More

    ಸಂಸ್ಕೃತ ಸಂಸ್ಕಾರ ಕಲಿಸುವ ಭಾಷೆ : ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯ


    ಮೈಸೂರು : ಸಂಸ್ಕೃತ ಭಾಷೆ ಬರೀ ಭಾಷೆ ಮಾತ್ರವಲ್ಲ. ಜನರಿಗೆ ಸಂಸ್ಕಾರವನ್ನೂ ಕಲಿಸುವ ಭಾಷೆಯಾಗಿದೆ ಎಂದು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

    ಕಲ್ಕುಂದದ ಸುತ್ತೂರು ಶ್ರೀ ಕ್ಷೇತ್ರದ ಸಿದ್ಧನಂಜದೇಶಿಕೇಂದ್ರ ಮಂಗಳ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಮ್ಮೇಳನ ಮತ್ತು ಮಹಾ ಅಧಿವೇಶನ ಉದ್ಘಾಟಿಸಿ ಆಶೀರ್ವಚನ ನೀಡಿದರು.


    ಸಂಸ್ಕೃತ ಭಾಷೆ ಭಾರತದ ಅತ್ಯುನ್ಯತ ಭಾಷೆಯಾಗಿದೆ. ಸಂಸ್ಕೃತ ಶಿಕ್ಷಕರು ಮಕ್ಕಳಿಗೆ ಸಂಸ್ಕೃತ ಭಾಷೆ ಕಲಿಸುವಲ್ಲಿ ಹೆಚ್ಚು ಮಹತ್ವ ನೀಡಿದರೆ ಭಾಷೆ ಬೆಳೆಯುತ್ತದೆ ಎಂದರು.


    ರಾಜ್ಯ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಅಹಲ್ಯಾ ಮಾತನಾಡಿ, ಸಂಸ್ಕೃತ ಪಾಠಶಾಲೆಗಳಿಗೆ ಶೀಘ್ರದಲ್ಲೇ ಪಠ್ಯಪುಸ್ತಕ ವಿತರಿಸುತ್ತೇವೆ. ಸಂಸ್ಕೃತ ಪಾಠಶಾಲೆ ಇರುವ ಪ್ರತಿ ಜಿಲ್ಲೆಯಲ್ಲೂ ಪಥ ಸಂಚಲನ ನಡೆಸಿದರೆ ಸಂಸ್ಕೃತ ಪಾಠಶಾಲೆ ಇದೆ ಎಂಬ ಅರಿವು ಜನರಿಗೆ ತಿಳಿಯುತ್ತದೆ ಎಂದರು.
    ಆ.2ರಿಂದ ಸಂಸ್ಕೃತ ಪಾಠಶಾಲೆಗಳಲ್ಲೂ ಸೇತುಬಂಧ ಕಾರ್ಯಕ್ರಮ ಪ್ರಾರಂಭಿಸುತ್ತೇವೆ. ದೇಶದಲ್ಲಿ ಸಂಸ್ಕೃತ ಭಾಷೆ ಉಳಿದಿದ್ದರೆ ಅದಕ್ಕೆ ಸುತ್ತೂರಿನಂತಹ ಹಲವಾರು ಮಠಗಳು ಕಾರಣ. ಸಂಸ್ಕೃತ ಬೆಳೆಸಲು ಸ್ವಾಮೀಜಿ ಅವರ ಕೃಪಾಶೀರ್ವಾದ ಬಳಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.


    ರಾಜ್ಯ ಸಂಸ್ಕೃತ ಶಿಕ್ಷಕರ ಸಂಘದ ಅಧ್ಯಕ್ಷ ಗಂಗಾಧರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಶಿಕ್ಷಕರು, ರಾಜ್ಯದ ಎಲ್ಲ ಜಿಲ್ಲೆಗಳ ಸಂಸ್ಕೃತ ಶಿಕ್ಷಕರ ಸಂಘದ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಕಾರ್ಯದರ್ಶಿಗಳು, 2022-23ನೇ ಸಾಲಿನಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯರ್ಥಿಗಳನ್ನು ಸನ್ಮಾನಿಸಲಾಯಿತು.
    ಸಂಸ್ಕೃತ ಸಂರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರಯ್ಯ, ಕರ್ನಾಟಕ ಸಂಸ್ಕೃತ ನಿರ್ದೇಶನಾಲಯದ ನಿರ್ದೇಶಕ ಪ್ರೊ. ಪಾಲಯ್ಯ, ಕರ್ನಾಟಕ ಸಂಸ್ಕೃತ ನಿರ್ದೇಶನಾಲಯದ ಹಣಕಾಸು ಅಧಿಕಾರಿ ಕುಮಾರ್, ಆದಿಚುಂಚನಗಿರಿಯ ನಿವೃತ್ತ ಪ್ರಾಚಾರ್ಯ ನಂಜುಂಡಯ್ಯ, ಸುತ್ತೂರಿನ ಜೆಎಸ್‌ಎಸ್ ವಿದ್ಯಾಸಂಸ್ಥೆ ಸಂಯೋಜಕ ತ್ರಿಪುರಾಂತಕ, ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಪರಶಿವಮೂರ್ತಿ ಮತ್ತಿತರರು ಭಾಗವಹಿಸಿದ್ದರು.

    ಚಿತ್ರ: ನಂಜನಗೂಡು ತಾಲೂಕು ಸುತ್ತೂರು ಶ್ರೀ ಕ್ಷೇತ್ರದ ಸಿದ್ದನಂಜ ದೇಶಿಕೇಂದ್ರ ಮಂಗಳಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಮ್ಮೇಳನ ಮತ್ತು ವಾರ್ಷಿಕ ಮಹಾಧಿವೇಶನ ಸಮಾರಂಭವನ್ನು ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಚಂದ್ರಶೇಖರಯ್ಯ, ಪ್ರೊ.ಪಾಲಯ್ಯ, ಕುಮಾರ್, ನಂಜುಂಡಯ್ಯ, ಪರಶಿವಮೂರ್ತಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts