More

    ಹೋಳಿ ಹಬ್ಬದ ವೈವಿಧ್ಯ; ಇಂದು ಬಣ್ಣದ ಹಬ್ಬ

    ತಾರಕಾಸುರನ ವಧೆ ಶಿವನ ಪುತ್ರನಿಂದ ಮಾತ್ರ ಸಾಧ್ಯ ಎಂಬ ಸಂದರ್ಭ ಬಂದಿದ್ದರಿಂದ ತಪಸ್ಸಿನಲ್ಲಿದ್ದ ಶಿವನನ್ನು ಎಚ್ಚರಿಸುವ ಕೆಲಸವನ್ನು ದೇವತೆಗಳು ಮನ್ಮಥನಿಗೆ ವಹಿಸಿದರು. ಮೋಹಗೊಳಿಸುವ ವರವನ್ನು ಬ್ರಹ್ಮನಿಂದ ಪಡೆದಿದ್ದ ಮನ್ಮಥ, ಪುಷ್ಪಬಾಣವನ್ನು ಪ್ರಯೋಗಿಸಿ ಎಚ್ಚರಗೊಳಿಸಿದ. ಸಿಟ್ಟಿಗೆದ್ದ ಶಿವ ಮೂರನೇ ಕಣ್ಣು ಬಿಟ್ಟು ಮನ್ಮಥನನ್ನು ಸುಟ್ಟುಹಾಕಿದ. ಇದೇ ಹೋಳಿಹುಣ್ಣಿಮೆ. ನಾಡಿನ ಉದ್ದಗಲಕ್ಕೂ ಕಾಮನನ್ನು ಕೂರಿಸುವ, ಸುಡುವ, ಹಾಡುವ, ಕುಣಿಯುವ, ಬಣ್ಣ ಎರಚುವ, ಓಕಳಿ ಚಿಮ್ಮುವ ಕಾರ್ಯಕ್ರಮಗಳು ನಡೆಯುತ್ತವೆ.

    ಹೋಳಿ ಹಬ್ಬದ ವೈವಿಧ್ಯ; ಇಂದು ಬಣ್ಣದ ಹಬ್ಬ

    | ಡಾ. ಕುರುವ ಬಸವರಾಜ್

    ಪುರಾಣದ ಕಥನಗಳು ಕೇಳಿ ಬಿಟ್ಟುಬಿಡುವ ಕಥನಗಳಾಗಿ ಮಾತ್ರ ಉಳಿದಿಲ್ಲ. ನಮ್ಮ ಬದುಕಿನ ಭಾಗವಾಗಿ ಒಳಗೊಂಡಿವೆ. ಗಣೇಶ, ಗೌರಿ, ಶಿವ, ವಿಷ್ಣು, ರತಿ, ಮನ್ಮಥ ಎಲ್ಲರೂ ಏನೇನೋ ಕಾರಣಕ್ಕೆ ಹಬ್ಬವಾಗಿ ವರ್ಷ ವರ್ಷವು ಪುನರಪಿ ಮೈತಳೆಯುತ್ತಾರೆ. ಪುರಾಣದ ಘಟನೆಗಳು ಸತ್ಯಕ್ಕೆ ಸತ್ಯ ಎನ್ನಲಾರೆವು ಸುಳ್ಳು ಅನ್ನಲಾರೆವು. ಅಂತಹ ಭಾವವ ಉಳಿಸಿಬಿಟ್ಟಿವೆ. ದೃಶ್ಯಾತ್ಮಕ ಆಚರಣೆಗಳ ಮೂಲಕ ಮತ್ತೆ ಮತ್ತೆ ಕ್ರಿಯಾಶೀಲತೆಯಲಿ ನಿರ್ಮಾಣಗೊಳ್ಳುತ್ತವೆ.

    ಮದನ, ಮನ್ಮಥ, ಮಾರ ಎಂಬೆಲ್ಲಾ ಹೆಸರುಗಳು ಮನ್ಮಥನಿಗೆ. ಬ್ರಹ್ಮನಿಂದ ಜಗತ್ತನ್ನು ಮೋಹಗೊಳಿಸುವ ವರವನ್ನು ಪಡೆದವನು ಅವನು. ಹೋಳಿ ಹಬ್ಬ ಕಾಮನ ದಹನದ ಕಥೆಯ ಕೇಂದ್ರಿತವಾದುದು. ಶಿವನು ದೊಡ್ಡ ತಪಸ್ಸಿಗೆ ತೊಡಗಿದ್ದಾನೆ. ಇತ್ತ ತಾರಕಾಸುರನ ಹಾವಳಿ ಹೆಚ್ಚಾಗಿದೆ. ಈ ತಾರಕಾಸುರನ ವಧೆಯು ಶಿವನ ಪುತ್ರನಿಂದ ಮಾತ್ರ ಸಾಧ್ಯ ಎಂಬ ಸಂದರ್ಭ ಬಂದಿದ್ದರಿಂದ ಶಿವನನ್ನು ಎಚ್ಚರಗೊಳಿಸಲೇ ಬೇಕಿದೆ. ಅವನಿಗಾಗಿ ಕಾಯುತ್ತಿರುವ ಪಾರ್ವತಿಯನ್ನು ವರಿಸುವ ಸಂದರ್ಭವ ನಿರ್ಮಿಸಬೇಕಾಗಿದೆ. ದೇವತೆಗಳು ಶಿವನನ್ನು ಎಚ್ಚರಗೊಳಿಸುವ ಕಾರ್ಯವನ್ನು ಮನ್ಮಥನಿಗೆ ವಹಿಸಿದಾಗ, ಮನ್ಮಥ ತನ್ನ ಪುಷ್ಪ ಬಾಣವನ್ನು ಶಿವನ ಮೇಲೆ ಪ್ರಯೋಗಿಸಿ ಎಚ್ಚರಗೊಳಿಸುತ್ತಾನೆ. ಸಿಟ್ಟಿಗೆದ್ದ ಶಿವನು ಮೂರನೆಯ ಕಣ್ಣುಬಿಟ್ಟು ಮನ್ಮಥನನ್ನು ಸುಟ್ಟು ಹಾಕುತ್ತಾನೆ. ಋಗ್ವೇದ, ಸ್ಕಂದ ಪುರಾಣ, ಶಿವ ಪುರಾಣಗಳಲ್ಲಿಯೂ ಈ ಕಾಮದಹನದ ವಿಷಯವಿದೆ. ಹೋಳಿ ಹುಣ್ಣಿಮೆ, ಕಾಮನ ಹಬ್ಬ ಎಂದು ಈ ಹಬ್ಬವನ್ನು ಕರೆಯುವುದಿದೆ.

    ಪುರಾಣದ ಮನ್ಮಥನ ಸಾವಿನ ಘಟನೆಯ ಪುನರಪಿ ಆಚರಣೆಯದು ಹೋಳಿ ಹಬ್ಬ. ಇಲ್ಲಿ ರತಿ, ಮನ್ಮಥ, ಶಿವ ಮೊದಲಾದ ಪುರಾಣದ ಆಳೆತ್ತರದ ಆಕೃತಿಯ ಪಾತ್ರಗಳು ಕಥನ ಪಾತ್ರಧಾರಿಗಳಾಗಿ ಪಾಲ್ಗೊಳ್ಳುತ್ತವೆ. ದೃಶ್ಯವಾಗಿ ನಿರ್ಮಿಸುವುದು ಇಲ್ಲಿದೆ. ಕಥನವಾಗಿ ಹೇಳುವುದು ಇಲ್ಲಿದೆ. ಹಾಗೆಯೇ ಕಾಮ ದಹನದ  ಆಚರಣೆಯ ಕ್ರಿಯೆ ಇಲ್ಲಿದೆ. ಹಾಗಾಗಿ ಅದಾವಾಗಿನದೋ ಪುರಾಣದ ಘಟನೆ ಇದಿಲ್ಲಿ ಈಗ ಮತ್ತೆ ಏರ್ಪಡುತ್ತದೆ. ವರ್ಷ ವರ್ಷವು ಏರ್ಪಡುತ್ತದೆ. ಮೂರು ದಿನ, ಐದು ದಿನ, ತಿಂಗಳವರೆಗೆ ಕಾಮನನ್ನು ಕೂರಿಸುವುದಿದೆ. ವರ್ಷದ ಈ ಹುಣ್ಣಿಮೆಯನ್ನು ಹೋಳಿ ಹುಣ್ಣಿಮೆ ಎಂದೇ ಕರೆಯುವುದಿದೆ.

    ಈ ಹಬ್ಬವು ಉತ್ತರ ಭಾರತದಲ್ಲಿ ಹೆಚ್ಚು. ಕರ್ನಾಟಕದಲ್ಲೆಲ್ಲಾ ಈ ಹೋಳಿ ಹಬ್ಬ ಆಚರಣೆಯಲ್ಲಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಯಲ್ಲಾಪುರ, ಮುಂಡುಗೋಡ ತಾಲ್ಲೂಕುಗಳಲ್ಲಿ ‘ಬೇಡನ ವೇಷ’ ಪ್ರಖ್ಯಾತವಾಗಿದೆ. ಭೀಕರತೆ ಹುಟ್ಟುವ ಮುಖಕ್ಕೆ ಕೆಂಪು, ಬಿಳಿ, ಕಪ್ಪು ಬಣ್ಣಗಳನ್ನು ಬಳಿದುಕೊಂಡು, ಗಡ್ಡ, ಮೀಸೆ, ಕಟ್ಟಿಕೊಂಡು, ಸೊಂಟಕ್ಕೆ ಬಣ್ಣದ ಬಟ್ಟೆ ತೊಟ್ಟು, ಗಂಟೆಸರ ಕಟ್ಟಿಕೊಂಡು, ಕಾಲಿಗೆ ಕಿರುಗೆಜ್ಜೆ ಕಟ್ಟಿ, ತಲೆಗೆ ನವಿಲು ಗರಿಗಳಿಂದಾವೃತವಾದ ದೊಡ್ಡ ಕಿರೀಟ ಕಟ್ಟಿಕೊಂಡು, ಒಂದು ಕೈಯಲ್ಲಿ ಕತ್ತಿ, ಇನ್ನೊಂದು ಕೈಯಲ್ಲಿ ಢಾಲು ಹಿಡಿದು ಭೀಕರವಾಗಿ ಕೂಗುವ ಬೇಡನ ಸೊಂಟಕ್ಕೆ ಹಗ್ಗವನ್ನು ಕಟ್ಟಿ ನಾಲ್ಕೈದು ಜನ ಹಿಡಿದಿರುತ್ತಾರೆ. ಅವರಿಂದ ತಪ್ಪಿಸಿಕೊಳ್ಳಲು ಆತ ಹೆಣಗುತ್ತಾನೆ. ರಣ ಹಲಗೆಯನ್ನು ತಾರ ಸ್ವರದಲ್ಲಿ ಬಡಿದಂತೆ ಹೋಳಿ ಹುಣ್ಣಿಮೆಯಂದು ಅಂಕೋಲೆಯ ಬಾಜಾರದಿಂದ ಬೆಳಂಬಾರ ಸುಗ್ಗಿಯ ಮೇಳಗಳು ಹಾಗೂ ಸೋಗುಗಳ ಮೆರವಣಿಗೆ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ನೆರೆದಿರುತ್ತಾರೆ. *1.

    ಕರೆ ಒಕ್ಕಲಿಗ, ನಾಮಧಾರಿ, ಅಗೇರ ಪಂಥಗಳವರು ಈ ಹೋಳಿ ಹುಣ್ಣಿಮೆಯ ಹಬ್ಬದ ಸುಗ್ಗಿಕುಣಿತದಲ್ಲಿ ಪಾಲ್ಗೊಳ್ಳುತ್ತಾರೆ.

    ರಾಮನಗರದಲ್ಲಿ ಕಾಮನಗುಡಿಯ ಸರ್ಕಲ್‍ನಲ್ಲಿ ಐದು ದಿನಗಳ ಕಾಲ ರತಿ, ಮನ್ಮಥರ ಕಾಮನ ಗೊಂಬೆಗಳ ಬಳಸಿ ದಿನಕ್ಕೊಂದು ದೃಶ್ಯವ ನಿರ್ಮಿಸುತ್ತಾರೆ. ಕಾಮನ ಸುಡುವ ದಿನ ನಗರದವರು ಸೌದೆಗಳ ತಂದು ಹಾಕುತ್ತಾರೆ. ಒಬ್ಬರಿಗೊಬ್ಬರು ಬಣ್ಣ ಎರಚುವುದು ಈಗ ನಡೆಯುತ್ತದೆ. ಕೊನೆಗೆ ಕಾಮನ ಗುಡಿಯ ಮೇಲಿನ ಶಿವನ ಮೂರನೆ ಕಣ್ಣಿನಿಂದ ಬಂದಂತೆ ಸಿಡಿಮದ್ದು ಕಾಮನ ಸುಡುವ ಕುಳ್ಳು ಸೌದೆಗೆ ಬಂದು ಬಡಿಯುವಂತೆ ಮಾಡುವ ಮೂಲಕ ಸುಡಲಾಗುತ್ತದೆ. ಆ ಬೂದಿಯನ್ನು ಊರವರೆಲ್ಲಾ ಒಯ್ಯತ್ತಾರೆ. ಬಿತ್ತುವ ಬೀಜಗಳಿಗೆ ಈ ಬೂದಿ ಸೇರಿಸಿ ಬಿತ್ತುವುದರಿಂದ ಒಳಿತಾಗುತ್ತದೆ ಎಂದೇ ಭಾವಿಸಲಾಗುತ್ತದೆ.

    ರಾಣೆಬೆನ್ನೂರಿನಲ್ಲಿ ಬೇರೆ ಬೇರೆ ಭಾಗಗಳಲ್ಲಿ ಐವತ್ತುಕಡೆ ಕಾಮನನ್ನು ಕೂರಿಸುವುದಿದೆ. ಇಲ್ಲಿ ಎರಡುಕಡೆ ನೇರವಾಗಿ ಜೀವಂತ ಕಾಮರು ರತಿಯ ಮನ್ಮಥರಾಗಿ ವೇಷ ಧರಿಸಿ ಕೂರುತ್ತಾರೆ. ಇಲ್ಲಿಯ ಮನ್ಮಥನನ್ನು ಯಾರೂ ನಗಿಸಲಾರರು. ಹಾಗೆ ಇರಬಲ್ಲವರು ಇವರು. ನಗಿಸಿದವರೆಗೆ ಒಂದೂವರೆ ಲಕ್ಷ ರೂಪಾಯಿಯವರೆಗು ಬಹುಮಾನವನ್ನು ದೊಡ್ಡಪೇಟೆಯ ಕಾಮನಗುಡಿಯವರು ಇಡುವುದಿದೆ.

    ಬೆಳಗಾವಿ ಜಿಲ್ಲೆಯ ಶಿರಗಾಪುರದಲ್ಲಿ ಪ್ರತಿ ಮನೆಯಿಂದ ಹರಿದ ಬಟ್ಟೆಗಳ ಸಂಗ್ರಹಿಸಿ ಸುಮಾರು ಮೂವತ್ತು ಅಡಿ ಎತ್ತರ, ಇಪ್ಪತ್ತು ಅಡಿ ಅಗಲದ ಕಾಮನನ್ನು ಭತ್ತದ ಒಣ ಹುಲ್ಲು ಬಳಸಿ ಮಾಡುತ್ತಾರೆ. ಹರಿದ ಬಟ್ಟೆಗಳ ಗೊಂಬೆಗೆ ಸುತ್ತಿ, ಮುಖಕ್ಕೆ ಕರಿಯ ಎಳ್ಳಿನಿಂದ ರೂಪಿಸಿ ಬಣ್ಣ ಮಾಡಲಾಗುತ್ತದೆ. ಅಲಂಕೃತ ಕಾಮಣ್ಣನನ್ನು ‘ಕಾಮಣ್ಣನ ಹಕ್ಕಲು’ ಬಯಲಿನಲ್ಲಿ ಕೂರಿಸುತ್ತಾರೆ. ಮಕ್ಕಳ ಫಲ ಬೇಡುವವರು, ಹರಕೆ ಹೊತ್ತವರು ಕಾಮನಗೊಂಬೆಗಳ ಎದುರಿನ ತಕ್ಕಡಿಯಲ್ಲಿ ಮಕ್ಕಳ ತೂಕದ ತೆಂಗಿಕಾಯಿಗಳನ್ನು ಕಾಣಿಕೆ ನೀಡುತ್ತಾರೆ. ಈ ಕಾಮನ ಗೊಂಬೆಯನ್ನು ಮೆರವಣಿಗೆಯಲ್ಲಿ ಸ್ಮಶಾನಕ್ಕೆ ಸಾಗಿಸಿ, ಪೂಜಿಸಿ, ಹರಿಜನರು ಬೆಂಕಿ ಹೊತ್ತಿಸಿ ಸುಡುತ್ತಾರೆ. *2

    ಬಾಗಲಕೋಟೆಯ ಹೋಳಿಹಬ್ಬದಲ್ಲ್ಲಿ ಹೋಳಿಹಾಡು, ದುಂದುಮೆ ಪದ, ಲಾವಣಿಗಳನ್ನು ಹಾಡುತ್ತಾರೆ. ಕಾಮನನ್ನು ಬೇವಿನ ಸೊಪ್ಪಿನಿಂದ ಅಲಂಕರಿಸುತ್ತಾರೆ. ಸಂಪ್ರದಾನಿ ಹಲಗಿ, ಶಹನಾಯಿಗಳ ಮಜಲು ನಡೆಯುತ್ತದೆ. ಎತ್ತಿನಗಾಡಿ ಟ್ರಾಕ್ಟರ್‍ಗಳಲ್ಲಿ ಬಂದು ಜನ ಬಣ್ಣ ಎರಚುತ್ತಾರೆ.

    ಬಂಜಾರಿಗರು, ಕುಣುಬಿಗರು, ಗೊಂಡರು, ಹೋಳಿ ಸಿಗ್ಮ, ಹೋಳಿ ಹಳಬು ಎಂದೆಲ್ಲಾ ಕರೆದು ತಮ್ಮದೇ ವೇಷ ವಾದ್ಯಗಳಿಂದ ಕುಣಿದು ಸಂಭ್ರಮದಿಂದ ಈ ಹಬ್ಬ ಮಾಡುತ್ತಾರೆ.

    ಕಾಮನ ಸುಡುವ ಬೆಂಕಿ ಹರಿಜನರ ಮನೆಯಿಂದಲೆ ತರುವುದು. ಬಣ್ಣ ಎರಚುವುದು, ಓಕಳಿ ಆಡುವುದು ಇಲ್ಲಿದೆ. ಅಲ್ಲದೆ ಕಾಮನ ಸುಡುವಾಗ ಲಬ್ ಲಬೋ ಎಂದು ಬಾಯಿಬಡಿದುಕೊಳ್ಳುವುದೂ ಇದೆ. ಸುಟ್ಟ ಬೂದಿಯನ್ನು ಬಿತ್ತುವ ಬೀಜದೊಂದಿಗೆ ಬೆರೆಸಿ ಬಿತ್ತುವುದು, ಫಲವಂತಿಕೆಯ ಉದ್ದೇಶದಿಂದ ತಮ್ಮ ಹೊಲಕ್ಕೆ ಎರೆಚುವುದು ಇದೆ.

    ಈ ಹಬ್ಬದಲ್ಲಿ ಒಬ್ಬರಿಗೊಬ್ಬರು ಬೈದಾಡುವುದು, ಹೊಲಸು ಪದಾರ್ಥಗಳ ಒಬ್ಬರ ಮೇಲೊಬ್ಬರು ಎರಚುವುದು, ಅಣಕಿಸಿ ಗೇಲಿಮಾಡುವುದು ಎಲ್ಲವು ಇದೆ.

    ಹೋಳಿ ಹುಣ್ಣಿಮೆ ಬಂತು, ಹೊಯ್ಕೊಳ್ಳುದು ಬಂತು

    ಹೋಳ್ಗಿ ತುಪ್ಪುಣ್ಣುದು ಬಂತೊ|| *3

    ನರಗುಂದ ತಾಲ್ಲೂಕು ಕೊಣ್ಣೂರಿನ ತತ್ರಾಣಿಯ ಹಬ್ಬದಿಂದಲೇ ಕಾಮನಹಬ್ಬ ಆರಂಭ. ಹತ್ತು ಓಣಿಗಳಲ್ಲಿ ಕೊಪ್ಪಳ ಭಾಗದಿಂದ ಬಂದವರು ಕಿಟ್ಟದಿಂದ ಕಾಮನ ಗೊಂಬೆಗಳ ಮಾಡಿ ಕೂರಿಸುತ್ತಾರೆ. ಮನೆ ಮನೆಯ ಮಕ್ಕಳಿಗು ಹಲಗೆ ವಾದ್ಯ ತಂದುಕೊಟ್ಟು ಒಂದು ತಿಂಗಳು ಬಡಿಯುತ್ತಾರೆ. ನವಲಗುಂದ, ಹುಬ್ಬಳ್ಳಿಗಳಲ್ಲಿಯೂ ಕಾಮನ ಹಬ್ಬ ಬಹುಮುಖ್ಯವಾದುದು. ಗದಗದಲ್ಲಂತು ಬಹು ವಿಜೃಂಬಣೆಯದು. ಓಣಿ ಓಣಿಗಳಲ್ಲಿಯೂ ಪ್ರತ್ಯೇಕವಾಗಿ ಕಾಮನನ್ನು ಕೂರಿಸಲಾಗುವುದು. ಅರವತ್ತಕ್ಕೂ ಹೆಚ್ಚು ಜಗ್ಗಲಿಗೆ ತಂಡಗಳು ಕಾಮನ ಸುಡುವ ದಿನ ಇಲ್ಲಿ ಸೇರುತ್ತವೆ.

    ನಾಡಿನ ಉದ್ದಗಲಕ್ಕೂ ಕಾಮನನ್ನು ಅಲಂಕರಿಸಿ ಕೂರಿಸುವ, ಸಾಂಕೇತಿಕವಾಗಿ ಸುಡುವ, ಹಾಡುವ, ಕುಣಿಯವ, ಬಣ್ಣ ಎರಚುವ, ಓಕಳಿ ಚಿಮ್ಮುವ ಈ ಹಬ್ಬ ಕಾಮನನ್ನು ಮತ್ತೆ ಮತ್ತೆ ನೆನೆಯುವ ಹಬ್ಬ ಇದಾಗಿದೆ.

    (ಗ್ರಂಥ ಋಣ: *1 ಸೋಗುಗಳು: ಸಂ. ಗಿರಿಜ ಮ. ದುರ್ಗದಮಠ. ವಿಶ್ವೇಶ್ವರಿ ಬಸವಲಿಂಗಯ್ಯ, ಭೂಷಣ ಪ್ರಕಾಶನ, ಜಾನಪದ ಸಂಶೋಧನಾ ಕೇಂದ್ರ, ಸಪ್ತಾಪುರ, ಹಳಿಯಾಳ ರಸ್ತೆ, ಧಾರವಾಡ -1, ಕೃತಿಯಲ್ಲಿ ಡಾ. ಎನ್.  ಆರ್. ನಾಯಕರ ‘ಕರಾವಳಿ ಕರ್ನಾಟಕದ ಸೋಗುಗಳು’ ಲೇಖನ. ಪುಟ 43 -41; *2 ಕರ್ನಾಟಕದ ಜನಪದ ಆಚರಣೆಗಳು: ಡಾ. ಸ. ಚಿ. ರಮೇಶ್. ಪ್ರಸಾರಾಂಗ, ಕನ್ನಡ ವಿಶ್ಚವಿದ್ಯಾಲಯ, ಹಂಪಿ, ಪುಟ 329; *3 ಕನ್ನಡ ಜಾನಪದ ಗೀತೆಗಳು: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ. ಪುಟ 179)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts