು ಯಾವುದೇ ಪಕ್ಷದ ಚಿಹ್ನೆ ಅಥವಾ ಮುಖಂಡರ ಭಾವಚಿತ್ರ ಬಳಸುವಂತಿಲ್ಲ. ರಾಜಕೀಯ ಪಕ್ಷಗಳು ಸಭೆ ಸಮಾರಂಭ ಏರ್ಪಡಿಸಬಾರದು. ಪಾರದರ್ಶಕ ಚುನಾವಣೆಗೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಅಭ್ಯರ್ಥಿಗಳ ಪ್ರಚಾರವನ್ನು ಚುನಾವಣೆ ಸಿಬ್ಬಂದಿ ಅವಲೋಕಿಸುತ್ತಿದ್ದಾರೆ ಎಂದು ತಾಲೂಕು ಚುನಾವಣಾಧಿಕಾರಿ ಎಚ್.ಎಂ.ರಮೇಶ್ ತಿಳಿಸಿದರು.

    ಹೊಸದಾಗಿ ಗ್ರಾಪಂ ಸದಸ್ಯರಾಗುವವರು ಕನಿಷ್ಠ ಶಿಕ್ಷಣ ಪಡೆದಿರಬೇಕು. ಗ್ರಾಮೀಣ ಭಾಗದ ಜನರ ಕಷ್ಟ-ಸುಖದಲ್ಲಿ ಪಾಲ್ಗೊಳ್ಳುವ ಮನಸ್ಥಿತಿ ಇರಬೇಕು. ಅವಿದ್ಯಾವಂತರಾದರೆ ಸಾಮಾನ್ಯ ಸಭೆ ಅಥವಾ ಗ್ರಾಮ ಸಭೆಯಲ್ಲಿ ತಬ್ಬಿಬ್ಬಾಗುವ ಪರಿಸ್ಥಿತಿ ಬರುತ್ತದೆ. ಗ್ರಾಮೀಣ ಭಾಗದ ಸಮಸ್ಯೆ ದೊಡ್ಡದಿದೆ. ಅವುಗಳ ಪರಿಹಾರಕ್ಕೆ ಪ್ರಯತ್ನಿಸುವ ಸದಸ್ಯರ ಅಗತ್ಯವಿದೆ ಎಂಬುದು ಬೆಟ್ಟಗೆರೆ ಗ್ರಾಪಂ ಮಾಜಿ ಅಧ್ಯಕ್ಷೆ ನಾಜೀಮಾ ಭಾನು ಅಭಿಮತ.

    ಶೋಭಾ ಕರಂದ್ಲಾಜೆ ತಾಪಂ ಸದಸ್ಯೆ!: ಗೋಣಿಬೀಡು ಗ್ರಾಪಂ ಕ್ಷೇತ್ರದ ಅಭ್ಯರ್ಥಿಯೊಬ್ಬರನ್ನು ಶೋಭಾ ಕರಂದ್ಲಾಜೆ ಯಾರು ಎಂದು ಪ್ರಶ್ನಿಸಿದರೆ ತಾಪಂ ಸದಸ್ಯೆ ಎಂದು ಉತ್ತರಿಸಿದ್ದಾರೆ. ಎಂ.ಪಿ.ಕುಮಾರಸ್ವಾಮಿ ಏನಾಗಿದ್ದಾರೆ ಎಂಬ ಪ್ರಶ್ನೆಗೆ ಮಾಜಿ ಮುಖ್ಯಮಂತ್ರಿ ಎಂದು ಉತ್ತರ ಕೊಟ್ಟಿದ್ದಾರೆ. ಹೀಗೆ ಏನೂ ಗೊತ್ತಿಲ್ಲದ ಅಭ್ಯರ್ಥಿಗಳಿಂದ ಗ್ರಾಮದ ಅಭಿವೃದ್ಧಿ ಹೇಗೆಂದು ಜನ ಪ್ರಶ್ನಿಸುತ್ತಿದ್ದಾರೆ. ಬಹುತೇಕ ಕಡೆ ಅಭ್ಯರ್ಥಿಗಳ ಪೂರ್ವಪರ, ಶಿಕ್ಷಣ, ಗೆಲುವು ಪಡೆದು ಏನು ಮಾಡುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಕೆಲ ಅಭ್ಯರ್ಥಿಗಳು ತಬ್ಬಿಬ್ಬಾಗಿ ತಾವು ಸ್ಪರ್ಧಿಸಿದ್ದೇ ತಪ್ಪಾಗಿದೆ ಎನ್ನುತ್ತಿದ್ದಾರೆ.

    37 ಸ್ಥಾನದಲ್ಲಿ ಬಹಿಷ್ಕಾರ: ತಾಲೂಕಿನ 29 ಗ್ರಾಪಂಗಳಲ್ಲಿ ಬಣಕಲ್, ಕುಂದೂರು, ತರುವೆ ಗ್ರಾಪಂ ಅವಧಿ ಇನ್ನೂ ಮುಕ್ತಾಯವಾಗಿಲ್ಲ. 26 ಗ್ರಾಪಂಗಳ 281 ಸ್ಥಾನದಲ್ಲಿ ಊರುಬಗೆ, ಸುಂಕಸಾಲೆ, ಬಿ.ಹೊಸಳ್ಳಿ, ಬಿದರಹಳ್ಳಿ ಗ್ರಾಪಂ ಸಂಪೂರ್ಣ ಮತ್ತು ಜಾವಳಿ ಗ್ರಾಪಂನ ಒಂದು ಸ್ಥಾನ ಒಟ್ಟು 37 ಸ್ಥಾನದಲ್ಲಿ ಚುನಾವಣೆ ಬಹಿಷ್ಕರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts