More

    4ನೇ ಅಲೆ ತಡೆಗೆ ಬಿಗಿಬಲೆ: ದೇಶದ ಹಲವೆಡೆ ಸೋಂಕು ಹೆಚ್ಚಳ; ಸರ್ಕಾರ ಹೈ-ಅಲರ್ಟ್

    ಬೆಂಗಳೂರು: ಚೀನಾ, ಯೂರೋಪ್ ಬಳಿಕ ಭಾರತದ ಹಲವೆಡೆಯೂ ಕರೊನಾ ಸೋಂಕು ಹೆಚ್ಚಳದ ಜತೆಗೆ ಹೊಸ ಪ್ರಭೇದಗಳು ಪತ್ತೆಯಾಗುತ್ತಿರುವುದು ನಾಲ್ಕನೇ ಅಲೆಯ ಆತಂಕವನ್ನು ಇಮ್ಮಡಿಗೊಳಿಸಿದೆ. ಈ ಸಾಧ್ಯತೆ ಸುಳಿವು ಸಿಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳಿಗೆ ಮುಂದಾಗಿದೆ. ಎರಡು ಡೋಸ್ ಲಸಿಕೀಕರಣ ಪ್ರಕ್ರಿಯೆ ಬಳಿಕ ಭಾರತದಲ್ಲಿ ಕರೊನಾ ತೀವ್ರತೆ ಕಳೆದುಕೊಂಡಿತು. ಇದೀಗ ಬೂಸ್ಟರ್ ಡೋಸ್ ಲಸಿಕೀಕರಣ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ನಾಲ್ಕನೇ ಅಲೆ ಕಟ್ಟಿಹಾಕಲು ಸರ್ಕಾರ ತೀರ್ವನಿಸಿದೆ. ಮಾಸ್ಕ್ ಬಳಕೆ ಹಾಗೂ ಬೂಸ್ಟರ್ ಡೋಸ್ ಹಾಕಿಸಿಕೊಳ್ಳುವುದನ್ನು ಮರೆಯದಿರುವಂತೆ ಜನರಲ್ಲಿ ಮನವಿ ಮಾಡಿಕೊಳ್ಳಲು ನಿರ್ಧರಿಸಿದೆ. ದೇಶದ ಹಲವೆಡೆ ಸೋಂಕು ಪ್ರಕರಣ ಹೆಚ್ಚುತ್ತಿರುವುದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ ಸೋಮವಾರ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ತುರ್ತು ಸಭೆ ನಡೆಸಿದರು.

    ರೋಗ ನಿರೋಧಕ ಶಕ್ತಿ ವೃದ್ಧಿಸುವುದರಿಂದ ಅರ್ಹ ಎಲ್ಲರೂ ಲಸಿಕೆ ಪಡೆಯಬೇಕು. 60 ವರ್ಷ ಮೇಲ್ಪಟ್ಟವರು 3ನೇ ಡೋಸ್​ಗೆ ತಾತ್ಸಾರಮಾಡಬಾರದು. ಜನರು ಸಹ ಸರ್ಕಾರದಂತೆಯೇ ಜವಾಬ್ದಾರಿ ಹೊಂದಿದರೆ ಆರೋಗ್ಯ ತುರ್ತು ಪರಿಸ್ಥಿತಿ ನಿಭಾಯಿಸಲು ಸಾಧ್ಯ.

    | ಡಾ.ಕೆ.ಸುಧಾಕರ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ

    ಈ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ಒಪ್ಪಿಗೆ ಪಡೆದು, ತ್ವರಿತವಾಗಿ ಜಾರಿಗೊಳಿಸಬೇಕೆಂಬ ಸಲಹೆಗೆ ಸುಧಾಕರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮುಂಬೈನಲ್ಲಿ ಮಾಸ್ಕ್ ಕಡ್ಡಾಯ ಕೈಬಿಡಲಾಗಿದೆ. ಆದರೆ ರಾಜ್ಯದಲ್ಲಿ ಅಂತಹ ನಿರ್ಧಾರ ಕೈಗೊಳ್ಳದಿದ್ದರೂ ಮಾಸ್ಕ್ ಬಳಕೆ ಕಡಿಮೆಯಾಗಿದೆ. ಜೂನ್-ಜುಲೈಗೆ ನಾಲ್ಕನೇ ಅಲೆ ಪ್ರವೇಶದ ಬಗ್ಗೆ ತಜ್ಞರು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ವೈಯಕ್ತಿಕ, ಇತರರ ಆರೋಗ್ಯದ ಸುರಕ್ಷತೆ ದೃಷ್ಟಿಯಿಂದ ಮಾಸ್ಕ್ ಬಳಕೆ ಮುಂದುವರಿಸಬೇಕು ಎಂದು ಡಾ.ಕೆ.ಸುಧಾಕರ್ ಮನವಿ ಮಾಡಿದರು.

    60 ವರ್ಷ ಮೇಲ್ಪಟ್ಟವರಲ್ಲಿ ಶೇ.49ರಷ್ಟು ಜನರು ಮೂರನೇ ಡೋಸ್ ಪಡೆದಿದ್ದು, ಉಳಿದ ಎಲ್ಲರೂ ಪಡೆಯಬೇಕು. ಜತೆಗೆ ಇನ್ನೂ 32 ಲಕ್ಷ (ಶೇ.2) ಜನರು ಎರಡನೇ ಡೋಸ್ ಪಡೆದಿಲ್ಲ. ಮೊದಲ ಡೋಸ್ 4.97 ಕೋಟಿ (ಶೇ.102), ಎರಡನೇ ಡೋಸ್ 4.77 ಕೋಟಿ (ಶೇ.98) ಜನರು ಪಡೆದಿದ್ದಾರೆ.

    ಹಾಗೆಯೇ 15-17 ವಯೋಮಾನದವರಲ್ಲಿ 25.11 ಲಕ್ಷ (ಶೇ.79) ಲಸಿಕಾಕರಣವಾಗಿದ್ದು, 31 ಲಕ್ಷ ಬಾಕಿಯಿದೆ. 12-14 ವಯೋಮಾನದ 20 ಲಕ್ಷ ಮಕ್ಕಳ ಪೈಕಿ 13.96 ಲಕ್ಷ ಮಕ್ಕಳು ಲಸಿಕೆ ಪಡೆದಿದ್ದಾರೆ ಎಂದು ಡಾ.ಕೆ.ಸುಧಾಕರ್ ವಿವರಿಸಿದರು.

    ಜೂನ್-ಜುಲೈಗೆ ಹೊಸ ಅಲೆ?: ಈಗ ಪತ್ತೆಯಾಗಿರುವ ಹೊಸ ರೂಪಾಂತರಿ ‘ಎಕ್ಸ್​ಇ’, ‘ಎಂಇ’ ತಳಿಗಳೇ ನಾಲ್ಕನೇ ಅಲೆ ಪ್ರವೇಶಕ್ಕೂ ಕಾರಣವಾಗಬಹುದು. ರಾಜ್ಯದಲ್ಲಿ ಜೂನ್-ಜುಲೈ ನಡುವೆ ನಾಲ್ಕನೇ ಅಲೆ ಸಾಧ್ಯತೆಗಳಿವೆ ಎಂದು ಐಐಟಿ ಕಾನ್ಪುರ ತಜ್ಞರು ಎಚ್ಚರಿಸಿದ್ದಾರೆ. ಮೂರನೇ ಅಲೆ ಪ್ರವೇಶದ ಬಗ್ಗೆ ಎಚ್ಚರಿಕೆ ನೀಡಿದ ತಜ್ಞರೇ ನಾಲ್ಕನೇ ಅಲೆ ಬಗ್ಗೆ ಭವಿಷ್ಯ ನುಡಿದಿರುವ ಹಿನ್ನೆಲೆಯಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹೊಸದಾಗಿ ಪ್ರಭೇದಗಳು ಪಡೆಯಲಿರುವ ರೂಪ, ಲಕ್ಷಣಗಳು, ತೀವ್ರತೆ ಬಗ್ಗೆಯೂ ನಿಖರವಾಗಿ ತಿಳಿದುಕೊಳ್ಳಲು ಇನ್ನಷ್ಟು ಕಾಲಾವಕಾಶ ಹಿಡಿಯಬಹುದು ಎಂಬ ಅಭಿಪ್ರಾಯ ಸೋಮವಾರದ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

    ದುಬಾರಿ ಶುಲ್ಕಕ್ಕೆ ಬ್ರೇಕ್: ಸಿ ಟಿ ಸ್ಕಾ್ಯನ್, ಎಂಆರ್​ಐ ಸ್ಕಾ್ಯನಿಂಗ್ ಮೊದಲಾದವುಗಳ ದರ ಪರಿಷ್ಕರಣೆ ಕರೊನಾ ಸಂದರ್ಭ ಮಾತ್ರವಲ್ಲ ಹೊಸ ದರವೆಂದು ಪರಿಗಣಿಸಬೇಕು. ಕೆಲವು ಆಸ್ಪತ್ರೆಗಳಲ್ಲಿ ಮನಸೋಇಚ್ಛೆ ದರ ನಿಗದಿ ಬಗ್ಗೆ ದೂರುಗಳು ಬಂದಿವೆ. ಪರಿಷ್ಕೃತ ದರಗಳನ್ನೇ ಹೊಸ ದರಗಳೆಂದು ಪರಿಗಣಿಸಲು ಆಯುಕ್ತರಿಗೆ ಸೂಚನೆ ನೀಡಿದ್ದು, ದುಬಾರಿ ಶುಲ್ಕ ವಸೂಲಿ ನಿಯಂತ್ರಿಸುವುದಕ್ಕೆ ಸಮಿತಿ ರಚಿಸಲಾಗುವುದು. ನಿಯಮ ಉಲ್ಲಂಘಿಸಿದರೆ ಆಸ್ಪತ್ರೆ ಪರವಾನಗಿ ರದ್ದು ಮಾಡುವ ಅಧಿಕಾರ ಸರ್ಕಾರಕ್ಕಿದೆ ಎಂದು ಡಾ.ಕೆ.ಸುಧಾಕರ್ ತಿಳಿಸಿದರು.

    11 ದೇಶಗಳ ಮೇಲೆ ನಿಗಾ: ದಕ್ಷಿಣ ಕೊರಿಯಾ, ಹಾಂಕಾಂಗ್, ಚೀನಾಗಳಲ್ಲಿ ವೈರಸ್ ಹಾವಳಿ ಉಲ್ಬಣಿಸಿ ದ್ದರೆ, ಯುಕೆ, ಜರ್ಮನಿ, ವಿಯೆಟ್ನಾಂ, ಜಪಾನ್, ಥೈಲ್ಯಾಂಡ್, ಜರ್ಮನಿ, ಇಟಲಿ, ಆಸ್ಟ್ರೇಲಿಯಾಗಳಲ್ಲಿ ಸೋಂಕು ತೀವ್ರವಾಗಿರುವ ಹಿನ್ನೆಲೆಯಲ್ಲಿ ಈ ದೇಶ ಗಳಿಂದ ರಾಜ್ಯಕ್ಕೆ ಬರುವ ಜನರ ಮೇಲೆ ವಿಶೇಷ ನಿಗಾ ಇರಿಸಲಾಗುತ್ತದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಥರ್ಮಲ್ ತಪಾಸಣೆ, ಮನೆಗೆ ತೆರಳಿದ ನಂತರ ವಾರ ಅಥವಾ 10 ದಿನ ಮೇಲ್ವಿಚಾರಣೆ ಹಾಗೂ ಮನೆಯಲ್ಲೇ ಪ್ರತಿದಿನ ಟೆಲಿಮಾನಿಟರಿಂಗ್ ನಡೆ ಸಲಾಗುತ್ತದೆ.

    ತಜ್ಞರ ಸಲಹೆ

    • ನಾಲ್ಕು ಟಿ ಸೂತ್ರಗಳ ಜತೆಗೆ ಜಿನೋಮ್ ಸಿಕ್ವೆನ್ಸಿಂಗ್ ಟೆಸ್ಟ್​ಗಳ ಪ್ರಮಾಣ ಹೆಚ್ಚಿಸಬೇಕು
    • ಮಾಸ್ಕ್ ಕಡ್ಡಾಯ ಹಿಂಪಡೆಯದಿದ್ದರೂ ಬಳಕೆ ತಗ್ಗಿದ್ದು, ಜಾಗೃತಿ ಮೂಡಿಸುವುದು,
    • ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಕೆ, ಒಳಾಂಗಣ ಅದರಲ್ಲೂ ನಿಕಟ ಸಂಭಾಷಣೆ ವೇಳೆ ಮಾಸ್ಕ್ ತಪ್ಪದೇ ಬಳಸಬೇಕು
    • ಬೂಸ್ಟರ್ ಡೋಸ್​ಗೆ ದಿಢೀರ್ ಬೇಡಿಕೆ ಹೆಚ್ಚಳ ತಪ್ಪಿಸಲು ಈಗಿನಿಂದಲೇ ಕ್ರಮಕೈಗೊಳ್ಳುವುದು
    • ಕೇಂದ್ರ ನೀಡಿದ ಸೂಚನೆ ಅನುಷ್ಠಾನ, ಸೂಕ್ತ ನಿರ್ದೇಶನ
    • ಲಸಿಕೆ ಪಡೆಯದ ಮಕ್ಕಳ ಮೇಲೆ ವಿಶೇಷ ನಿಗಾ, ರ್ಯಾಂಡಮ್ ಆಗಿ ಕನಿಷ್ಠ 5,000 ಮಕ್ಕಳ ಆರೋಗ್ಯ ತಪಾಸಣೆ
    • ವಿವಿಧ ಹಂತದ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಸೇರಿ ಆರೋಗ್ಯ ಪರಿಕರಗಳು, ಚಿಕಿತ್ಸಾ ವ್ಯವಸ್ಥೆ ಸನ್ನದ್ಧ ಸ್ಥಿತಿಯಲ್ಲಿಡುವುದು
    • ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕ್ಲಿನಿಕಲ್ ನಿಗಾ ವ್ಯವಸ್ಥೆ ಮುಂದುವರಿಸಿ, ಹೊಸ ರೋಗಲಕ್ಷಣಗಳು ಮತ್ತು ಹೊಸ ರೂಪಾಂತರಿ ತಳಿ ಮೇಲೆ ಕಣ್ಗಾವಲು
    • ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ಸಹಯೋಗದಲ್ಲಿ ಜಾನುವಾರುಗಳ ಮೇಲೆ ಕಣ್ಗಾವಲು
    • ಐಸಿಎಂಆರ್ ಮತ್ತು ಬಿಬಿಎಂಪಿ ಸಹಭಾಗಿತ್ವದ ಒಳಚರಂಡಿ ನಿಗಾ ವ್ಯವಸ್ಥೆ ಚಾಲ್ತಿಯಲ್ಲಿಟ್ಟು, ಆಯಾ ಪ್ರದೇಶದ ಕರೊನಾ ಪರೀಕ್ಷಾ ಫಲಿತಾಂಶದೊಂದಿಗೆ ತಾಳೆ ಹಾಕುವುದು

    ಸೋಂಕು ಶೇ. 0.49ಕ್ಕೆ ಇಳಿಕೆ

    ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದ್ದು, ನಿತ್ಯ ಸೋಂಕು ಪ್ರಕರಣಗಳ ಸಂಖ್ಯೆ 60 ಕ್ಕಿಂತ ಕಡಿಮೆ ವರದಿಯಾಗುತ್ತಿದೆ. ಕಳೆದ ಒಂದು ವಾರದ ಸೋಂಕು ಪ್ರಮಾಣ ದರ ಶೇ. 0.49ಕ್ಕೆ ಇಳಿಕೆಯಾಗಿದೆ.

    ಇನ್ನು ಸೋಂಕಿತರ ಸಾವಿನ ಸಂಖ್ಯೆ ಬಹುತೇಕ ತಗ್ಗಿದ್ದು, ವಾರದ ಮರಣ ಪ್ರಮಾಣ ದರ ಶೇ. 0.61ಕ್ಕೆ ಇಳಿಕೆಯಾಗಿದೆ. ಸೋಂಕು ಹಾಗೂ ಸಾವಿನ ಪ್ರಮಾಣ ತಗ್ಗಿರುವ ಹಿನ್ನೆಲೆಯಲ್ಲಿ ಕಳೆದ 15- 20 ದಿನಗಳಿಂದ ಕೋವಿಡ್ ಪರೀಕ್ಷೆ ಸಂಖ್ಯೆಯನ್ನು ಬಹುತೇಕ ತಗ್ಗಿಸಲಾಗಿದ್ದು, ಕೋವಿಡ್ ತೀವ್ರಗೊಂಡಿದ್ದ ಸಂದರ್ಭದಲ್ಲಿ ನಿತ್ಯ ಒಂದರಿಂದ ಒಂದೂವರೆ ಲಕ್ಷಕ್ಕೂ ಅಧಿಕ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿತ್ತು. ಇದೀಗ ನಿತ್ಯ ಪರೀಕ್ಷೆ ಸಂಖ್ಯೆ 10 ಸಾವಿರಕ್ಕೆ ಇಳಿಕೆ ಮಾಡಲಾಗಿದೆ.

    ಸೋಮವಾರ ರಾಜ್ಯದಲ್ಲಿ 4,341 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 34 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದಿನದ ಸೋಂಕು ಪ್ರಮಾಣ ದರ ಶೇ. 0.78 ತಲುಪಿದ್ದು, ಮರಣ ಪ್ರಮಾಣ ದರ ಶೂನ್ಯ ವರದಿಯಾಗಿದೆ. 29 ಸೋಂಕಿತರು ಚೇತರಿಸಿಕೊಂಡಿದ್ದು, ಗುಣಮುಖರ ಒಟ್ಟು ಸಂಖ್ಯೆ 39.04 ಲಕ್ಷ ಮೀರಿದೆ. ರಾಜ್ಯದಲ್ಲಿ ಈವರೆಗೂ 40.057 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದು, ಈವರೆಗೂ 39.46 ಲಕ್ಷ ಮಂದಿ ಸೋಂಕಿನಿಂದ ಬಳಲಿದ್ದಾರೆ.

    5 ಮದ್ವೆ, 3 ಡೈವೋರ್ಸ್, ಸದ್ಯ ಇಬ್ರು ಹೆಂಡ್ತಿ; ಪತ್ನಿ ಬೇಗ ಮನೆಗೆ ಬರಲಿ ಎಂದೇ ಫ್ಲೈಓವರ್!; ಏನಿದು, ಯಾರ ಕಥೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts