More

  ಪದವಿ ಪೂರ್ವ ಕಾಲೇಜಿನಲ್ಲಿ ಪುಟಾಣಿಗಳ ಕಲಾಪ್ರದರ್ಶನ

  ಶ್ರೀರಂಗಪಟ್ಟಣ: ಪಟ್ಟಣದ ಪದವಿಪೂರ್ವ ಕಾಲೇಜು ಆವರಣದಲ್ಲಿ ಶುಕ್ರವಾರ ನಾನಾ ವೇಷ ಧರಿಸಿದ್ದ ಮಕ್ಕಳ ಸಾಂಸ್ಕೃತಿ ಕಲಾ ಲೋಕ ಅನಾವರಣಗೊಂಡಿತು.

  ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ತಾಲೂಕು ಮಟ್ಟದ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ನೋಡುಗರ ಮನಸೊರೆಗೊಂಡಿತು. ಶ್ರೀರಂಗಪಟ್ಟಣ ಸೇರಿದಂತೆ ಕ್ಷೇತ್ರದ 4 ಹೋಬಳಿಗಳ ವಿವಿಧ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಿಂದ ಕ್ಲಸ್ಟರ್ ಮಟ್ಟದಲ್ಲಿ ಆಯ್ಕೆಯಾದ 437 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವೈಯಕ್ತಿಕ ವಿಭಾಗದಲ್ಲಿ 27 ಹಾಗೂ ಸಾಮೂಹಿಕ ವಿಭಾಗದಲ್ಲಿ 7 ತಂಡಗಳು ಪತ್ಯೇಕವಾಗಿ ಕಲಾ ಪ್ರದರ್ಶನ ನೀಡಿದವು.

  ವೈಯಕ್ತಿಕ ವಿಭಾಗದಲ್ಲಿ ಛದ್ಮವೇಷ, ಭಕ್ತಿಗೀತೆ, ಭಾವಗೀತೆ, ಜನಪದ ಗೀತೆ, ಧಾರ್ಮಿಕ ಪಠಣ, ಚಿತ್ರಕಲೆ, ಕಥೆ ಹೇಳುವುದು, ಆಶುಭಾಷಣ, ಚರ್ಚಾಸ್ಪರ್ಧೆ, ಭರತನಾಟ್ಯ, ಕಂಠಪಾಠ ಸ್ಪರ್ಧೆಗಳು ನಡೆದವು. ಸಾಮೂಹಿಕ ವಿಭಾಗದಲ್ಲಿ ಜಾನಪದ ಕುಣಿತ, ಕೋಲಾಟ, ರಂಗೋಲಿ ಸ್ಪರ್ಧೆ, ಮಣ್ಣಿನ ಮಾದರಿ ತಯಾರಿ ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಿದವು.

  ಕಲಾ ಪ್ರದರ್ಶನಕ್ಕೂ ಮೊದಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ, ಮಕ್ಕಳು ತಮ್ಮಲ್ಲಿರುವ ಅಮೋಘ ಪ್ರತಿಭೆ ಅನಾವರಣಗೊಳಿಸಲು ಪಾಲಕರು ನೆರವಾಗಬೇಕು. ಮಕ್ಕಳಿಗೆ ಉತ್ಸಾಹ ತುಂಬಿ ಪ್ರೋತ್ಸಾಹ ನೀಡಬೇಕು ಎಂದರು. ಕ್ಷೇತ್ರಶಿಕ್ಷಣಾಧಿಕಾರಿ ಎಂ.ಆರ್.ಅನಂತರಾಜು ಮಾತನಾಡಿ, ಎರಡು ವಿಭಾಗಗಳಲ್ಲಿ ಜಯಶೀಲರಾದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಗೊಳಿಸಿರುವುದಾಗಿ ತಿಳಿಸಿದರು.

  ಹಿರಿಯ ಗಾಂಧಿವಾದಿ ಬಿ.ಸುಜಯ್‌ಕುಮಾರ್, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಸಿದ್ದಲಿಂಗು, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ.ಜೆ.ಶ್ರೀನಿವಾಸ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಲೋಕೇಶ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರು, ಅಕ್ಷರ ದಾಸೋಹ ನಿರ್ದೇಶಕ ಮಂಚೇಗೌಡ, ಕ್ಷೇತ್ರಶಿಕ್ಷಣ ಸಂಯೋಜಕಿ ಡಾ.ಬಿ.ಕೆ.ಪ್ರತಿಮಾ, ಪಟ್ಟಣದ ಸರ್ಕಾರಿ ಪ್ರೌಢಶಾಲಾ ಪ್ರಾಂಶುಪಾಲ ಅಶೋಕ್ ಇತರರು ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts