More

    ‘ಕೈ’ ಹಿಡಿದ ಬೆಮೆಲ್ ಕಾಂತರಾಜ್! ; ವಾಸು, ಬಾಬು ನಡೆ ಕುತೂಹಲ ; ಮತ್ತೆ ಗರಿಗೆದರಿದ ರಾಜಕೀಯ ಚಟುವಟಿಕೆ

    ತುಮಕೂರು : ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಕಾಂಗ್ರೆಸ್ ಕೈಹಿಡಿಯುವುದು ಬಹುತೇಕ ನಿಚ್ಚಳವಾಗಿದೆ. ರಾಜಕೀಯ ಭವಿಷ್ಯಕ್ಕಾಗಿ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಬೆಮೆಲ್‌ಗೆ ಪಕ್ಷ ಸೇರ್ಪಡೆಗೊಳ್ಳಲು ಜಿಲ್ಲಾ ಕಾಂಗ್ರೆಸ್ ವರಿಷ್ಠರು ಮುಕ್ತ ಆಹ್ವಾನ ನೀಡಿದ್ದಾರೆ.

    ಜೆಡಿಎಸ್ ಭದ್ರನೆಲೆಗಳಲ್ಲಿ ಒಂದಾದ ಜಿಲ್ಲೆಯಲ್ಲಿ ದಳಪತಿಗಳು ಒಬ್ಬೊಬ್ಬರೇ ಪಕ್ಷ ತೊರೆಯುತ್ತಿರುವುದು ಜೆಡಿಎಸ್ ವರಿಷ್ಠರನ್ನು ಚಿಂತೆಗೀಡು ಮಾಡುತ್ತಿದೆ. ಜೆಡಿಎಸ್ ರಾಷ್ಟ್ರೀಯ ವಕ್ತಾರ, ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್‌ಬಾಬು ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರೆ, ಬೆಮೆಲ್ ಕಾಂತರಾಜು ಅದೇ ಹಾದಿಯಲ್ಲಿದ್ದಾರೆ.

    ಕೈ ವರಿಷ್ಠರ ಆಶೀರ್ವಾದ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತುರುವೇಕೆರೆ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆಯೊಂದಿಗೆ ತಾಲೂಕಿನಲ್ಲಿ ನೆಲೆಯೂರಿರುವ ಬೆಮೆಲ್ ಕಾಂತರಾಜು ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಡಿಸಿಎಂ ಜಿ.ಪರಮೇಶ್ವರ್ ಸೇರಿ ಎಲ್ಲರ ಮನೆಬಾಗಿಲಿಗೆ ಎಡತಾಕಿ ಆಶೀರ್ವಾದ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಜಿಲ್ಲೆಯ ಮುಖಂಡರು ಕೂಡ ಬೆಮೆಲ್ ಸ್ವಾಗತಿಸಲು ತುದಿಗಾಲ ಮೇಲೆ ನಿಂತಿದ್ದಾರೆ.

    ಪರಮೇಶ್ವರ್ ಸೂಚನೆ ಮೇರೆಗೆ ಪಕ್ಷ ಸೇರ್ಪಡೆಗಿರುವ ಅಡೆತಡೆಗಳನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಕಾಂಗ್ರೆಸ್ ಹಿರಿಯ ನಾಯಕರನ್ನು ಬೆಮೆಲ್ ಭೇಟಿ ಮಾಡುತ್ತಿರುವುದು ರಹಸ್ಯವಾಗೇನೂ ಉಳಿದಿಲ್ಲ. ಜೆಡಿಎಸ್ ಭದ್ರಕೋಟೆ ತುರುವೇಕೆರೆಯಲ್ಲಿ ಕಮಲ ಅರಳಿದ್ದು ಕಾಂಗ್ರೆಸ್ ಬಹುತೇಕ ನೆಲಕಚ್ಚಿದೆ. ಇದರಿಂದ ಪಕ್ಷವನ್ನು ಸದೃಢವಾಗಿ ಕಟ್ಟಲು ಜಾತಿಬಲ, ಹಣಬಲ, ತೋಳ್ಬಲದ ಜತೆಗೆ ಚುನಾವಣಾ ರಾಜಕೀಯ ಬಲ್ಲವರ ಅಗತ್ಯವಿದೆ. ಹಾಗಾಗಿ, ಬೆಮೆಲ್ ಅವರನ್ನು ಸೆಳೆಯಲು ಗಾಳ ಹಾಕಿ ಕಾಂಗ್ರೆಸ್ ಯಶಸ್ವಿಯಾಗಿದೆ.

    ಬೆಮೆಲ್‌ಗೆ ಆತ್ಮೀಯ ಕೆಎನ್ನಾರ್ ಭೇಟಿ : ಮಾಜಿ ಸಚಿವ ಟಿ.ಬಿ.ಜಯಚಂದ್ರ ಭೇಟಿ ಮಾಡಿ ಅವರ ಆಶೀರ್ವಾದ ಪಡೆದಿರುವ ಬೆಮೆಲ್ ಕಾಂತರಾಜು ಸೋಮವಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಮನೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಕೈಪಕ್ಷ ಸೇರ್ಪಡೆ ಖಚಿತಪಡಿಸಿದ್ದಾರೆ. ಕಳೆದ ಪರಿಷತ್ ಚುನಾವಣೆಯಲ್ಲಿ ಕೆಎನ್ನಾರ್ ಮಗನಿಗೆ ಸೋಲುಣಿಸಿದ್ದ ಬೆಮೆಲ್‌ರನ್ನು ಆತ್ಮೀಯವಾಗಿ ಬರಮಾಡಿಕೊಂಡ ರಾಜಣ್ಣ ತಮ್ಮ ಪುತ್ರ ರಾಜೇಂದ್ರನಿಗೆ ಪರಿಷತ್ ಪ್ರವೇಶಕ್ಕಿದ್ದ ತೊಡಕನ್ನು ನಿವಾರಿಸಿಕೊಂಡಿದ್ದಾರೆ. ಅಲ್ಲದೆ, ತುರುವೇಕೆರೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಹಾಗೂ ಟಿಕೆಟ್ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕೆಎನ್ನಾರ್ ಈ ವೇಳೆ ಭರವಸೆ ಕೊಟ್ಟಿದ್ದಾರೆ ಎನ್ನಲಾಗಿದೆ. ತುಮುಲ್ ನಿರ್ದೇಶಕ ನಾಗೇಶ್‌ಬಾಬು, ರಾಜ್ಯ ಸಹಕಾರ ಮಂಡಲದ ಮಾಜಿ ಅಧ್ಯಕ್ಷ ಗಂಗಣ್ಣ, ರಾಜೇಂದ್ರ ಇದ್ದರು.

    ಗುಬ್ಬಿ ಶಾಸಕ ವಾಸುಗೆ ಟಾಂಗ್ ! : ಸಿ.ಎಸ್.ಪುರ ಜಿಪಂ ಕ್ಷೇತ್ರದ ಬಿಜೆಪಿಯ ಮಾಜಿ ಸದಸ್ಯೆ ಗಾಯತ್ರಿ ಅವರ ಪತಿ ನಾಗರಾಜು ಅವರನ್ನು ಜೆಡಿಎಸ್‌ಗೆ ಸೆಳೆದು ಅವರಿಗೆ ಗುಬ್ಬಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಲು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತೆರೆಮರೆಯಲ್ಲಿ ಕಸರತ್ತು ನಡೆಸಿರುವುದು ಮಾಜಿ ಸಚಿವ, ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ವರಿಷ್ಠರ ವಿರುದ್ಧ ಬಹಿರಂಗವಾಗಿ ಸಿಡಿದೇಳಲು ಮೂಲ ಕಾರಣ ಎನ್ನಲಾಗಿದೆ. ವಾಸು ನೇತೃತ್ವದಲ್ಲಿ ಸುರೇಶ್‌ಬಾಬು ಸೇರಿ ಮತ್ತಿತರರು ಕಾಂಗ್ರೆಸ್ ಸೇರ್ಪಡೆಗೆ ಉತ್ಸುಕರಾಗಿದ್ದವರಿಗೆ ಎಚ್ಡಿಕೆ ಟಾಂಗ್ ಕೊಡುವ ಮೂಲಕ ಪಕ್ಷ ತೊರೆಯುವವರಿಗೆ ಎಚ್ಚರಿಕೆ ಸಂದೇಶ ನೀಡುತ್ತಿದ್ದಾರೆ.

    ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ. ಜೆಡಿಎಸ್ ನನಗೆ ಎಲ್ಲವನ್ನೂ ಕೊಟ್ಟಿದೆ. ನನಗೇನೂ ದ್ರೋಹ ಮಾಡಿಲ್ಲ. ರಾಜಕೀಯ ಅಸ್ತಿತ್ವಕ್ಕಾಗಿ ತುರುವೇಕೆರೆ ಕ್ಷೇತ್ರದಲ್ಲಿ ಸಂಘಟನೆ ಮಾಡುತ್ತಿದ್ದೇನೆ. ಕಾಂಗ್ರೆಸ್ ವರಿಷ್ಠರು ಇದನ್ನು ಗುರುತಿಸಿ ಪಕ್ಷ ಸೇರುವಂತೆ ಆಹ್ವಾನಿಸಿದ್ದಾರೆ. ಅದರಂತೆ ಜಿಲ್ಲೆಯ ಎಲ್ಲ ಮುಖಂಡರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಿದ್ದೇನೆ. ವಾಸಣ್ಣ, ಬಾಬಣ್ಣ ಕೈಹಿಡಿಯುವ ಬಗ್ಗೆ ನನಗೇನು ಗೊತ್ತಿಲ್ಲ.
    ಬೆಮೆಲ್ ಕಾಂತರಾಜು, ಜೆಡಿಎಸ್ ವಿಧಾನಪರಿಷತ್ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts