More

    ನೆಮ್ಮದಿಯ ಜೀವನಕ್ಕೆ ಸುಖನಿದ್ರೆ | ಇಂದು ವಿಶ್ವ ನಿದ್ರಾ ದಿನ

    | ಪಂಕಜ ಕೆ.ಎಂ. ಬೆಂಗಳೂರು

    ‘ಅಯ್ಯೋ, ರಾತ್ರಿ ಏನ್ ಮಾಡಿದ್ರೂ ನಿದ್ರೆ ಬರಲ್ಲ. ಆಫೀಸಿನಲ್ಲಿ ಹಗಲಿನಲ್ಲಿ ಸರಿಯಾಗಿ ಡ್ಯೂಟಿ ಮಾಡೋಕೂ ಆಗಲ್ಲ…’ -ಇದು ಅನೇಕರ ಸಮಸ್ಯೆ, ಮನುಷ್ಯನಿಗೆ ಆರೋಗ್ಯಕರ ಜೀವನಕ್ಕಾಗಿ ಆಹಾರ ಎಷ್ಟು ಮುಖ್ಯವೋ ಸುಖಕರವಾದ ನಿದ್ರೆಯೂ ಅಷ್ಟೇ ಮುಖ್ಯ. ಆದರೆ, ಬದಲಾದ ಜೀವನ ಶೈಲಿಯಲ್ಲಿ ಆಹಾರದ ಜತೆಗೆ ನಿದ್ರೆ ಮಾಡುವ ಕ್ರಮದಲ್ಲೂ ಬಹಳಷ್ಟು ಬದಲಾವಣೆಗಳಾಗಿದ್ದು ‘ನಿದ್ರಾಹೀನತೆ’ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚಿದೆ. ಸಾಮಾನ್ಯವಾಗಿ ನಿದ್ರೆಯ ಸಮಸ್ಯೆಗಳು ಪ್ರಾಕೃತಿಕ ಮತ್ತು ದೈಹಿಕ ಹಿನ್ನೆಲೆಗಳಿಂದ ಬರುತ್ತವೆ. ಅತಿಯಾದ ತೂಕ, ಬೊಜ್ಜು, ಆತಂಕ ಮತ್ತು ಒತ್ತಡದ ಜೀವನ, ರಾತ್ರಿ ಪಾಳಿಯಲ್ಲಿ ಕೆಲಸ, ದೈಹಿಕ ಸಮಸ್ಯೆಗಳು, ವಯಸ್ಸು, ಅಧಿಕ ಔಷಧಗಳ ಸೇವನೆ, ತಡವಾಗಿ ನಿದ್ರಿಸುವುದು, ಟಿವಿ, ಮೊಬೈಲ್ ವೀಕ್ಷಣೆಗಳಿಂದ ನಿದ್ರಾಹೀನತೆ ಸಮಸ್ಯೆ ಕಾಣಿಸಿಕೊಳ್ಳಬಹುದು. ಕೆಲವರಿಗೆ ಅನುವಂಶೀಯತೆಯಿಂದಲೂ ಈ ಸಮಸ್ಯೆ ಬರುತ್ತದೆ.

    ಸ್ಲೀಪ್ ಆಪ್ನಿಯಾ: ನಿದ್ರಾಹೀನತೆಯಿಂದ ಉಂಟಾಗುವ ಸಮಸ್ಯೆಗಳಲ್ಲಿ ‘ಸ್ಲೀಪ್ ಆಪ್ನಿಯಾ’ (ನಿದ್ರಾ ಶ್ವಾಸಬಂಧನ) ಕೂಡ ಒಂದು. ಅಂದರೆ ನಿದ್ರೆಯಲ್ಲಿ ಉಸಿರಾಡುವುದನ್ನೇ ಮರೆಯುವುದು ಎಂದರ್ಥ. ಒತ್ತಡದ ಜೀವನದಿಂದಾಗಿ ‘ಸ್ಲೀಪ್ ಆಪ್ನಿಯಾ’ ಇತ್ತೀಚಿನ ದಿನಗಳಲ್ಲಿ ಜನರನ್ನು ಹೆಚ್ಚು ಬಾಧಿಸುತ್ತಿದ್ದು, ಅತಿಯಾದ ಬೊಜ್ಜು ಹಾಗೂ ಗೊರಕೆ ಇದಕ್ಕೆ ಕಾರಣ. ಈ ಸಮಸ್ಯೆಯುಳ್ಳವರು ನಿದ್ರೆಯಲ್ಲಿ ಅಸಮರ್ಪಕ ಉಸಿರಾಟ ಅಥವಾ ಕೆಲವೊಮ್ಮೆ ಉಸಿರಾಟವನ್ನೇ ನಿಲ್ಲಿಸುವ ಸಾಧ್ಯತೆಗಳಿರುತ್ತದೆ. ಪರಿಣಾಮ ಶ್ವಾಸಕೋಶ ಕಿರಿದಾಗಿ ಹೃದಯ ಮತ್ತು ಮಿದುಳಿಗೆ ಅಗತ್ಯವಾದ ಆಮ್ಲಜನಕ ಪೂರೈಕೆಯಾಗದೆ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮಾತ್ರವಲ್ಲ ಇದು ಮಧುಮೇಹ, ಅಧಿಕ ರಕ್ತದ ಒತ್ತಡ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತದೆ ಎನ್ನುತ್ತಾರೆ ತಜ್ಞರು.

    ನಿದ್ರಾಹೀನತೆಯ ಲಕ್ಷಣಗಳು: ಸರಿಯಾದ ನಿದ್ರೆ ಮಾಡದಿದ್ದರೆ ಹಗಲು ಹೊತ್ತಿನಲ್ಲಿ ತೂಕಡಿಕೆ, ಕೆಲಸದಲ್ಲಿ ನಿರಾಸಕ್ತಿ ಉಂಟಾಗುತ್ತದೆ. ತಲೆ, ಕಣ್ಣು ಹಾಗೂ ಹುಬ್ಬುಗಳ ನೋವು, ದಣಿವು, ಕಿರಿಕಿರಿ, ಏಕಾಗ್ರತೆ ಅಥವಾ ಜ್ಞಾಪಕ ಶಕ್ತಿಯ ಸಮಸ್ಯೆ, ರಾತ್ರಿ ವೇಳೆ ಪದೇಪದೆ ಎಚ್ಚರಗೊಳ್ಳುವುದು, ಬೆಳಗ್ಗೆ ಬೇಗನೆ ಎಚ್ಚರವಾಗುವುದು, ನಿದ್ರೆ ಮಾಡಿದಂತೆ ಭಾಸವಾಗದಿರುವುದು, ನಿದ್ರೆಯಲ್ಲಿ ಗೊರಕೆ ಹೊಡೆಯುವುದು, ಮಾತನಾಡುವುದು, ನಡೆಯುವುದು ಈ ಮುಂತಾದವು ನಿದ್ರಾಹೀನತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಯ ಲಕ್ಷಣಗಳು. ಇಂತಹವರು ವೈದ್ಯರಲ್ಲಿ ಚಿಕಿತ್ಸೆ ಪಡೆಯುವುದು ಸೂಕ್ತ.

    ನಿದ್ರೆಯ ಗುಣಮಟ್ಟ ಪರೀಕ್ಷೆ: ವ್ಯಕ್ತಿಯ ನಿದ್ರೆಯ ಗುಣಮಟ್ಟ ಅಳೆಯುವ ವಿಧಾನ ಈಗ ಜಾರಿಯಲ್ಲಿದೆ. ಹಾಗಾಗಿ ರೋಗ ಲಕ್ಷಣಗಳು ಕಂಡುಬಂದಲ್ಲಿ. ವೈದ್ಯರಲ್ಲಿ ನಿದ್ರೆಯ ಗುಣಮಟ್ಟ (ಸ್ಲೀಪ್ ಟೆಸ್ಟ್) ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವ ಮೂಲಕ ಉತ್ತಮ ನಿದ್ರೆಯೊಂದಿಗೆ ಉತ್ತಮ ಆರೋಗ್ಯ ಹೊಂದಬಹುದಾಗಿದೆ ಎನ್ನುತ್ತಾರೆ ಬ್ರೇನ್ಸ್ ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ನರರೋಗ ತಜ್ಞ ಡಾ. ಎನ್.ಕೆ.ವೆಂಕಟರಮಣ.

    ನಿದ್ರಾಹೀನತೆಯಿಂದಾಗುವ ಸಮಸ್ಯೆ: ನಿದ್ರಾಹೀನತೆಯಿಂದ ಅರೋಗ್ಯದ ಮೇಲೆ ಗಂಭೀರ ಪರಿಣಾಮ ಆಗಬಹುದು. ಉಸಿರಾಟದ ಸಮಸ್ಯೆ, ರಕ್ತದ ಒತ್ತಡ, ಅಸಮರ್ಪಕ ಹೃದಯ ಬಡಿತ, ಹೃದಯ ಸಮಸ್ಯೆ, ಬೊಜ್ಜು, ಪಾರ್ಶ್ವವಾಯು, ನರದೌರ್ಬಲ್ಯ ಮತ್ತಿತರೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಆರೋಗ್ಯಕರ ನಿದ್ರೆ ಮಾಡುವುದನ್ನು ರೂಢಿಸಿಕೊಳ್ಳಬೇಕು.

    ನಿದ್ರೆಯಲ್ಲಿ ಮಿದುಳು ಕ್ರಿಯಾಶೀಲ: ನಿದ್ರೆಯಲ್ಲಿದ್ದಾಗ ಮಿದುಳು ಎಚ್ಚರವಾಗಿರುತ್ತದೆ. ಆ ಸಂದರ್ಭದಲ್ಲಿ ಮಿದುಳು ಅನೇಕ ರೀತಿಯ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತದೆ; ದೇಹದ ಇತರೆ ಭಾಗಗಳೊಂದಿಗೆ ಸಂವಹನ ಮಾಡುವ ಮೂಲಕ ಅವುಗಳಿಂದ ಪ್ರತಿಕ್ರಿಯೆ ಪಡೆದುಕೊಳ್ಳುತ್ತದೆ. ಈ ವೇಳೆ ದೇಹದ ನರಗಳಲ್ಲಿ ಬದಲಾವಣೆಗಳು ಉಂಟಾಗುತ್ತವೆ. ಅಗತ್ಯವಾಗಿದ್ದನ್ನು ಇಟ್ಟುಕೊಂಡು ಬೇಡದ ನೆನಪುಗಳನ್ನು ಅಳಿಸಿ ಹಾಕುತ್ತದೆ. ಮಿದುಳಿನ ಕಾರ್ಯಗಳನ್ನು ಮರು ಆಯೋಜನೆ ಮಾಡುವ ಮೂಲಕ ಮುಂದಿನ ದಿನಕ್ಕೆ ದೇಹವನ್ನು ಸಜ್ಜುಗೊಳಿಸುತ್ತದೆ. ಹಾಗಾಗಿ ಮನುಷ್ಯನಿಗೆ ಪ್ರತಿನಿತ್ಯ ಕನಿಷ್ಠ 6-7 ತಾಸು ನಿದ್ರೆ ಅಗತ್ಯವಿದೆ.

    ನೆಮ್ಮದಿಯ ಜೀವನಕ್ಕೆ ಸುಖನಿದ್ರೆ | ಇಂದು ವಿಶ್ವ ನಿದ್ರಾ ದಿನಬದಲಾದ ಜೀವನ ಶೈಲಿ ಹಾಗೂ ಅಸಮರ್ಪಕ ನಿದ್ರೆ ರೂಢಿಸಿಕೊಂಡಿರುವ ವ್ಯಕ್ತಿಯ ಬದುಕಿನ ಗುಣಮಟ್ಟ ಕುಸಿದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇಂದಿನ ವೇಗದ ಯುಗದಲ್ಲಿ ನಿದ್ರೆಗೆ ಇರುವ ಮೌಲ್ಯ ಕುಸಿಯುತ್ತಿದ್ದು, ನಿದ್ರಾಹೀನತೆ ಸಮಸ್ಯೆ ಹೆಚ್ಚುತ್ತಿದೆ. ಹೀಗಾಗಿ ಆರೋಗ್ಯಕರ ಆಹಾರದೊಂದಿಗೆ ನಿದ್ರೆಗೂ ಹೆಚ್ಚು ಮಹತ್ವ ಕೊಡಬೇಕು..

    | ಡಾ. ಎನ್.ಕೆ.ವೆಂಕಟರಮಣ ನರರೋಗ ತಜ್ಞ

    ಆರೋಗ್ಯಪೂರ್ಣ ನಿದ್ರೆಗೆ ಟಿಪ್ಸ್

    • ಪ್ರತಿ ದಿನ ಒಂದೇ ಸಮಯದಲ್ಲಿ ನಿದ್ರೆ ಮಾಡುವುದನ್ನು ರೂಢಿಸಿಕೊಳ್ಳಬೇಕು.
    • ರಾತ್ರಿ ಊಟ ಮತ್ತು ನಿದ್ರೆಯ ನಡುವೆ ಕನಿಷ್ಠ 2 ಗಂಟೆಗಳ ಅಂತರವಿರಲಿ.
    • ಮಲಗಲು ಸರಿಯಾದ ಹಾಸಿಗೆ ಮತ್ತು ದಿಂಬುಗಳನ್ನು ಬಳಸಬೇಕು.
    • ಮಲಗುವ ಕೋಣೆಯನ್ನು ಪದೇಪದೆ ಬದಲಿಸಬೇಡಿ.
    • ರಾತ್ರಿ ವೇಳೆ ಹೊಟ್ಟೆ ಬಿರಿಯುವಷ್ಟು ಊಟ ಮಾಡಬೇಡಿ.
    • ರಾತ್ರಿ ವೇಳೆ ಕೆಫೀನ್, ಕೋಲಾದಂತಹ ತಂಪು ಪಾನೀಯ, ಮದ್ಯ ಸೇವನೆ ಸಲ್ಲದು
    • ಮೊಬೈಲ್, ಲ್ಯಾಪ್​ಟ್ಯಾಪ್, ಟಿ.ವಿ.ರಿಮೋಟ್​ನಂತಹ ಎಲೆಕ್ಟ್ರಾನಿಕ್ ಉಪಕರಣಗಳನ್ನು ಹಾಸಿಗೆಯಿಂದ ದೂರವಿಡಿ.
    • ಮಲಗುವ ಮುನ್ನ ತಲೆಯಲ್ಲಿನ ಚಿಂತೆಗಳನ್ನು ಹೊರಹಾಕಿ. ಅದಕ್ಕಾಗಿ ಸ್ವಲ್ಪ ಸಮಯ ಧ್ಯಾನ ಮಾಡಿ.
    • ಬೆಳಕಿದ್ದರೆ ನಿದ್ರೆ ಬರುವುದು ಕಡಿಮೆ. ಹಾಗಾಗಿ ಕೊಠಡಿಯಲ್ಲಿ ರಾತ್ರಿ ವೇಳೆ ಬೆಳಕು ಬೀಳದಂತಿರಲಿ
    • ರಾತ್ರಿ ಹಾಲು ಕುಡಿದು ಮಲಗುವುದರಿಂದಲೂ ಒಳ್ಳೆಯ ನಿದ್ರೆ ಬರುತ್ತದೆ. ಧ್ಯಾನ ಮಾಡುವುದರಿಂದ ನಿದ್ರಾವಧಿ ಹಾಗೂ ನಿದ್ರೆಯ ಗುಣಮಟ್ಟ ಹೆಚ್ಚುತ್ತದೆ.
    • ಮಲಗುವ ಮುನ್ನ ಟಿವಿ, ಮೊಬೈಲ್ ನೋಡದೆ ಇಂಪಾದ ಸಂಗೀತ ಆಲಿಸಿ.
    • ನಿಯಮಿತ ವ್ಯಾಯಾಮ, ದೈಹಿಕ ಶ್ರಮ ಉತ್ತಮ ನಿದ್ರೆಗೆ ಸಹಾಯಕ.
    • ಮಲಗುವಾಗ ಸಡಿಲ ಉಡುಪುಗಳನ್ನು ಧರಿಸಿ.
    • ಹಗಲು ಹೊತ್ತಿನಲ್ಲಿ ದೀರ್ಘ ನಿದ್ರೆಯ ಅಭ್ಯಾಸ ಬೇಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts