More

    ಪಂಡಿತಾರಾಧ್ಯರು ಪಂಡಿತರೆಲ್ಲರಿಗೂ ಪೂಜ್ಯರು

    ಶ್ರೀಶೈಲಂ (ಆಂಧ್ರಪ್ರದೇಶ): ಪಂಚಪೀಠಗಳ ಪೀಠಾಚಾರ್ಯರಲ್ಲಿ ಒಬ್ಬರಾದ ಶ್ರೀಶೈಲದ ಜಗದ್ಗುರು ಪಂಡಿತಾರಾಧ್ಯರು ತಮ್ಮಲ್ಲಿರುವ ಪಾಂಡಿತ್ಯ ಮತ್ತು ತಪಸ್ಸಶಕ್ತಿ ಮೂಲಕ ಪಂಡಿತರೆಲ್ಲರಿಗೂ ಪೂಜ್ಯರಾಗಿದ್ದರು ಎಂದು ಶ್ರೀಶೈಲದ ಜಗದ್ಗುರು ಡಾ. ಚೆನ್ನ ಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

    ಶಿವರಾತ್ರಿ ನಿಮಿತ್ತ ಶ್ರೀಶೈಲದ ಜಗದ್ಗುರು ಸೂರ್ಯಸಿಂಹಾಸನ ಮಹಾಪೀಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಗದ್ಗುರು ಪಂಡಿತಾರಾಧ್ಯ ಜಯಂತಿ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

    ಶಿವಾಗಮಗಳ ಉಲ್ಲೇಖದನ್ವಯ ಕಲಿಯುಗದ ಪ್ರಾರಂಭದಲ್ಲಿ ಶಿವರಾತ್ರಿಯ ಪವಿತ್ರ ದಿನದಂದು ಜಗದ್ಗುರು ಪಂಡಿತಾರಾಧ್ಯರು ಶ್ರೀಶೈಲದ ಮಲ್ಲಿಕಾರ್ಜುನ ಜ್ಯೋತಿರ್ಲಿಂಗದಿಂದ ಪ್ರಾದುರ್ಭವಿಸಿ ದೇವಸ್ಥಾನದ ನೈಋತ್ಯ ದಿಕ್ಕಿಗೆ ಸಮೀಪದಲ್ಲಿಯೇ ಸೂರ್ಯ ಸಿಂಹಾಸನ ಮಹಾಪೀಠವನ್ನು ಸಂಸ್ಥಾಪಿಸಿದರು. ಈ ಪೀಠದ ಮೂಲಕ ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮುಂತಾದ ಅನೇಕ ರಾಜ್ಯಗಳಲ್ಲಿ ಸಂಚರಿಸಿ ವೀರಶೈವ ಲಿಂಗಾಯತ ಧರ್ಮವನ್ನು ಪ್ರಸಾರ ಮತ್ತು ಪ್ರಚಾರಗೊಳಿಸಿದರು. ಈ ಸಂದರ್ಭದಲ್ಲಿ ಇವರ ಸಂಪರ್ಕಕ್ಕೆ ಬಂದ ಎಲ್ಲ ಪಂಡಿತರಿಗೆ ಶಿವೋಪದಿಷ್ಟವಾದ ವೀರಶೈವ ಧರ್ಮದ ತತ್ವ ಸಿದ್ಧಾಂತಗಳನ್ನು ಉಪದೇಶ ಮಾಡಿದರು ಎಂದರು.

    ಶ್ರೀಶೈಲದಲ್ಲಿ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಎರಡನೆಯ ಮಲ್ಲಿಕಾರ್ಜುನ ಲಿಂಗವು, ಪಂಚಪೀಠಗಳಲ್ಲಿ ನಾಲ್ಕನೆಯದಾದ ಜಗದ್ಗುರು ಸೂರ್ಯಸಿಂಹಾಸನ ಮಹಾಪೀಠವು ಮತ್ತು ಹದಿನೆಂಟು ಶಕ್ತಿ ಪೀಠಗಳಲ್ಲಿ ಆರನೆಯದಾದ ಭ್ರಮರಾಂಬಾ ಶಕ್ತಿಪೀಠವು ಇದೆ. ಹೀಗಾಗಿ ಶ್ರೀಶೈಲವು ಜ್ಯೋತಿರ್ಲಿಂಗ, ಗುರುಪೀಠ ಮತ್ತು ಶಕ್ತಿಪೀಠಗಳ ತ್ರಿವೇಣಿ ಸಂಗಮವಾಗಿದೆ ಎಂದು ಹೇಳಿದರು.

    ಜಯಂತಿ ಪ್ರಯುಕ್ತ ಜಗದ್ಗುರು ಪಂಡಿತಾರಾಧ್ಯರ ಲಿಂಗೋದ್ಭವ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಮತ್ತು ಮಹಾ ಮಂಗಳಾರುತಿ ಪೂಜೆಗಳು ವೈಭವದಿಂದ ಜರುಗಿದವು.

    ಜೈನಾಪುರದ ರೇಣುಕ ಶಿವಾಚಾರ್ಯರು, ಹಿರೇಜೇವರ್ಗಿಯ ಜಯಶಾಂತಲಿಂಗ ಶಿವಾಚಾರ್ಯರು, ಗಂಗಾವತಿ ಕಟ್ಟಿ ಶ್ರೀಗಳು ಉಪದೇಶಾಮೃತ ನೀಡಿದರು. ಸಾಹಿತಿ, ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ, ಪ್ರಭುಗೌಡ ಜಂಗಮಶೆಟ್ಟಿ, ನಂದಬಸಪ್ಪ ಚೌದ್ರಿ ಇದ್ದರು. ಐನಳ್ಳಿಯ ಶರಣೆ ನೀಲಮ್ಮ ಪ್ರಾರ್ಥಿಸಿದರು. ಕಲ್ಲಯ್ಯ ಶಾಸ್ತ್ರಿಗಳು ವೇದಘೋಷ ಪಠಿಸಿದರು. ಅರಣ್ಯಾಧಿಕಾರಿ ಕೆ.ಎನ್. ರಾವ್ ಶಂಖನಾದ ಊದಿದರು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts