More

    ಸಂಸ್ಕೃತ ಭಾಷೆಯ ಮೂಲಕ ಭಾವೈಕ್ಯತೆ, ದೇಶಭಕ್ತಿ ಸಾಧ್ಯ: ಡಾ.ಎಚ್.ವಿ.ನಾಗರಾಜರಾವ್

    ಸಂಸ್ಕೃತ ಭಾಷೆಯ ಮೂಲಕ ಭಾವೈಕ್ಯತೆ, ದೇಶಭಕ್ತಿ ಹಾಗೂ ನಮ್ಮ ಸಂಸ್ಕೃತಿ ಬಗೆಗಿನ ಅಭಿಮಾನ ಬೆಳೆಸಿಕೊಳ್ಳಲು ಸಾಧ್ಯ ಎಂದು ವಿದ್ವಾಂಸ ಡಾ.ಎಚ್.ವಿ.ನಾಗರಾಜರಾವ್ ಹೇಳಿದರು.


    ಮೈಸೂರು ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗ ಹಾಗೂ ಸಂಸ್ಕೃತ ಭಾರತೀ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಉಚಿತ ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

    ಸಂಸ್ಕೃತ ಭಾಷೆ, ಭಾರತದ ಎಲ್ಲ ಪ್ರಜೆಗಳ ಭಾಷೆಯಾಗಿದೆ. ಎಲ್ಲ ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಗೆ ತಾಯಿ ಬೇರಾದ ಸಂಸ್ಕೃತ ಭಾಷೆಯನ್ನು ಪೋಷಿಸುವುದು ಅಗತ್ಯ ಎಂದರು.

    ಸಂಸ್ಕೃತ ಭಾಷೆಯನ್ನು ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳ ವಿರೋಧಿಯಾಗಿ ನೋಡಬಾರದು. ಬದಲಾಗಿ ಪೂರಕ ಭಾಷೆಯಾಗಿ ನೋಡುವುದನ್ನು ಕಲಿಯಬೇಕು. ಎಲ್ಲ ಭಾಷೆಗಳ ಅಭಿವೃದ್ಧಿಗೆ ಸಂಸ್ಕೃತದ ಕೊಡುಗೆ ಅಪಾರ. ಆದ್ದರಿಂದ ಎಲ್ಲ ಭಾಷೆಗಳ ಅಧ್ಯಯದ ಜತೆಗೆ ಸಂಸ್ಕೃತ ಭಾಷೆಯನ್ನು ಅಧ್ಯಯನ ಮಾಡಬೇಕು. ಆಗ ಪ್ರಾದೇಶಿಕ ಭಾಷೆಗಳು ಶುದ್ಧತೆ ಪಡೆಯುವ ಜತೆಗೆ ಇಡೀ ದೇಶದ ಏಕತೆಯೂ ಸುಲಭವಾಗುತ್ತದೆ. ಸಂಕುಚಿತ ಮಾನೋಭಾವ ದೂರಮಾಡಿ ದೇಶಿಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಯಾವುದೇ ಬೇಧ ಭಾವ ಇಲ್ಲದೆ ಭಾರತೀಯರು ಅಭಿಮಾನದಿಂದ ಸಂಸ್ಕೃತ ಅಧ್ಯನ ಮಾಡಬೇಕು ಎಂದರು.

    ಸಂಸ್ಕೃತ ಭಾಷೆಯಲ್ಲಿರುವ ಯೋಗ, ಆಯುರ್ವೇದ, ವಿಜ್ಞಾನ ಗ್ರಂಥಗಳು ಸಂಸ್ಕೃತದ ಮಹಿಮೆ ಸಾರುತ್ತವೆ. ಇದು ಮುಂದಿನ ಪೀಳಿಗೆಗೆ ಸಹಕಾರಿಯಾಗುತ್ತದೆ. ಸಂಸ್ಕೃತ ಭಾಷೆ ಕಂಪ್ಯೂಟರ್‌ಗೂ ಅಳವಡಿಸಲು ಯೋಗ್ಯ ಭಾಷೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಆದ್ದರಿಂದ ಇಂದಿನ ಪೀಳಿಗೆ ಸಂಸ್ಕೃತವನ್ನು ನೂತನ ಉದ್ಯೋಗ ಅವಕಾಶದ ಹಿನ್ನೆಲೆಯಲ್ಲಿ ಅಭ್ಯಾಸ ಮಾಡುವ ಅವಶ್ಯಕತೆ ಇದೆ ಎಂದರು.


    ಸಂಸ್ಕೃತ ವಿಭಾಗದ ಮುಖ್ಯಸ್ಥೆ ಪ್ರೊ.ವಿಜಯಕುಮಾರಿ ಕರಿಕಲ್ ಮಾತನಾಡಿ, ಕನ್ನಡ ಮತ್ತು ಸಂಸ್ಕೃತ ಎರಡೂ ಪೂರಕ ಭಾಷೆಗಳಾಗಿದ್ದು, ಸಂಸ್ಕೃತವನ್ನು ಹೆಚ್ಚಿನ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.

    ನಮ್ಮ ವಿಭಾಗದಲ್ಲಿ ನಿತ್ಯ ನಾನಾ ಕಾರ್ಯ ಚಟುವಟಿಕೆಗಳು ನಡೆಯುತ್ತಿದ್ದು, ಸಮಾಜದ ಎಲ್ಲ ಜನರಿಗೂ ಮುಕ್ತ ಅವಕಾಶ ಇದೆ. ವಯಸ್ಸಿನ ನಿರ್ಬಂಧ ಇಲ್ಲದೆ ಎಲ್ಲರೂ ಸಂಸ್ಕೃತ ಅಭ್ಯಾಸ ಮಾಡಬಹುದು ಎಂದರು.


    ಇದೇ ವೇಳೆ ಶಿಬಿರದ ಸಂಚಾಲಕಿ ಡಾ.ರುಕ್ಮಾಂಗದ ಅವರನ್ನು ಅಭಿನಂದಿಸಲಾಯಿತು. ಸಂಸ್ಕೃತ ತಜ್ಞ ಎಚ್.ಎಸ್.ಸುದರ್ಶನ, ಪ್ರಾಧ್ಯಾಪಕರಾದ ಡಾ.ಆರ್.ಸುರೇಶ, ಡಾ.ರಾಚೋಟಿ ದೇವರು, ಡಾ.ಸುರೇಶ್ ಹೆಗಡೆ, ಡಾ.ಎಸ್.ಎಂ.ಪುಷ್ಪಲತಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts