More

    ಕೃಷಿಯಲ್ಲಿ ಇಂಜಿನಿಯರ್‌ನ ಯಶಸ್ವಿ ಪ್ರಯಾಣ: ವ್ಯವಸಾಯದ ಯಂತ್ರೋಪಕರಣಗಳ ಆವಿಷ್ಕಾರ…!

    ಮಾಕವಳ್ಳಿ ಸಿ.ರವಿ ಕೆ.ಆರ್.ಪೇಟೆ
    ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೂ ಕೃಷಿಯಲ್ಲೂ ತನ್ನ ಕೌಶಲಗಳನ್ನು ಬಳಸಿಕೊಂಡು ನೈಸರ್ಗಿಕ ಮತ್ತು ಸಾವಯವ ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ.
    ತಾಲೂಕಿನ ಶೀಳನೆರೆ ಹೋಬಳಿ ಮಾರುತಿನಗರ(ಉಯ್ಗೋನಹಳ್ಳಿ) ಗ್ರಾಮದ ವೆಂಕಟಲಕ್ಷ್ಮಮ್ಮ ಅವರ ಪುತ್ರ ಎಚ್.ಶ್ರೀನಿವಾಸಮೂರ್ತಿ ಕೃಷಿಯಲ್ಲಿ ಯಶಸ್ವಿಯಾದ ಯುವಕ. ಇವರು ಬೆಂಗಳೂರಿನ ಮೆಕಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಶಿಕ್ಷಣ ಪಡೆದು 25ವರ್ಷ ಬೆಂಗಳೂರಿನ ಡೈನಾಮೆಟಿಕ್ ಟೆಕ್ನಾಲಜಿ ಲಿ.ನಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಇಂಜಿನಿಯರಿಂಗ್ ಉದ್ಯೋಗ ತ್ಯಜಿಸಿ ಸ್ವಂತ ಉದ್ಯೋಗ ಮಾಡಲು ತಮ್ಮ ಗ್ರಾಮಕ್ಕೆ ಹಿಂದಿರುಗಿದ್ದರು. ಕೆ.ಆರ್.ಪೇಟೆ ಪಟ್ಟಣದಲ್ಲಿ ಕೊಳವೆ ಬಾವಿ ದುರಸ್ತಿ, ರಿವೈಂಡಿಂಗ್, ಪಂಪ್ ರಿಪೇರಿ ಸೇರಿ ಮೋಟಾರ್ ಇಂಜಿನಿಯರಿಂಗ್ ವರ್ಕ್ಸ್‌ಶಾಪ್ ಪ್ರಾರಂಭಿಸಿದ್ದರು. ಇದರ ಜತೆಗೆ ರೈತರ ಕೃಷಿಗೆ ಸಹಕಾರಿಯಾಗಲೆಂದು ಬೆಳೆ ನಡುವೆ ಕಳೆ ತೆಗೆಯಲು ಸೈಕಲ್ ವೀಡರ್, ಕೃಷಿ ತ್ಯಾಜ್ಯವನ್ನು ಪುಡಿ ಮಾಡಿ ಸಾವಯವ ಗೊಬ್ಬರ ತಯಾರಿಸುವ ಶ್ರೆಡರ್ ಯಂತ್ರ, ಬ್ಯಾಟರಿ ಚಾಲಿತ ಟಿಲ್ಲರ್, ರಾಗಿ, ಕಬ್ಬು, ತರಕಾರಿ ಬೆಳೆಗಳ ನಡುವೆ ಬೆಳೆಯುವ ಕಳೆ ನಿಯಂತ್ರಿಸಲು ಕುಂಟೆಯನ್ನು ಸ್ವತಃ ಆವಿಷ್ಕಾರ ಮಾಡಿದ್ದಾರೆ.
    ತಮ್ಮ 3 ಎಕರೆ ಜಮೀನಿನಲ್ಲಿ ನೈಸರ್ಗಿಕ ಹಾಗೂ ಸಾವಯವ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಮೊದಲಿಗೆ 1998ರಲ್ಲಿ ಸುಭಾಷ್ ಪಾಳೇಕರ್ ಅವರು ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಯ ಬಗ್ಗೆ ಮೈಸೂರಿನಲ್ಲಿ ನಡೆಸಿದ ಒಂದು ವಾರದ ಶಿಬಿರದಲ್ಲಿ ಪಾಲ್ಗೊಂಡು ತರಬೇತಿ ಪಡೆದರು. ಇದರಿಂದ ಪ್ರೇರೇಪಿತರಾಗಿ ನೈಸರ್ಗಿಕ ಕೃಷಿ ಪ್ರಾರಂಭಿಸಿದ್ದಾರೆ. ನಾಟಿ ಹಸುವಿನ 10 ಕೆಜಿ ಸಗಣಿ, 10 ಲೀ ಗಂಜಲ, 2 ಕೆಜಿ ಬೆಲ್ಲ, 2 ಕೆಜಿ ದ್ವಿದಳ ಧಾನ್ಯಗಳ ಹಿಟ್ಟು, ಕೃಷಿ ಮಾಡುವ ಭೂಪ್ರದೇಶದ 1 ಕೆಜಿ ಮಣ್ಣನ್ನು ಡ್ರಮ್‌ನಲ್ಲಿ ಹಾಕಿ ಪ್ರತಿ ದಿನ ಬೆಳಗ್ಗೆ, ಸಂಜೆ ಐದು ದಿನಗಳ ಕಾಲ ವೃತ್ತಾಕಾರದಲ್ಲಿ ತಿರುಗಿಸಿ ಜೀವಾಮೃತ ತಯಾರಿಸಿ 1 ಎಕರೆಗೆ 200 ಲೀಟರ್ ಜೀವಾಮೃತವನ್ನು ಗೊಬ್ಬರವಾಗಿ ನೀಡುತ್ತಿದ್ದಾರೆ. ಪ್ರತಿ 15 ದಿನಕ್ಕೊಮ್ಮೆ ನೀರಿನ ಮೂಲಕ ಜೀವಾಮೃತ ನೀಡಿ ಒಂದು ಎಕರೆಯಲ್ಲಿ 90 ಟನ್ ಕಬ್ಬು ಬೆಳೆದಿದ್ದಾರೆ. ಕಬ್ಬಿನ ಸಾಲಿನ ನಡುವೆ 4 ತಿಂಗಳ ಅವಧಿಗೆ ಬರುವ ತರಕಾರಿ, ದ್ವಿದಳ ದಾನ್ಯಗಳನ್ನು ಬೆಳೆದು ಯಶಸ್ವಿಯಾಗಿದ್ದಾರೆ. ತಮ್ಮ ಜಮೀನಿನಲ್ಲಿದ್ದ 100 ತೆಂಗು ಮತ್ತು 150 ಅಡಕೆ ಮರಗಳಿಗೂ ನೈಸರ್ಗಿಕವಾಗಿ ಜೀವಾಮೃತ ಕೊಡುವ ಮೂಲಕ ರಾಸಾಯನಿಕ ಕೃಷಿ ತ್ಯಜಿಸಿದ್ದಾರೆ.

    ಕೃಷಿಯಲ್ಲಿ ಇಂಜಿನಿಯರ್‌ನ ಯಶಸ್ವಿ ಪ್ರಯಾಣ: ವ್ಯವಸಾಯದ ಯಂತ್ರೋಪಕರಣಗಳ ಆವಿಷ್ಕಾರ...!

    ತ್ಯಾಜ್ಯದಿಂದ ಗೊಬ್ಬರ ತಯಾರಿಕೆ: ತೆಂಗಿನ ಗರಿ, ಸಿಪ್ಪೆ, ಬಾಳೆ ತ್ಯಾಜ್ಯ, ಮರದ ಎಲೆ ಸೇರಿ ಇತರ ಕೃಷಿ ತ್ಯಾಜ್ಯ ವಸ್ತುಗಳನ್ನು ಶ್ರೆಡರ್ ಮೂಲಕ ಕತ್ತರಿಸಿ ಸಾವಯುವ ಗೊಬ್ಬರದ ಘಟಕದಲ್ಲಿ ತುಂಬಿ ಸಗಣಿ, ಗಂಜಲ, ಮಣ್ಣು ಶೇಖರಿಸಿ 45 ದಿನ ಕೊಳೆಸಿ ಸಾವಯವ ಗೊಬ್ಬರ ತಯಾರಿಸಲಾಗುತ್ತದೆ. ಇದನ್ನು ಜಮೀನಿಗೆ ಹಾಕಲಾಗುತ್ತಿದೆ. ನೈಸರ್ಗಿಕ ಮತ್ತು ಸಾವಯವ ಗೊಬ್ಬರದಿಂದ ಮಣ್ಣಿನ ರಕ್ಷಣೆ, ನೀರಿನ ಸಮರ್ಪಕ ನಿರ್ವಹಣೆ, ದೇಸಿ ತಳಿಯ ಬೆಳೆ ಹಾಗೂ ಕಡಿಮೆ ಖರ್ಚಿನಲ್ಲಿ ಉತ್ತಮ ಬೆಳೆ ಹಾಗೂ ಹೆಚ್ಚಿನ ಇಳುವರಿಯನ್ನು ಪಡೆದು ಯಶಸ್ಸು ಕಂಡಿದ್ದಾರೆ. ಇತರ ರೈತರಿಗೂ ಮಾದರಿಯಾಗಿದ್ದಾರೆ. ತೋಟಕ್ಕೆ ಭೇಟಿ ನೀಡುವ ಎಲ್ಲ ರೈತರಿಗೂ ನೈಸರ್ಗಿಕ ಕೃಷಿ ಮಾಡುವಂತೆ ಪ್ರೇರೇಪಿಸುತ್ತಾರೆ.
    ಜೀವಾಮೃತ, ಬೀಜಾಮೃತ, ನೈಸರ್ಗಿಕ ಕೀಟನಾಶಕ, ದೇಸಿ ಹಸುವಿನ ಸಾಕಣೆ, ನೈಸರ್ಗಿಕವಾಗಿ ಪಶು ಆಹಾರ ಬೆಳೆದು ಅಧಿಕ ಹಾಲು ಉತ್ಪಾದನೆ ಹಾಗೂ ಗುಣಮಟ್ಟದ ಹಾಲು ಉತ್ಪಾದನೆಗೆ ಹಲವಾರು ಪ್ರಾಯೋಗಿಕ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ. ಕಬ್ಬಿನ ಬೆಳೆಯ ನಡುವೆ ಅಂತರ ಬೆಳೆಯಾಗಿ ಕ್ಯಾರೆಟ್, ಬೀಟ್ರೂಟ್, ಬದನೆ, ತೊಗರಿ, ಅಲಸಂದೆ, ಹೆಸರು, ಉದ್ದು ಇತರ ದ್ವಿದಳ ಧಾನ್ಯಗಳನ್ನು ಬೆಳೆಯುವುದು. ಜತೆಗೆ ಒಂಟಿ ಹಸುವಿನ ಉಳುಮೆ ಮಾಡುವುದು. ಕೂಲಿ ಆಳುಗಳ ಕೊರತೆ ಮತ್ತು ದುಬಾರಿ ಕೂಲಿ ಉಳಿಸುವ ಸಲುವಾಗಿ ತಾವೇ ತಯಾರಿಸಿದ ಕೆಲವು ಕೃಷಿ ಉಪಕರಣ ಬಳಕೆ ಮಾಡುತ್ತಿದ್ದಾರೆ. ಕೈಚಾಲಿತ ಕಳೆ ತೆಗೆಯುವ ಸೈಕಲ್ ವ್ರೀಡ್, ಸಾಲು ಹೊಡೆಯುವ, ಮಣ್ಣು ಏರುಹಾಕುವ ಮತ್ತು ಬೀಜ ಬಿತ್ತನೆ ಮಾಡಬಲ್ಲ ಉಪಕರಣಗಳನ್ನು ಅತಿಕಡಿಮೆ ಬೆಲೆಯಲ್ಲಿ ತಯಾರಿಸಿ ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ಸ್ಕೂಟರ್ ಇಂಜಿನ್‌ನಿಂದ ಔಷಧ ಸಿಂಪಡಿಸುವ ಸ್ಪ್ರೇಯರ್ ತಯಾರಿಸಿದ್ದಾರೆ. ಮುಸುಕಿನ ಜೋಳ, ಕಬ್ಬು, ರೇಷ್ಮೆ, ಪರಂಗಿ, ತೆಂಗು, ಅಡಕೆ, ಬಾಳೆ ಬೆಳೆದು ವರ್ಷಕ್ಕೆ 5 ಲಕ್ಷ ರೂ.ಆದಾಯ ಪಡೆಯುತ್ತಿದ್ದಾರೆ.

    ಕೃಷಿಯಲ್ಲಿ ಇಂಜಿನಿಯರ್‌ನ ಯಶಸ್ವಿ ಪ್ರಯಾಣ: ವ್ಯವಸಾಯದ ಯಂತ್ರೋಪಕರಣಗಳ ಆವಿಷ್ಕಾರ...!

    ರೈತರು ಸ್ವಾವಲಂಬಿಗಳಾಗಿ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ ನಮ್ಮ ಆರೋಗ್ಯದ ಜತೆಗೆ ಇತರರಿಗೂ ಆರೋಗ್ಯಕರ ಆಹಾರ ಪದಾರ್ಥಗಳನ್ನು ಬೆಳೆದುಕೊಡಬೇಕು. ಗಾಳಿ, ನೀರು, ಮಣ್ಣನ್ನು ಕಲುಷಿತಗೊಳಿಸದೆ ಪ್ರಕೃತಿ ರಕ್ಷಣೆ ಮಾಡಬೇಕು.
    ಎಚ್.ಶ್ರೀನಿವಾಸಮೂರ್ತಿ,
    ನೈಸರ್ಗಿಕ ಕೃಷಿಕ, ಮಾರುತಿನಗರ(ಉಯ್ಗೋನಹಳ್ಳಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts