More

    ಶ್ರೀ ಮಲ್ಲಿಕಾರ್ಜುನಸ್ವಾಮಿ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ

    ನಾಗಮಂಗಲ: ತಾಲೂಕಿನ ಹಾಲತಿ ಗ್ರಾಮದ ಶ್ರೀ ಮಲ್ಲಿಕಾರ್ಜುನಸ್ವಾಮಿ ಕ್ಷೇತ್ರ ಇತಿಹಾಸ ಪ್ರಸಿದ್ಧ ಐತಿಹಾಸಿಕ ಸ್ಥಳವಾಗಿದ್ದು, ಇನ್ನು ಮುಂದೆ ಇನ್ನಷ್ಟು ಅಭಿವೃದ್ಧಿ ಕಾಣುವ ಮೂಲಕ ನಾಡಿನ ಪ್ರೇಕ್ಷಣೀಯ ತಾಣವಾಗಲಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

    ಹಾಲತಿ ಗ್ರಾಮದ ಸ್ವರ್ಗಾಶ್ರಮದಲ್ಲಿರುವ ಆದಿಚುಂಚನಗಿರಿ ಶಾಖಾ ಮಠದಲ್ಲಿ ಬಹುಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಭ್ರಮರಾಂಬ ಸಹಿತ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಮತ್ತು ಸಮುದಾಯ ಭವನಗಳನ್ನು ಉದ್ಘಾಟಿಸಿ ಮಾತನಾಡಿದರು.

    ಹಾಲತಿ ಕ್ಷೇತ್ರ ಬಹಳ ವರ್ಷಗಳಿಂದಲೂ ಪುಣ್ಯಕ್ಷೇತ್ರವಾಗಿ ಮುಂದುವರಿದುಕೊಂಡು ಬಂದಿದೆ. ಶ್ರೀ ಕ್ಷೇತ್ರದ ಹಿಂದಿನ ಸ್ವಾಮೀಜಿ ಶ್ರೀ ಅಮರಾನಂದ ಪರಮಹಂಸರು ಕಳೆದ 58 ವರ್ಷಗಳಿಂದ ಭಗವದ್ಗೀತಾ ಸಪ್ತಾಹವನ್ನು ನಡೆಸಿಕೊಂಡು ಬಂದಿದ್ದಾರೆ. ಭಗವದ್ಗೀತೆಯನ್ನು ಪಠಿಸುತ್ತಲೇ ಶ್ರೀಕ್ಷೇತ್ರವನ್ನು ಸ್ವರ್ಗಾಶ್ರಮವನ್ನಾಗಿಸಿದವರು. 58 ವರ್ಷಗಳ ಕಾಲ ಗೀತಜ್ಞಾನವನ್ನು ನೀಡಿದ ಶ್ರೀಗಳಿಗೆ, ಕ್ಷೇತ್ರಕ್ಕೆ ಯಾವುದೇ ಆಧುನಿಕತೆಯ ಸ್ಪರ್ಶ ತಗುಲಬಾರದು ಎಂಬುದಾಗಿ ಅಪೇಕ್ಷೆಯಾಗಿತ್ತು. ಅದರಂತೆ ಅಭಿವೃದ್ಧಿಯಲ್ಲಿ ಕುಂಠಿತವಾಗಿತ್ತು.

    ಶ್ರೀ ಅಮರಾನಂದ ಪರಮಹಂಸ ಸ್ವಾಮೀಜಿ ಅವರು ಕಾಲವಾದ ನಂತರ ಕ್ಷೇತ್ರದ ಜವಬ್ದಾರಿಯನ್ನು ಆದಿಚುಂಚನಗಿರಿ ಮೈಸೂರು ಶಾಖಾಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಅವರು ವಹಿಸಿಕೊಂಡರು. ನಂತರ ಕ್ಷೇತ್ರದ ಅಭಿವೃದ್ಧಿಯನ್ನು ಹೇಗೆ ಮಾಡಬೇಕು ಎಂಬ ರೂಪುರೇಷೆಗಳೊಂದಿಗೆ ಅಭಿವೃದ್ಧಿಯ ಪರ್ವ ಪ್ರಾರಂಭ ಮಾಡಿದ್ದಾರೆ. ಪ್ರಾರಂಭಿಕವಾಗಿ ಶ್ರೀಕ್ಷೇತ್ರದಲ್ಲಿ ಸುಂದರವಾದ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನವನ್ನು ಲೋಕಾರ್ಪಣೆ ಮಾಡಲಾಗಿದೆ. ಭಕ್ತಾದಿಗಳ ಅನುಕೂಲಕ್ಕಾಗಿ ಬಿಜಿಎಸ್ ಸಮುದಾಯ ಭವನ ಮತ್ತು ಅನ್ನಪೂರ್ಣೇಶ್ವರಿ ಭವನ ಉದ್ಘಾಟನೆಯಾಗಿದೆ. ಇಷ್ಟೇ ಅಲ್ಲದೆ ಶ್ರೀಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಅವರ ಜತಗೆ ನಾವೂ ಕೈಜೋಡಿಸಿ ಕ್ಷೇತ್ರವನ್ನು ನಿಜವಾದ ಸ್ವರ್ಗಾಶ್ರವನ್ನಾಗಿಸಲಾಗುವುದು ಎಂದರು.

    ದ್ವೈತ-ಅದ್ವೈತ ಮತ್ತು ಧಾರ್ಮಿಕ ನೆಲೆಗಟ್ಟಿನಲ್ಲಿ ಶ್ರೀಕ್ಷೇತ್ರ ಪ್ರಗತಿ ಕಾಣಲಿದೆ. ಬೆಟ್ಟದ ಮೇಲಿರುವ ಶ್ರೀ ಮಲ್ಲಿಕಾರ್ಜುನಸ್ವಾಮಿಯನ್ನು ನೋಡಬೇಕಾದರೆ ಬೆಟ್ಟ ಹತ್ತಬೇಕು, ಗುಹೆ ಒಳಗೆ ಪ್ರವೇಶ ಮಾಡಬೇಕು, ಮೊದಲು ನಿಲ್ಲುತ್ತ, ಮೈ ಬಗ್ಗಿಸಿ, ಕುಳಿತು, ತೆವಳುತ್ತಾ ಕೊನೆಯಲ್ಲಿ ದೀರ್ಘದಂಡ ನಮಸ್ಕಾರದ ಭಂಗಿಯಲ್ಲಿ ದೇವರನ್ನು ಕಾಣಬೇಕು. ಇದು ಕೆಲವರಿಗಷ್ಟೇ ಸಾಧ್ಯವಾಗಲಿದ್ದು, ಇನ್ನು ಕೆಲವರಿಗೆ ದೇವರ ದರ್ಶನ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡು ಶ್ರೀ ಮಲ್ಲಿಕಾರ್ಜುನ ಸ್ವಾಮಿಯನ್ನು ಕ್ಷೇತ್ರದ ತಪ್ಪಲಲ್ಲಿ ಪ್ರತಿಷ್ಠಾಪಿಸಿ ಎಲ್ಲರಿಗೂ ದರ್ಶನ ಸಿಗುವಂತೆ ಮಾಡಲಾಗಿದೆ. ಸ್ವಾಮಿಯನ್ನು ಧಾರ್ಮಿಕ, ಆಗಮ ಶಾಸ್ತ್ರ ಮತ್ತು ಧರ್ಮಶಾಸ್ತ್ರದ ಪ್ರಕಾರದೊಂದಿಗೆ ಸರ್ವ ರೀತಿಯಿಂದಲೂ ಪ್ರತಿಷ್ಠಾಪಿಸಲಾಗಿದೆ. ಇದರಿಂದ ಆಬಾಲವೃದ್ಧರಾಗಿ ಎಲ್ಲರೂ ಸಲಭವಾಗಿ ದೇವರ ದರ್ಶನ ಮಾಡಲು ಅನುಕೂಲವಾಗಿದೆ. ಆಧ್ಯಾತ್ಮಿಕ, ಧಾರ್ಮಿಕ ಮತ್ತು ಅದ್ವೈತ ನೆಲೆಗಟ್ಟಿನಲ್ಲಿ ಶ್ರೀಕ್ಷೇತ್ರವನ್ನು ಮುನ್ನಡೆಸಲಾಗುವುದು ಎಂದು ಹೇಳಿದರು.

    ಮಾಜಿ ಶಾಸಕ ಸುರೇಶ್‌ಗೌಡ ಮಾತನಾಡಿ, ನಾನು ಶಾಸಕನಾಗಿದ್ದಾಗ ಬೆಟ್ಟದ ತಪ್ಪಲಿನಿಂದ ಬೆಟ್ಟದ ಮೇಲ್ಭಾಗಕ್ಕೆ ರಸ್ತೆ ಅಭಿವೃದ್ಧಿಗಾಗಿ 2 ಕೋಟಿ ರೂ. ಅನುದಾನ ನೀಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಶ್ರೀಕ್ಷೇತ್ರ ಆದಿಚುಂಚನಗಿರಿಯಷ್ಟೇ ಶ್ರೀಕ್ಷೇತ್ರ ಹಾಲತಿ ಸ್ವರ್ಗಾಶ್ರಮ ಬೆಳೆಯಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

    ಹೋಮ, ವಿಶೇಷ ಪೂಜಾ ಕೈಂಕರ್ಯಗಳು: ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಉದ್ಘಾಟನೆಯ ಹಿನ್ನೆಲೆಯಲ್ಲಿ ಹಾಲತಿ ಸ್ವರ್ಗಾಶ್ರಮದ ಆವರಣದಲ್ಲಿ ಕಳೆದ ಮಾ.5ರಿಂದ ಮಾ.7ರವರೆಗೆ ಹಲವಾರು ಧಾರ್ಮಿಕ ಕೈಂಕರ್ಯಗಳು ನಡೆದವು. ಶ್ರೀ ಆದಿಚುಂಚನಗಿರಿ ಶಾಖಾ ಮಠದ ಯತಿವರ್ಯರ ಉಪಸ್ಥಿತಿಯಲ್ಲಿ ಹೋಮ ಹವನಾದಿ ಸೇರಿದಂತೆ ಧಾರ್ಮಿಕ ಪೂಜಾ ವಿಧಿ ವಿಧಾನಗಳು ಜರುಗಿದವು. ಗುರುವಾರ ಬೆಳಗ್ಗೆ ವಿವಿಧ ಬಗೆಯ ಧಾರ್ಮಿಕ ಪೂಜಾ ವಿಧಿ-ವಿಧಾನಗಳು ನಡೆದ ನಂತರ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ನೂತನವಾಗಿ ನಿರ್ಮಿಸಿರುವ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನವನ್ನು ಲೋಕಾರ್ಪಣೆ ಮಾಡಿದರು. ನಂತರ ಧಾರ್ಮಿಕ ಸಭೆ ನಡೆಯಿತು. ಆಗಮಿಸಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

    ಆದಿಚುಂಚನಗಿರಿ ಶಾಖಾ ಮಠಗಳ ಶ್ರೀ ಪುರುಷೋತ್ತಮಾನಂನಾಥ ಸ್ವಾಮೀಜಿ, ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಬೆಂಗಳೂರು ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶ್ರೀ ಶಂಭೂನಾಥ ಸ್ವಾಮೀಜಿ, ಮುಧೋಳ ತಾಲೂಕಿನ ಶಿರೋಳ ರಾಮಾರೂಢ ಮಠದ ಶ್ರೀ ಶಂಕರಾರೂಢ ಸ್ವಾಮೀಜಿ, ಶ್ರೀ ಧರ್ಮಪಾಲನಾನಾಥ ಸ್ವಾಮೀಜಿ, ಶ್ರೀ ಗುಣನಾಥ ಸ್ವಾಮೀಜಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆ ಬಾಲು, ಜಿಪಂ. ಮಾಜಿ ಸದಸ್ಯ ಡಿ.ಟಿ.ಶ್ರೀನಿವಾಸ್ ಸೇರಿದಂತೆ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಯತಿವರ್ಯರು, ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts