More

    ‘ಧರ್ಮದ ಚೌಕಟ್ಟನ್ನು ಎಂದಿಗೂ ಮೀರಬೇಡಿ…’: ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ವರ್ಧಂತಿ ಸಂದೇಶ

    ಮೈಸೂರಿನ ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಸ್ಥಾಪಕರಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 78ನೇ ವರ್ಧಂತಿ ಮೇ 26ರಂದು ನಡೆಯಲಿದೆ. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ತಮ್ಮ ಜೀವಿತಾವಧಿಯಲ್ಲಿ ಜಾತ್ಯತೀತ ಮತ್ತು ಸಾಮಾಜಿಕ ತತ್ವಾಧಾರಿತದಲ್ಲಿ ತಮ್ಮ ಆಧ್ಯಾತ್ಮಿಕ ಚಿಂತನ ದೃಷ್ಟಿ ಹರಿಸುತ್ತಾ ಬಂದವರು. ಜಗತ್ತಿನಲ್ಲಿರುವ ಅವರ ಎಲ್ಲ 87 ಆಶ್ರಮಗಳು ಇದೇ ಜಾತ್ಯತೀತ ತತ್ವಾಧಾರಿತದಲ್ಲೆ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುತ್ತಾ ಬಂದಿವೆ. ಕರೊನಾ ಹಿನ್ನೆಲೆಯಲ್ಲಿ ತಮ್ಮ 78ನೇ ವರ್ಧಂತಿಯನ್ನು ಸ್ವಾಮೀಜಿಯವರು ಆಶ್ರಮದಲ್ಲಿಯೇ ಸರಳವಾಗಿ ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಜನತೆಗೆ ವರ್ಧಂತಿ ಸಂದೇಶ ನೀಡಿದ್ದಾರೆ.

    ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ವರ್ಧಂತಿ ಸಂದೇಶ ಹೀಗಿದೆ:

    ಇಂದು ಮಾನವ ಜಗತ್ತು ಕಠೋರ ಸಂಕಷ್ಟವನ್ನು ಎದುರಿಸುತ್ತಿದೆ. ಕೊರೊನಾ ಎಂಬ ಕಣ್ಣಿಗೆ ಕಾಣದ ಸೂಕ್ಷ್ಮಾಣು ಮನುಷ್ಯನ ನಿರ್ನಾಮಕ್ಕೆ ಪಣ ತೊಟ್ಟಂತೆ ದಾಳಿ ಇಡುತ್ತಿದೆ. ಸಣ್ಣ ಕ್ರಿಮಿ ಎಂದು ನಿರ್ಲಕ್ಷಿಸಿದ ಮಾನವನ ಎಣಿಕೆಗೆ ಪೆಟ್ಟು ನೀಡಿ, ಪಂಥಾಹ್ವಾನದ ಪಟ್ಟು ನೀಡುತ್ತಿದೆ. ಬ್ರಹ್ಮಾಂಡದ ಜೀವರಾಶಿಗಳ ಪೈಕಿ ತಾನೇ ಸರ್ವ ಶ್ರೇಷ್ಠ ಎಂದು ಮೆರೆಯುತ್ತಿದ್ದ ಮಾನವರಿಗೆ ಕರೊನಾ ಸಣ್ಣ ಕ್ರಿಮಿ ಆಘಾತಕಾರಿಯಾಗಿ ಪರಿಣಮಿಸಿದೆ. ಮಾನವರು ನಿಸರ್ಗಕ್ಕೆ ಮಾಡಿದ ತಪ್ಪುಗಳೇ ಬೂಮರಾಂಗ್‍ನಂತೆ ತಿರುಗಿ ಬೀಳುತ್ತಿದೆ ಅನಿಸುತ್ತಿದೆ. ಮಾನವ ಮಾಡಿದ ತಪ್ಪುಗಳಿಗೆ ಸೃಷ್ಟಿ ನೀಡುವ ಪಾಠ ಇದಾಗಿರಬಹುದೆಂದು ಹೇಳಲಾಗುತ್ತದೆ. ಇನ್ನಾದರೂ ಮನುಷ್ಯ ತನ್ನ ಬುದ್ದಿಗೆ ಮೆತ್ತಿರುವ ಅಹಂ ಎಂಬ ಪಾಪದ ಕಣವನ್ನು ಒಗೆದು, ಮಾನವಜನ್ಮ ಸಾರ್ಥಕಪಡಿಸಿಕೊಳ್ಳಬೇಕಿದೆ. ಮಾನವ ಜಾತಿಯಲ್ಲಿ ಹುಟ್ಟಿದ ಮಾತ್ರಕ್ಕೆ ಎಲ್ಲರೂ ಮನುಷ್ಯರೆನಿಸಿಕೊಳ್ಳಲು ಸಾಧ್ಯವಿಲ್ಲ. ಧರ್ಮ, ಕರ್ಮ ಹಾಗೂ ಅಧ್ಯಾತ್ಮಗಳನ್ನು ಸರಿಯಾಗಿ ಅನುಸರಿಸಿದಾಗಷ್ಟೇ ಪರಿಪೂರ್ಣ ಮನುಷ್ಯರೆನಿಸಿಕೊಳ್ಳಲು ಸಾಧ್ಯ.

    ನನ್ನ ದೃಷ್ಟಿಯಲ್ಲಿ ಧರ್ಮವಿಲ್ಲದೆ ಮನುಷ್ಯನಿಲ್ಲ. ಧರ್ಮ ಎಂಬುದು ದೈವ ನಿಯಮ. ನೈತಿಕವಾಗಿ ಮನುಷ್ಯ ಬಾಳಿ-ಬದುಕಲು ಬೇಕಾದ ಚೌಕಟ್ಟನ್ನು ಹಾಕಿಕೊಡುವುದೇ ಧರ್ಮ. ಧರ್ಮದ ಚೌಕಟ್ಟಿನಲ್ಲಿ ಬದುಕಿದ ಮನುಷ್ಯರು ಚೆನ್ನಾಗಿ ಬಾಳಿ ಬದುಕಿದ್ದಾರೆ. ಧರ್ಮದ ಚೌಕಟ್ಟು ಮೀರಿ ಬಾಳಲೆತ್ನಿಸಿದ ಮನುಷ್ಯರು ನಾನಾ ಯಾತನೆಗಳನ್ನು ಅನುಭವಿಸಿದ್ದಾರೆ. ಇಂತಹ ಅನುಭವಗಳನ್ನು ಕಾಲದಿಂದ ಕಾಲಕ್ಕೆ ಮನುಷ್ಯ ಅನುಭವಿಸಿಕೊಂಡು ಬಂದಿದ್ದರಿಂದಲೇ ಧರ್ಮದ ಮಹತ್ವ ಮತ್ತು ಅಸ್ತಿತ್ವ ಉಳಿದುಕೊಂಡು ಬಂದಿರುವುದು. ಧರ್ಮವು ಯಾವತ್ತೂ ಹಾದಿ ತಪ್ಪಿಲ್ಲ. ಧರ್ಮವನ್ನು ಮನುಷ್ಯ ಹಾದಿ ತಪ್ಪಿಸಲು ಯತ್ನಿಸಿದ್ದಾನೆ. ಅವನ ಯತ್ನ ಯಾವತ್ತೂ ಫಲಿಸಿಲ್ಲ. ಧರ್ಮದ ತಂಟೆಗೆ ಹೋದವರೆಲ್ಲಾ ದೇವರ ಅವಕೃಪೆಗೆ ಒಳಗಾಗಿ ತಕ್ಕ ಶಿಕ್ಷೆ ಅನುಭವಿಸುತ್ತಿದ್ದಾರೆ.

    ಹುಟ್ಟಿದ ಪ್ರತಿಯೊಂದು ಜೀವಿಯೂ ತನ್ನೊಂದಿಗೆ ಮೃತ್ಯುವನ್ನೂ ತಂದಿರುತ್ತದೆ. ಇಂದು ನಾವು ಹುಟ್ಟಿದ್ದು ಎಷ್ಟು ನಿಜವೋ- ನಾಳೆ ನಮ್ಮ ಆಯುಷ್ಯ ಕಳೆದು ಮೃತ್ಯುವಶವಾಗುವುದೂ ಅಷ್ಟೇ ನಿಜ. ಶ್ರೀಕೃಷ್ಣನು “ಪರಿವರ್ತನೆ ಈ ಜಗದ ನಿಯಮ” ಎನ್ನುತ್ತಾನೆ. ಇಹದಲ್ಲೇ ಮಾನವರು ಪರಿಪೂರ್ಣತೆ ಸಾಧಿಸಬಹುದೆಂಬುದನ್ನು ಹೇಳಿಕೊಟ್ಟ, ಜೀವನದ ಕೌಶಲ ತಿಳಿಸಿಕೊಟ್ಟ, ಮನುಷ್ಯತನವನ್ನು ಸಾಕಾರಗೊಳಿಸಿಕೊಟ್ಟ ಭಗವಂತನೆಂದು ಶ್ರೀಕೃಷ್ಣನನ್ನು ಆರಾಧಿಸುತ್ತೇವೆ. ಧರ್ಮ-ಕರ್ಮ-ಆತ್ಮ ಸಾಕ್ಷಾತ್ಕಾರದ ಮೂಲಕ ಮನುಷ್ಯ ತನ್ನ ಒಂದು ಜೀವಿತಾವಧಿಯಲ್ಲೇ ಮೋಕ್ಷ ಸಾಧಿಸಬಹುದೆಂಬುದನ್ನು ಶ್ರೀಕೃಷ್ಣ ಸರಳ ವಿಧಾನದಲ್ಲಿ ತಿಳಿಸಿಕೊಟ್ಟಿದ್ದಾನೆ.

    ಇಂದು ನಮ್ಮ ಭಾರತೀಯ ಸಮಾಜದಲ್ಲಿ ಸನಾತನ ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳು ಬಹುತೇಕ ಉಳಿದಿರುವುದು ಬಡ-ಮಧ್ಯಮ ವರ್ಗದ ಕುಟುಂಬಗಳಲ್ಲಿ. ಹಣದ ಮದವಿಲ್ಲದೇ, ಉತ್ತಮ ಬದುಕಿನ ಕಡೆಗೆ ಹೆಜ್ಜೆ ಇಡುತ್ತಿರುವುದೇ ಹೆಚ್ಚಾಗಿ ಇಂತಹ ಬಡ-ಮಧ್ಯಮ ವರ್ಗದ ಮಕ್ಕಳು. ಇಂದು ದೇಶದ ಭವಿಷ್ಯವನ್ನು ಕಾಪಾಡಿ ಪ್ರಗತಿ ಪಥದತ್ತ ಕೊಂಡೊಯ್ಯುತ್ತಿರುವುದು ಹೆಚ್ಚಾಗಿ ಇದೇ ವರ್ಗದ ಮಕ್ಕಳು.

    ಎಷ್ಟೋ ಶ್ರೀಮಂತ ವರ್ಗದ ಅಪ್ಪ-ಅಮ್ಮಂದಿರು ಹಾದಿ ತಪ್ಪಿದ ತಮ್ಮ ಮಕ್ಕಳನ್ನು ಸರಿದಾರಿಗೆ ತರಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ. ನಾವು ನೈತಿಕವಾಗಿ ಬದುಕಿದರೆ, ನಮ್ಮ ಮಕ್ಕಳೂ ನೈತಿಕವಾಗಿ ಬಾಳುವುದನ್ನು ರೂಢಿಸಿಕೊಳ್ಳುತ್ತಾರೆ. ನಾವು ಕೆಟ್ಟ ರೀತಿಯಲ್ಲಿ ಬದುಕಿದರೆ, ನಮ್ಮ ಮಕ್ಕಳೂ ಅದನ್ನೇ ಅನುಸರಿಸಿ, ಮತ್ತಷ್ಟು ಕೆಟ್ಟದಾಗಿ ಬದುಕುವುದನ್ನು ಕಲಿಯುತ್ತಾರೆ. ನಮ್ಮ ಮಕ್ಕಳಿಗೆ ಪ್ರಾಮಾಣಿಕವಾಗಿ ದುಡಿದು ತಿನ್ನುವುದನ್ನು ಕಲಿಸಬೇಕು. ಹಾಗೆ ನಮ್ಮ ಮಕ್ಕಳು ಪ್ರಾಮಾಣಿಕವಾಗಿ ಬದುಕಬೇಕಾದರೆ, ನಾವು ಪ್ರಾಮಾಣಿಕವಾಗಿ ದುಡಿದು ತಂದ ಹಣದಲ್ಲಿ ಮಕ್ಕಳನ್ನು ಸಾಕಿ ಬೆಳೆಸಬೇಕು. ಭ್ರಷ್ಟ ಮಾರ್ಗದಲ್ಲಿ ಸಂಪಾದಿಸಿದ ಹಣದಲ್ಲಿ ಮಕ್ಕಳನ್ನು ಬೆಳೆಸಿದರೆ, ಆ ಮಕ್ಕಳು ಒಳ್ಳೆಯ ಮಾರ್ಗದಲ್ಲಿ ಬದುಕುವುದನ್ನು ರೂಢಿಸಿಕೊಳ್ಳಲಾರರು. ಆದ್ದರಿಂದ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ದುಡಿದ ಹಣದಲ್ಲೇ ಮಕ್ಕಳನ್ನು ಸಾಕಿದರೆ ಮಾತ್ರ, ಅವರಿಗೆ ಶ್ರೇಯಸ್ಸು ಎಂದು ನನ್ನ ಭಾವನೆ.

    ಕೆಲವರು ತಾವು ಪ್ರಾಮಾಣಿಕವಾಗಿ ದುಡಿದು ತಿನ್ನುತ್ತಿದ್ದರೂ, ಮನಸ್ಸಿಗೆ ಶಾಂತಿ ಸಿಗುತ್ತಿಲ್ಲ, ಮನೆಯಲ್ಲಿ ನೆಮ್ಮದಿ ಇಲ್ಲ ಎಂದು ಪರಿತಪಿಸುತ್ತಾರೆ. ಆದರೆ ತಾವು ಮಾಡುವ ಕೆಲಸದ ಆತುರದಲ್ಲಿ, ಅವರಿಗರಿವಿಲ್ಲದೇ ಪರರಿಗೆ ತೊಂದರೆ ಕೊಟ್ಟಿರುತ್ತಾರೆ. ಅಂತಹ ಪ್ರಮಾದಗಳೇನಾದರೂ ಆಗಿದೆಯೋ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇದಕ್ಕಾಗಿ ಪ್ರತಿಯೊಬ್ಬರೂ ಆತ್ಮ ಶೋಧನೆ ಮಾಡಿಕೊಳ್ಳಬೇಕು. ಪ್ರತಿದಿನ ಅಲ್ಲದಿದ್ದರೂ ಕನಿಷ್ಠ ವಾರಕ್ಕೊಮ್ಮೆಯಾದರೂ ಧ್ಯಾನದಲ್ಲಿ ಕುಳಿತು, ತಾವು ಈವರೆಗೆ ಮಾಡಿದ ಮತ್ತು ಮುಂದೆ ಮಾಡಬೇಕಾದ ಕೆಲಸಗಳ ಬಗ್ಗೆ ಮೌಲ್ಯ ಮಾಪನ ಮಾಡಿಕೊಳ್ಳಬೇಕು. ಇದರಿಂದ ಈಗಾಗಲೇ ಆಗಿರುವ ತಪ್ಪುಗಳನ್ನು ಗ್ರಹಿಸಿ, ತಿದ್ದಿಕೊಂಡು, ಮುಂದೆ ಮಾಡಬಹುದಾದ ಕೆಲಸಗಳಲ್ಲಿ ಯಾರಿಗೂ ಕೆಡುಕಾಗದಂತೆ ಮುಂಜಾಗ್ರತೆ ವಹಿಸಲು ಸಹಾಯಕವಾಗುತ್ತದೆ.
    ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅಸ್ಪೃಶ್ಯತೆ ಎನ್ನುವುದು ಒಂದು ದೊಡ್ಡ ಕಪ್ಪು ಚುಕ್ಕೆ. ಮನುಷ್ಯ-ಮನುಷ್ಯರನ್ನು ಕಂಡು ಅಸಹ್ಯಿಸಿಕೊಳ್ಳುವುದೆಂದರೆ ನಿಜವಾಗಿಯೂ ನಾಚಿಕೆಯ ವಿಷಯ.

    ನಾನು ವಿದೇಶಗಳಿಗೆ ಹೋಗಿ ನೂರಾರು ಪ್ರವಚನಗಳನ್ನುಕೊಟ್ಟಿದ್ದೇನೆ. ಲಕ್ಷಾಂತರ ವಿದೇಶೀ ಭಕ್ತರು ಮೆಚ್ಚಿಕೊಂಡೂ ಇದ್ದಾರೆ. ಅವರು ಕೇಳುವ ಅದೆಷ್ಟೋ ಕ್ಲಿಷ್ಟಕರವಾದ ಪ್ರಶ್ನೆಗಳಿಗೆ ಬಹಳ ಸರಳವಾಗಿ ಉತ್ತರಿಸಿ, ಅವರೆಲ್ಲಾ ಸಂತೋಷಗೊಂಡಿದ್ದಾರೆ. ಆದರೆ ಒಂದು ಪ್ರಶ್ನೆ ಕೇಳಿದಾಗ ನಾನು ಉತ್ತರಕ್ಕಾಗಿ ಚಡಪಡಿಸುವಂತಾಗುತ್ತದೆ. “ಸಾವಿರಾರು ವರ್ಷಗಳ ಭವ್ಯ ಇತಿಹಾಸವಿರುವ ದೇಶ ನಿಮ್ಮದೆನ್ನುತ್ತೀರಿ. ಆದರೆ ಸಾವಿರಾರು ವರ್ಷಗಳಿಂದ ಜಾತಿ ಪದ್ಧತಿ ಇದೆ. ಅದರಲ್ಲೂ ದಲಿತರನ್ನು ಅಸ್ಪೃಶ್ಯರಂತೆ ನೋಡುತ್ತೀರಿ?” ಎಂದಾಗ ನನ್ನ ಹೃದಯ ಒತ್ತರಿಸಿ ಬರುತ್ತೆ. ಭಗವಂತನ ದೃಷ್ಟಿಯಲ್ಲಿ ಅವನು ಸೃಷ್ಟಿಸಿದ ಯಾವ ಜೀವಿಯೂ ಮೇಲೂ ಅಲ್ಲ, ಕೀಳೂ ಅಲ್ಲ. ಯಾವುದೋ ಒಂದು ಕೆಟ್ಟ ಕಾಲದಲ್ಲಿ ಹುಟ್ಟಿಕೊಂಡ ಅಸ್ಪೃಶ್ಯತೆ ಎಂಬ ಪಿಡುಗು ಹಾಗೇ ಮುಂದುವರಿದು ಭಾರತೀಯ ಸಮಾಜವನ್ನು ಕಾಡುತ್ತಿದೆ. ಇದು ಹೋಗಬೇಕು. ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಗೌರವಿಸುವುದನ್ನು ರೂಢಿಸಿಕೊಳ್ಳಬೇಕು. ಅವನು ಮಾಡುವ ಕೆಲಸ ಅಥವಾ ಜಾತಿಯಿಂದ ಅಳೆದು-ತೂಗುವುದನ್ನು ಮಾಡಬಾರದು. ಪ್ರತಿಯೊಬ್ಬರಿಗೂ ಆತ್ಮಗೌರವ ಎಂಬುದು ಇರುತ್ತದೆ. ಪ್ರತಿಯೊಬ್ಬರ ಆತ್ಮದಲ್ಲೂ ಪರಮಾತ್ಮನಿರುತ್ತಾನೆ ಎಂದು ಹೇಳಿದ ಮೇಲೆ ನಾವು ಎಲ್ಲರನ್ನೂ ಗೌರವಾದಾರಗಳಿಂದ ಕಾಣಬೇಕು. ಒಬ್ಬ ವ್ಯಕ್ತಿಗೆ ನಾವು ಗೌರವ ಸೂಚಿಸಿದಾಗ, ಅದು ಆ ವ್ಯಕ್ತಿಯಲ್ಲಿರುವ ಪರಮಾತ್ಮನನ್ನು ಗೌರವಿಸಿದಂತಾಗುತ್ತದೆ. ಒಬ್ಬ ವ್ಯಕ್ತಿಗೆ ನಾವು ಅಗೌರವ ಸೂಚಿಸಿದರೆ, ಅದು ಆ ವ್ಯಕ್ತಿಯಲ್ಲಿರುವ ಪರಮಾತ್ಮನನ್ನು ಅಗೌರವಿಸಿದಂತಾಗುತ್ತದೆ ಎಂಬುದನ್ನು ಮರೆಯಬಾರದು.

    ನಮ್ಮ ಮನಸನ್ನು ಪ್ರಸ್ತುತ ಕಂಗೆಡಿಸುತ್ತಿರುವ ಎರಡು ವಿಷಯಗಳೆಂದರೆ: ರೈತರ ಆತ್ಮಹತ್ಯೆ ಮತ್ತು ಹೆತ್ತವರು ತಾವೂ ಆತ್ಮಹತ್ಯೆ ಮಾಡಿಕೊಳ್ಳುವುದಲ್ಲದೇ, ತಮ್ಮ ಹೆತ್ತ ಮಕ್ಕಳನ್ನೂ ಕೊಂದು ಸಾವಿನ ಹಾದಿ ತುಳಿಯುತ್ತಿರುವುದು. ನಾಡಿಗೇ ಅನ್ನ ನೀಡುವ ರೈತ, ಜನರೆಲ್ಲರ ಹಸಿವು ನೀಗಿಸುವ ರೈತ, ತಾನೇ ಬದುಕಲಾರದ ಸ್ಥಿತಿಗೆ ಬಂದುಬಿಟ್ಟಿದ್ದಾನೆ ಎಂಬುದು ನಿಜಕ್ಕೂ ಆತಂಕದ ಸಂಗತಿ. ಸಾಲವಿರಲಿ, ಬೆಳೆ ನಷ್ಟವಿರಲಿ, ಕೌಟುಂಬಿಕ ಸಮಸ್ಯೆಗಳೇ ಇರಲಿ, ಅದಕ್ಕೆಲ್ಲಾ ಅಂಜಿ ಅನ್ನದಾತ ಆತ್ಮಹತ್ಯೆಯ ಹಾದಿ ತುಳಿಯುವುದು ಸರಿಯಲ್ಲ. ಸರ್ಕಾರ, ಇಡೀ ಸಮಾಜ ನಿಮ್ಮೊಂದಿಗಿರುವಾಗ ಸಾಲ-ಸೋಲುಗಳಿಗೆ ಹೆದರಿ ಆತ್ಮಹತ್ಯೆಯ ಹಾದಿಯನ್ನು ತುಳಿಯಬಾರದು. ಇನ್ನು ಹೆತ್ತ ಮಕ್ಕಳನ್ನು ಕೊಂದು ತಾವೂ ಸಾವಿನ ಹಾದಿ ತುಳಿಯುವ ಪಿಡುಗು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಈ ಪಿಡುಗು ಸಂಪೂರ್ಣ ನಿವಾರಣೆಯಾಗಲೇ ಬೇಕು.

    ಶಿಶುಹತ್ಯೆ ಮಹಾ ಪಾಪ ಎಂದು ಎಲ್ಲಾ ಧರ್ಮಗಳೂ ಹೇಳುತ್ತವೆ. ಶಿಶುಹತ್ಯಾ ದೋಷದಿಂದ ಮುಕ್ತನಾಗುವುದು ಅಷ್ಟು ಸುಲಭವಲ್ಲ. ಶಿಶುಹತ್ಯೆ ಮಾಡಿದ ಪಾಪ ಏಳೇಳು ಜನ್ಮದಲ್ಲೂ ಕಾಡುತ್ತದೆ. ಸಣ್ಣಸಣ್ಣ ಹುಳು-ಹುಪ್ಪಟ್ಟೆಯಂತಹ ಜೀವಿಗಳೂ ಸಹ ತಮ್ಮ ಪ್ರಾಣವನ್ನು ಪಣಕ್ಕಿಟ್ಟಾದರೂ ತಮ್ಮ ಮರಿಗಳನ್ನು ಕಾಪಾಡುತ್ತವೆ. ಪುಣ್ಯಕೋಟಿ ಹಸು ತಾನು ಹೆಬ್ಬುಲಿಯ ಬಾಯಿಗೆ ಬೀಳುವ ಮುನ್ನ ತನ್ನ ಕರುಳ ಕುಡಿಯನ್ನು ನೆನೆದು, ಅದಕ್ಕೆ ಕಡೆಯ ಬಾರಿ ಹಾಲನ್ನು ನೀಡಿ, ಆಶ್ರಯದಾತರನ್ನು ಗೊತ್ತು ಮಾಡಿರುತ್ತದೆ. ಅಂಥದ್ದರಲ್ಲಿ ಬುದ್ಧಿ ಇರುವ ಮನುಷ್ಯರಲ್ಲಿ ಕರುಳ ಕುಡಿಗಳನ್ನು ಕೊಲ್ಲುವ ಪಿಡುಗು ಅಕ್ಷಮ್ಯ. ಆ ಭಗವಂತ ಖಂಡಿತ ಕ್ಷಮಿಸಲಾರ.

    ನಾನು ಅದೆಷ್ಟೋ ಮಹಾಮಾತೆಯರನ್ನ ಕಂಡಿದ್ದೇನೆ. ಕುಡುಕ-ಕೆಡುಕ ಗಂಡನಿದ್ದರೂ, ಕಡು ಬಡತನ ಕಿತ್ತು ತಿನ್ನುತ್ತಿದ್ದರೂ ತನ್ನ ಮಕ್ಕಳಿಗಾಗಿ ಬದುಕುತ್ತೇನೆ ಎಂಬ ಛಲದಿಂದ ದುಡಿದು ಮಕ್ಕಳನ್ನು ಸಾಕಿ ಸಲಹಿದ ಮಹಾತ್ಯಾಗಿ ಮಹಿಳೆಯರನ್ನು ನೋಡಿದ್ದೇನೆ. ಅಂತಹ ಮಹಾಮಾತೆಯರ ತ್ಯಾಗ ಮನೋಬಲದಿಂದಲೇ ಈ ದೇಶ ಸಾವಿರಾರು ವರ್ಷಗಳಿಂದ ಉಳಿದು ನಿಂತಿರುವುದು. ಈ ಕಾರಣದಿಂದಲೇ ಹೆಣ್ಣನ್ನು ನಮ್ಮ ಭಾರತೀಯ ಧರ್ಮ-ಸಂಸ್ಕೃತಿಯಲ್ಲಿ ದೇವರೆಂದು ಪೂಜಿಸುತೇ ತ್ತೇವೆ, ಆರಾಧಿಸುತ್ತೇವೆ. ಸ್ತ್ರೀ ದೇವತೆ ಶಕ್ತಿರೂಪಿಣಿ ಎಂದು ಗುರುತಿಸಿದ್ದೇವೆ. ತಾಯಿಯಾಗಿ-ಸೋದರಿಯಾಗಿ-ಮಡದಿಯಾಗಿ ಮನುಕುಲವನ್ನು ಪೊರೆಯುವ ಹೆಣ್ಣು ಕುಲದಲ್ಲಿ ಆತ್ಮಸ್ಥೈರ್ಯಕುಂದಬಾರದು. ಆಕೆಯ ಧೀಶಕ್ತಿ ಸದಾಕಾಲ ಈ ಜಗತ್ತನ್ನು ಕಾಪಾಡಬೇಕು.

    ಈ ಸಂದರ್ಭದಲ್ಲಿ ನನ್ನ ತಾಯಿ ಜಯಲಕ್ಷ್ಮಿ ಅಮ್ಮನವರ ನೆನಪಾಗುತ್ತದೆ. ಆ ಮಾತೆಯ ಮಡಿಲಲ್ಲಿ ಬೆಳೆದ ನಾನು ನಿಜಕ್ಕೂ ಧನ್ಯ. ನಾನಿಂದು ಧರ್ಮಕಾರ್ಯದಲ್ಲಿ ನಡೆಯುತ್ತಿರುವುದಕ್ಕೆ ನನ್ನ ತಾಯಿಯ ಕೊಡುಗೆ ಅಪಾರವಾಗಿದೆ. ಆಕೆಯ ಆಶೀರ್ವಾದದಿಂದಲೇ ಆಧ್ಯಾತ್ಮಿಕ ಸಾಧನೆಯ ಆಯಾಮಗಳಲ್ಲಿ ಮುನ್ನಡೆದಿದ್ದೇನೆ. ನನ್ನ ಪೊರೆದ ಆ ತಾಯಿಯ ವಂದಿಸುತ್ತಾ, ಮಾನವರೆಲ್ಲಾ ತಾವು ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳುವಂತಾಗಲಿ. ಹಾಗೇ, ಈಗ ಎದುರಾಗಿರುವ ಕೊರೊನಾದಂಥ ಪಿಡುಗನ್ನು ಎದುರಿಸುವಂಥ ಶಕ್ತಿ ಮಾನವರಿಗೆಲ್ಲಾ ಅನುಗ್ರಹಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

    – ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts