More

    ಆಷಾಢ ಶುಕ್ರವಾರದಂದು ಹೂವಿನ ಅಲಂಕಾರದಲ್ಲಿ ಕಂಗೊಳಿಸಿದ ಶ್ರೀ ಅನ್ನಪೂರ್ಣೇಶ್ವರಿ

    ಕಳಸ: ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ ಆಷಾಢದ ಶುಕ್ರವಾರ ಹೂವಿನ ಅಲಂಕಾರದೊಂದಿಗೆ ಭಕ್ತರನ್ನು ಆಕರ್ಷಿಸಿತು. ಬಹುತೇಕ ದೇವಸ್ಥಾನಗಳಲ್ಲಿ ಆಷಾಢ ಮಾಸ ಬಂತೆಂದರೆ ಭಕ್ತರ ಸಂಖ್ಯೆ ತೀರ ಕಡಿಮೆಯಾಗುತ್ತದೆ. ಹರಕೆ ತೀರಿಸುವುದೂ ಕಡಿಮೆ ಇರುತ್ತದೆ. ಆದರೆ ಹೊರನಾಡು ಅನ್ನಪೂರ್ಣೇಶ್ವರಿಯ ಸನ್ನಿಧಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ.

    ಆಷಾಢ ಮಾಸದ ಶುಕ್ರವಾರ ಇಲ್ಲಿ ಭಕ್ತರ ದಂಡೇ ನೆರೆದಿತ್ತು. ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು. ಚಂಡಿಕಾ ಹೋಮ, ಸತ್ಯನಾರಾಯಣ ಪೂಜೆ, ಪಾರಾಯಣ, ಕುಂಕುಮಾರ್ಚನೆ, ಅನ್ನದಾನ, ಅನ್ನಪ್ರಾಷನ, ನಾಮಕರಣ ಹೀಗೆ ನಾನಾ ಸೇವೆಗಳು ನಡೆದವು.
    ಇದರ ಜತೆಗೆ ವಿಶೇಷವಾದದ್ದು ಹೂವಿನ ಅಲಂಕಾರ. ಲಕ್ಷಗಟ್ಟಲೆ ರೂಪಾಯಿ ಮೊತ್ತದ ಹೂವಿನ ಸೇವೆ ಮಾಡುವ ಭಕ್ತರು ಆಗಮಿಸಿದ್ದರು. ಹೂವಿನ ವ್ಯಾಪಾರಸ್ಥರು, ಹೂವಿನ ಅಲಂಕಾರ ಮಾಡುವವರು ಬಂದು ದೇವಸ್ಥಾನ ಪೂರ್ತಿ ಹೂವಿನ ಅಲಂಕಾರ ಮಾಡಿ ಸೇವೆ ಸಲ್ಲಿಸಿದರು.
    ಆಷಾಢ ಮಾಸದ ಶುಕ್ರವಾರ ಬೆಂಗಳೂರಿನ ದೇವನಹಳ್ಳಿ, ತುಮಕೂರು ಹೂವಿನ ವ್ಯಾಪಾರಸ್ಥರ ತಂಡ ಆಗಮಿಸಿದ್ದವು. ಪ್ರತಿ ಶುಕ್ರವಾರ ಒಂದೊಂದು ತಂಡ ಬಂದು ಅಲಂಕಾರ ಮಾಡುತ್ತವೆ. ಒಂದೊಂದು ತಂಡದಲ್ಲಿ 40ರಿಂದ 60 ಮಂದಿ ಎರಡು ದಿನಗಳ ಕಾಲ ವಿಶೇಷ ವಿನ್ಯಾಸಗಳೊಂದಿಗೆ ಹೂವಿನ ಅಲಂಕಾರ ಮಾಡುತ್ತಾರೆ. 5-6 ಲಕ್ಷ ರೂ. ಮೌಲ್ಯದ ವಿವಿಧ ಹೂಗಳನ್ನು ತಂದು ಅಲಂಕಾರ ಮಾಡುತ್ತಾರೆ. ದೇವಸ್ಥಾನಕ್ಕೆ ಬರುವಾಗ ಕುಟುಂಬಸ್ಥರನ್ನೂ ಕರೆದುಕೊಂಡು ಬಂದಿದ್ದರು.
    ವರ್ಷವಿಡೀ ಮದುವೆ ಇನ್ನಿತರ ಸಮಾರಂಭಗಳಿಗೆ ಹೂವಿನ ಅಲಂಕಾರ ಮಾಡುವ ಇವರು ಆಷಾಢ ಮಾಸದಲ್ಲಿ ಹೆಚ್ಚಿನ ಯಾವುದೇ ಸಮಾರಂಭಗಳು ಇಲ್ಲದ ಕಾರಣ ಅನ್ನಪೂರ್ಣೇಶ್ವರಿಗೆ ಹೂವಿನ ಅಲಂಕಾರದ ಸೇವೆ ಮಾಡಲು ಬರುತ್ತೇವೆ ಎನ್ನುತ್ತಾರೆ.
    ಸೇವಂತಿಗೆ, ಕಾಕಡ, ಮಲ್ಲಿಗೆ, ಚೆಂಡು ಹೂವು, ಆರ್ಕಿಡ್, ಕಾರ್ನೇಷನ್ ಸೇರಿದಂತೆ 20ಕ್ಕೂ ಹೆಚ್ಚು ವಿಧದ ಹೂಗಳಿಂದ ಅಲಂಕಾರ ಮಾಡಿದ್ದರು. ತೆಂಗಿನ ಕಾಯಿ, ಜೋಳ, ದ್ರಾಕ್ಷಿ, ಮೂಸೂಂಬಿ ಸೇರಿದಂತೆ ವಿವಿಧ ರೀತಿಯ ಹಣ್ಣುಗಳನ್ನು ಸೇರಿಸಿ ಅಲಂಕಾರ ಮಾಡಿ ಅದಕ್ಕೆ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸಿ ಮೆರುಗು ನೀಡಿದ್ದರು. ಈ ಅಲಂಕಾರ ವೀಕ್ಷಿಸಲು ಸ್ಥಳೀಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts