More

    ಬೆಳ್ಮಣ್ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ ತೇರ್ಗಡೆಗೆ ವಿಶೇಷ ತರಗತಿ

    ಹರಿಪ್ರಸಾದ್ ನಂದಳಿಕೆ ಬೆಳ್ಮಣ್
    ಎಸ್ಸೆಸ್ಸೆಲ್ಸಿ ಪರೀಕ್ಷೆ ಹತ್ತಿರವಾಗುತ್ತಿದ್ದು ಬೆಳ್ಮಣ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದ 10ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಕರು ವಿಶೇಷ ತರಬೇತಿ ನೀಡುತ್ತಿದ್ದು ಎಲ್ಲ ವಿದ್ಯಾರ್ಥಿಗಳು ತರಬೇತಿ ಪಡೆಯುವ ಮೂಲಕ ಶೇ.100 ಫಲಿತಾಂಶ ದಾಖಲಿಸುವತ್ತ ಹೆಜ್ಜೆ ಇರಿಸಿದ್ದಾರೆ. ಕಾರ್ಕಳ ತಾಲೂಕಾದ್ಯಂತ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಬೇಕೆಂದು ಶಾಸಕರು, ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು 100 ವಿಷನ್ ಎಂಬ ವಿಶೇಷ ಪರಿಕಲ್ಪನೆ ರೂಪಿಸಿದ್ದು, ಅದಕ್ಕೆ ಪೂರಕವಾಗುವಂತೆ ಬೆಳ್ಮಣ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಹಳೇ ವಿದ್ಯಾರ್ಥಿಗಳ ವಿಶೇಷ ಮುತುವರ್ಜಿಯಲ್ಲಿ ಮಕ್ಕಳಿಗೆ ಪೂರಕ ತರಬೇತಿ ಶಿಕ್ಷಕರಿಂದ ನೀಡಲು ಸಹಕರಿಸುತ್ತಿದ್ದಾರೆ.

    ಇಲ್ಲಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ವಿಶೇಷ ತರಗತಿಗಳು ನಡೆಯುತ್ತಿದ್ದು ಬೆಳಗ್ಗೆ 8ರಿಂದ 9.30ರವರೆಗೆ, ಸಾಯಂಕಾಲ 4.30ರಿಂದ 6ರವರೆಗೆ ವಿಶೇಷ ತರಗತಿ ಆಯೋಜಿಸಿ ವಿದ್ಯಾರ್ಥಿಗಳು ಶೇ.100 ಫಲಿತಾಂಶ ತರುವಂತೆ ತಯಾರು ಮಾಡುತ್ತಿದ್ದಾರೆ. ಶಿಕ್ಷಕರ ಈ ಶ್ರಮಕ್ಕೆ ಸಹಕಾರ ನೀಡುತ್ತಿರುವವರು ಇಲ್ಲಿ ಹಳೇ ವಿದ್ಯಾರ್ಥಿ ಸಂಘದವರು. ಬೆಳ್ಮಣ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ 101 ವಿದ್ಯಾರ್ಥಿಗಳಿದ್ದು ಈ ಬಾರಿ 10ನೇ ತರಗತಿಯಲ್ಲಿ 13 ಹುಡುಗರು ಹಾಗೂ 25 ಹುಡುಗಿಯರು ಕಲಿಯುತ್ತಿದ್ದಾರೆ. ಇವರ ಪೈಕಿ 12 ವಿದ್ಯಾರ್ಥಿಗಳು ಸಾಧಾರಣ ಕಲಿಕೆಯಲ್ಲಿದ್ದು ಎಲ್ಲ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುವಂತಾಗಲು ಶಿಕ್ಷಕರು ಪ್ರತಿನಿತ್ಯ ಅವಿರತ ಶ್ರಮ ಪಡುತ್ತಿದ್ದಾರೆ.

    ವಾಹನ ವ್ಯವಸ್ಥೆ: ಗ್ರಾಮೀಣ ಭಾಗದಿಂದ ಬೆಳ್ಮಣ್ ಸರ್ಕಾರಿ ಹೈಸ್ಕೂಲ್‌ಗೆ ಬರುವ ವಿದ್ಯಾರ್ಥಿಗಳಿಗೆ ಬೆಳಗ್ಗೆ ಹಾಗೂ ಸಾಯಂಕಾಲ ಬಸ್ ವ್ಯವಸ್ಥೆ ಇಲ್ಲದ ಪರಿಣಾಮ ಇಲ್ಲಿನ ಹಳೇ ವಿದ್ಯಾರ್ಥಿ ಸಂಘ ಪ್ರತ್ಯೇಕ ಐದು ವಾಹನದ ವ್ಯವಸ್ಥೆ ಮಾಡಿದೆ. ಇನ್ನ್ನಾ, ಜಂತ್ರ, ಬೋಳ, ನಿಟ್ಟೆ, ಹಾಗೂ ನಂದಳಿಕೆ ಭಾಗಗಳ ವಿದ್ಯಾರ್ಥಿಗಳು ಬೆಳಗ್ಗೆ ಬೇಗ ಶಾಲೆಗೆ ಹಾಜರಾಗಲು ಇದು ಸಹಕಾರಿಯಾಗಿದೆ. ನಿತ್ಯ ವಿದ್ಯಾರ್ಥಿಗಳಿಗೆ ಶುಚಿ ರುಚಿಯಾದ ತಿಂಡಿ ವ್ಯವಸ್ಥೆ ಕೂಡ ಮಾಡಲಾಗಿದೆ. ಇದರ ಸಂಪೂರ್ಣ ಖರ್ಚು ವೆಚ್ಚವನ್ನು ಹಳೇ ವಿದ್ಯಾರ್ಥಿಗಳೇ ಭರಿಸುತ್ತಿದ್ದಾರೆ.

    ನಿತ್ಯ ವಿಶೇಷ ತರಗತಿ:ಸೋಮವಾರ ಬೆಳಗ್ಗೆ ಸಮಾಜ, ಸಾಯಂಕಾಲ ಗಣಿತ, ಮಂಗಳವಾರ ಬೆಳಗ್ಗೆ ಇಂಗ್ಲಿಷ್, ಸಾಯಂಕಾಲ ಹಿಂದಿ,  ಬುಧವಾರ ಬೆಳಗ್ಗೆ ವಿಜ್ಞಾನ, ಸಾಯಂಕಾಲ ಕನ್ನಡ, ಗುರುವಾರ ಹಿಂದಿ, ಇಂಗ್ಲಿಷ್, ಶುಕ್ರವಾರ ಕನ್ನಡ ಹಾಗೂ ಸಮಾಜ, ಶನಿವಾರ ಗಣಿತ ಹಾಗೂ ವಿಜ್ಞಾನ ತರಗತಿ ನಡೆಸಲಾಗುತ್ತದೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳೇ ಹೆಚ್ಚಾಗಿದ್ದು ವಿಶೇಷ ತರಗತಿ ನಡೆಸಿ ಪರೀಕ್ಷೆಗೆ ಸಿದ್ಧಪಡಿಸಲಾಗುತ್ತಿದೆ.

    ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಬೇಕೆಂದು ಹಳೇ ವಿದ್ಯಾರ್ಥಿ ಸಂಘದ ಕನಸು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿಶೇಷ ತರಗತಿ ನಡೆಸಲಾಗುತ್ತಿದೆ.
    -ಸುಹಾಸ್ ಹೆಗ್ಡೆ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ

    ಶಾಲೆ ಬಗ್ಗೆ ಅಪಾರ ಅಭಿಮಾನ ಹಳೇ ವಿದ್ಯಾರ್ಥಿಗಳಿಗಿದೆ. ಮಕ್ಕಳ ಕಲಿಕೆಗಾಗಿ ಪ್ರೋತ್ಸಾಹ ನೀಡುತ್ತಿದ್ದಾರೆ. ಶಾಲೆಯ ಫಲಿತಾಂಶ ವೃದ್ಧಿಗಾಗಿ ಅವರು ವಹಿಸುತ್ತಿರುವ ಮುತುವರ್ಜಿ ನಿಜಕ್ಕೂ ಶ್ಲಾಘನೀಯ.
    -ಶರ್ಮಿಳಾ, ಹೈಸ್ಕೂಲ್ ವಿಭಾಗ ಮುಖ್ಯಶಿಕ್ಷಕಿ.

    ಈ ಬಾರೀ ಶೇ.100 ಫಲಿತಾಂಶ ಬರಬೇಕೆಂದು ಎಲ್ಲ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲಾಗುತ್ತಿದೆ. ಶಿಕ್ಷಕರ ಮುತುವರ್ಜಿಗೆ ನಮ್ಮ ಹಳೇ ವಿದ್ಯಾರ್ಥಿ ಸಂಘ ಸಂಪೂರ್ಣ ಸಹಕಾರ ನೀಡುತ್ತಿದೆ.
    -ಸರ್ವಜ್ಞ ತಂತ್ರಿ, ಹಳೇ ವಿದ್ಯಾರ್ಥಿ ಸಂಘ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts