More

    ಆರೋಗ್ಯಕ್ಕೆ ಉಪಕಾರಿ, ಬೈಸಿಕಲ್ ಸವಾರಿ…

    ಬಾಲ್ಯದಲ್ಲಿ ಬೈಸಿಕಲ್ ಮೇಲೆ ಹುಟ್ಟಿಕೊಂಡ ಪ್ರೀತಿ ದೊಡ್ಡವರಾಗುತ್ತಿದ್ದಂತೆ ಬೈಕ್ ಮೇಲೆ ಮೂಡುತ್ತದೆ. ಬಹುತೇಕರ ಬದುಕಿನಲ್ಲಿ ಇಂತಹ ಪ್ರೀತಿ ಸಾಮಾನ್ಯವಾಗಿ ಕಂಡುಬರುತ್ತದೆ. ಕೆಲವರಷ್ಟೇ ಬೈಸಿಕಲ್ ಮೇಲಿನ ಮೋಹವನ್ನು ಬಿಡದೇ ನಿತ್ಯವೂ ಸೈಕ್ಲಿಂಗ್ ಮಾಡುತ್ತಿದ್ದಾರೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸೈಕ್ಲಿಂಗ್​ನಿಂದ ಆಗುವ ಪ್ರಯೋಜನ ನೆನಪು ಮಾಡಿಕೊಡಲು ‘ವಿಶ್ವ ಬೈಸಿಕಲ್ ದಿನ’ದ ವಾರ್ಷಿಕ ಆಚರಣೆ ಮತ್ತೆ ನಮ್ಮ ಎದುರಿಗಿದೆ.

    | ಉಮೇಶ್ ಕುಮಾರ್ ಶಿಮ್ಲಡ್ಕ

    ಕರೊನಾ ಬಂದು ಹೋದ ನಂತರದ ಅವಧಿಯ ಜಗತ್ತು ಹೇಗಿರಬೇಕು ಎಂಬ ಬಗ್ಗೆ ಚರ್ಚೆಗಳು ಈಗಾಗಲೇ ಆರಂಭವಾಗಿವೆ. ಪರಿಸರ ಸ್ನೇಹಿ ಬದುಕು ಕಟ್ಟಿಕೊಳ್ಳುವುದಕ್ಕೆ ಜನರಿಗೆ ಒಂದು ಅವಕಾಶ ಈ ಸಂಕಷ್ಟದಿಂದಾಗಿ ಸಿಕ್ಕಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಇದಕ್ಕೆ ಪೂರಕವಾಗಿ ವಿಶ್ವಸಂಸ್ಥೆಯಲ್ಲೂ ಕರೊನೋತ್ತರ ಕಾಲಾವಧಿಯಲ್ಲಿ ‘ಗ್ರೀನ್ ರಿಕವರಿ’ಯ ಚಾಲನಾ ಶಕ್ತಿಯಾಗಿ ಬೈಸಿಕಲ್ಸ್ ಯಾಕಾಗಬಾರದು ಎಂಬ ಪ್ರಶ್ನೆ ಕೋವಿಡ್ 19 ಬಂದ ಕೂಡಲೇ ಕೇಳಿಬಂದಿತ್ತು. ‘ಹೊಸ ಸಹಜತೆ’ಗೆ (ನ್ಯೂ ನಾರ್ಮಲ್) ಹೊಂದಿಕೊಳ್ಳಲು ಸಾರಿಗೆ ಸೌಕರ್ಯ ಹೆಚ್ಚು ಪರಿಸರ ಸ್ನೇಹಿ, ಆರೋಗ್ಯ ಪೂರ್ಣ ಮತ್ತು ಸುಸ್ಥಿರವಾದುದಾಗಿರಬೇಕು ಎಂದು ಯುನೈಟೆಡ್ ನೇಷನ್ಸ್ ಎಕನಾಮಿಕ್ ಕಮಿಷನ್ ಫಾರ್ ಯುರೋಪ್ (ಯುಎನ್​ಇಸಿಇ) ಬೆಟ್ಟು ಮಾಡಿ ತೋರಿಸಿದೆ. ಭಾರತದಲ್ಲೂ ರಾಜ್ಯ ಸರ್ಕಾರಗಳು ಕೆಲವೆಡೆ ಸೈಕ್ಲಿಂಗ್ ಪಥ ನಿರ್ವಿುಸಿವೆಯಾದರೂ ಅದರ ಅನುಷ್ಠಾನ ಸಮರ್ಪಕವಾಗಿಲ್ಲ ಎಂಬುದು ಖೇದಕರ. ಆದಾಗ್ಯೂ, ನಾಳೆ ವಿಶ್ವ ಬೈಸಿಕಲ್ ದಿನದ ಹಿನ್ನೆಲೆ, ಆರೋಗ್ಯ ಪ್ರಯೋಜನಗಳ ಸಂಕ್ಷಿಪ್ತ ವಿವರಗಳ ಅವಲೋಕನಕ್ಕೆ ಈ ದಿನ ಒಂದು ನಿಮಿತ್ತ. 

    ಬೈಸಿಕಲ್ ದಿನಾಚರಣೆ ಹಿನ್ನೆಲೆ: ಬೈಸಿಕಲ್ ಬಳಕೆಗೆ ಸುಮಾರು 200 ವರ್ಷಗಳ ಇತಿಹಾಸವಿದೆ. ಬೈಸಿಕಲ್​ನ ಅನನ್ಯತೆ, ದೀರ್ಘ ಬಾಳ್ವಿಕೆ, ಬಹುಮುಖತೆ, ಸರಳವಾಗಿರುವ, ಕೈಗೆಟುಕುವ, ವಿಶ್ವಾಸಾರ್ಹವಾಗಿರುವ ಗುಣಗಳು ಸ್ವಚ್ಛ ಮತ್ತು ಪರಿಸರ ಸ್ನೇಹಿ ಸುಸ್ಥಿರ ಸಾರಿಗೆ ಎಂಬ ಮನ್ನಣೆಯನ್ನು ಅದಕ್ಕೆ ಕೊಟ್ಟಿದೆ. ಇವಿಷ್ಟೇ ಅಲ್ಲ, ಆರೋಗ್ಯಕ್ಕೂ ಸೈಕ್ಲಿಂಗ್ ಪೂರಕವಾಗಿದೆ. ಇವೆಲ್ಲವನ್ನೂ ಮನಗಂಡ ವಿಶ್ವಸಂಸ್ಥೆಯ ಸಾಮಾನ್ಯ ಸಭೆ 2018ರ ಏಪ್ರಿಲ್​ನಲ್ಲಿ ಜೂನ್ 3ರಂದು ಪ್ರತಿ ವರ್ಷ ವಿಶ್ವ ಬೈಸಿಕಲ್ ದಿನ ಆಚರಿಸುವುದಾಗಿ ಘೋಷಿಸಿತು.

    ಪ್ರಯೋಜನಗಳು

    • ಸೈಕಲ್ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ ಮಾತ್ರವಲ್ಲ, ಬಡ-ಮಧ್ಯಮ ವರ್ಗದ ಕುಟುಂಬ ಗಳಿಗೆ ಆರ್ಥಿಕ ಅನುಕೂಲ, ಶಾರೀರಿಕ ಅನುಕೂಲವನ್ನೂ ಮಾಡಿಕೊಡುತ್ತದೆ.
    • ಎರಡು ಮೂರು ಕಿ.ಮೀ. ದೂರ ಶಾಲೆ, ಕಾಲೇಜುಗಳಿಗೆ ವಿದ್ಯಾರ್ಥಿಗಳು ನಡೆದು ಹೋಗುವ ಬದಲು ಸೈಕಲ್​ನಲ್ಲಿ ಪ್ರಯಾಣಿಸಿದರೆ ಆಯಾಸ ತಪ್ಪುವುದಲ್ಲದೆ, ತರಗತಿಯಲ್ಲಿ ಆರಾಮವಾಗಿ ಪಾಠವನ್ನು ಕೇಳಬಹುದಾಗಿದೆ.
    • ಹತ್ತಾರು ಕಿ.ಮೀ. ಅಂತರವನ್ನೆಲ್ಲ ಸೈಕಲ್​ನಲ್ಲೇ ಕ್ರಮಿಸಬಹುದಾದ ಕಾರಣ ಬೈಕ್​ನಲ್ಲಿ ಸಂಚರಿಸುವ ಬದಲು ಸೈಕಲ್ ಬಳಸಿದರೆ ಪೆಟ್ರೋಲ್ ಉಳಿತಾಯ ಮತ್ತು ಆರೋಗ್ಯಕ್ಕೂ ಒಳಿತು.
    • ಉದ್ಯೋಗಕ್ಕೆ ತೆರಳುವವರು ವಿಶೇಷವಾಗಿ ಮನೆ-ಕಚೇರಿ ಮಾತ್ರ ಓಡಾಟ ಇರುವಂಥವರು ಸೈಕಲ್ ಬಳಸಿದರೆ ಇನ್ನಷ್ಟು ಉತ್ತಮ. ಇಂಧನ, ಹಣದ ಉಳಿತಾಯ ಮಾತ್ರವಲ್ಲದೇ ಪರಿಸರಸ್ನೇಹಿ ಸಾರಿಗೆ ಅಳವಡಿಸಿದಂತೆಯೂ ಆಗುತ್ತದೆ.

    ಶಾರೀರಿಕ/ಆರೋಗ್ಯ ಪ್ರಯೋಜನಗಳು

    • ಸೈಕ್ಲಿಂಗ್ ಅಥವಾ ವಾಕಿಂಗ್ ಮೂಲಕ ಕೆಲಸಕ್ಕೆ ತೆರಳುವವರಲ್ಲಿ ಕಾರ್ಡಿಯೋವಾಸ್ಕುಲರ್ ಡಿಸೀಸ್ (ಸಿವಿಡಿ) ಅಥವಾ ಸ್ಟ್ರೋಕ್ ಆಗುವ ಸಂಭವ ಕಡಿಮೆ ಎಂಬ ಅಂಶವನ್ನು ಬ್ರಿಟನ್​ನ ಸಂಶೋಧನೆ ಬಹಿರಂಗಪಡಿಸಿದೆ. ಪ್ರಯಾಣಕ್ಕೆ ಸೈಕಲ್ ಬಳಸುವವರಲ್ಲಿ ಸಿವಿಡಿ ಉಂಟಾಗುವ ಸಾಧ್ಯತೆ ಕೇವಲ 11% ಮಾತ್ರ. ಗಂಭೀರ ಪ್ರಮಾಣದ ಸಿವಿಡಿ ಸಾಧ್ಯತೆ 30% ಕಡಿಮೆ. ನಿಯಮಿತವಾಗಿ ಸೈಕ್ಲಿಂಗ್ ಮಾಡುವವರಲ್ಲಿ ಗಂಭೀರ ಪ್ರಮಾಣದ ಸಿವಿಡಿ ಸಾಧ್ಯತೆ 43% ಕಡಿಮೆ ಇದೆ. ಸೈಕ್ಲಿಂಗ್ ಮಾಡದೇ ಇರುವಂಥವರಲ್ಲಿ ಈ ಅಪಾಯ ಪ್ರಮಾಣ ಹೆಚ್ಚು.
    • ಸೈಕ್ಲಿಂಗ್​ನಿಂದ ಟೈಪ್ 2 ಮಧುಮೇಹದ ಅಪಾಯವೂ ಕಡಿಮೆಯಾಗುತ್ತದೆ. ಸದರ್ನ್ ಡೆನ್ಮಾರ್ಕ್ ಯೂನಿವರ್ಸಿಟಿಯ ಸಂಶೋಧನೆ ಪ್ರಕಾರ, ಸೈಕ್ಲಿಂಗ್ ಮಾಡದವರಿಗೆ ಹೋಲಿಸಿದರೆ, ಸೈಕ್ಲಿಂಗ್ ಮಾಡುವುದರಿಂದ ಟೈಪ್ 2 ಮಧುಮೇಹದ ಅಪಾಯವನ್ನು ಶೇಕಡ 20ರಷ್ಟು ಕಡಿಮೆ ಮಾಡಬಹುದು.
    • ಹೆಚ್ಚುವರಿ ತೂಕ ಇಳಿಸುವುದಕ್ಕೂ ಸೈಕ್ಲಿಂಗ್ ಪರಿಣಾಮಕಾರಿ ವ್ಯಾಯಾಮ ಎಂಬುದನ್ನು ಬ್ರಿಟನ್ ಸಂಶೋಧನೆ ಬಹಿರಂಗಪಡಿಸಿದೆ. 1,50,000 ಜನರ ನಿತ್ಯ ಪ್ರಯಾಣದ ವಿವರಗಳನ್ನು ಪಡೆದು ಪರಿಶೀಲಿಸಿದಾಗ, ಸೈಕ್ಲಿಂಗ್ ಮಾಡುತ್ತಿರುವವರ ಬಿಎಂಐ (ಬಾಡಿ ಮಾಸ್ ಇಂಡೆಕ್ಸ್) ಉಳಿದವರಿಗಿಂತ ಕಡಿಮೆ ಇತ್ತು.
    • ಲೈಂಗಿಕ ಆರೋಗ್ಯ ಮತ್ತು ಮೂತ್ರಕೋಶಗಳ ಆರೋಗ್ಯಕ್ಕೂ ಸೈಕ್ಲಿಂಗ್ ದೊಡ್ಡ ಸಹಾಯ ಮಾಡುತ್ತದೆ. ಈಜುಪಟುಗಳು ಮತ್ತು ಓಟಗಾರರಿಗೆ ಸರಿಸಮವೆನ್ನುವಂಥ ಲೈಂಗಿಕ ಆರೋಗ್ಯ ಮತ್ತು ಮೂತ್ರಕೋಶಗಳ ಆರೋಗ್ಯ ಸೈಕ್ಲಿಂಗ್ ಮಾಡುವವರಲ್ಲಿ ಕಂಡುಬಂದಿದೆ ಎಂದು ಕ್ಯಾಲಿಫೋರ್ನಿಯಾ ಯೂನಿವರ್ಸಿಟಿ ಅಧ್ಯಯನ ಬಹಿರಂಗಪಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts