More

    ರಾಜಕಾಲುವೆ ಕಾಮಗಾರಿ ತ್ವರಿತಗೊಳಿಸಿ: ಬಿಬಿಎಂಪಿ ಮುಖ್ಯ ಆಯುಕ್ತರ ಸೂಚನೆ

    ಬೆಂಗಳೂರು: ಮಹದೇವಪುರ ವಲಯ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿರುವ ಕಡೆ ಕೈಗೆತ್ತಿಕೊಳ್ಳಬೇಕಿರುವ ಕಾಮಗಾರಿಯನ್ನು ತ್ವರಿತಗೊಳಿಸಬೇಕು. ಜತೆಗೆ ತಹಸೀಲ್ದಾರರಿಂದ ಒತ್ತುವರಿ ತೆರವಿಗಾಗಿ ಆದೇಶ ನೀಡಿರುವೆಡೆ ತಕ್ಷಣವೇ ಒತ್ತುವರಿ ತೆರವು ಮಾಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದರು.

    ಮಹದೇವಪುರ ವಲಯ ವ್ಯಾಪ್ತಿಗೆ ಸಂಬಂಧಿಸಿದಂತೆ ಗುರುವಾರ ಆಯೋಜಿಸಿದ್ದ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ರಾಜಕಾಲುವೆ ನೀರು ಸರಾಗವಾಗಿ ಹರಿದು ಹೋಗಲು ಸದಾ ಸ್ವಚ್ಚತೆ ಮಾಡುತ್ತಿರಬೇಕು. ಈ ಮಾಹಿತಿಯನ್ನು ಸಾರ್ವಜನಿಕರ ಗಮನಕ್ಕೆ ತರಬೇಕು. ಈ ಸಂಬಂಧ ಸ್ವಚ್ಚತಾ ವಿವರವನ್ನು ಪಾಲಿಕೆಯ ವೆಬ್‌ಸೈಟ್‌ನಲ್ಲಿ ಹಾಕಬೇಕು ಎಂದು ತಾಕೀತು ಮಾಡಿದರು.

    ಬೆಳ್ಳಂದೂರು ಬಳಿ ಪ್ರಸ್ಟೀಜ್ ವತಿಯಿಂದ ರಾಜಕಾಲುವೆ ನಿರ್ಮಾಣ ಮಾಡಲಾಗುತ್ತಿದ್ದು, ಕಂದಾಯ ಇಲಾಖೆಯ ಸಮೀಕ್ಷೆ ಅನ್ವಯ ರಾಜಕಾಲುವೆಯನ್ನು ನಿರ್ಮಾಣ ಮಾಡುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಕಂದಾಯ ಸರ್ವೇ ಪ್ರಕಾರ ರಾಜಕಾಲುವೆಯ ಅಗಲ ಕಡಿಮೆ ಮಾಡಿದ್ದಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

    ರಸ್ತೆಗುಂಡಿ ಮುಚ್ಚಲು ಆದ್ಯತೆ ನೀಡಿ:

    ಆದ್ಯತೆಯ ಮೇರೆಗೆ ರಸ್ತೆಗುಂಡಿಗಳನ್ನು ಮುಚ್ಚಬೇಕು. ಮೊದಲಿಗೆ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಿ ನಂತರ ವಾರ್ಡ್ ರಸ್ತೆಗಳಲ್ಲೂ ರಸ್ತೆಗುಂಡಿಗಳನ್ನು ಮುಚ್ಚಲು ಅಧಿಕಾರಿಗಳು ಮುಂದಾಗಬೇಕು. ಬೆಸ್ಕಾಂ ಹಾಗೂ ಜಲಮಂಡಳಿ ಸೇರಿದಂತೆ ಇತರ ಇಲಾಖೆಗಳು ಪಾಲಿಕೆಯ ಅನುಮತಿಯಿಲ್ಲದೆ ರಸ್ತೆ ಅಗೆತ ಮಾಡುವಂತಿಲ್ಲ. ಅನುಮತಿಯಿಲ್ಲದೆ ರಸ್ತೆ ಅಗೆತ ಮಾಡಿದರೆ ಸಂಬಂಧಪಟ್ಟ ಇಲಾಖೆಗೆ ದಂಡ ವಿಧಿಸಬೇಕು ಎಂದು ಕಟ್ಟಪ್ಪಣೆ ಮಾಡಿದರು.

    ವಲಯ ವ್ಯಾಪ್ತಿಯಲ್ಲಿ ಬರುವ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡಿರುವುದನ್ನು ವಲಯ ಜಂಟಿ ಆಯುಕ್ತರು ಹಾಗೂ ಘನತ್ಯಾಜ್ಯ ವಿಭಾಗದ ಅಧೀಕ್ಷಕ ಅಭಿಯಂತರರ ನೇತೃತ್ವದಲ್ಲಿ ಪಾದಚಾರಿ ಮಾರ್ಗ ಒತ್ತುವರಿಗಳ ತೆರವು ಕಾರ್ಯಾಚರಣೆಯನ್ನು ಪ್ರಾರಂಭಿಸುವಂತೆ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ಆಸ್ತಿತೆರಿಗೆ ಸಂಗ್ರಹದತ್ತ ನಿಗಾ ಇಡಿ:

    ಪಾಲಿಕೆಗೆ ಹೆಚ್ಚು ಮೊತ್ತ ಬಾಕಿ ಉಳಿಸಿಕೊಂಡಿರುವ ಟಾಪ್ ಡಿಫಾಲ್ಟರ್‌ಗಳ ಪಟ್ಟಿ ಅನ್ವಯ ಕಾನೂನು ಕ್ರಮ ಕೈಗೊಂಡು ತೆರಿಗೆ ವಸೂಲಿ ಮಾಡಬೇಕು. ಆಸ್ತಿತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ನೀಡಿ ತೆರಿಗೆ ಸಂಗ್ರಹಿಸಲು ಸೂಕ್ತ ಕ್ರಮ ವಹಿಸಬೇಕು. ಆಸ್ತಿತೆರಿಗೆ ವ್ಯಾಪ್ತಿಗೆ ಬಾರದ ಸ್ವತ್ತುಗಳನ್ನು ಪತ್ತೆ ಮಾಡಿ ತೆರಿಗೆ ವ್ಯಾಪ್ತಿಗೆ ತರಬೇಕು. ತೆರಿಗೆ ಸಂಗ್ರಹಿಸಲು ಎಲ್ಲ ಹಂತದ ಅಧಿಕಾರಿಗಳು ಸಕ್ರಿಯವಾಗಬೇಕು ಎಂದು ಮುಖ್ಯ ಆಯುಕ್ತರು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts