More

    ಭಾಷಣ ಸಾಕು, ರೇಷನ್ ಬೇಕು – ರಾಯಚೂರಲ್ಲಿ ವಿವಿಧ ಸಂಘಟನೆಗಳಿಂದ ವಿನೂತನ ಯತ್ನ

    ರಾಯಚೂರು: ಕರೊನಾ ಸೋಂಕು ಕುರಿತು ಭಾಷಣ ನಿಲ್ಲಿಸಿ, ಸಂಕಷ್ಟದಲ್ಲಿರುವವರಿಗೆ ರೇಷನ್, ಪರಿಹಾರ ಕೊಡಿ ಎಂದು ಒತ್ತಾಯಿಸಿ ನಗರದ ವಿವಿಧ ವಾರ್ಡ್‌ಗಳಲ್ಲಿ ಕೆಪಿಆರ್‌ಎಸ್, ಸಿಐಟಿಯು, ಸಿಪಿಐಎಂ ಮತ್ತು ಕೃಷಿ ಕೂಲಿಕಾರ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

    ಮನೆಗಳ ಮುಂದೆ ವಿನೂತನ ಪ್ರತಿಭಟನೆ ನಡೆಸುವ ವೇಳೆ ಸಾಮಾಜಿಕ ಅಂತರ ಕಾಯ್ದಕೊಳ್ಳಲಾಗಿತ್ತು. ಲಾಕ್‌ಡೌನ್‌ನಿಂದಾಗಿ ಕಾರ್ಮಿಕರು, ರೈತರು, ಕೃಷಿಕೂಲಿಕಾರರು ಮತ್ತಿತರ ದುಡಿಯುವ ಜನರ ಬದುಕು ಬೀದಿಗೆ ಬಿದ್ದಿದೆ. ಆದರೆ, ಆಳುವ ಸರ್ಕಾರಗಳು ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಳ್ಳತ್ತಿಲ್ಲ ಎಂದು ಟೀಕಿಸಿದರು. ಕೇಂದ್ರ ಸರ್ಕಾರ ಘೋಷಿಸಿದ 1.70 ಲಕ್ಷ ಕೋಟಿ ರೂ. ಪರಿಹಾರ ಪ್ಯಾಕೇಜ್ ಯಾವುದಕ್ಕೂ ಸಾಲದು. ಲೆಕ್ಕಾಚಾರ ಮಾಡಿ ಪರಿಹಾರ ಖಾತ್ರಿಗೂಳಿಸಬೇಕು. ಬೆಳೆದು ನಿಂತ ಬೆಳೆಗಳ ಕಟಾವು, ಖರೀದಿಗೆ ಸರ್ಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

    ಅಗತ್ಯ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿ, ಕೃತಕ ಅಭಾವ ಸೃಷ್ಟಿಸಿ, ಬೆಲೆ ಹೆಚ್ಚಿಸಿ ಕಾಳಸಂತೆಯಲ್ಲಿ ಮಾರುವವರ ವಿರುದ್ಧ ಕ್ರಮ ಜರುಗಿಸಬೇಕು. ಲಕ್ಷಾಂತರ ವಲಸೆ ಕಾರ್ಮಿಕರು ಊರಿಗೆ ತಲುಪಲು ವಿಶೇಷ ಸಾರಿಗೆ ವ್ಯವಸ್ಥೆ ಮಾಡಬೇಕು. ಅಪೌಷ್ಟಿಕತೆಯಿಂದ ಬಳಲುವವರ ಆಸರೆಗೆ ಬರಬೇಕು. 12 ಗಂಟೆಯವರೆಗೆ ಕೆಲಸದ ಅವಧಿ ಹೆಚ್ಚಿಸುವ ಪ್ರಸ್ತಾವನೆ ಕೈ ಬಿಡಬೇಕು ಎಂದು ಆಗ್ರಹಿಸಿದರು.

    ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಕೆ.ಜಿ. ವೀರೇಶ, ಎಚ್.ಪದ್ಮಾ, ಡಿ.ಎಸ್. ಶರಣಬಸವ, ಕರಿಯಪ್ಪ , ರಂಗಪ್ಪ ಯಾಪಲದಿನ್ನಿ, ಇಂದಿರಮ್ಮ, ನರಸಮ್ಮ, ನೇತ್ರಾ, ಸವಿತಾ, ಪದ್ಮಾ ಜಂಗ್ಲೆಪ್ಪ, ರಾಜು, ರೇಖಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts