More

    ಶಿಕ್ಷಣಕ್ಕೆ ಆದ್ಯತೆ ನೀಡಿದ 12ರಲ್ಲಿ ಶೃಂಗೇರಿ ಕ್ಷೇತ್ರವೂ ಸೇರ್ಪಡೆ

    ಎನ್.ಆರ್.ಪುರ: ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅತಿ ಹೆಚ್ಚು ಖರ್ಚು ಮಾಡಿದ 12 ವಿಧಾನಸಭಾ ಕ್ಷೇತ್ರದಲ್ಲಿ ಶೃಂಗೇರಿ ಕ್ಷೇತ್ರವೂ ಸೇರಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

    ಕರ್ನಾಟಕ ಪಬ್ಲಿಕ್ ಸ್ಕೂಲಿನಲ್ಲಿ ಶನಿವಾರ ನಡೆದ ಗುರು ಸ್ಪಂದನ, ಶಿಕ್ಷಣ ಅದಾಲತ್, ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಶೃಂಗೇರಿ ಕ್ಷೇತ್ರದಲ್ಲಿ ಎಲ್ಲ ಶಾಲೆಗಳ ಶೇ.90 ಸಮಸ್ಯೆ ಬಗೆಹರಿಸಿದ್ದೇನೆ. ಮುತ್ತಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 6 ಕೊಠಡಿ ಮಂಜೂರು ಮಾಡಿಸಿದ್ದೇನೆ. ಹೈಟೆಕ್ ಶೌಚಗೃಹ ನಿರ್ಮಿಸಿದ್ದೇನೆ. ಬಹುತೇಕ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ನೀಡಿದ್ದೇನೆ. ಕುಡಿಯುವ ನೀರಿಗಾಗಿ ಕ್ಷೇತ್ರದಲ್ಲಿ 1 ಕೋಟಿ ರೂ. ಖರ್ಚು ಮಾಡಿದ್ದೇನೆ. ಪ್ರತಿ ಶಾಲೆಗೂ ಇಂಟರ್‌ಲಾಕ್, ರಸ್ತೆ, ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ನೀಡಿದ್ದೇನೆ. ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗೂ ಅನುದಾನ ನೀಡಿದ್ದೇನೆ ಎಂದು ತಿಳಿಸಿದರು.
    ಸಂವಾದ ಕಾರ್ಯಕ್ರಮದಲ್ಲಿ 11 ಶಾಲೆಗಳು ಬೇಡಿಕೆ ಇಟ್ಟಿವೆ. ಆದ್ಯತೆ ಮೇಲೆ ಬೇಡಿಕೆ ಈಡೇರಿಸುತ್ತೇನೆ. ಮುಂದಿನ 5 ವರ್ಷಗಳಲ್ಲಿ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು. ಗುರುಭವನಕ್ಕೆ ಊಟದ ಹಾಲ್, ಅಡುಗೆ ಮನೆ ಕೇಳಿದ್ದು ಮುಂದಿನ ಒಂದು ವರ್ಷದ ಒಳಗೆ ಅನುದಾನ ನೀಡುತ್ತೇನೆ. ಮುತ್ತಿನಕೊಪ್ಪ ಶಾಲೆಯವರು ಕರ್ನಾಟಕ ಪಬ್ಲಿಕ್ ಸ್ಕೂಲ್ ಕೇಳಿದ್ದಾರೆ. ಆದರೆ ಬಾಳೆಹೊನ್ನೂರು, ಮುತ್ತಿನಕೊಪ್ಪ ಎರಡೂ ಕಡೆ ಕೆಪಿಎಸ್‌ಗೆ ಬೇಡಿಕೆ ಇದೆ. ಬಾಳೆಹೊನ್ನೂರು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಜಾಸ್ತಿ ಇರುವುದರಿಂದ ಮೊದಲು ಬಾಳೆಹೊನ್ನೂರಿಗೆ ನೀಡಲಾಗುವುದು. ಮುಂದಿನ ವರ್ಷ ಮುತ್ತಿನಕೊಪ್ಪ ಶಾಲೆಗೆ ಕೆಪಿಎಸ್ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.
    ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ಹಲವಾರು ಬೇಡಿಕೆಗಳ ಬಗ್ಗೆ ಮನವಿ ನೀಡಿದ್ದಾರೆ. ಇದರಲ್ಲಿ ಶಿಕ್ಷಕರಿಗೆ ಹೊಸ ಪಿಂಚಣಿ ಬದಲಾಗಿ ನಿಶ್ಚಿತ ಪಿಂಚಣಿ ಜಾರಿಗೆ ತರಬೇಕು ಎಂದು ಕೇಳಿದ್ದಾರೆ. ಇದು ನ್ಯಾಯವಾದ ಬೇಡಿಕೆಯಾಗಿದೆ. ಶಿಕ್ಷಕರು ದುಡಿದ ಹಣ ಶಿಕ್ಷಕರಿಗೇ ನೀಡಬೇಕು. ಈ ಕುರಿತು ವಿಧಾನಸಭೆಯಲ್ಲೂ ನಾನು ಒತ್ತಾಯಿಸಿದ್ದೇನೆ. ಶಿಕ್ಷಕರಿಗೆ ಕೆಲಸದ ಒತ್ತಡ ಜಾಸ್ತಿಯಾಗಿದೆ. ಶಿಕ್ಷಕರ ಕೊರತೆ ಇರುವ ಸಂದರ್ಭದಲ್ಲಿ ಚುನಾವಣೆಗೆ, ಜನಗಣತಿ, ಮತದಾನದ ಗುರುತಿನ ಪಟ್ಟಿ ತಯಾರಿಸಲು ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಶಿಕ್ಷರಿಗೆ ಕೆಲಸದ ಒತ್ತಡ ಜಾಸ್ತಿಯಾಗುತ್ತದೆ. ಶಿಕ್ಷಕರ ಬೇಡಿಕೆಗಳನ್ನು ಸರ್ಕಾರ ಗಮನಿಸಿದೆ ಎಂದರು.
    ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ಶಾಸಕ ಟಿ.ಡಿ.ರಾಜೇಗೌಡ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿಕೊಟ್ಟಿದ್ದಾರೆ. ಕೊಪ್ಪ, ಎನ್.ಆರ್.ಪುರ ತಾಲೂಕಿನ ಶಾಲೆಗಳಿಗೆ ಕುಡಿಯುವ ನೀರಿಗಾಗಿ 25 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ ಎಂದರು.
    ಯಾವುದೇ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಧರ್ಮದ ವಿಚಾರ ಇಟ್ಟುಕೊಂಡು ವಿಷಬೀಜ ಬಿತ್ತಬಾರದು. ಕೆಲವು ಶಿಕ್ಷಕರ ವಿರುದ್ಧ ದೂರುಗಳು ಬಂದಿವೆ. ಧರ್ಮವನ್ನು ಕಾಪಾಡಲು ಮಠಾಧೀಶರು ಇದ್ದಾರೆ. ಧರ್ಮದ ವಿಷಯ ಇಟ್ಟುಕೊಂಡು ಮನಸ್ಸುಗಳನ್ನು ಒಡೆಯಬಾರದು. ಶಾಲೆಗಳಲ್ಲಿ ಶಿಕ್ಷಕರು ಧರ್ಮದ ಬಗ್ಗೆ ಮಕ್ಕಳಿಗೆ ಬೋಧನೆ ಮಾಡಬಾರದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
    ತಾಲೂಕಿನ 38 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳ ಪೈಕಿ 18 ಶಾಲೆಗಳನ್ನು ಬುನಾದಿ ಸಾರ್ಥಕತೆ ಮತ್ತು ಸಂಖ್ಯಾ ಜ್ಞಾನದಡಿ ಶೇ.100 ಸಾಧನೆ ಮಾಡಿದ ಶಾಲೆ ಎಂದು ಶಿಕ್ಷಣ ಇಲಾಖೆಯಿಂದ ಗುರುತಿಸಿ ಮುಖ್ಯಶಿಕ್ಷಕರಿಗ ಪ್ರಶಸ್ತಿ ಪತ್ರ ವಿತರಿಸಲಾಯಿತು. 2022-23ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಲ್ಪಾಕುಮಾರಿ ಹಾಗೂ ದೀಪಾ ಅವರನ್ನು ಸನ್ಮಾನಿಸಲಾಯಿತು.
    ಕೆಪಿಎಸ್ ಕಾರ್ಯಾಧ್ಯಕ್ಷ ಲಕ್ಷ್ಮಣ ಶೆಟ್ಟಿ, ಬಿಇಒ ಕೆ.ಆರ್.ಪುಷ್ಪಾ, ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಧನಂಜಯ ಮೇಧೂರ, ಶಿಕ್ಷಣ ಇಲಾಖೆಯ ಸೇವ್ಯಾನಾಯ್ಕಾ, ಶಂಕರಪ್ಪ, ತಿಮ್ಮೇಶ್, ನಾಗರಾಜ್, ನಟರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts