More

    ಸನಾತನಕ್ಕೆ ಸಾವಿರಾರು ವರ್ಷಗಳ ಇತಿಹಾಸ: ಸೂರ್ಯ ಹೆಬ್ಬಾರ್

    ಶಿವಮೊಗ್ಗ: ಸಂಸ್ಕೃತದ ಡಿಕ್ಷನರಿ ಶ್ಲೋಕದ ರೂಪದಲ್ಲಿದೆ. ಅದರ ಹೆಸರು ಅಮರಕೋಶ. ಸನಾತನ ಎಂಬ ಪದಕ್ಕೆ ಈ ಡಿಕ್ಷನರಿಯಲ್ಲಿ ಅಳಿವಿಲ್ಲದೇ ಇರುವುದು ಎಂಬರ್ಥವಿದೆ. ಸನಾತನ ಧರ್ಮ ಅನೇಕ ಸಾವಿರ ವರ್ಷಗಳಿಂದ ಬಂದಿರುವಂಥದ್ದು ಎಂದು ಅಷ್ಟಾವಧಾನಿ, ವಾಗ್ಮಿ ಸೂರ್ಯ ಹೆಬ್ಬಾರ್ ಹೇಳಿದರು.

    ಸೋಮವಾರ ಏರ್ಪಡಿಸಿದ್ದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ 50ನೇ ಸುವರ್ಣ ಸಂಭ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನಾತನ ಧರ್ಮ ಅರಿವು ಮತ್ತು ಅನುಸಂಧಾನ ಕುರಿತು ಉಪನ್ಯಾಸ ನೀಡಿದ ಅವರು, ಸನಾತನ ಧರ್ಮ ಸಾವಿರಾರು ವರ್ಷಗಳಿಂದ ಜನಪದ ಶೈಲಿಯಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ವರ್ಗಾವಣೆಯಾಗಿದೆ ಎಂದರು.
    ಡೈನೋಸಾರ್ ಬಗ್ಗೆ ಯಾರೋ ಹೇಳಿದ್ದನ್ನು ಕೇಳಿ ನಾವು ಅರಿತುಕೊಳ್ಳಬೇಕು. ಆದರೆ ಸನಾತನ ಧರ್ಮದ ಬಗ್ಗೆ ಬರೆದಿಟ್ಟಿದ್ದನ್ನು ಬಹಳ ವರ್ಷಗಳಿಂದ ಕಾಪಾಡಿಕೊಂಡು ಬರಲಾಗಿದೆ. ಆದರೆ ಆಕ್ರಮಣ, ಹವಾಮಾನದ ವೈಪರೀತ್ಯದ ಕಾರಣದಿಂದ ಬಹಳಷ್ಟು ತಾಳೆಗರಿಗಳು ನಾಶವಾಗಿವೆ ಎಂದು ತಿಳಿಸಿದರು.
    ಸನಾತನ ಧರ್ಮದ ಬಗ್ಗೆ ಗ್ರಂಥ ರೂಪ ನೀಡುವಾಗ ಕೆಲವರು ತಮಗನ್ನಿಸಿದ್ದನ್ನೂ ಒಂದಿಷ್ಟು ಸೇರಿಸಿದರು. ಕೆಲವೊಂದಿಷ್ಟು ದೈವೀತತ್ವವನ್ನು ನಾವು ಪಾಲಿಸಬೇಕು ಎಂಬುದು ಸನಾತನ ಧರ್ಮದ ಮೂಲ ಆಶಯ. ನಮ್ಮಲ್ಲಿರುವ ಶಕ್ತಿಯನ್ನು ನಾವು ಯಾವ ಕಾರಣಕ್ಕೂ ಅಪವ್ಯಯ ಮಾಡಬಾರದು ಎಂದು ಹೇಳಿದರು.
    ಸುಭಾಷಿತ ಸಾಹಿತ್ಯದಲ್ಲೂ ಸನಾತನದ ಬಗ್ಗೆ ಅನೇಕ ಚಿಂತನೆಗಳಿವೆ. ಅನೇಕ ಉದಾಹರಣೆಗಳ ಮೂಲಕ ಸನಾನತವನ್ನು ವಿವರಿಸಲಾಗಿದೆ. ಸಿಂಹ ಬಲಶಾಲಿಯಾಗಿದ್ದರೂ ಜಿಂಕೆ, ಮೊಲಗಳು ತಾವಾಗಿಯೇ ಬಂದು ಸಿಂಹದ ಬಾಯಿಗೆ ಬೀಳುವುದಿಲ್ಲ. ಗಿಡ, ಮರ ಬಳ್ಳಿಗಳಲ್ಲೂ ಔಷಧವಿದೆ. ಪ್ರತಿಯೊಬ್ಬರಲ್ಲೂ ಯೋಗ್ಯತೆಯಿದೆ ಎಂಬುದು ಸನಾತನ ಧರ್ಮದ ಸಾರ. ಸತ್ಯವನ್ನೇ ಹೇಳಬೇಕು. ಅಪ್ರಿಯವಾದ ಸತ್ಯ ಹೇಳಬಾರದು. ಯಾರಿಗೋ ಸಂತೋಷವಾಗುತ್ತದೆ ಎಂದು ಸುಳ್ಳು ಹೇಳಬಾರದು ಎನ್ನುತ್ತದೆ ಸನಾತನ ಧರ್ಮ ಎಂದು ತಿಳಿಸಿದರು.
    ಆದಿಚುಂಚನಗಿರಿ ಸಂಸ್ಥಾನದ ಮಠಾಧೀಶ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶಿವಮೊಗ್ಗ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ದಸರೀಘಟ್ಟ ಶಾಖಾ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೈದ್ಯರಾದ ಡಾ. ವೀಣಾ ಎಸ್.ಭಟ್, ಡಾ.ಪ್ರೀತಂ, ಡಾ.ನಿಖಿಲ್, ಡಾ.ಹರೀಶ್, ಸಂಘಟಕ ಡಿ.ಎಚ್.ಸುಬ್ಬಣ್ಣ, ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ರಘುರಾಂ ದೇವಾಡಿಗ, ಕೃಷಿಕ ರಾಮಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts