More

    ಯಡಿಯೂರಪ್ಪ ಭಾವುಕ ವಿದಾಯ | ಸಿಎಂ ಸ್ಥಾನಕ್ಕೆ ರಾಜೀನಾಮೆ; 2 ವರ್ಷದ ಸಂಭ್ರಮಾಚರಣೆಯಲ್ಲಿ ಕಟ್ಟೆಯೊಡೆದ ದುಃಖ..

    ಒಂದು ಕಾಲದಲ್ಲಿ ಪಕ್ಷದ ಏಕೈಕ ಶಾಸಕನಾಗಿ, ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿಗೆ ಅಧಿಕಾರದ ಹೆಬ್ಬಾಗಿಲು ತೆರೆದ ಛಲದಂಕ ಮಲ್ಲ, ಜನಮೆಚ್ಚಿದ ಹೋರಾಟಗಾರ ಬಿ.ಎಸ್. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಕಣ್ಣೀರ ವಿದಾಯ ಹೇಳಿದ್ದಾರೆ. ಶಾಸಕರಾಗಿ, ಬಿಜೆಪಿ ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕನಾಗಿ, ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ, ದೇಶದ ಮೊದಲ ರೈತ ಬಜೆಟ್ ಮಂಡಿಸಿದ ಕೀರ್ತಿವಂತ ಬಿಎಸ್​ವೈ ವರಿಷ್ಠರ ಸಂದೇಶಕ್ಕೂ ಕಾಯದೆ ಸಿಎಂ ಗಾದಿ ತೊರೆದು ಮೇಲ್ಪಂಕ್ತಿ ರೂಪಿಸಿದ್ದಾರೆ. ಆ ಮೂಲಕ ಭವಿಷ್ಯದ ನಾಯಕನನ್ನು ರೂಪಿಸುವ ಹಾದಿ ಸುಗಮಗೊಳಿಸಿದ್ದಾರೆ. ತ್ಯಜಿಸಿರುವುದು ಅಧಿಕಾರ ಮಾತ್ರ, ಮುಂದೆ ಜನರಿಗೋಸ್ಕರ ಬದುಕುವೆ ಎಂದು ಶಪಥ ಮಾಡಿರುವ ಅವರು ಮುಂಬರುವ ದಿನಗಳಲ್ಲಿ ಮತ್ತೆ ನರೇಂದ್ರ ಮೋದಿ-ಅಮಿತ್ ಷಾ ಜೋಡಿಯ ದಿಗ್ವಿಜಯಕ್ಕೆ ನೆರವಾಗುವ ವಾಗ್ದಾನದ ಮೂಲಕ ಪಕ್ಷದ ಕಾರ್ಯಕರ್ತರಿಗೆ ವಿಶ್ವಾಸ ತುಂಬಿದ್ದಾರೆ. ಬಿಎಸ್​ವೈ ಉತ್ತರಾಧಿಕಾರಿ ಯಾರೆಂಬ ಪ್ರಶ್ನೆಗೆ ಮಂಗಳವಾರ ಉತ್ತರ ಸಿಗುವ ಸಾಧ್ಯತೆ ಇದೆ.

    ಬೆಂಗಳೂರು: ಸಂಕಷ್ಟಗಳ ಹಾದಿಯಲ್ಲಿ ದಣಿವರಿಯದೇ ದುಡಿದ ಬಿ.ಎಸ್. ಯಡಿಯೂರಪ್ಪ ನಿರೀಕ್ಷೆಯಂತೆ ವರಿಷ್ಠರ ಸಂದೇಶಕ್ಕೂ ಕಾಯದೆ ಸೋಮವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ಸರ್ಕಾರಕ್ಕೆ 2 ವರ್ಷ ತುಂಬಿದ ದಿನದಂದೇ ಅವರು ಸಿಎಂ ಸ್ಥಾನಕ್ಕೆ ಭಾವುಕ ವಿದಾಯ ಹೇಳಿದ್ದಾರೆ. ಸರ್ಕಾರದ 2ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಆಯೋಜನೆಯೊಂಡಿದ್ದ ‘ಜನಸ್ನೇಹಿ ಆಡಳಿತದ ಎರಡು ವರ್ಷ’ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ತಮ್ಮ ಸರ್ಕಾರ ಏನೆಲ್ಲ ಕೆಲಸ ಮಾಡಿದೆ ಎಂದು ನಾಡಿಗೆ ತಿಳಿಸುವ ಜತೆಯಲ್ಲೇ ರಾಜೀನಾಮೆ ನಿರ್ಧಾರ ಪ್ರಕಟಿಸಿದರು. ಈ ಮೂಲಕ ಕೆಲವು ತಿಂಗಳ ಗೊಂದಲದ ಮಸುಕಿನ ಪರದೆಯನ್ನು ಸರಿಸಿದರು. ತಮ್ಮ ನಿಲುವು ಹೊರಹಾಕಿದ ಬೆನ್ನಿಗೇ ಒಂದಿನಿತೂ ತಡಮಾಡದೆ ರಾಜ್ಯಪಾಲರ ಕೈಗೆ ರಾಜೀನಾಮೆ ಪತ್ರ ಇಟ್ಟು ವರಿಷ್ಠರ ಆದೇಶವನ್ನು ಶಿರಸಾವಹಿಸಿ ಪಾಲಿಸಿದರು.

    ಸಂತೋಷದ ಕಣ್ಣೀರು: ಮಹತ್ವದ ತೀರ್ಮಾನ ತಿಳಿಸುವ ವೇಳೆ ಸಿಎಂ ಭಾವೋದ್ವೇಗಕ್ಕೆ ಒಳಗಾಗುತ್ತಿದ್ದಂತೆ ಸಭೆಯೂ ಮೌನಕ್ಕೆ ಜಾರಿತು. ಇದು ಕಣ್ಣೀರಲ್ಲ. ಸಂತೋಷದ ಕಣ್ಣೀರು ಎಂದು ಸ್ಪಷ್ಟಪಡಿಸಿ, ಮಧ್ಯದಲ್ಲಿ ಒಮ್ಮೆ ನಗುವನ್ನೂ ತಂದುಕೊಂಡರು. ಆದರೆ, ಅಲ್ಲಿದ್ದ ಹಲವು ಆಪ್ತ ಸಚಿವರಿಗೆ ಆ ತೀರ್ವನದ ಗಂಭೀರತೆ ಅರಿತು ಕಣ್ಣಲ್ಲಿ ನೀರು ಜಿನುಗಿತ್ತು. ಕೆಲವು ಶಾಸಕರು ಬಿಕ್ಕಿದರು, ಬಹುತೇಕರು ತಮ್ಮಷ್ಟಕ್ಕೆ ತಾವೇ ಭಾವುಕರಾಗಿಬಿಟ್ಟಿದ್ದರು. ಸಂಭ್ರಮಾಚರಣೆ ಅಲ್ಲಿಗೇ ಮೊಟಕಾಗಿ ಹೋಯಿತು.

    ಆಪ್ತರ ಒಡನಾಟ ಸ್ಮರಣೆ: ಜೀವನದ ಇಳಿಸಂಜೆಯಲ್ಲಿ ಮಹೋನ್ನತ ಹುದ್ದೆಯಿಂದ ಇಳಿಯುವ ಮುನ್ನ ಅವರು ಹಳೆಯ ನೆನಪು ಕೆದಕಿದ್ದು ವಿಶೇಷ. ಸೈಕಲ್ ತುಳಿದು ಪಕ್ಷ ಕಟ್ಟಿದ್ದು, ಶಿಕಾರಿಪುರದಲ್ಲಿ ಪಕ್ಷ ಕಟ್ಟುವಾಗ ಸಾಥ್ ನೀಡಿದ್ದ ಗುರುಮೂರ್ತಿ, ಪದ್ಮನಾಭ ಭಟ್, ನಂತರದಲ್ಲಿ ಕೆ.ಎಸ್. ಈಶ್ವರಪ್ಪ ಅವರನ್ನು ಸ್ಮರಿಸಿದರು. ಹಾಗೆಯೇ ಕೇಂದ್ರದಲ್ಲಿ ಎನ್​ಡಿಎ ಸರ್ಕಾರ ರಚನೆಯಾದಾಗ ಅಟಲ್​ಜೀ ಕೇಂದ್ರ ಸಚಿವರಾಗುವಂತೆ ಆಹ್ವಾನ ನೀಡಿದ್ದನ್ನು ನೆನಪಿಸಿಕೊಂಡು ಗದ್ಗದಿತರಾದರು. ಸರ್ಕಾರ ನಡೆಸಲು ಸಹಕರಿಸಿದ ಸಹೋದ್ಯೋಗಿಗಳು, ಸರ್ಕಾರಿ ನೌಕರರು ಮತ್ತು ಕೇಂದ್ರ ನಾಯಕರಿಗೆ ಕೃತಜ್ಞತೆ ಸಲ್ಲಿಸುವುದನ್ನು ಅವರು ಮರೆಯಲಿಲ್ಲ.

    ಸಭಾ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸಹೋದ್ಯೋಗಿಗಳೊಂದಿಗೆ ಊಟ ಮಾಡಿದ ಬಿಎಸ್​ವೈ ಬಳಿಕ ನೇರವಾಗಿ ರಾಜಭವನಕ್ಕೆ ತೆರಳಿ ರಾಜ್ಯಪಾಲರ ಕೈಗೆ ರಾಜೀನಾಮೆ ಪತ್ರ ಇಟ್ಟುಬಿಟ್ಟರು. ಈ ವೇಳೆ ಕೆಲವರನ್ನು ಹೊರತುಪಡಿಸಿ ಬಹುತೇಕ ಸಂಪುಟ ಸಹೋದ್ಯೋಗಿಗಳು ಜತೆಗಿದ್ದರು. ರಾಜಭವನದಿಂದ ಹೊರಬಂದು ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡಿದರು. ಮುಂದಿನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆವರೆಗೆ ತಾವು ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂಬ ರಾಜ್ಯಪಾಲರ ಸಲಹೆಗೆ ಒಪ್ಪಿರುವುದಾಗಿ ಬಿಎಸ್​ವೈ ಇದೇ ವೇಳೆ ತಿಳಿಸಿದರು. ಇದೆಲ್ಲ ಬೆಳವಣಿಗೆ ನಡೆಯುವಾಗ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಬಿಕ್ಕಿಬಿಕ್ಕಿ ಅಳುತ್ತಲೇ ಇದ್ದರು.

    ಬಿಎಸ್​ವೈ ಮೂರು ಸಂದೇಶ

    1. ಪಕ್ಷದ ಸಂಘಟನೆ ಬಲಪಡಿಸಲು ಕೆಲಸ ಮಾಡುತ್ತೇನೆಯೇ ಹೊರತು, ಬೇರೆ ಯಾವುದೇ ಸ್ಥಾನಮಾನ ಒಪ್ಪಿಕೊಳ್ಳುವುದಿಲ್ಲ ಎಂದು ತಮ್ಮ ಮುಂದಿನ ದಾರಿಯನ್ನು ಸ್ಪಷ್ಟಮಾಡಿದರು.
    2. ಸ್ವ ಇಚ್ಛೆಯಿಂದಲೇ ರಾಜೀನಾಮೆ ನೀಡಿದ್ದೇನೆ. ದೆಹಲಿಯಿಂದ ಯಾವುದೇ ಒತ್ತಡ ಇಲ್ಲ. ಮುಂದೆ ಬರುವ ಸಿಎಂಗೆ ಸಹಕಾರ ನೀಡುತ್ತೇನೆ ಎಂದು ತಿಳಿಸಿ ಊಹಾತ್ಮಕ ಚರ್ಚೆಗೆ ಬ್ರೇಕ್ ಹಾಕಿದರು.
    3. ಮುಂದೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ನಾನು ಸಿಎಂ ಸ್ಥಾನಕ್ಕೆ ಯಾವುದೇ ಹೆಸರು ಹೇಳುವುದಿಲ್ಲ ಎಂಬ ನಿಲುವು ಬೇರೆ ಏನೋ ಸಂದೇಶ ನೀಡುವಂತಿದೆ.

    ಧನಸ್ಸು ಕೆಳಗಿಳಿಸಿದ ಬಾಹುಬಲಿ

    ಅಧಿಕಾರದ ಧನಸ್ಸನ್ನು ಎದೆಯಿಂದ ಕೆಳಗಿಳಿಸಿದ 78ರ ಮುತ್ಸದ್ದಿ ಯಡಿಯೂರಪ್ಪ ತಮಗಿನ್ನು ಅಧಿಕಾರದ ಹಸಿವಿಲ್ಲ, ಪಕ್ಷ ಅಧಿಕಾರದಲ್ಲಿರಬೇಕೆಂಬ ಆಶಯವಿದೆ, ಅದಕ್ಕಾಗಿ ದುಡಿಯುವೆ ಎಂದು ನಾಡಿಗೆ ಸಂದೇಶ ಕಳಿಸಿದ್ದಾರೆ. ರಾಜ್ಯದಲ್ಲೇ ಪಕ್ಷ ಸಂಘಟನೆ ಮಾಡುವ ಅವರ ಮಾತು, ಕಾರ್ಯವೈಖರಿ ಯಾವ ರೂಪದಲ್ಲಿರುತ್ತದೆ ಎಂಬುದು ಸ್ಪಷ್ಟವಾಗಿಲ್ಲ.

    ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವುದಾಗಿ ಸ್ಪಷ್ಟಪಡಿಸುವ ಮೂಲಕ ಬಿಎಸ್​ವೈ ತಕ್ಷಣಕ್ಕೆ ‘ಅಧಿಕಾರ’ದ ರಾಜಕಾರಣ ತೊರೆದಿರುವುದನ್ನು ಖಚಿತಪಡಿಸಿದ್ದಾರೆ. ಅವರು ಸಕ್ರಿಯ ರಾಜಕಾರಣದಲ್ಲಿರಬಹುದು ಅಥವಾ ವಯೋಸಹಜ ಕಾರಣದಿಂದ ದೂರ ಉಳಿಯಲೂಬಹುದು. ಪಕ್ಷದ ಆಶಯದಂತೆ ನೆರೆ ರಾಜ್ಯವೊಂದರ ರಾಜ್ಯಪಾಲರೂ ಆಗಬಹುದು. ಆದರೆ, ‘ಹೋರಾಟಗಾರ ಬಿಎಸ್​ವೈ’ ‘ಆಡಳಿತಗಾರನಾಗಿ ಬಿಎಸ್​ವೈ’ ಇನ್ನು ಕಾಣುವುದು ಅಸಾಧ್ಯ ಎಂದೇ ಹೇಳಬಹುದು.

    ಸೈಕಲ್ ತುಳಿದು ಹಳ್ಳಿಹಳ್ಳಿಗೆ ತಿರುಗಿ ಪಕ್ಷ ಕಟ್ಟಿ, ವಿಧಾನಸಭೆಯಲ್ಲಿ ಒಬ್ಬಂಟಿಯಾಗಿ ಹೋರಾಡಿ, ತಮ್ಮ ಆಸೀಮ ಶಕ್ತಿಯಿಂದ ಸಾವಿರಾರು ಯುವ ನಾಯಕರನ್ನು ಹುಟ್ಟುಹಾಕಿ, ಇಡೀ ರಾಜ್ಯದಲ್ಲಿ ಕಮಲದ ಫಸಲು ತೆಗೆದು ರಾಜಕೀಯ ಕ್ಷೇತ್ರದಲ್ಲಿ ಬಾಹುಬಲಿಯಂತೆ ಕಾಣಿಸಿದವರು ಬಿಎಸ್​ವೈ. ಪಕ್ಷ ಕೂಡ ಅವರ ನಾಯಕತ್ವದ ಕೊರತೆಯನ್ನು ಬಹು ಆಯಾಮದಲ್ಲಿ ಆಲೋಚಿಸಿದೆ. ನಷ್ಟ ಭರಿಸುವ ಲೆಕ್ಕಾಚಾರದಲ್ಲಿ ತೊಡಗಿದೆ. ಒಟ್ಟಾರೆ ಏಳುಬೀಳಿನ ನಡುವೆ ಅಸಾಧ್ಯವಾದದ್ದನ್ನು ಎಲ್ಲರೊಟ್ಟಿಗೆ ಸೇರಿ ಸಾಧ್ಯವಾಗಿಸಿ ಪಕ್ಷವನ್ನು ಅಧಿಕಾರದ ಗದ್ದುಗೆಗೇರಿಸಿದ್ದು ಬಿಜೆಪಿ ಪಾಲಿಗೆ ಮೈಲಿಗಲ್ಲು.

    ಸಚಿವರು ಮಾಜಿ: ನೂತನ ಸಿಎಂ ಪ್ರಮಾಣ ವಚನ ಸ್ವೀಕರಿಸುವವರೆಗೆ ಬಿಎಸ್​ವೈ ಹಂಗಾಮಿ ಸಿಎಂ ಆಗಿ ಮುಂದುವರಿಯಲಿದ್ದಾರೆ. ಶಾಸಕಾಂಗ ಪಕ್ಷದ ನಾಯಕನೇ ರಾಜೀನಾಮೆ ಕೊಟ್ಟಿರುವುದರಿಂದ ಸಚಿವ ಸಂಪುಟ ಕೂಡ ವಿಸರ್ಜನೆಯಾಗಿದ್ದು, ಎಲ್ಲ ಸಚಿವರು ಮಾಜಿಗಳಾಗಿದ್ದಾರೆ. ಹೊಸ ನಾಯಕನ ಆಯ್ಕೆವರೆಗೆ ಹಂಗಾಮಿ ಸಿಎಂ ತುರ್ತು ಸನ್ನಿವೇಶದ ಸಂದರ್ಭದಲ್ಲಷ್ಟೇ ಇತಿಮಿತಿಯಲ್ಲಿ ಅಧಿಕಾರ ನಡೆಸುವ ಅಧಿಕಾರ ಹೊಂದಿರುತ್ತಾರೆ.

    ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ರಾಜ್ಯದ ಜನರ ಬೆಂಬಲದಿಂದ, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಷಾ ಅವರ ಸಹಕಾರದಿಂದ, ಎಲ್ಲ ಶಾಸಕರು, ಪಕ್ಷದ ನೆರವಿನಿಂದ 2 ವರ್ಷ ಅಭಿವೃದ್ಧಿ ಪರ ಆಡಳಿತ ನೀಡಲು ಶಕ್ತಿಮೀರಿ ಪ್ರಯತ್ನ ನಡೆಸಿದ ತೃಪ್ತಿ ನನಗಿದೆ.

    | ಬಿ.ಎಸ್. ಯಡಿಯೂರಪ್ಪ ಹಂಗಾಮಿ ಮುಖ್ಯಮಂತ್ರಿ

    ಕ್ಷಣಕ್ಷಣ…

    • ಬೆಳಗ್ಗೆ 10.40ಕ್ಕೆ ‘ಕಾವೇರಿ’ಯಿಂದ ವಿಧಾನಸೌಧಕ್ಕೆ ಆಗಮನ
    • 11 ಗಂಟೆಗೆ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಹಾಜರಿ
    • 11.10ಕ್ಕೆ ಸರ್ಕಾರದ ಸಾಧನಾ ವರದಿ ಬಿಡುಗಡೆ
    • 11.15 ರಾಜ್ಯದೆಲ್ಲೆಡೆ ನಡೆದ ಅಭಿವೃದ್ಧಿ ಚಟುವಟಿಕೆಗಳ ವಿಡಿಯೋ ಪ್ರದರ್ಶನ
    • 11.35ಕ್ಕೆ ವಿದಾಯ ಭಾಷಣ
    • 11.50ಕ್ಕೆ ರಾಜೀನಾಮೆ ಸಲ್ಲಿಸುವ ಬಗ್ಗೆ ಹೇಳಿಕೆ
    • ಮಧ್ಯಾಹ್ನ 12.15ಕ್ಕೆ ಸಹೋದ್ಯೋಗಿಗಳ ಜತೆ ಊಟ
    • 12.30 ರಾಜಭವನಕ್ಕೆ ಪ್ರಯಾಣ
    • 12.40ಕ್ಕೆ ರಾಜೀನಾಮೆ ಸಲ್ಲಿಕೆ

    ಯಾರಾಗುತ್ತಾರೆ ಮುಂದಿನ ಮುಖ್ಯಮಂತ್ರಿ?

    ಯಡಿಯೂರಪ್ಪ ರಾಜೀನಾಮೆ ಬೆನ್ನಲ್ಲೇ ಮುಖ್ಯಮಂತ್ರಿ ಹುದ್ದೆಗೆ ಹೊಸ ನಾಯಕನ ಹುಡುಕಾಟ ನಡೆದಿದೆ. ಎಂಟಕ್ಕೂ ಹೆಚ್ಚು ಹೆಸರು ಮುನ್ನೆಲೆಗೆ ಬಂದಿದ್ದು, ಜರಡಿ ಹಿಡಿಯುವ ಪ್ರಕ್ರಿಯೆಗೆ ವರಿಷ್ಠರು ಮುನ್ನುಡಿ ಬರೆದಿದ್ದಾರೆ. ಮಂಗಳವಾರ ದೆಹಲಿಯಿಂದ ವೀಕ್ಷಕರು ಬೆಂಗಳೂರಿಗೆ ಆಗಮಿಸಲಿದ್ದು, ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಈಗಾಗಲೇ ಸಿಎಂ ರೇಸ್​ನಲ್ಲಿ ಮುರುಗೇಶ್ ನಿರಾಣಿ, ಸಿ.ಟಿ.ರವಿ, ಪ್ರಲ್ಹಾದ ಜೋಶಿ, ಅರವಿಂದ ಬೆಲ್ಲದ್, ಬಸನಗೌಡ ಯತ್ನಾಳ್ ಸೇರಿ ಎಂಟು ಹೆಸರು ಮುಂಚೂಣಿಯಲ್ಲಿದೆ. ಮುರುಗೇಶ್ ನಿರಾಣಿ ಪ್ರಬಲ ಆಕಾಂಕ್ಷಿಯಾಗಿದ್ದು, ಆ ದಿಕ್ಕಿನಲ್ಲಿ ಪ್ರಯತ್ನ ಶೀಲರಾಗಿದ್ದಾರೆ. ಯತ್ನಾಳ್ ಪ್ರಧಾನಿಯ ಆಯ್ಕೆಯಾದರೆ, ನಿರಾಣಿ ಅಮಿತ್ ಷಾ ಆಯ್ಕೆ. ಬಿ.ಎಲ್. ಸಂತೋಷ್ ಕಣ್ಣಲ್ಲಿ ಡಾ.ಅಶ್ವತ್ಥನಾರಾಯಣ, ಸಿ.ಟಿ. ರವಿ ಸೂಕ್ತವಾಗಿ ಕಾಣಿಸಿದ್ದಾರೆಂಬ ಚರ್ಚೆ ಪಕ್ಷದಲ್ಲಿದೆ. ಒಟ್ಟಾರೆ, ಪಕ್ಷದ ಸಿದ್ಧಾಂತ ಪಾಲನೆ, ವಿವಾದದಿಂದ ದೂರ, ಸಂಘದ ಸಂಪರ್ಕ, ವರ್ಚಸ್ಸಿನ ಆಧಾರದಲ್ಲಿ ಇವರಲ್ಲಿ ಯಾರು ಬೆಸ್ಟ್ ಎಂಬುದನ್ನು ವರಿಷ್ಠರು ಆಯ್ಕೆ ಮಾಡುವರು.

    ರೇಸ್​ನಲ್ಲಿ ಯಾರ್ಯಾರು?

    • ಮುರುಗೇಶ್ ನಿರಾಣಿ: ದೊಡ್ಡ ಸಮುದಾಯ ಬೆನ್ನಿಗಿದೆ
    • ಸಿ.ಟಿ.ರವಿ: ಸಂಘ ಪರಿವಾರದ ನಿಷ್ಠ, ಹಿಂದುತ್ವದ ಪಾಪ್ಯುಲಾರಿಟಿ
    • ಡಾ.ಸಿ.ಎನ್.ಅಶ್ವತ್ಥನಾರಾಯಣ: ಸಂಘ ನಿಷ್ಠ, ಸರ್ಕಾರ ರಚನೆಯಲ್ಲಿ ಪಾತ್ರ, ಡಿಸಿಎಂ ಆಗಿ ಆಡಳಿತದ ಅನುಭವ
    • ಬಸನಗೌಡ ಪಾಟೀಲ್ ಯತ್ನಾಳ್: ಪ್ರಖರ ಹಿಂದುವಾದಿ, ದೊಡ್ಡ ಸಮುದಾಯದ ಬೆಂಬಲ
    • ಅರವಿಂದ ಬೆಲ್ಲದ್: ಪ್ರಬಲ ಸಮುದಾಯದ ಬೆಂಬಲ
    • ಸುನೀಲ್ ಕುಮಾರ್: ಸಂಘದೊಂದಿಗೆ ನಂಟು, ಹಿಂದುಳಿದ ವರ್ಗದ ಬಲ
    • ಪ್ರಲ್ಹಾದ ಜೋಶಿ: ವರಿಷ್ಠರ ಸಂಪರ್ಕ, ಸಂಘ ನಿಷ್ಠ, ಆಡಳಿತದಲ್ಲಿ ಅನುಭವ, ಉತ್ತರ ಕರ್ನಾಟಕ ಭಾಗದ ನಾಯಕ

    ಮುಂದೇನು?

    • ಮಂಗಳವಾರ ದೆಹಲಿಯಿಂದ ಬೆಂಗಳೂರಿಗೆ ವೀಕ್ಷಕರ ಆಗಮನ
    • ಹಿರಿಯ ಶಾಸಕರು, ಪಕ್ಷದ ಮುಖಂಡರು ಹಾಗೂ ಸಂಘದ ಪ್ರಮುಖರೊಂದಿಗೆ ಚರ್ಚೆ, ಅಭಿಪ್ರಾಯ ಸಂಗ್ರಹ
    • ಮೋದಿ ನೇತೃತ್ವದಲ್ಲಿ ಮಂಗಳವಾರ ದೆಹಲಿಯಲ್ಲಿ ಸಂಸದೀಯ ಮಂಡಳಿ ಸಭೆ ನಡೆಯುವ ಸಾಧ್ಯತೆ, ಮುಂದಿನ ಸಿಎಂ ಬಗ್ಗೆ ಚರ್ಚೆ
    • ಬೆಂಗಳೂರಿನಲ್ಲಿ ಶಾಸಕಾಂಗ ಪಕ್ಷದ ಸಭೆ ಸಾಧ್ಯತೆ ಅಥವಾ ಶಾಸಕಾಂಗ ಪಕ್ಷದ ಸಭೆ ಇಲ್ಲದೆಯೇ ನೇರವಾಗಿ ಸಿಎಂ ಅಭ್ಯರ್ಥಿ ಘೋಷಣೆ
    • ರಾಜಭವನಕ್ಕೆ ಮಾಹಿತಿ ರವಾನೆ, ನೂತನ ಸಿಎಂ ಪ್ರಮಾಣ ವಚನ

    ಆಯ್ಕೆಗೆ ಮೂರಂಶ

    1. 2023ರ ವಿಧಾನಸಭೆ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬರುವ ಛಾತಿ ಇರುವವರು.
    2. ಮುಂದಿನ ಅವಧಿಯಲ್ಲಿ ಸರ್ಕಾರ ಮತ್ತು ಪಕ್ಷದ ಇಮೇಜ್ ಹೆಚ್ಚಿಸುವ ಕೆಲಸ ಮಾಡಲು ಸಾಧ್ಯವಾಗುವವರು.
    3. ಪಕ್ಷದ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡವರು, ದೀರ್ಘ ಕಾಲದಲ್ಲಿ ಪಕ್ಷವನ್ನು ಮುನ್ನೆಡೆಸಲು ಅವಕಾಶ ಇರುವವರು.

    ಬಿಎಸ್​ವೈ ರಾಜೀನಾಮೆ: ಅಚ್ಚರಿ ಮೂಡಿಸಿದೆ ಕೇಂದ್ರ ನಾಯಕರ ಮೌನ!

    ಅವರಿಬ್ಬರಿಗೆ ಕಣ್ಣೀರು ಬರಲ್ಲ, ಯಡಿಯೂರಪ್ಪ ಅವರಿಗೆ ಕಣ್ಣೀರು ಬಂದಿದ್ದರಲ್ಲಿ ತಪ್ಪಿಲ್ಲ: ಶಾಸಕ ರಘುಪತಿ ಭಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts