More

    ಇಂದು ದೇಗುಲಗಳಲ್ಲಿ ವಿಶೇಷ ಪೂಜೆ


    ಗುಂಡ್ಲುಪೇಟೆ: ಅಯೋಧ್ಯೆಯಲ್ಲಿ ಜ.22ರಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ನಾನಾ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಲಿವೆ.

    ಪಟ್ಟಣದ ಶ್ರೀ ಕೋಟೆ ಕೋದಂಡರಾಮ ದೇವಾಲಯ, ರಾಮೇಶ್ವರ ದೇವಾಲಯ, ಬ್ರಾಹ್ಮಣರ ರಾಮಮಂದಿರ, ಬಣಜಿಗ ಹಾಗೂ ನಾಯಕರ ಬೀದಿಗಳ ರಾಮಮಂದಿರಗಳು, ಶಕ್ತಿಶಾಲಿ ಆಂಜನೇಯ ದೇವಾಲಯಗಳನ್ನು ಶುಚಿಗೊಳಿಸಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ರಾಮೇಶ್ವರ ದೇವಾಲಯದ ಮುಂಭಾಗ ಬೃಹತ್ ಟಿವಿ ಅಳವಡಿಸಿ ಭಕ್ತರು ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಎಲ್ಲ ದೇವಾಲಯಗಳಲ್ಲಿಯೂ ಬೆಳಗ್ಗೆ ವಿಶೇಷ ಪೂಜೆ, ಅಭಿಷೇಕ, ಮಹಾ ಮಂಗಳಾರತಿ ನೆರವೇರಿಸಿ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಗುವುದು.

    ಬ್ರಾಹ್ಮಣರ ರಾಮಮಂದಿರದಲ್ಲಿ ರಾಮತಾರಕ ಹೋಮ, ಪ್ರಸಾದ ವಿನಿಯೋಗ, ರಾಮೇಶ್ವರ ದೇವಾಲಯದಲ್ಲಿ ರಾಜಾಸ್ಥಾನಿ ಸಮಾಜದಿಂದ ಲಾಡು ವಿತರಣೆ, ಬಂಗಾರಶೆಟ್ಟರ ಕುಟುಂಬದಿಂದ ಹುಳಿಯನ್ನ, ಮೊಸರನ್ನ, ಬೇಲದಹಣ್ಣು ಮತ್ತು ಮಿಣಕೆ ಹಣ್ಣಿನ ಪಾನಕ, ಮಜ್ಜಿಗೆ ವಿತರಿಸಲಾಗುವುದು. ಈಗಾಗಲೇ ಒಂದು ಕ್ವಿಂಟಾಲ್‌ನಷ್ಟು ಬೇಲದ ಹಣ್ಣುಗಳನ್ನು ತಂದು ಸಂಗ್ರಹಿಸಲಾಗಿದೆ. ಬಿಜೆಪಿ ವತಿಯಿಂದ ಒಂದು ಕ್ವಿಂಟಾಲ್ ಬಿಸಿಬೇಳೆ ಬಾತ್ ಸಿದ್ಧಪಡಿಸಲಾಗುತ್ತಿದೆ. ರಾಮ ಹಾಗೂ ಸೀತೆ ಮೂರ್ತಿಗಳಿಗೆ ನೂತನ ವಸ್ತ್ರಗಳನ್ನು ಭಕ್ತರು ಮುಂಗಡವಾಗಿ ದೇವಾಲಯಕ್ಕೆ ನೀಡಿದ್ದಾರೆ ಎಂದು ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸ್ ತಿಳಿಸಿದರು.

    ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಮಲ್ಲೇಶ್ ನೇತೃತ್ವದಲ್ಲಿ ನಾಯಕರ ಬೀದಿ ರಾಮಮಂದಿರದಲ್ಲಿ ವಿಶೇಷ ಪೂಜೆ, ಪುರಸಭೆ ಮಾಜಿ ಅಧ್ಯಕ್ಷ ಪಿ.ಗಿರೀಶ್ ನೇತೃತ್ವದಲ್ಲಿ ಆಂಜನೇಯ ದೇವಾಲಯಕ್ಕೆ ಪುಷ್ಪಾಲಂಕಾರ ಮಾಡಲು ಬೃಹತ್ ಹಾರಗಳನ್ನು ಸಿದ್ಧಪಡಿಸಲಾಗಿದೆ. ಪಟ್ಟಣದ ಆಕ್ಟ್ರಾಯ್ ಸರ್ಕಲ್, ಸಾರಿಗೆ ಬಸ್ ನಿಲ್ದಾಣದ ಎದುರು, ಮಡಹಳ್ಳಿ ಸರ್ಕಲ್, ವೆಂಕಟೇಶ್ವರ ಚಿತ್ರ ಮಂದಿರದ ಸಮೀಪ ಮುಂತಾದ ಕಡೆ ಆಚರಿಸಲು ಸಂಘ-ಸಂಸ್ಥೆಗಳು ಹಾಗೂ ವ್ಯಾಪಾರಸ್ಥರು ಸಿದ್ಧತೆ ನಡೆಸಿದ್ದಾರೆ.

    ತೆರಕಣಾಂಬಿ, ಹಂಗಳ, ಬೇಗೂರು, ಆಲತ್ತೂರು, ಭೀಮನಬೀಡು, ಕಣ್ಣೇಗಾಲ, ಕಂದೇಗಾಲ, ರಾಘವಾಪುರ ಸೇರಿದಂತೆ ಎಲ್ಲ ಗ್ರಾಮಗಳಲ್ಲಿಯೂ ದೇವಾಲಯಗಳ ಸ್ವಚ್ಛಗೊಳಿಸಿ ವಿಶೇಷ ಪೂಜೆ ನಡೆಸಲು ಸಿದ್ಧತೆ ಮಾಡಲಾಗಿದೆ.

    ತಾಲೂಕಿನ ತೆರಕಣಾಂಬಿ ಗ್ರಾಮಪಂಚಾಯಿತಿ ಜ.12 ರಂದು ಸಭೆ ನಡೆಸಿ ರಾಮಮಂದಿರ ಲೋಕಾರ್ಪಣೆ ದಿನ ಹಾಗೂ ಹಿಂದಿನ ದಿನ ಹೋಟೆಲುಗಳು, ಬೀದಿ ಬದಿಯ ವ್ಯಾಪಾರಿಗಳು ಸೇರಿದಂತೆ ಮಾಂಸ ಹಾಗೂ ಮಾಂಸಾಹಾರ ಮಾರಾಟ ನಿರ್ಬಂಧಿಸಿದೆ. ಬೇಗೂರು ಗ್ರಾಮಪಂಚಾಯಿತಿ ಸಹ ತನ್ನ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿರ್ಬಂಧಿಸಿದೆ.

    ಕೇಸರಿಮಯ: ಐತಿಹಾಸಿಕ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ಹಿಂದು ಸಂಘಟನೆಗಳ ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದು, ಪಟ್ಟಣದಲ್ಲಿ ಬಾವುಟ ಹಾಗೂ ಬಂಟಿಂಗ್ಸ್ ಕಟ್ಟುವ ಮೂಲಕ ಕೇಸರಿಮಯ ಮಾಡುತ್ತಿದ್ದಾರೆ. ಹೀಗಾಗಿ ಕೇಸರಿ ಧ್ವಜ ಹಾಗೂ ಬಂಟಿಂಗ್ಸ್‌ಗಳಿಗೆ ಭರ್ಜರಿ ಬೇಡಿಕೆ ಬಂದಿದೆ. ಉತ್ಸಾಹಿ ಯುವಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಕ್ತರಿಗೆ ಪ್ರಸಾದ, ಪಾನಕ ಮಜ್ಜಿಗೆ ವಿತರಣೆಗೆ ಸಜ್ಜಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts