More

    ನಿಷೇಧಾಜ್ಞೆ ಹಿಂಪಡೆದ ಶ್ರೀರಂಗಪಟ್ಟಣ ತಾಲೂಕು ಆಡಳಿತ

    ಶ್ರೀರಂಗಪಟ್ಟಣ: ಮಹಾಶಿವರಾತ್ರಿ ಆಚರಣೆ ಸಂಬಂಧ ತಾಲೂಕಿನ ಗಣಂಗೂರು ಹಾಗೂ ಗೌಡಹಳ್ಳಿ ಗ್ರಾಮಸ್ಥರು ಮಾಡಿದ ಮನವಿಯನ್ನು ಪುರಸ್ಕರಿಸಿರುವ ತಾಲೂಕು ಆಡಳಿತ, ಶಾಂತಿ ಸಭೆ ನಡೆಸಿ ನಿಷೇಧಾಜ್ಞೆಯನ್ನು ಹಿಂಪಡೆದಿದೆ.

    ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಡಿವೈಎಸ್ಪಿ ಎಚ್.ಎಸ್.ಮುರುಳಿ, ಇನ್ಸ್ ಪೆಕ್ಟರ್ ಬಿ.ಜಿ.ಕುಮಾರ್ ಹಾಗೂ ಸಬ್ಬನಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬೃಂದಾಮಣಿ ನೇತೃತ್ವದಲ್ಲಿ ಸೋಮವಾರ ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಗಣಂಗೂರು ಹಾಗೂ ಗೌಡಹಳ್ಳಿ ಗ್ರಾಮಸ್ಥರೊಂದಿಗೆ ಸಭೆ ಆಯೋಜಿಸಲಾಗಿತ್ತು.

    ಸುದೀರ್ಘ ಚರ್ಚೆ ಬಳಿಕ ಎರಡೂ ಗ್ರಾಮಸ್ಥರ ಮನವಿಯನ್ನು ಪುರಸ್ಕರಿಸಿದ ತಾಲೂಕು ಆಡಳಿತ, ಕೆಲ ಷರತ್ತುಗಳನ್ನು ವಿಧಿಸುವ ಮೂಲಕ 13 ವರ್ಷಗಳಿಂದ ಅವಳಿ ಗ್ರಾಮಗಳ ನಡುವೆ ಏರ್ಪಟ್ಟಿದ್ದ ವೈರತ್ವವನ್ನು ಶಮನಗೊಳಿಸಿ ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬ ಆಚರಣೆಗೆ ಅವಕಾಶ ಕಲ್ಪಿಸಿದೆ.

    ಗಣಂಗೂರು ಹಾಗೂ ಗೌಡಹಳ್ಳಿ ಗ್ರಾಮಗಳ ನಡುವೆ ಇರುವ ಶ್ರೀ ಬಸವೇಶ್ವರ ದೇವಾಲಯದಲ್ಲಿ ಸಾಮೂಹಿಕ ಅನ್ನಸಂತರ್ಪಣೆ (ಪರ) ವಿಚಾರಕ್ಕೆ 2010ರಲ್ಲಿ ಮಹಾಶಿವರಾತ್ರಿ ದಿನದಂದು ಎರಡು ಗ್ರಾಮಗಳ ನಡುವೆ ಜಗಳ ಏರ್ಪಟ್ಟು ಕೊಲೆಯಲ್ಲಿ ಅಂತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ 13 ವರ್ಷಗಳಿಂದ ಮಹಾಶಿವರಾತ್ರಿ ಹಬ್ಬ ಆಚರಿಸದಂತೆ ಪೊಲೀಸ್ ಇಲಾಖೆ ನಿಷೇಧ ಹೇರಿತ್ತು. ಜತೆಗೆ ತಾಲೂಕು ಆಡಳಿತದಿಂದ ಪ್ರತಿ ವರ್ಷ ನಿಷೇಧಾಜ್ಞೆ ಜಾರಿಯಾಗುತ್ತಿತ್ತು. ಈ ಸಂಬಂಧ ಎರಡೂ ಗ್ರಾಮಗಳ ಜನರು ಹಾಗೂ ಮುಖಂಡರ ವೈರತ್ವ ಶಮನಗೊಳಿಸಿ ಮೊದಲಿನಂತೆ ದೇವಾಲಯದಲ್ಲಿ ಹಬ್ಬ ಆಚರಿಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಸಂಧಾನ ಸಭೆ ನಡೆದಿದ್ದು, ಈಗ ಯಶಸ್ವಿಯಾಗಿದೆ.

    ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯ ಕೆಲ ನಿಬಂಧನೆಗಳಿಗೆ ಎರಡೂ ಗ್ರಾಮಗಳ ಮುಖಂಡರು ಪರಸ್ಪರ ಸಮ್ಮತಿಸಿ ಕರಾರು ಪತ್ರಕ್ಕೆ ಸಹಿ ಹಾಕಿದ ಬಳಿಕ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಎರಡೂ ಗ್ರಾಮಗಳ ಗ್ರಾಮಸ್ಥರು ಪೂಜೆ ಸಲ್ಲಿಸಿ ಪ್ರಸಾದ ವಿತರಣೆಗೆ ಅವಕಾಶ ಕಲ್ಪಿಸಲಾಗಿದೆ. ಸಾಮೂಹಿಕ ಅನ್ನಸಂತರ್ಪಣೆ ಸೇರಿದಂತೆ ಇನ್ಯಾವುದೇ ಚಟುವಟಿ ನಡೆಸುವಂತ್ತಿಲ್ಲ ಎಂದು ತಹಸೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳು ಗ್ರಾಮಸ್ಥರಿಗೆ ತಾಕೀತು ಮಾಡಿದ್ದಾರೆ.

    ಸಭೆಯಲ್ಲಿ ಸಬ್ಬನಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯ ಕುಮಾರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ರಾಮಕೃಷ್ಣ, ಕೃಷ್ಣಕುಮಾರ್ ಗಣಂಗೂರು ಗ್ರಾಮದ ಮುಖಂಡರಾದ ನಂಜೇಗೌಡ, ಮಂಜುನಾಥ್, ಸತೀಶ್, ಸುನೀಲ್, ಟಿ.ಎಂ.ಹೊಸೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜಿ.ಎಲ್.ಪದ್ಮನಾಭ್, ಗೌಡಹಳ್ಳಿ ಗ್ರಾಮದ ಮುಖಂಡರಾದ ನಾಗರಾಜು, ಜಿ.ಪಿ.ಜಯಕುಮಾರ್, ನಂಜಪ್ಪ, ಲೋಕೇಶ್, ದೇವರಾಜು, ಈಶ್ವರ್, ರಾಜಸ್ವ ನೀರಿಕ್ಷಕ ಮಂಜುನಾಥ್ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts