More

    ಮಹಿಳೆಯ ದಿಟ್ಟ ಹೆಜ್ಜೆ; ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆ ಮತ್ತು ಹೆಣ್ಣುಮಕ್ಕಳ ದಿನ..

    ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆ ಮತ್ತು ಹೆಣ್ಣುಮಕ್ಕಳ ದಿನವನ್ನು ಪ್ರತಿ ವರ್ಷ ಫೆಬ್ರವರಿ 11ರಂದು ಆಚರಿಸಬೇಕು ಎಂಬ ತೀರ್ವನವನ್ನು 2015 ಡಿಸೆಂಬರ್ 22ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಯಿತು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರವನ್ನು ಗುರುತಿಸುವುದು ಈ ದಿನದ ಉದ್ದೇಶ. ಬಾಹ್ಯಾಂತರಿಕ್ಷ ಹಾಗೂ ಅನೇಕ ಕ್ಷೇತ್ರಗಳಲ್ಲಿ ಮಹಿಳೆಯ ಸ್ಥಾನ, ದೊರಕುತ್ತಿರುವ ಅವಕಾಶ ಹೆಚ್ಚುತ್ತಿದೆ. ಆದರೂ ಮಹಿಳಾ ಅಸಮಾನತೆಯನ್ನು ವಿಜ್ಞಾನ ಕ್ಷೇತ್ರದಲ್ಲಿ ಸಂಪೂರ್ಣ ಇಲ್ಲವಾಗಿಸಬೇಕಿದೆ. ಎಲೆಮರೆಕಾಯಿಯಂತೆ ಸಂಶೋಧನೆಯಲ್ಲಿ ನಿರತರಾಗಿರುವ, ಮೂಲ ವಿಜ್ಞಾನದಲ್ಲಿ ಕರ್ನಾಟಕದಲ್ಲಿ ತೊಡಗಿಸಿಕೊಂಡಿರುವ ವಿಜ್ಞಾನಿಗಳ ಮಾಹಿತಿ ನೀಡಿದ್ದಾರೆ ರಮೇಶ್ ದೊಡ್ಡಪುರ.

    ಮಿಸೈಲ್ ಮಹಿಳೆ ಟೆಸ್ಸಿ ಥಾಮಸ್

    ಮಹಿಳೆಯ ದಿಟ್ಟ ಹೆಜ್ಜೆ; ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆ ಮತ್ತು ಹೆಣ್ಣುಮಕ್ಕಳ ದಿನ..ಭಾರತದ ಬಾಹ್ಯಾಂತರಿಕ್ಷ ವಿಜ್ಞಾನ ಕ್ಷೇತ್ರದಲ್ಲಿ ಟೆಸ್ಸಿ ಥಾಮಸ್ ಪ್ರಸಿದ್ಧ ಹೆಸರು. ಭಾರತದ ರಕ್ಷಣಾ ಸಾಮರ್ಥ್ಯವನ್ನು ವಿಶ್ವದೆತ್ತರಕ್ಕೆ ಕೊಂಡೊಯ್ದ ಅಗ್ನಿ ಕ್ಷಿಪಣಿ ಯೋಜನೆಯಲ್ಲಿ ಯೋಜನಾ ನಿರ್ದೇಶಕಿಯಾಗಿದ್ದರಿಂದ ‘ಮಿಸೈಲ್ ಮಹಿಳೆ’ ಎಂದೇ ಖ್ಯಾತರಾಗಿದ್ದಾರೆ. ಕ್ಷಿಪಣಿ ತಂಡವನ್ನು ಮುನ್ನಡೆಸಿದ ಮೊದಲ ಮಹಿಳೆ ಟೆಸ್ಸಿ ಥಾಮಸ್, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (ಡಿಆರ್​ಡಿಒ) ವಿಜ್ಞಾನಿ. ವಾತಾವರಣಕ್ಕೆ ಮರುಪ್ರವೇಶದ ವೇಳೆ ಮಿಸೈಲ್ 3 ಸಾವಿರ ಡಿಗ್ರಿ ಸೆಲ್ಸಿಯಸ್​ವರೆಗಿನ ಉಷ್ಣಾಂಶ ಹಾಗೂ ಅತಿ ವೇಗವನ್ನು ತಡೆದುಕೊಳ್ಳಲು ಪ್ರಮುಖ ಸಹಾಯಕವಾದ ಘನ ಇಂಧನದ ಕ್ಷೇತ್ರದಲ್ಲಿ ಟೆಸ್ಸಿ ಥಾಮಸ್ ತಜ್ಞತೆ ಗಳಿಸಿದ್ದಾರೆ. ಡಿಆರ್​ಡಿಒ ವರ್ಷದ ವಿಜ್ಞಾನಿ ಪ್ರಶಸ್ತಿ ಜತೆಗೆ 2012ರಲ್ಲಿ ಸಾರ್ವಜನಿಕ ಆಡಳಿತದಲ್ಲಿ ಅತ್ಯುತ್ತಮ ಸಾಧನೆಗಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕೇರಳ ಮೂಲದವರಾದ ಇವರು, 1988ರಲ್ಲಿ ಡಿಆರ್​ಡಿಒ ವಿಜ್ಞಾನಿಯಾಗಿ ಸೇರ್ಪಡೆಯಾದರು. ಅಗ್ನಿ ಯೋಜನೆಗೆ ಟೆಸ್ಸಿ ಅವರನ್ನು ಡಾ. ಎಪಿಜೆ ಅಬ್ದುಲ್ ಕಲಾಂ ನೇಮಿಸಿದರು.

    ವಿಜ್ಞಾನ ಪ್ರಸರಣದ ದನಿ

    ಮಹಿಳೆಯ ದಿಟ್ಟ ಹೆಜ್ಜೆ; ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆ ಮತ್ತು ಹೆಣ್ಣುಮಕ್ಕಳ ದಿನ..ಕನ್ನಡದಲ್ಲಿ ಬಹುಸಮಯದಿಂದ ವಿಜ್ಞಾನದ ಕುರಿತ ಲೇಖನ-ಪುಸ್ತಕಗಳನ್ನು ಬರೆಯುತ್ತಿರುವ ಅಪರೂಪದ ಸಂವಹನಕಾರರು ಡಾ. ಬಿ. ಎಸ್. ಶೈಲಜಾ. ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕಿಯಾಗಿ ನಿವೃತ್ತಿಯಾಗಿದ್ದಾರೆ. ನಾಸಾದ ಕ್ಲೆಮೆಂಟೈನ್ ಯೋಜನೆಯಿಂದ ದೊರೆತ ಚಂದ್ರನ ಚಿತ್ರಗಳನ್ನು ಆಧರಿಸಿ ಲೂನಾರ್ ಬೇಸಿನ್​ಗಳ ಅವಧಿಯನ್ನು ಕಂಡುಹಿಡಿದಿದ್ದರು. ಖಗೋಳ ಶಾಸ್ತ್ರದ ಕುರಿತು ಅನೇಕ ಅಧ್ಯಯನಗಳು, ಪಠ್ಯಪುಸ್ತಕ ಸಮಿತಿ, ಸಲಹಾ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ವಿವಿಧ ದಿನಪತ್ರಿಕೆಗಳಲ್ಲಿ 300ಕ್ಕೂ ಹೆಚ್ಚು ಲೇಖನ, ಪ್ರತಿಷ್ಠಿತ ನಿಯತಕಾಲಿಕೆಗಳಲ್ಲಿ 120ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದಾರೆ. ‘ಬಾನಿಗೊಂದು ಕೈಪಿಡಿ’, ‘ಸಫಾರಿ ಎಂಬ ಲಕ್ಷುರಿ’, ‘ಶುಕ್ರಗ್ರಹದ ಸಂಕ್ರಮಣ’, ‘ಆಗಸದ ಅಲೆಮಾರಿಗಳು’, ‘ಏನು…? ಗಣಿತ ಅಂದ್ರಾ…?’ ಮುಂತಾದ 17 ಪುಸ್ತಕಗಳನ್ನು ರಚಿಸಿದ್ದಾರೆ. ಅವರು ತಾರಾಲಯ ನಿರ್ದೇಶಕಿಯಾಗಿದ್ದಾಗ ಹೈಬ್ರಿಡ್ ಪ್ರೊಜೆಕ್ಟರ್ ಅಳವಡಿಸಿ, ಖಗೋಳದ ಕುರಿತ ಆಸಕ್ತರ ತಿಳಿವಳಿಕೆ ಹೆಚ್ಚಿಸಲು ಶ್ರಮಿಸಿದರು. ‘ಶುಕ್ರಗ್ರಹದ ಸಂಕ್ರಮಣ’ ಹಾಗೂ ‘ಆಗಸದ ಅಲೆಮಾರಿಗಳು’ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ. 2013ರಲ್ಲಿ ಬಿಡುಗಡೆಯಾದ ‘ಬಾಲಂಕೃತ ಚುಕ್ಕಿ: ಧೂಮಕೇತು’ ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಹಸೂಡಿ ವೆಂಕಟಾಚಲಶಾಸ್ತ್ರಿ ವಿಜ್ಞಾನ ಸಾಹಿತ್ಯ ಪ್ರಶಸ್ತಿ ದೊರೆತಿದೆ.

    ಪರಿಸರ ಸಂರಕ್ಷಣೆಯಲ್ಲಿ ಕೃತಿ

    ಮಹಿಳೆಯ ದಿಟ್ಟ ಹೆಜ್ಜೆ; ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆ ಮತ್ತು ಹೆಣ್ಣುಮಕ್ಕಳ ದಿನ..ಪರಿಸರ ಸಂರಕ್ಷಣೆ ಹಾಗೂ ಅಧ್ಯಯನದಲ್ಲಿ ಕೃತಿ ಕಾರಂತ ಇತ್ತೀಚಿನ ವರ್ಷಗಳಲ್ಲಿ ಕೇಳಿಬರುತ್ತಿರುವ ಯುವ ಹೆಸರು. 2001ರಿಂದಲೂ ಪರಿಸರ ಸಂರಕ್ಷಣೆ, ಸಸ್ತನಿಗಳ ಅಳಿವು, ಮಾನವಶಾಸ್ತ್ರೀಯ ಒತ್ತಡಗಳು, ಮಾನವರ ಸ್ವಯಂಪ್ರೇರಿತ ಸ್ಥಳಾಂತರ, ಪ್ರವಾಸೋದ್ಯಮ ಬೆಳವಣಿಗೆಗಳು, ಮಾನವ- ಪ್ರಾಣಿ ಸಂಘರ್ಷ, ಭಾರತೀಯ ಅರಣ್ಯಗಳಲ್ಲಿ ಭೂಮಿಯ ಬಳಕೆ ಸೇರಿ ಅನೇಕ ವಿಷಯಗಳಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. 16 ವೈಜ್ಞಾನಿಕ ಪ್ರಬಂಧಗಳನ್ನು ಕೃತಿ ಕಾರಂತ ರಚಿಸಿದ್ದಾರೆ. ಫ್ಲೋರಿಡಾ ವಿವಿಯಿಂದ ಪರಿಸರ ವಿಜ್ಞಾನದಲ್ಲಿ ಪದವಿ, ಯೇಲ್ ವಿವಿಯಿಂದ ಸ್ನಾತಕೋತ್ತರ ಪದವಿ ಹಾಗೂ ಪರಿಸರ ಮತ್ತು ನೀತಿ ವಿಷಯದಲ್ಲಿ ಡ್ಯೂಕ್ ವಿವಿಯಿಂದ ಪಿಎಚ್​ಡಿ ಪಡೆದಿದ್ದಾರೆ. 2011-2016ರವರೆಗೆ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ರಾಮಾನುಜನ್ ಫೆಲೋ, ವನ್ಯಜೀವಿ ಸಂರಕ್ಷಣಾ ಪ್ರಶಸ್ತಿ ಸೇರಿ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ. ಅವರು ಖ್ಯಾತ ಪರಿಸರ ತಜ್ಞ ಉಲ್ಲಾಸ್ ಕಾರಂತ ಅವರ ಪುತ್ರಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೆ. ಶಿವರಾಮ ಕಾರಂತರ ಮೊಮ್ಮಗಳು.

    ಯುವ ವಿಜ್ಞಾನಿ ರಂಜನಿ

    ಮಹಿಳೆಯ ದಿಟ್ಟ ಹೆಜ್ಜೆ; ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆ ಮತ್ತು ಹೆಣ್ಣುಮಕ್ಕಳ ದಿನ..2001ರಲ್ಲಿ ಭಾರತೀಯ ವಿಜ್ಞಾನ ಮಂದಿರದಲ್ಲಿ ಎಂಎಸ್ ಪಡೆದ ರಂಜನಿ ವಿಶ್ವನಾಥನ್ ಅದೇ ಸಂಸ್ಥೆಯಲ್ಲಿ ಪಿಎಚ್​ಡಿ ವ್ಯಾಸಂಗ ಮಾಡಿದರು. ಅರೆವಾಹಕ ನ್ಯಾನೊ ಕ್ರಿಸ್ಟಲ್​ಗಳು ಹಾಗೂ ಲೋಹ-ಅರೆ ವಾಹಕಗಳ ಹೈಬ್ರಿಡ್ ಸಂರಚನೆಗಳು ಮತ್ತು ಈ ವಸ್ತುಗಳ ಆಪ್ಟಿಕಲ್, ವಿದ್ಯುನ್ಮಾನ ಹಾಗೂ ಅಯಾಸ್ಕಾಂತೀಯ ಗುಣಲಕ್ಷಣಗಳ ಕುರಿತ ಸಂಶೋಧನೆ ಪ್ರಮುಖ ಕ್ಷೇತ್ರ. ಐಐಎಸ್​ಸಿಯಿಂದಲೇ 2006ರಲ್ಲಿ ಪಿಎಚ್​ಡಿ ವ್ಯಾಸಂಗದ ನಂತರ 2007ರಲ್ಲಿ ಅಮೆರಿಕದ ಅರ್ಕನ್ಸಾಸ್ ವಿವಿಯಲ್ಲಿ ಪೋಸ್ಟ್ ಡಾಕ್ಟೊರಲ್ ಅಧ್ಯಯನಕ್ಕೆ ಸೇರ್ಪಡೆಯಾದರು. 2008ರಲ್ಲಿ ಲಾಸಸ ಅಲ್ಮೊನಾಸ್ ರಾಷ್ಟ್ರೀಯ ಪ್ರಯೋಗಾಲಯದಲ್ಲಿ ಪೋಸ್ಟ್ ಡಾಕ್ಟೊರಲ್ ಫೆಲೋ ಆಗಿ ಸೇರ್ಪಡೆಯಾದರು. 2001ರಿಂದ ಬೆಂಗಳೂರಿನ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ್ಡ ಸೈಂಟಿಫಿಕ್ ರಿಸರ್ಚ್ (ಜೆಎನ್​ಸಿಎಎಸ್​ಆರ್) ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2003ರಿಂದ 2020ರವರೆಗೆ ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ 86 ಸಂಶೋಧನಾ ಪ್ರಬಂಧಗಳು ಪ್ರಕಟವಾಗಿವೆ, 3,334 ಬಾರಿ ರಂಜನಿ ವಿಶ್ವನಾಥನ್ ಅವರ ಸಂಶೋಧನೆ ಇತರ ಸಂಶೋಧನೆಗಳಲ್ಲಿ ಉಲ್ಲೇಖಗೊಂಡಿದೆ(ಸೈಟೇಷನ್). ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯಿಂದ 2018ನೇ ಸಾಲಿನ ಯುವ ವಿಜ್ಞಾನಿ ರಾಜ್ಯ ಪ್ರಶಸ್ತಿ ಲಭಿಸಿದೆ.

    ಕೋಶಗಳ ಜೀವನ ವೀಕ್ಷಣೆ

    ಮಹಿಳೆಯ ದಿಟ್ಟ ಹೆಜ್ಜೆ; ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆ ಮತ್ತು ಹೆಣ್ಣುಮಕ್ಕಳ ದಿನ..ಬೆಂಗಳೂರಿನ ಟಾಟಾ ಇನ್​ಸ್ಟಿಟ್ಯೂಟ್ ಫಾರ್ ಫಂಡಮೆಂಟಲ್ ರಿಸರ್ಚ್​ನಲ್ಲಿ (ಟಿಐಎಫ್​ಆರ್) ಸಹಾಯಕ ಪ್ರಾಧ್ಯಾಪಕಿ ಆಗಿರುವ ಮೈತ್ರೇಯಿ ನರಸಿಂಹ ಅವರೇ ಹೇಳುವಂತೆ, ನೈಜ ವೇಗದಲ್ಲಿ ಕೋಶಗಳ ಬೆಳವಣಿಗೆಯನ್ನು ನೋಡುವುದರಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ. ಬೆಂಗಳೂರಿನ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ನಂತರ ಬ್ರಿಟನ್ನಿನ ಕೇಂಬ್ರಿಜ್ ವಿವಿಯಲ್ಲಿ ಪಿಎಚ್​ಡಿ ಪದವಿ ಗಳಿಸಿದರು. ಕೋಶಗಳ ನಡುವೆ ಸಂವಹನವನ್ನು ಪೂರಕಗೊಳಿಸುವ ಅಢೆಷನ್ ಮಾಲಿಕ್ಯೂಲ್​ಗಳ ಕುರಿತು ಅಧ್ಯಯನ ನಡೆಸುತ್ತ ಎರಡು ಸ್ನಾತಕೋತ್ತರ ಪದವಿ ಗಳಿಸಿದರು. ಅಂಗಾಂಶಗಳ ಒಳಗಿರುವ ಕೋಶಗಳ ನಡವಳಿಕೆ, ಈ ನಡವಳಿಕೆಗಳಿಂದಾಗಿ ಅಂಗಾಂಶಗಳು ಅಂತಿಮ ಸ್ವರೂಪ ಪಡೆಯಲು ಯಾವ ರೀತಿ ಸಹಾಯಕವಾಗುತ್ತದೆ ಎಂಬುದರ ಕುರಿತು ತಮ್ಮ ತಂಡದೊಂದಿಗೆ ಸಂಶೋಧನೆ ನಡೆಸಿದ್ದಾರೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ 23 ಸಂಶೋಧನಾ ಪ್ರಬಂಧಗಳು ಪ್ರಕಟವಾಗಿದ್ದು, 810 ಉಲ್ಲೇಖಗಳಾಗಿವೆ. ಮೈತ್ರೇಯಿ ನರಸಿಂಹ ಅವರು ವಿಶ್ವವಿಖ್ಯಾತ ವೈಮಾನಿಕ ಹಾಗೂ ದ್ರವಚಲನ ಶಾಸ್ತ್ರ ವಿಜ್ಞಾನಿ, ಪದ್ಮವಿಭೂಷಣ ಪುರಸ್ಕೃತ ಪ್ರೊ. ರೊದ್ದಂ ನರಸಿಂಹ ಅವರ ಪುತ್ರಿ.

    ಬಯೋಮೆಕ್ಯಾನಿಕ್ಸ್ ರಂಗದ ಸಾಧಕಿ

    ಮಹಿಳೆಯ ದಿಟ್ಟ ಹೆಜ್ಜೆ; ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆ ಮತ್ತು ಹೆಣ್ಣುಮಕ್ಕಳ ದಿನ..ಪುಣೆ ವಿವಿಯಿಂದ 1994ರಲ್ಲಿ ಭೌತಶಾಸ್ತ್ರದಲ್ಲಿ ಎಂಎಸ್​ಸಿ ಪದವಿ ಪಡೆದ ನಮ್ರತಾ ಗುಂಡಯ್ಯ, ಅಮೆರಿಕದ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಿಂದ 2004ರಲ್ಲಿ ಎಂಎಸ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್​ನಲ್ಲಿ ಪಿಎಚ್​ಡಿ ಪಡೆದರು. ಅದೇ ವಿವಿಯಲ್ಲಿ ಪೋಸ್ಟ್ ಡಾಕ್ಟೋರಲ್ ವರ್ಕ್ ನಂತರ 2008ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಸೇರ್ಪಡೆಯಾದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ಕ್ಷೇತ್ರದವರಾದರೂ ಹೃದಯ ರಕ್ತನಾಳ ಅಂಗಾಂಶಗಳ ಕುರಿತು ಬಯೋಮೆಕ್ಯಾನಿಕ್ಸ್ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಷಯಗಳಾದ ನಾನ್​ಲೀನಿಯರ್ ಎಲಾಸ್ಟಿಸಿಟಿ ಹಾಗೂ ಸಂಯುಕ್ತ ವಸ್ತುಗಳ ಯಂತ್ರಶಾಸ್ತ್ರ(ಮೆಕ್ಯಾನಿಕ್ಸ್ ಆಫ್ ಕಾಂಪೊಸಿಟ್ ಮೆಟೀರಿಯಲ್ಸ್) ಸಿದ್ಧಾಂತಗಳ ಆಧಾರದಲ್ಲಿ ಅಪಧಮನಿಗಳು ಹಾಗೂ ಹೃದಯ ಸ್ನಾಯುಗಳ ಸಮಸ್ಯೆ ಕುರಿತು ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಯಾವುದೇ ಜೀವಂತ ವಸ್ತುವಿನ ಮೂಲ ಕಾರ್ಯಧಾತುವಾದ ಕೋಶವೇ ಪ್ರಕೃತಿಯ ಎಲ್ಲ ವೈವಿಧ್ಯಮಯ ರಚನೆಗೆ ಕಾರಣ. ಪ್ರತ್ಯೇಕ ಕೋಶಗಳು ಹೇಗೆ ಒಟ್ಟಾಗುತ್ತವೆ ಹಾಗೂ ರೂಪವನ್ನು ಪಡೆಯಲು ಹೇಗೆ ವಿಭಜನೆಯಾಗುತ್ತವೆ, ಹೇಗೆ ಸಂಕೀರ್ಣ ಅಂಗಾಂಶ ಹಾಗೂ ಅಂಗಗಳಾಗಿ ಮಾರ್ಪಡುತ್ತವೆ ಎಂಬುದು ವಿಜ್ಞಾನಿಗಳಿಗೆ ಕುತೂಹಲದ ವಿಷಯ. ಕೋಶಗಳ ಜೋಡಣೆ ಹಾಗೂ ವರ್ಗಾವಣೆಯಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರಾಯೋಗಿಕ ಹಾಗೂ ಕಂಪ್ಯೂಟರ್ ಆಧರಿತ ಉಪಕರಣಗಳನ್ನು ನಮ್ರತಾ ಗುಂಡಯ್ಯ ಅವರ ತಂಡ ಅಭಿವೃದ್ಧಿಪಡಿಸಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ 25 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದು, 425 ಪ್ರಬಂಧಗಳಲ್ಲಿ ಅವರ ಸಂಶೋಧನೆ ಉಲ್ಲೇಖಗೊಂಡಿದೆ (ಸೈಟೇಷನ್).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts