More

    ಬಜೆಟ್​ನಲ್ಲಿ ಸ್ತ್ರೀ ಸಾಮರ್ಥ್ಯ: ಮಹಿಳೆಯರ ನೆರವಿಗೆ ಹೊಸ ಯೋಜನೆ; ಸಿಎಂ ಬೊಮ್ಮಾಯಿ ಮಾಹಿತಿ

    ಬೆಂಗಳೂರು: ರಾಜ್ಯ ಬಜೆಟ್ ಫೆ.17ರಂದು ಮಂಡನೆಯಾಗುವ ಸಂಭವವಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರು, ಯುವಕರು, ದುಡಿಯುವ ವರ್ಗದ ಮತ ಸೆಳೆಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿದ್ಧತೆ ಮಾಡಿಕೊಂಡಿದ್ದಾರೆ. ಹಣಕಾಸು ಇಲಾಖೆ ಹೊಣೆ ಹೊತ್ತಿರುವ ಸಿಎಂ, ರಾಜ್ಯದ ಮುಂದಿನ ಹಣಕಾಸು ವರ್ಷದ (2023-24) ಬಜೆಟ್​ನಲ್ಲಿ ಹಲವು ಯೋಜನೆಗಳನ್ನು ಘೋಷಣೆ ಮಾಡಲು ಸಜ್ಜಾಗಿದ್ದಾರೆ.

    ಸಿಎಂ ಅಧಿಕೃತ ನಿವಾಸ ‘ರೇಸ್​ವ್ಯೂ ಕಾಟೇಜ್’ ಬಳಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಮಹಿಳೆಯರಿಗೆ ನೆರವಾಗುವ ವಿಶೇಷ ಯೋಜನೆ ರೂಪಿಸಲಾಗುತ್ತಿದೆ. ಒಂದು ಕುಟುಂಬದ ಮಹಿಳೆ ಸ್ವತಂತ್ರವಾಗಿ ಮನೆ ನಿರ್ವಹಣೆ ನೋಡಿಕೊಳ್ಳಲು ಸಾಧ್ಯವಾಗುವಂತೆ ಒಂದು ಸಾವಿರದಿಂದ ಎರಡು ಸಾವಿರ ರೂ. ವೆಚ್ಚ ಭರಿಸುವಂತಹ ‘ಸ್ತ್ರೀ ಸಾಮರ್ಥ್ಯ’ ಯೋಜನೆ ಘೋಷಣೆಗೆ ಚಿಂತನೆ ನಡೆದಿದೆ. ಸ್ತ್ರೀಶಕ್ತಿ ಯೋಜನೆಯಡಿ ಕರೊನಾ ಉಪಚಾರ, ಆರೋಗ್ಯ ಮುಂತಾದವುಗಳಿಗೆ ನೆರವಾಗುವ ವಿಶೇಷ ಯೋಜನೆ ಇದಾಗಿರಲಿದೆ ಎಂದು ಅವರು ವಿವರಿಸಿದರು.

    ಜನಕಲ್ಯಾಣಕ್ಕೆ ಒತ್ತು: ದುಡಿಯುವ ವರ್ಗಗಳು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಕಾರ್ಯಕ್ರಮ ರೂಪುಗೊಳ್ಳುತ್ತಿದೆ. ಯುವ ಜನರಿಗಾಗಿ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಡಿ ಸ್ವಯಂ ಉದ್ಯೋಗಕ್ಕೆ ಐದು ಲಕ್ಷ ರೂ. ಸಿಗಲಿದೆ. ಈ ಪೈಕಿ ಒಂದು ಲಕ್ಷ ರೂ. ಸಬ್ಸಿಡಿ ಮೊತ್ತವನ್ನು ಬ್ಯಾಂಕ್​ನೊಂದಿಗೆ ಜೋಡಿಸಿ ಎಂಡ್ ಟು ಎಂಡ್ ಅಪ್ರೋಚ್ ಉಳ್ಳ ಕಾರ್ಯಕ್ರಮವಿದು. ಪ್ರತಿ ಗ್ರಾಮದ ಎರಡು ಸ್ತ್ರೀಶಕ್ತಿ ಸಂಘಗಳಿಗೆ ಐದು ಲಕ್ಷ ರೂ.ವರೆಗೆ ಸಹಾಯಧನ ನೀಡಲಿದ್ದು, ಜನವರಿ ಅಂತ್ಯ ಅಥವಾ ಫೆಬ್ರವರಿಯಲ್ಲಿ ಚಾಲನೆ ನೀಡಲಾಗುವುದು ಎಂದು ಹೇಳಿದರು.

    ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ಕ್ರಮವಹಿಸಿದ್ದು, ತೀವ್ರ ಹಾಗೂ ಮಧ್ಯಮವೆಂದು ವರ್ಗೀಕರಿಸಲಾಗಿದೆ. ಅಪೌಷ್ಟಿಕತೆ ಬಾಧಿತ ಐದಾರು ಜಿಲ್ಲೆಗಳನ್ನು ಗುರುತಿಸಿ ಜಾರಿಗೊಳಿಸಲಾಗಿದೆ. ಪೌಷ್ಟಿಕ ಆಹಾರದ ಕೊರತೆ ನೀಗಿಸಲು ಯೋಜನೆಯನ್ನು ಇನ್ನಷ್ಟು ಜಿಲ್ಲೆಗಳಿಗೆ ವಿಸ್ತರಿಸಿ, ಮೊತ್ತವನ್ನು ಹೆಚ್ಚಿಸುವ ಚಿಂತನೆ ಮಾಡುತ್ತಿದ್ದೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ಚುನಾವಣೆ ಇರುವುದರಿಂದ ಮುಂಗಡಪತ್ರ ವಿಶೇಷವಾಗಿರಲಿದೆ. ಅಸ್ಸಾಂ, ಗುಜರಾತ್ ಸರ್ಕಾರಗಳು ಹಲವು ಘೋಷಣೆಗಳನ್ನು ಮಾಡಿವೆ. ಆದರೆ, ಅನುಷ್ಠಾನ ಹಾಗೂ ಘೋಷಣೆಗಳೆರಡು ಬೇರೆಯಾಗಿವೆ ಎಂದರು.

    ಪ್ರಸಕ್ತ ಹಣಕಾಸು ವರ್ಷದ ಮೂರು ತ್ರೖೆಮಾಸಿಕಗಳು ಕಳೆದಿದ್ದು, ಡಿಸೆಂಬರ್​ವರೆಗೆ ಮೂರು ಪಟ್ಟು ಆದಾಯ ಸಂಗ್ರಹವಾಗಿ ಜನಪರ ಬಜೆಟ್​ಗೆ ಬಲ ತುಂಬಿದೆ. ಉಳಿದ ಮೂರು ತಿಂಗಳಲ್ಲಿ ಗುರಿಯಂತೆ ಆದಾಯ ಸಂಗ್ರಹಕ್ಕೆ ಸೂಚಿಸಿದ್ದು, ಸದ್ಯದ ಆರ್ಥಿಕ ಬೆಳವಣಿಗೆ ವೇಗ ಗಮನಿಸಿದರೆ ಗುರಿ ಮೀರುವ ವಿಶ್ವಾಸವಿದೆ ಎಂದರು.

    17ಕ್ಕೆ ಬಜೆಟ್ ಸಂಪುಟದಲ್ಲಿ ನಿರ್ಧಾರ: ವಿಧಾನ ಮಂಡಲದ ಜಂಟಿ ಅಧಿವೇಶನ ಹಾಗೂ ಬಜೆಟ್ ಅಧಿವೇಶನದ ದಿನಾಂಕಗಳನ್ನು ಮುಂದಿನ ಸಚಿವ ಸಭೆಯಲ್ಲಿ ನಿರ್ಧರಿಸಲಾಗುವುದು. ಪೂರ್ವಭಾವಿಯಾಗಿ ಬೇಕಾದ ಸಿದ್ಧತೆಗಳನ್ನು ಪ್ರಾರಂಭ ಮಾಡುತ್ತಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

    ಇದೇ ತಿಂಗಳು ಚಾಲನೆ: ವಿಶಿಷ್ಟವಾದ ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಇದೇ ತಿಂಗಳು ಅನುಷ್ಠಾನಕ್ಕೆ ತರಲಿದ್ದು, ಕಾರ್ಯಾನುಭವ ಆಧಾರದಲ್ಲಿ ಆರ್ಥಿಕ ಸಹಾಯದ ಮಿತಿ ಗೊತ್ತಾಗಲಿದೆ. ಪ್ರತಿ ಮನೆಗೆ ಸ್ತ್ರೀಯರ ಹೆಸರಿನಲ್ಲಿ ನೆರವಿನ ಮೊತ್ತ ಬಿಡುಗಡೆಯಾಗಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ಮಹಿಳೆಯರು, ಯುವಜನರು, ತಳಸ್ತರದ ಸಮುದಾಯಗಳು ಸೇರಿ ದುಡಿಯುವ ವರ್ಗಗಳಿಗೆ ಮುಂದಿನ ಆಯವ್ಯಯದಲ್ಲಿ ಆದ್ಯತೆ ಸಿಗಲಿದೆ ಎಂದ ಸಿಎಂ ಬೊಮ್ಮಾಯಿ, ಚುನಾವಣಾ ಬಜೆಟ್ ಸ್ವರೂಪದ ಸುಳಿವು ನೀಡಿದರು.

    • ಮನೆಯ ಸ್ವತಂತ್ರ ನಿರ್ವಹಣೆಗೆ ಸರ್ಕಾರದ ಸಹಾಯ
    • ಪ್ರತಿ ಮನೆಗೂ ಸ್ತ್ರೀಯರ ಹೆಸರಿನಲ್ಲಿ ನೆರವಿನ ಮೊತ್ತ
    • ಯುವಶಕ್ತಿ ಯೋಜನೆಯಡಿ ಸ್ವಉದ್ಯೋಗಕ್ಕೆ ಒತ್ತು
    • ನಿಗದಿತ ಗುರಿ ಮೀರಿ ಆದಾಯ ಸಂಗ್ರಹದ ಸಾಧ್ಯತೆ
    • ಚುನಾವಣಾ ಮುಂಗಡ ಪತ್ರ ಮಂಡನೆಗೆ ಸಿಎಂ ಸಿದ್ಧತೆ

    ಬಟ್ಟೆ ಧರಿಸದೆ ಮಲಗುವುದರಿಂದ ಏನು ಪ್ರಯೋಜನ?; ಇಲ್ಲಿದೆ ಅಧ್ಯಯನದ ಅಂಶಗಳು..

    ಕೆಲವೇ ಗಂಟೆಗಳ ಅಂತರದಲ್ಲಿ ಒಂದೇ ಥರ ಸಾವಿಗೀಡಾದ ಅವಳಿ ಸಹೋದರರು!; 900 ಕಿ.ಮೀ. ದೂರದಲ್ಲಿ ನಡೆಯಿತು ವಿಚಿತ್ರ ಘಟನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts