More

    ಉಗುಳುವವರ ಪತ್ತೆಗೆ ತಂಡ !

    ಹರಿಪ್ರಸಾದ್ ನಂದಳಿಕೆ
    ಸಾರ್ವಜನಿಕ ಸ್ಥಳಗಳಲ್ಲಿ ಪಾನ್ ಹಾಗೂ ತಂಬಾಕು ಉತ್ಪನ್ನಗಳನ್ನು ಉಗುಳುವುದು ಮತ್ತು ಅದರ ಪ್ಯಾಕೇಟ್‌ಗಳನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ತಡೆಯಲು ಶಿರ್ವ ಗ್ರಾಮ ಪಂಚಾಯಿತಿ ವಿಶೇಷ ತಂಡಗಳನ್ನು ರಚಿಸುವ ಮೂಲಕ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಂಡಿದೆ.
    ಸ್ವಚ್ಛ ಭಾರತ್ ಮಿಷನ್ (ಎಸ್‌ಬಿಎಂ) ಅಡಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ವಿಶೇಷ ಯೋಚನೆಯನ್ನು ನಮ್ಮ ಶಿರ್ವ ಸ್ವಚ್ಛ ಶಿರ್ವ ಎನ್ನುವ ಯೋಜನೆಯ ಅಡಿಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉತ್ತಮ ಕೆಲಸಕ್ಕೆ ಶಿರ್ವ ಗ್ರಾ.ಪಂ. ಮುಂದಾಗಿದೆ.
    ಜನರು ಪಾನ್ ಹಾಗೂ ತಂಬಾಕು ಉತ್ಪನ್ನಗಳನ್ನು ಜಗಿದು ಸಾರ್ವಜನಿಕ ಸ್ಥಳಗಲ್ಲಿ ಉಗುಳುವುದು ಮತ್ತು ಗುಟ್ಕಾ ಪ್ಯಾಕೇಟ್‌ಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಹೆಚ್ಚಾಗುತ್ತಿರುವುದನ್ನು ಗಮನಿಸಿ ಪಂಚಾಯಿತಿ ಆರಂಭದಲ್ಲಿ ಹಲವು ಜನರಿಗೆ ಕೇವಲ ಎಚ್ಚರಿಕೆ ನೀಡುವ ಮೂಲಕ ಸ್ವಚ್ಛತೆಯ ಜಾಗೃತಿ ಮೂಡಿಸಿತ್ತು. ಅದೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಶಿರ್ವ ಗ್ರಾ.ಪಂ. ಸಿಬ್ಬಂದಿ ಹಾಗೂ ಎಸ್.ಎಲ್.ಆರ್.ಎಂ ಘಟಕದ ಸಿಬ್ಬಂದಿಯ ವಿಶೇಷ ತಂಡವೊಂದನ್ನು ರಚಿಸಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ಪಂಚಾಯಿತಿ ದಂಡ ಹಾಕಲು ಮುಂದಾಗಿದೆ.
    ಪ್ರತಿದಿನ ಬೆಳಗ್ಗೆ 7.30ರಿಂದ 9.30ರ ವರೆಗೆ ಶಿರ್ವ ಪಂಚಾಯಿತಿ ಕಟ್ಟಡ ಮುಂಭಾಗದಲ್ಲಿ ನೂರಾರು ಕೂಲಿ ಕಾರ್ಮಿಕರು ಕೆಲಸಕ್ಕೆ ತೆರಳಲು ಸಾಲುಗಟ್ಟಿ ನಿಲ್ಲುತ್ತಾರೆ. ಈ ಸಂದರ್ಭ ಗುಟ್ಕಾ, ಪಾನ್ ಜಗಿದು ಎಲ್ಲೆಂದರಲ್ಲಿ ಉಗುಳುತ್ತಿರುವುದು ಸಾಮಾನ್ಯವಾಗಿದೆ. ಸ್ವಚ್ಛತೆ ನಿಯಮ ಉಲ್ಲಂಘಿಸಿದ 12 ಮಂದಿಗೆ ದಂಡ ವಿಧಿಸಲಾಗಿದೆ. ಸದ್ಯ ಜನರು ಗುಟ್ಕಾ ತಿಂದರೂ ಖಾಲಿ ಪ್ಯಾಕೇಟನ್ನು ಜೇಬಿನಲ್ಲೇ ಇಟ್ಟುಕೊಳ್ಳುತ್ತಾರೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಕಡಿಮೆಯಾಗಿದೆ. ದಂಡ ವಿಧಿಸಿದ ರಸೀದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಿ ಸ್ವಚ್ಛತೆಯ ಕಡೆಗೆ ಗಮನ ನೀಡುತ್ತಿದ್ದಾರೆ.

    ನಮ್ಮ ಶಿರ್ವ ಸ್ವಚ್ಛ ಶಿರ್ವ: ಇಡೀ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದ್ದು, ಸಾರ್ವಜನಿಕರಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನು ನೀಡಲಾಗಿದೆ. ಯಾರಾದರೂ ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಎಸೆದರೆ ಕೂಡಲೇ ಮಾಹಿತಿ ನೀಡಿದಲ್ಲಿ ಪಂಚಾಯಿತಿ ಸೂಕ್ತ ಕ್ರಮವನ್ನು ಕೈಗೊಳ್ಳುತ್ತಿದೆ. ಒಟ್ಟಾರೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೂ ದಂಡ ವಿಧಿಸುವುದರ ಜೊತೆಯಲ್ಲಿ ಸ್ವಚ್ಛತೆಗಾಗಿ ಹೆಚ್ಚಿನ ಮಹತ್ವವನ್ನು ನೀಡುತ್ತಿರುವ ಶಿರ್ವ ಪಂಚಾಯಿತಿ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಜಾಗೃತಿ ಅಭಿಯಾನ ಕೈಗೊಳ್ಳಲಾಗಿದೆ. ಈಗಾಗಲೇ ಹಲವು ಮಂದಿಗೆ ದಂಡ ಹಾಕಲಾಗಿದ್ದು ಸದ್ಯ ಗುಟ್ಕಾ ತಿಂದು ಸಾರ್ವಜನಿಕ ಸ್ಥಳದಲ್ಲಿ ಉಗುಳುವವರ ಸಂಖ್ಯೆ ತೀರಾ ಕಡಿಮೆಯಾಗಿದೆ.
    | ಅನಂತ ಪದ್ಮನಾಭ್ ನಾಯಕ್ ಶಿರ್ವ ಪಿಡಿಒ

    ಕಳೆದ 20 ದಿನಗಳಲ್ಲಿ ಮೂರು ತಂಡಗಳು ಬಸ್ ನಿಲ್ದಾಣಗಳಂತಹ ಪ್ರಮುಖ ಸ್ಥಳಗಳ ಮೇಲೆ ನಿಗಾ ಇರಿಸಿದ್ದು ಸಾರ್ವಜನಿಕ ಸ್ಥಳದಲ್ಲಿ ಉಗುಳುವವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದೆ. ಪಂಚಾಯಿತಿಗೆ 500 ರೂ. ವರೆಗೆ ದಂಡ ವಿಧಿಸುವ ಅಧಿಕಾರವಿದ್ದರೂ, ನಾವು ಜನರನ್ನು ಎಚ್ಚರಿಸುವ ಜತೆಗೆ 100 ರೂ. ಮಾತ್ರ ದಂಡ ಹಾಕುತ್ತಿದ್ದೇವೆ. ಇದರಿಂದ ಸಾರ್ವಜನಿಕವಾಗಿ ತಂಬಾಕು ಉತ್ಪನ್ನಗಳನ್ನು ಉಗುಳುವ ಜನರ ಸಂಖ್ಯೆಯಲ್ಲಿ ತೀವ್ರ ಕುಸಿತಗೊಂಡಿದೆ.
    | ಕೆ.ಆರ್. ಪಾಟ್ಕರ್ ಶಿರ್ವ ಪಂಚಾಯಿತಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts