More

    ಕ್ವಾರಿ ಸ್ಥಗಿತ, ಬದುಕು ಸ್ತಬ್ಧ: ರಾಜ್ಯದಾದ್ಯಂತ ಜೆಲ್ಲಿ, ಎಂ ಸ್ಯಾಂಡ್, ಪೌಡರ್ ಪೂರೈಕೆಗೆ ಬ್ರೇಕ್

    | ನವೀನ್ ಬಿಲ್ಗುಣಿ ಶಿವಮೊಗ್ಗ

    ಹುಣಸೋಡು ಸ್ಫೋಟ ಘಟನೆ ಬಳಿಕ ಶಿವಮೊಗ್ಗ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಕಲ್ಲು ಗಣಿಗಾರಿಕೆಗೆ ಬ್ರೇಕ್ ಬಿದ್ದಿದೆ. ಅನಧಿಕೃತ ಕ್ರಷರ್, ಕ್ವಾರಿಗಳ ಜತೆಗೆ ಅಧಿಕೃತ ಕ್ವಾರಿಗಳೂ ಸ್ಥಗಿತಗೊಂಡಿರುವ ಪರಿಣಾಮ ಕಳೆದೆರಡು ವಾರದಿಂದ ಅಭಿವೃದ್ಧಿ ಕಾರ್ಯಗಳ ಮೇಲೆ ಕಾಮೋಡ ಕವಿಯುವಂತಾಗಿದೆ. ಜತೆಗೆ ಕ್ರಷರ್, ಕ್ವಾರಿಗಳನ್ನೇ ನೆಚ್ಚಿಕೊಂಡಿದ್ದ ಸಣ್ಣ ಕೈಗಾರಿಕೆಗಳು ಸ್ಥಗಿತವಾಗಿರುವುದರಿಂದ ಹಲವು ಕಾರ್ವಿುಕರಿಗೆ ಕೆಲಸವಿಲ್ಲದಂತಾಗಿದೆ. ಹೀಗಾಗಿ, ಅಕ್ರಮ ಗಣಿಗಾರಿಕೆಯನ್ನು ತಡೆದು, ನಿಯಮಬದ್ಧವಾಗಿ ಸಕ್ರಮ ಗಣಿಗಾರಿಕೆಗೆ ಅವಕಾಶ ಮಾಡಿಕೊಡುವ ಕೆಲಸ ಆಗಬೇಕು ಎಂಬ ಆಗ್ರಹ ವ್ಯಕ್ತವಾಗುತ್ತಿದೆ.

    ರಾಜ್ಯದಲ್ಲಿ ನೂರಾರು ಸಣ್ಣ ಕೈಗಾರಿಕೆಗಳು ಕ್ರಷರ್​ಗಳಿಂದ ಸಿಗುವ ಜೆಲ್ಲಿ, ಎಂ-ಸ್ಯಾಂಡ್, ಪೌಡರ್​ಗಳನ್ನೇ ಅವಲಂಬಿಸಿವೆ. ಇದೀಗ ಕ್ರಷರ್ ಮತ್ತು ಕ್ವಾರಿಗಳಲ್ಲಿ ಈ ವಸ್ತುಗಳ ಉತ್ಪಾದನೆ ಇಲ್ಲದೆ ಸಿಮೆಂಟ್ ಇಟ್ಟಿಗೆ, ಇಂಟರ್​ಲಾಕ್, ಸಿದ್ಧ ಕಂಪೌಂಡ್, ಕಿಟಕಿ, ಬಾಗಿಲು ಚೌಕಟ್ಟು, ಹೂವಿನ ಕುಂಡಗಳು ಮತ್ತಿತರ ಉತ್ಪನ್ನಗಳ ತಯಾರಿಕೆ ಸ್ಥಗಿತಗೊಂಡಿದೆ.

    2 ವಾರದಲ್ಲಿ ದುಪ್ಪಟ್ಟು: ಹುಣಸೋಡು ಸ್ಪೋಟದ ಬಳಿಕ, ಪರವಾನಗಿ ಪಡೆದಿರುವ ಕ್ರಷರ್ ಮತ್ತು ಕ್ವಾರಿಗಳ ಆರಂಭಕ್ಕೆ ಇನ್ನೂ ಮೀನಮೇಷ ಎಣಿಸಲಾಗುತ್ತಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಬೇಕಾದ ಕಚ್ಚಾ ವಸ್ತುಗಳ ಬೇಡಿಕೆ ಹೆಚ್ಚಾದ ಬೆನ್ನಲ್ಲೇ ಜೆಲ್ಲಿ, ಕಲ್ಲು, ಎಂ-ಸ್ಯಾಂಡ್, ಪೌಡರ್ ಲೋಡ್​ಗಳ ದರ ಎರಡೇ ವಾರದಲ್ಲಿ ದುಪ್ಪಟ್ಟು ಆಗಿರುವುದರಿಂದ ಜನಸಾಮಾನ್ಯರ ಮೇಲೂ ಪರಿಣಾಮ ಬೀರುತ್ತಿದೆ. ಮೂರ್ನಾಲ್ಕು ಸಾವಿರ ರೂ.ಗೆ ಸಿಗುತ್ತಿದ್ದ ಎಂ-ಸ್ಯಾಂಡ್ ದರ ಪ್ರತಿ ಲೋಡ್​ಗೆ ಎಂಟು ಸಾವಿರ ರೂ. ಗಡಿ ದಾಟಿದೆ. ಜೆಲ್ಲಿ, ಕಲ್ಲು ದರವೂ ಹೆಚ್ಚಾಗಿದೆ. ರಾಜ್ಯದ ಹಲವು ನದಿಗಳಲ್ಲಿ ಇನ್ನೂ ನೀರು ಬತ್ತದ ಕಾರಣ ಮರಳುಗಾರಿಕೆ ಆರಂಭವಾಗಿಲ್ಲ. ಹಾಗಾಗಿ ಮರಳಿನ ಬದಲು ಎಂ-ಸ್ಯಾಂಡ್​ಗೆ ಬೇಡಿಕೆ ಹೆಚ್ಚಾಗಿದೆ.

    ಕೆಲಸವೇ ಇಲ್ಲ: ಎರಡು ವಾರವಾದರೂ ಪರವಾನಗಿ ಪಡೆದ ಕ್ರಷರ್​ಗಳೂ ರಾಜ್ಯದಲ್ಲಿ ಆರಂಭಗೊಳ್ಳುತ್ತಿಲ್ಲ. ಇದರಿಂದ ಕಾರ್ವಿುಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹೊಟ್ಟೆಪಾಡಿಗಾಗಿ ಕ್ರಷರ್​ಗಳಲ್ಲಿ ಕೆಲಸ ಮಾಡಿಕೊಂಡಿದ್ದವರು ಈಗಾಗಲೇ ಮನೆ ಸೇರಿದ್ದಾರೆ. ಜೀವನೋಪಾಯಕ್ಕೆ ಬೇರೆ ಕೆಲಸ ಹುಡುಕುವ ಪ್ರಯತ್ನಗಳೂ ನಡೆಯುತ್ತಿವೆ. ಕ್ರಷರ್ ಮತ್ತು ಕ್ವಾರಿಗಳಲ್ಲಿ ಕಚ್ಚಾ ವಸ್ತುಗಳು ಇಲ್ಲದ ಕಾರಣ ವಿವಿಧ ಉತ್ಪನ್ನಗಳನ್ನು ಸಿದ್ಧಪಡಿಸುತ್ತಿದ್ದ ಸಣ್ಣ ಕೈಗಾರಿಕೆಗಳಲ್ಲಿ ಕೆಲಸವೇ ಇಲ್ಲದಾಗಿದೆ.

    ಮತ್ತೆ ದರ ಹೆಚ್ಚಳ?: ಕ್ರಷರ್ ಮತ್ತು ಕ್ವಾರಿಗಳ ಸ್ಥಗಿತದಿಂದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ರಾಜ್ಯದಲ್ಲಿ ಅಧಿಕೃತ ಕ್ರಷರ್ ಮತ್ತು ಕ್ವಾರಿಗಳಿಗಿಂತ ಅನಧಿಕೃತವೇ ಹೆಚ್ಚಿದ್ದು ಸದ್ಯಕ್ಕೆ ಅಂಥವನ್ನು ಸ್ಥಗಿತಗೊಳಿಸಿರುವ ಪರಿಣಾಮ ಜೆಲ್ಲಿ, ಕಲ್ಲು, ಎಂ-ಸ್ಯಾಂಡ್​ಗೆ ಬೇಡಿಕೆ ಹೆಚ್ಚಾಗುವುದರ ಜತೆಗೆ ದರವೂ ಹೆಚ್ಚಾಗಲಿದೆ. ಹಾಗಾಗಿ ಸರ್ಕಾರವೇ ಕ್ರಷರ್ ಉತ್ಪನ್ನಗಳಿಗೆ ದರ ನಿಗದಿ ಮಾಡಬೇಕು. ಇಲ್ಲವಾದರೆ ಕಳ್ಳ ಮಾರುಕಟ್ಟೆ ದಂಧೆ ಶುರುವಾಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಕೈಗಾರಿಕೋದ್ಯಮಿಗಳು.

    ಸಮಸ್ಯೆ ಏನೇನು?

    • ಜೆಲ್ಲಿ, ಎಂ-ಸ್ಯಾಂಡ್, ಪೌಡರ್ ಪೂರೈಕೆಗೆ ಗ್ರಹಣ
    • ಇವನ್ನೇ ನಂಬಿಕೊಂಡಿದ್ದ ಸಣ್ಣ ಕೈಗಾರಿಕೆಗಳಿಗೆ ಹೊಡೆತ
    • ಸಣ್ಣ ಕೈಗಾರಿಕೆಗಳನ್ನು ಅವಲಂಬಿಸಿದ್ದ ಕಾರ್ವಿುಕರಿಗೆ ಕೆಲಸವಿಲ್ಲ, ಅಭಿವೃದ್ಧಿ ಕಾರ್ಯಗಳಿಗೂ ಹಿನ್ನಡೆ, ಜನಸಾಮಾನ್ಯರಿಗೂ ತೊಂದರೆ
    • ಅಭಿವೃದ್ಧಿ ಕಾರ್ಯಗಳಿಗೆ ಜೆಲ್ಲಿ, ಎಂ-ಸ್ಯಾಂಡ್, ಪೌಡರ್, ಸಿಮೆಂಟ್ ಇಟ್ಟಿಗೆ, ಕಿಟಕಿ ಇತ್ಯಾದಿ ತಯಾರಿಕೆ ಸ್ಥಗಿತ, ಈ ಎಲ್ಲವುಗಳ ದರ ಹೆಚ್ಚಳ ಆತಂಕ

    ಸಿಎಂ ಆಶ್ವಾಸನೆ ನಿರೀಕ್ಷೆ: ಪರವಾನಗಿ ಇರುವ ಕ್ರಷರ್ ಮತ್ತು ಕ್ವಾರಿಗಳಿಗೆ ಅನುಮತಿ ನೀಡುವ ಜವಾಬ್ದಾರಿಯನ್ನು ಸಿಎಂ ಯಡಿಯೂರಪ್ಪ ಜಿಲ್ಲಾಧಿಕಾರಿಗಳ ಹೆಗಲಿಗೆ ಹಾಕಿದ್ದಾರೆ. ಆದರೂ ಜಿಲ್ಲಾಧಿಕಾರಿಗಳು ಪರವಾನಗಿ ಇರುವ ಕ್ರಷರ್​ಗಳಲ್ಲಿ ಗಣಿಗಾರಿಕೆ ನಡೆಸುವುದಕ್ಕೆ ಇನ್ನೂ ಸಮ್ಮತಿ ನೀಡಿಲ್ಲ.

    ನಿಯಮಗಳಲ್ಲಿ ಏನಿದೆ?

    • ಕ್ರಷರ್​ಗಳು ರಾಷ್ಟ್ರೀಯ ಹೆದ್ದಾರಿಯಿಂದ ಕನಿಷ್ಠ 2 ಕಿಮೀ, ರಾಜ್ಯ ಹೆದ್ದಾರಿಯಿಂದ 1.5 ಕಿಮೀ ದೂರದಲ್ಲಿರಬೇಕು
    • ಪಾಲಿಕೆ ವ್ಯಾಪ್ತಿಯಿಂದ 8 ಕಿಮೀ ಆಚೆ, ಜಿಲ್ಲಾ ಕೇಂದ್ರದಿಂದ 4 ಕಿಮೀ, ತಾಲೂಕಿನಿಂದ 2 ಕಿಮೀ, ಹಳ್ಳಿಗಳಿಂದ 1 ಕಿಮೀ ದೂರದಲ್ಲಿರಬೇಕು
    • ಧೂಳು ಬಾರದಂತೆ ತಡೆಗೋಡೆಗಳಿರಬೇಕು
    • ವಾಯು ಗುಣಮಟ್ಟ ಕಾಪಾಡಬೇಕು

    ಸವಾಲುಗಳೇನು?

    • ಅಕ್ರಮ ಗಣಿಗಾರಿಕೆಗಳನ್ನು ಮಟ್ಟಹಾಕುವುದು, ಅಧಿಕೃತ, ಅನಧಿಕೃತ ಚಟುವಟಿಕೆ ಪತ್ತೆ ಹಚ್ಚುವುದು
    • ಕ್ವಾರಿ, ಕ್ರಷರ್​ಗಳ ಮೇಲೆ ನಿಗಾ ಇಡುವುದು, ಅಕ್ರಮ ಚಟುವಟಿಕೆಗಾಗಿ ಒತ್ತಡ ಹೇರುವ ಪ್ರವೃತ್ತಿ

    ಕಲ್ಲು ಗಣಿಗಾರಿಕೆಗಳಲ್ಲಿ ಅಕ್ರಮಗಳಿಗೆ ಅವಕಾಶ ನೀಡಲು ಸಾಧ್ಯವಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ತೊಂದರೆ ಇಲ್ಲದಂತೆ ನೋಡಿಕೊಳ್ಳಬೇಕಾಗಿದೆ. ಆದ್ದರಿಂದ ಅಕ್ರಮ ಕ್ವಾರಿಗಳನ್ನು ದಂಡ ವಿಧಿಸಿ ಸಕ್ರಮ ಮಾಡಲು ಕಾನೂನು ಸರಳ ಮಾಡುವಂತೆ ಅಧಿಕಾರಿಗಳ ಜತೆ ಸಭೆ ನಡೆಸಿ ಸೂಚನೆ ನೀಡಲಾಗಿದೆ. ಕ್ವಾರಿಗಳು ಸಕ್ರಮವಾಗಿ ಎಂದಿನಂತೆ ನಡೆದರೆ ಕಚ್ಚಾ ಪದಾರ್ಥಗಳ ದರ ಹೆಚ್ಚುವುದಿಲ್ಲ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಸಮಸ್ಯೆಯಾಗುವುದಿಲ್ಲ.

    | ಮುರುಗೇಶ ಆರ್. ನಿರಾಣಿ ಗಣಿ ಸಚಿವ

    ಜೆಲ್ಲಿ, ಎಂ-ಸ್ಯಾಂಡ್, ಪೌಡರ್ ಪೂರೈಕೆ ಇಲ್ಲದ ಕಾರಣ ಇಂಟರ್​ಲಾಕ್, ಸಿಮೆಂಟ್ ಇಟ್ಟಿಗೆ, ಸಿದ್ಧ ಕಂಪೌಂಡ್, ಕಿಟಕಿ-ಬಾಗಿಲು ಚೌಕಟ್ಟು ನಿರ್ಮಾಣ ಮಾಡುತ್ತಿದ್ದ ಸಣ್ಣ ಕೈಗಾರಿಕೆಗಳು ಸ್ತಬ್ಧಗೊಂಡಿವೆ. ಕೆಲಸವಿಲ್ಲದೆ ಕಾರ್ವಿುಕರಿಗೆ ಕೂಲಿ ಕೊಡುವುದಕ್ಕೂ ಸಾಧ್ಯವಾಗದಂತಾಗಿದೆ. ಅಧಿಕೃತ ಕ್ರಷರ್​ಗಳನ್ನಾದರೂ ನಡೆಸಬೇಕು. ಇಲ್ಲವಾದರೆ ಸಣ್ಣ ಕೈಗಾರಿಕೆಗಳು ಸಂಪೂರ್ಣ ಮುಚ್ಚುವ ಸ್ಥಿತಿ ತಲುಪಲಿವೆ.

    | ರಾಜೇಂದ್ರ ಸಣ್ಣ ಕೈಗಾರಿಕೋದ್ಯಮಿ

    ಕ್ರಷರ್ ಮತ್ತು ಕ್ವಾರಿಗಳ ಸ್ಥಗಿತದಿಂದ ಸಣ್ಣ ಕೈಗಾರಿಕೆ ಜತೆಗೆ ಇಡೀ ಅಭಿವೃದ್ಧಿ ಕೆಲಸಗಳೇ ಸ್ಥಗಿತಗೊಂಡಿವೆ. ಮೂಲಸೌಕರ್ಯ ಕಲ್ಪಿಸಲು ಜೆಲ್ಲಿ, ಕಲ್ಲು, ಎಂ-ಸ್ಯಾಂಡ್ ಅಗತ್ಯ. ಕ್ರಷರ್​ಗಳ ಸ್ಥಗಿತದಿಂದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದ್ದು, ದರವೂ ಹೆಚ್ಚಾಗುತ್ತಿದೆ.

    | ಜೆ.ಆರ್.ವಾಸುದೇವ ಶಿವಮೊಗ್ಗ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಜಿಲ್ಲಾಧ್ಯಕ್ಷ

    ಕಾನೂನಿನಲ್ಲೇ ಲೋಪ!

    ಶಿವಮೊಗ್ಗ: ಹುಣಸೋಡು ಸ್ಪೋಟದ ಬಳಿಕ ಗಣಿಗಾರಿಕೆ ಹಾಗೂ ಕಾಯ್ದೆ ಕುರಿತ ಸಾಕಷ್ಟು ಲೋಪಗಳು ಬಯಲಾಗುತ್ತಿವೆ. ಸ್ಪೋಟಕ ಸಾಗಣೆ ವಿಚಾರದಲ್ಲಿ ಸರ್ಕಾರಗಳು ಯಾವುದೇ ನಿಯಂತ್ರಣ ಹೊಂದಿಲ್ಲ. ಗಣಿಗಾರಿಕೆಗೆ ಬಳಸುವ ಸ್ಪೋಟಕಗಳ ಮಾರಾಟದ ವೇಳೆಯಲ್ಲಷ್ಟೇ ಒಂದಷ್ಟು ನಿರ್ಬಂಧ ಪಾಲನೆಯಾಗುತ್ತದೆ. ಒಮ್ಮೆ ಸ್ಪೋಟಕ ವ್ಯಾಪಾರವಾಯಿತೆಂದರೆ ಅದು ಎಲ್ಲಿ ಹೋಗುತ್ತದೆ? ಹೇಗೆ ಬಳಕೆಯಾಗುತ್ತದೆ ಎಂಬ ಬಗ್ಗೆ ಯಾರಿಗೂ ಮಾಹಿತಿಯೇ ಸಿಗುವುದಿಲ್ಲ! ಇದೇ ಕಾರಣದಿಂದ ದೂರದ ಅನಂತಪುರಂನಿಂದ ಒಂದು ಲಾರಿ ಭರ್ತಿ ಸ್ಪೋಟಕ ಸರಾಗವಾಗಿ ಶಿವಮೊಗ್ಗ ತಲುಪಿತು. ಅವಘಡ ಸಂಭವಿಸದಿದ್ದರೆ ಇನ್ನೂ ಒಂದಷ್ಟು ಸ್ಪೋಟಕ ಬರುವ ಸಾಧ್ಯತೆಗಳಿತ್ತು. ಕಲ್ಲು ಕ್ವಾರಿಗಳಿಗೆ ಬಳಸುವ ಸ್ಪೋಟಕಗಳನ್ನು ಕೇವಲ ಪರವಾನಗಿ ಹೊಂದಿದ ವ್ಯಕ್ತಿಗಳಿಗೆ ಸಕ್ರಮವಾಗಿಯೇ ಮಾರಾಟ ಮಾಡಲಾಗುತ್ತದೆ. ಬಳಿಕ ಅಲ್ಲಿಯೂ ಮಧ್ಯವರ್ತಿಗಳು ಸೃಷ್ಟಿಯಾಗುತ್ತಾರೆ.

    ಕಲ್ಲು ಕ್ವಾರಿಗಳ ಸರ್ವೆ ನಡೆಸಿ;  ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

    ಬೆಂಗಳೂರು: ರಾಜ್ಯದ ಎಲ್ಲ ಕಲ್ಲು ಕ್ವಾರಿಗಳಲ್ಲಿ ಸುರಕ್ಷತಾ ನಿಯಮಾವಳಿ ಪಾಲನೆಯಾಗುತ್ತಿದೆಯೇ ಎಂಬ ಬಗ್ಗೆ ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಬುಧವಾರ ನಿರ್ದೇಶಿಸಿದೆ. ತಿಪ್ಪಗೊಂಡನ ಹಳ್ಳಿ ಜಲಾಶಯ, ಮಂಚನಬೆಲೆ ಜಲಾಶಯ ಸುತ್ತಲಿನ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಹಾಗೂ ಪರವಾನಗಿ ರದ್ದುಪಡಿಸುವಂತೆ ಕೋರಿ ಸಮಾಜ ಪರಿವರ್ತನಾ ಸಮಿತಿ ಸಲ್ಲಿಸಿರುವ ಪಿಐಎಲ್ ವಿಚಾರಣೆ ನಡೆಸಿದ ಸಿಜೆ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

    ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಅಕ್ರಮ ಕಲ್ಲು ಕ್ವಾರಿಗಳ ಕುರಿತ ಮಾಹಿತಿಯನ್ನು ಸರ್ಕಾರ ಈ ಹಿಂದೆಯೇ ಹೈಕೋರ್ಟ್​ಗೆ ನೀಡಿದೆ. ಆ ಕ್ವಾರಿಗಳ ವಿರುದ್ಧ ಯಾವ ಕ್ರಮ ಜರುಗಿಸಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಬೇಕು ಎಂದು ಸೂಚಿಸಿ ವಿಚಾರಣೆಯನ್ನು ಮಾ.8ಕ್ಕೆ ಮುಂದೂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts