More

    ಶೇ.50 ಅತಿಥಿ ಉಪನ್ಯಾಸಕರ ಉದ್ಯೋಗಕ್ಕೆ ಕುತ್ತು!; ‘ಕಹಿ’ಯಾದ ಸರ್ಕಾರದ ನೂತನ ನೀತಿ, ವೇತನ ಹೆಚ್ಚಳ ಜತೆಗೆ ಕೆಲಸದ ಅವಧಿಯೂ ಏರಿಕೆ

    | ವಿಜಯವಾಣಿ ವಿಶೇಷ ಬೆಂಗಳೂರು/ಮಂಗಳೂರು

    ಸಂಕ್ರಾಂತಿ ಶುಭದಿನ ರಾಜ್ಯ ಸರ್ಕಾರ ನೀಡಿರುವ ‘ಸಿಹಿ’ ಸುದ್ದಿಯಿಂದ ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರಲ್ಲಿ ಅರ್ಧದಷ್ಟು ಮಂದಿ ಇರುವ ಕೆಲಸವನ್ನೂ ಕಳೆದುಕೊಳ್ಳುವ ಭೀತಿ ಶುರುವಾಗಿದೆ. ರಾಜ್ಯಾದ್ಯಂತ 430 ಪ್ರಥಮ ದರ್ಜೆ ಕಾಲೇಜುಗಳಲ್ಲಿ 14578 ಅತಿಥಿ ಉಪನ್ಯಾಸಕರಿದ್ದು, ಸರ್ಕಾರದ ನೂತನ ನೀತಿಯಿಂದ ಸುಮಾರು 7 ಸಾವಿರ ಮಂದಿಯ ಉದ್ಯೋಗಕ್ಕೆ ಕುತ್ತು ಬರಲಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಮುಂದುವರಿಸಲು ಅತಿಥಿ ಉಪನ್ಯಾಸಕರ ಸಂಘ ತೀರ್ವನಿಸಿದೆ.

    ನೂತನ ನೀತಿಯಲ್ಲಿ ಯುಜಿಸಿ ನಿರ್ದೇಶನದಂತೆ ಐದು ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ 32,000 ರೂ., 5 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದವರಿಗೆ 30,000 ರೂ., ಯುಜಿಸಿ ಕ್ವಾಲಿಫೈಡ್ ಆಗದೆ 5 ವರ್ಷ ಸೇವೆ ಸಲ್ಲಿಸಿದವರಿಗೆ 28,000 ರೂ., 5 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದವರಿಗೆ 26,000 ರೂ. ಗೌರವಧನ ದೊರೆಯಲಿದೆ.

    ಕಾರ್ಯಾಭಾರದ ಕುತ್ತು: ಹಾಲಿ ಅತಿಥಿ ಉಪನ್ಯಾಸಕರಿಗೆ 8ರಿಂದ 10 ಗಂಟೆಗಳ ಕಾರ್ಯಾಭಾರಕ್ಕೆ ಬದಲಾಗಿ ಗರಿಷ್ಠ 15 ಗಂಟೆಗಳ ಕಾರ್ಯಾಭಾರ ನೀಡಲು ನಿರ್ಧರಿಸಿರುವುದೇ ಉದ್ಯೋಗ ಕಳಕೊಳ್ಳುವ ಆತಂಕಕ್ಕೆ ಕಾರಣವಾಗಿದೆ. ಮೊದಲು ವಾರಕ್ಕೆ 8 ಗಂಟೆಗಳ ಕಾರ್ಯಾಭಾರ ಇದ್ದಾಗ ಉಪನ್ಯಾಸಕರು ಮಾಸಿಕ 13 ಸಾವಿರ ರೂ. ಗೌರವಧನ ಪಡೆಯುತ್ತಿದ್ದರು. ಇದೀಗ 15 ಗಂಟೆಗಳ ಕಾರ್ಯಾಭಾರವನ್ನು ಹೆಚ್ಚಿಸಿದಾಗ ಹೊಸ ಆದೇಶದ ಪ್ರಕಾರ 30ರಿಂದ 32 ಸಾವಿರ ರೂ. ಪಡೆಯಲಿದ್ದಾರೆ. ಆದರೆ, ಒಬ್ಬರಿಗೆ 15 ಗಂಟೆ ನೀಡಿದಾಗ ಮತ್ತೊಬ್ಬನ 8 ಗಂಟೆ ಕಸಿದುಕೊಳ್ಳಬೇಕಾಗಲಿದ್ದು, ಈ ವಿಷಯ ಬೋಧಿಸುತ್ತಿದ್ದ ಉಪನ್ಯಾಸಕನಿಗೆ ಕೆಲಸವೇ ಇಲ್ಲದಂತಾಗುತ್ತದೆ. ಕೊನೆಗೆ ಕಾರ್ಯಭಾರ ಇಲ್ಲವೆಂದು ಉಪನ್ಯಾಸಕರನ್ನು ಕೆಲಸದಿಂದ ವಜಾ ಮಾಡುವ ಕಾಲ ದೂರ ಇಲ್ಲ ಎಂಬುದು ಉಪನ್ಯಾಸಕರ ಆತಂಕಕ್ಕೆ ಕಾರಣವಾಗಿದೆ.

    ವೇತನ ಹೆಚ್ಚಳ ಇಲ್ಲ!: 15 ಗಂಟೆಗಿಂತ ಕಡಿಮೆ ಕಾರ್ಯಭಾರವಿದ್ದಲ್ಲಿ, ಎಷ್ಟು ಗಂಟೆಗಳ ಕಾರ್ಯಾಭಾರ ಲಭ್ಯವಿದೆಯೋ ಅದಕ್ಕೆ ಅನುಗುಣವಾಗಿ ಗೌರವಧನ ನೀಡುವಂತೆ ಸೂಚಿಸಿದೆ. ಈ ರೀತಿ ನೀಡಿದಾಗ ಎಂದಿನಂತೆ ಅತಿಥಿ ಉಪನ್ಯಾಸಕರು 13-14 ಸಾವಿರ ರೂ. ಗೌರವಧನ ಅಥವಾ ಅದಕ್ಕಿಂತ ಕಡಿಮೆ ಗೌರವಧನವನ್ನೇ ಪಡೆಯಬೇಕಾಗುತ್ತದೆ. ಇದರಿಂದ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ ಎಂಬುದು ಸ್ಪಷ್ಟವಾಗಿ ತಿಳಿಯಲಿದೆ.

    ಹೊಸ ನೇಮಕಕ್ಕೆ ಅವಕಾಶ: ಪ್ರತಿ ಬಾರಿ ಅತಿಥಿ ಉಪನ್ಯಾಸಕರನ್ನು ಒಂದು ವರ್ಷಕ್ಕೆ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಕರೊನಾ ಬಂದ ಮೇಲೆ ಆ ಉಪನ್ಯಾಸಕರನ್ನು ಸೆಮಿಸ್ಟರ್​ಗೆ ನೇಮಕ ಮಾಡಿಕೊಳ್ಳಲಾಗಿದೆ. ಇದೀಗ ಸರ್ಕಾರದ ಹೊಸ ಆದೇಶದ ಪ್ರಕಾರ ಹಳೇ ಮಾದರಿಯಂತೆ 10 ತಿಂಗಳಿಗೆ ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. ಇದು ಸಂತೋಷದ ವಿಷಯವೇ ಆಗಿದೆ. ಆದರೆ, ಈ ನೇಮಕಾತಿ ವೇಳೆ ಹೊಸ ಅಭ್ಯರ್ಥಿಗಳಿಗೂ ಅವಕಾಶ ನೀಡುತ್ತಿದೆ. ಮೊದಲು ಅತಿಥಿ ಉಪನ್ಯಾಸಕ ಹುದ್ದೆ ತೊರೆದು ಖಾಲಿ ಉಳಿದುಕೊಳ್ಳುವ ಹುದ್ದೆಗಳಿಗೆ ಮಾತ್ರ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತಿತ್ತು. ಇದೀಗ ಪ್ರತಿ ವರ್ಷ ಎಲ್ಲ ಹುದ್ದೆಗಳಿಗೂ ಹೊಸಬರಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಿದೆ. ಇದರಿಂದ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರ ಉದ್ಯೋಗಕ್ಕೆ ಕುತ್ತು ಬೀಳಲಿದೆ.

    ಸರ್ಕಾರದ ಹೊಸ ಆದೇಶದಿಂದ ನಿಜಕ್ಕೂ ಉಪನ್ಯಾಸಕರಿಗೆ ಯಾವುದೇ ಅನುಕೂಲವಿಲ್ಲ. ಇದರಿಂದ ಭಯದಲ್ಲೇ ಕೆಲಸ ಮಾಡುವಂತಾಗುತ್ತದೆ. ನಮಗೆ ಮೊದಲು ಸೇವಾ ಭದ್ರತೆ ನೀಡಬೇಕು.

    | ಪಿ.ಕೆ.ಮಂಜುನಾಥ ಅತಿಥಿ ಉಪನ್ಯಾಸಕ, ಅರಸೀಕೆರೆ

    ಪ್ರತಿಭಟನೆ ಮುಂದುವರಿಕೆ: ಗೌರವಧನ ಹೆಚ್ಚಳದಿಂದ ಪ್ರತಿಭಟನೆ ಕೈ ಬಿಡುವುದಕ್ಕೆ ಆಗುವುದಿಲ್ಲ. ನಾವು ಸೇವಾ ಭದ್ರತೆ ಕೇಳುತ್ತಿದ್ದೇವೆ. ಇದರ ಬಗ್ಗೆ ಸರ್ಕಾರ ಮಾತನಾಡದೇ ಇರುವುದರಿಂದ ಪ್ರತಿಭಟನೆ ಮುಂದುವರಿಸಲು ಅತಿಥಿ ಉಪನ್ಯಾಸಕರು ನಿರ್ಧರಿಸಿದ್ದಾರೆ. ನಮ್ಮ ಎಲ್ಲ ಬೇಡಿಕೆಯನ್ನು ಸರ್ಕಾರ ಈಡೇರಿಸಲಿಲ್ಲ. ನಮ್ಮ ಪ್ರಮುಖ ಬೇಡಿಕೆ 12 ತಿಂಗಳ ಸಂಬಳ ಮತ್ತು ಸೇವಾ ಭದ್ರತೆ. ಕೇವಲ ಗೌರವಧನ ಹೆಚ್ಚಿಸಲು ಸಮಿತಿ ಮಾಡುವ ಅಗತ್ಯವಿತ್ತೇ? ಹೋರಾಟ ಮುಂದುವರಿಸಲು ಚರ್ಚೆ ನಡೆಸುತ್ತಿದ್ದೇವೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರ ಸಂಘ ತಿಳಿಸಿದೆ.

    ಇತರ ಆದಾಯಕ್ಕೂ ಹೊಡೆತ: ಅತಿಥಿ ಉಪನ್ಯಾಸಕರಲ್ಲಿ ಹೆಚ್ಚಿನವರು ಉಳಿಕೆ ಸಮಯದಲ್ಲಿ ಖಾಸಗಿ ಶಾಲೆಯಲ್ಲೂ ದುಡಿಯುತ್ತಿದ್ದಾರೆ. ಸರ್ಕಾರದ ಹೊಸ ಆದೇಶದಿಂದ ಅತಿಥಿ ಉಪನ್ಯಾಸಕರು ಹೆಚ್ಚುವರಿ ಆದಾಯ ಮೂಲ ಕಳೆದುಕೊಂಡು ಸೇವಾ ಭದ್ರತೆ ಇಲ್ಲದೆ ವಾರ್ಷಿಕ 10 ತಿಂಗಳು ದುಡಿಯಬೇಕು. ಇರುವ ಕಾಲೇಜಿಗೆ ಶಾಶ್ವತ ಉಪನ್ಯಾಸಕರ ನೇಮಕಾತಿ ನಡೆದರೆ ಅಲ್ಲಿ ಇರುವವರು ಕಳೆದು ಕೊಳ್ಳಬೇಕು ಎಂದು ಅತಿಥಿ ಉಪನ್ಯಾಸಕರ ಸಂಘದ ದ.ಕನ್ನಡ ಜಿಲ್ಲಾ ಅಧ್ಯಕ್ಷ ಧೀರಜ್ ಕುಮಾರ್ ಆತಂಕ ತೋಡಿಕೊಂಡಿದ್ದಾರೆ.

    ರಜೆ ನೀಡುವ ಬಗ್ಗೆ ಸ್ಪಷ್ಟ ನಿಲುವಿಲ್ಲ: ಮಹಿಳೆಯರಿಗೆ ಹೆರಿಗೆ ರಜೆ ಇರುವುದಿಲ್ಲ. ಅನಾರೋಗ್ಯಕ್ಕೆ ತುತ್ತಾದರೆ ರಜೆ ಇರುವುದಿಲ್ಲ. ಕೆಲವೊಮ್ಮೆ ಪ್ರಾಂಶುಪಾಲರು ಮಾನವೀಯ ದೃಷ್ಟಿಯಲ್ಲಿ ರಜೆ ನೀಡಿದರೂ ಮುಂದಿನ ದಿನಗಳಲ್ಲಿ ರಜೆ ಅವಧಿಯಲ್ಲಿ ತರಗತಿ ನಡೆಸಬೇಕಾಗುತ್ತದೆ. ಇಎಸ್​ಐ, ಪಿಎಫ್, ವೈದ್ಯಕೀಯ ಸವಲತ್ತು ಸಹ ಇಲ್ಲ.

    ಸಾಲ ಪಡೆದವರು ಹಣದ ಜತೆ ಮಾನ ಕೂಡ ಕಳೆದರು ಅಂತ ಮಕ್ಕಳಿಬ್ಬರ ಜತೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts