More

    ಸತತ ವೈಫಲ್ಯದಿಂದ ಕಂಗೆಟ್ಟಿದ್ದೀರಾ? ಲಂಕಾ ಕ್ರಿಕೆಟಿಗ ಅಟಪಟ್ಟು ಯಶೋಗಾಥೆ ನಿಮಗೇಕೆ ಸ್ಫೂರ್ತಿಯಾಗಬಾರದು?

    ಬೆಂಗಳೂರು: ಜೀವನದಲ್ಲಿ ಸತತ ವೈಫಲ್ಯಗಳು ಎದುರಾದಾಗ ಅದರಿಂದ ಖಿನ್ನತೆಗೆ ಒಳಗಾಗುವವರಿಗೆ, ಅದರಿಂದ ಮೇಲೆದ್ದು ನಿಲ್ಲಲು ಶ್ರೀಲಂಕಾದ ಕ್ರಿಕೆಟಿಗ ಮಾರ್ವನ್ ಅಟಪಟ್ಟು ಮಾದರಿ ವ್ಯಕ್ತಿ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗಿರುವ ವರದಿಗಳ ನಡುವೆ, ಅಟಪಟ್ಟು ವೈಫಲ್ಯಗಳನ್ನು ಮೆಟ್ಟಿನಿಂತು, ಕ್ರಿಕೆಟ್ ದಾಖಲೆಗಳನ್ನು ನಿರ್ಮಿಸಿ ತಂಡದ ಸಾರಥ್ಯವನ್ನೂ ವಹಿಸಿದ ಸಾಧನೆಯ ಸ್ಫೂರ್ತಿದಾಯಕ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ. ಖ್ಯಾತ ಕ್ರಿಕೆಟ್ ವೀಕ್ಷಕವಿವರಣೆಕಾರ ಹರ್ಷಾ ಬೋಗ್ಲೆ ಅವರು ಆಗಾಗ ನೆನಪಿಸಿಕೊಳ್ಳುವ ಮಾಜಿ ನಾಯಕ ಅಟಪಟ್ಟು ಅವರ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದ ಯಶೋಗಾಥೆಯ ವಿವರ ಇಲ್ಲಿದೆ…

    ಸತತ ವೈಫಲ್ಯದಿಂದ ಕಂಗೆಟ್ಟಿದ್ದೀರಾ? ಲಂಕಾ ಕ್ರಿಕೆಟಿಗ ಅಟಪಟ್ಟು ಯಶೋಗಾಥೆ ನಿಮಗೇಕೆ ಸ್ಫೂರ್ತಿಯಾಗಬಾರದು?

    1990ರಲ್ಲಿ 20 ವರ್ಷ ವಯಸ್ಸಿನ ಪ್ರತಿಭಾವಂತ ಬ್ಯಾಟ್ಸ್‌ಮನ್ ಮಾರ್ವನ್ ಅಟಪಟ್ಟುಗೆ ಭಾರತ ವಿರುದ್ಧದ ಸರಣಿಯಲ್ಲಿ ಟೆಸ್ಟ್ ಪದಾರ್ಪಣೆಯ ಅವಕಾಶ ಕೂಡಿಬಂದಿತ್ತು. ಆದರೆ ಅದು ಸ್ಮರಣೀಯವಾಗಿರಲಿಲ್ಲ. ಮೊಹಾಲಿಯಲ್ಲಿ ನಡೆದ ಟೆಸ್ಟ್‌ನಲ್ಲಿ ಅಟಪಟ್ಟು ಎರಡೂ ಇನಿಂಗ್ಸ್‌ನಲ್ಲಿ ಶೂನ್ಯ ಸುತ್ತಿದ್ದರು. ಚೊಚ್ಚಲ ಟೆಸ್ಟ್‌ನ ಎರಡೂ ಇನಿಂಗ್ಸ್‌ನಲ್ಲಿ ಸೊನ್ನೆಗೆ ಔಟಾದ ಮೊದಲ ಶ್ರೀಲಂಕಾ ಆಟಗಾರನೆಂಬ ಅನಪೇಕ್ಷಿತ ದಾಖಲೆಯಿಂದಾಗಿ ಅವರಿಗೆ ತಂಡದಿಂದ ಗೇಟ್‌ಪಾಸ್ ಲಭಿಸಿತು. ಅದರೆ ಅಟಪಟ್ಟು ಕುಗ್ಗಲಿಲ್ಲ. ಮತ್ತಷ್ಟು ಅಭ್ಯಾಸ ನಡೆಸಿದರು. ದೇಶೀಯ ಕ್ರಿಕೆಟ್‌ನಲ್ಲಿ ಇನ್ನಷ್ಟು ರನ್‌ಪ್ರವಾಹ ಹರಿಸಿದರು.

    ಇದನ್ನೂ ಓದಿ: ನಾಯಕನಾಗಿ ಕೊಹ್ಲಿ ಏನು ಸಾಧಿಸಿಲ್ಲ ಎಂದ ಗೌತಮ್ ಗಂಭೀರ್

    21 ತಿಂಗಳ ಬಳಿಕ ಅಟಪಟ್ಟುಗೆ ಮತ್ತೊಮ್ಮೆ ರಾಷ್ಟ್ರೀಯ ತಂಡದಿಂದ ಕರೆಬಂದಿತು. 1992ರ6ಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮತ್ತೊಮ್ಮೆ ಲಂಕಾ ಪರ ಆಡುವ ಅವಕಾಶ ಪಡೆದರು. ಆದರೆ, ಈ ಬಾರಿಯೂ ಮೊದಲ ಇನಿಂಗ್ಸ್‌ನಲ್ಲಿ ಶೂನ್ಯ ಸುತ್ತಿದ ಅಟಪಟ್ಟು, 2ನೇ ಇನಿಂಗ್ಸ್‌ನಲ್ಲಿ ಕೇವಲ 1 ರನ್ ಗಳಿಸಿ ಮತ್ತೆ ವೈಫಲ್ಯ ಕಂಡರು. ನಿರೀಕ್ಷೆಯಂತೆಯೇ ಮತ್ತೊಮ್ಮೆ ತಂಡದಿಂದ ಹೊರಬಿದ್ದರು. ಈ ಸಲವೂ ಕುಗ್ಗದ ಅಟಪಟ್ಟು ದೇಶೀಯ ಕ್ರಿಕೆಟ್‌ಗೆ ಮರಳಿ ಮತ್ತಷ್ಟು ರನ್ ಗಳಿಸಿದರು.

    ಸತತ ವೈಫಲ್ಯದಿಂದ ಕಂಗೆಟ್ಟಿದ್ದೀರಾ? ಲಂಕಾ ಕ್ರಿಕೆಟಿಗ ಅಟಪಟ್ಟು ಯಶೋಗಾಥೆ ನಿಮಗೇಕೆ ಸ್ಫೂರ್ತಿಯಾಗಬಾರದು?

    7 ತಿಂಗಳ ಬಳಿಕ ಮತ್ತೊಮ್ಮೆ ಭಾರತ ಪ್ರವಾಸದ ಟೆಸ್ಟ್ ಸರಣಿಗೆ ಅಟಪಟ್ಟು ಲಂಕಾ ತಂಡಕ್ಕೆ ಆಯ್ಕೆಯಾದರು. ಈ ಬಾರಿಯಾದರೂ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮಿಂಚುತ್ತಾರೆ ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಅಹಮದಾಬಾದ್ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಮತ್ತೆ ಶೂನ್ಯಕ್ಕೆ ಔಟಾಗಿದ್ದರು! ನಿರೀಕ್ಷೆ ಹುಸಿ ಮಾಡಿದ್ದಕ್ಕೆ ಮತ್ತೊಮ್ಮೆ ತಂಡದಿಂದಲೂ ಹೊರಬಿದ್ದರು. ರಾಷ್ಟ್ರೀಯ ತಂಡದ ಪರ ಸತತ ವೈಫಲ್ಯ ಕಂಡ ಈ ಆಟಗಾರನಿಗೆ ಮತ್ತೊಮ್ಮೆ ಅವಕಾಶ ನೀಡಲೇಬಾರದು ಎಂದು ಆಯ್ಕೆಗಾರರು ಮನಸ್ಸಿನಲ್ಲೇ ನಿರ್ಧರಿಸಿದ್ದರು. ತಾಂತ್ರಿಕವಾಗಿ ಯಾವ ಲೋಪದೋಷಗಳಿಲ್ಲದೆ ಇದ್ದರೂ, ಅಂತಾರಾಷ್ಟ್ರೀಯ ಕ್ರಿಕೆಟ್‌ನ ಒತ್ತಡ ನಿಭಾಯಿಸುವ ಸಾಮರ್ಥ್ಯ ಅವರಲ್ಲಿಲ್ಲ ಎಂಬ ಟೀಕೆಗಳು ಎದುರಾಗಿದ್ದವು. ಆದರೆ ಯಾರು ಏನೇ ಹೇಳಿದರೂ, ಅಟಪಟ್ಟು ಮಾತ್ರ ತಮ್ಮ ಪ್ರಯತ್ನವನ್ನು ನಿಲ್ಲಿಸಲಿಲ್ಲ.

    ಇದನ್ನೂ ಓದಿ: ಸುಶಾಂತ್ ಸಾವಿಗೆ ವಿದೇಶಿ ಕ್ರಿಕೆಟಿಗರಿಂದಲೂ ಕಂಬನಿ

    ಮೂರು ವರ್ಷಗಳ ಬಳಿಕ ಮತ್ತೊಮ್ಮೆ ಅಟಪಟ್ಟುಗೆ ರಾಷ್ಟ್ರೀಯ ತಂಡದ ಬಾಗಿಲು ತೆರೆಯಿತು. ನ್ಯೂಜಿಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದ ಅಟಪಟ್ಟು ಈ ಬಾರಿ ಅಲ್ಪಮಟ್ಟಿಗೆ ರನ್ ಗಳಿಸಿದ್ದರು. ಆದರೆ ಮುಂದಿನ ಕೆಲ ಪಂದ್ಯಗಳಲ್ಲೂ ಅವರಿಂದ ದೊಡ್ಡ ಸ್ಕೋರ್ ಬಂದಿರಲಿಲ್ಲ. ಟೆಸ್ಟ್ ಜೀವನದ ಮೊದಲ 6 ಇನಿಂಗ್ಸ್‌ಗಳಲ್ಲಿ 5 ಬಾರಿ ಶೂನ್ಯ ಗಳಿಸಿದ್ದ ಅಟಪಟ್ಟು ನಂತರದ 11 ಇನಿಂಗ್ಸ್‌ಗಳಲ್ಲೂ 29 ರನ್ ಗಳಿಸಿದ್ದೇ ಗರಿಷ್ಠವೆನಿಸಿತ್ತು. ಕೊನೆಗೂ ತಾನಾಡಿದ 10ನೇ ಟೆಸ್ಟ್ ಪಂದ್ಯದಲ್ಲಿ ಅಟಪಟ್ಟು ಶತಕ ಸಿಡಿಸಿಬಿಟ್ಟರು. 1997ರಲ್ಲಿ ಭಾರತ ವಿರುದ್ಧ ಮೊಹಾಲಿಯಲ್ಲಿ ನಡೆದ ಆ ಟೆಸ್ಟ್‌ನಲ್ಲಿ ಅಟಪಟ್ಟು 108 ರನ್ ಬಾರಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ 7 ವರ್ಷಗಳ ಬಳಿಕ ಮೊದಲ ಶತಕ ದಾಖಲಿಸಿದ ಅಟಪಟ್ಟು, ಅನಂತರ ಹಿಂದಿರುಗಿ ನೋಡಲೇ ಇಲ್ಲ. ನಂತರ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ ಮತ್ತೆ 15 ಶತಕ ಸಿಡಿಸಿದರು. ಈ ಪೈಕಿ 6 ದ್ವಿಶತಕಗಳು. 2004ರಲ್ಲಿ ಜಿಂಬಾಬ್ವೆ ವಿರುದ್ಧ ಗಳಿಸಿದ 249 ರನ್ ಅವರ ಜೀವನಶ್ರೇಷ್ಠ ಗಳಿಕೆ. 2002ರಲ್ಲಿ ಅವರು ಶ್ರೀಲಂಕಾ ತಂಡದ ನಾಯಕರಾಗಿಯೂ ನೇಮಕಗೊಂಡು 18 ಟೆಸ್ಟ್‌ಗಳಲ್ಲಿ ತಂಡವನ್ನು ಮುನ್ನಡೆಸಿದರು.

    ಸತತ ವೈಫಲ್ಯದಿಂದ ಕಂಗೆಟ್ಟಿದ್ದೀರಾ? ಲಂಕಾ ಕ್ರಿಕೆಟಿಗ ಅಟಪಟ್ಟು ಯಶೋಗಾಥೆ ನಿಮಗೇಕೆ ಸ್ಫೂರ್ತಿಯಾಗಬಾರದು?

    ಸತತ ವೈಫಲ್ಯಗಳನ್ನು ಯಶಸ್ವಿಯಾಗಿ ನಿಭಾಯಿಸಿ, ಎಂದೂ ಛಲಬಿಡದೆ ಹೋರಾಡಿದ ಕಾರಣಕ್ಕಾಗಿ ಅಟಪಟ್ಟು ಇಂದಿಗೂ ಕ್ರಿಕೆಟಿಗರು, ಕ್ರೀಡಾಪಟುಗಳು ಮಾತ್ರವಲ್ಲ ಎಲ್ಲರಿಗೂ ಸ್ಫೂರ್ತಿಯ ಚಿಲುಮೆ ನಿಲ್ಲುತ್ತಾರೆ. ಕ್ರಿಕೆಟ್ ಜೀವನದ ಆರಂಭಿಕ ವೈಫಲ್ಯಗಳ ನಡುವೆ ಅಟಪಟ್ಟು ವಿದ್ಯಾಭ್ಯಾಸದ ಮೇಲಿನ ಆಸಕ್ತಿಯನ್ನೂ ಕಳೆದುಕೊಂಡಿರಲಿಲ್ಲ. ಅವರೀಗ ಶ್ರೀಲಂಕಾದಲ್ಲಿ ಬಿಡುವಿಲ್ಲದ ಚಾರ್ಟೆಡ್ ಅಕೌಂಟೆಂಟ್ ಆಗಿ ಹೊಸ ವೃತ್ತಿಜೀವನವನ್ನೂ ಕಂಡುಕೊಂಡಿದ್ದಾರೆ.

    ಇದನ್ನೂ ಓದಿ: ಸುಶಾಂತ್ ರಣಜಿ ಟ್ರೋಫಿಯಲ್ಲಿ ಆಡ್ತಾರೆ ಎಂದಿದ್ದರು ಧೋನಿ!

    49 ವರ್ಷದ ಅಟಪಟ್ಟು 17 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಲಂಕಾ ಪರ 90 ಟೆಸ್ಟ್, 268 ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 5,504 ಮತ್ತು 8,529 ರನ್ ಗಳಿಸಿ 2007ರಲ್ಲಿ ವಿದಾಯ ಘೋಷಿಸಿದ್ದರು. ಇನ್ನು ಯಾರಾದರೂ, ಸತತ ವೈಫಲ್ಯಗಳಿಂದ ಬೇಸತ್ತಿದ್ದೇನೆ, ಮಾನಸಿಕ ಖಿನ್ನತೆ ಎದುರಿಸುತ್ತಿದ್ದೇನೆ ಎನ್ನುವವರಿಗೆ ಮಾರ್ವನ್ ಅಟಪಟ್ಟು ಅವರ ಕಥೆ ಹೇಳಿ. ಖಂಡಿತವಾಗಿಯೂ ಅವರು ಕೂಡ ಮುಂದೊಂದು ದಿನ ಯಶಸ್ಸಿನ ಮೆಟ್ಟಿಲೇರಿ, ನಿಮ್ಮೆದುರು ನಾಯಕರಾಗಿ ನಿಲ್ಲುತ್ತಾರೆ.

    ಸುಶಾಂತ್ ಸಾವಿನ ಬಗ್ಗೆ ಧೋನಿ ಮೌನವೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts