More

    ಬ್ರಾಹ್ಮ-ಕ್ಷಾತ್ರಗಳ ಸಂಗಮ ಛತ್ರಪತಿ ಶಿವಾಜಿ

    ಅಮ್ಮ ಜೀಜಾಬಾಯಿಯ ರಾಷ್ಟ್ರಧರ್ಮದ ಪಾಠಗಳು, ಅಪ್ಪ ಶಹಾಜಿಯ ಧರ್ಮರಕ್ಷಣೆಯ ದೀಕ್ಷೆಯ ಶ್ರೀರಕ್ಷೆಯ ಬೆಳಕಿನಲ್ಲಿ ನಿತ್ಯಹರಿದ್ವರ್ಣದ ಸಹ್ಯಾದ್ರಿಯ ಮಡಿಲಲ್ಲಿ ಹಿಂದೂಸಾಮ್ರಾಜ್ಯದ ಕನಸನ್ನು ಕಂಡ ಬಾಲಕ ಶಿವಾಜಿ ಎದುರಿಗಿದ್ದುದು ಸವಾಲುಗಳ ಸರಮಾಲೆ. ಧೀಮಂತ ನಡೆಗಳಿಂದ ಆದಿಲ್ ಶಾಹನಿಗೆ ಸೋಲುಣಿಸಿದ ಶಿವಾಜಿ ಅವರ ಎದುರಿದ್ದುದು ಅಫಜಲ ಖಾನನೆಂಬ ದೈತ್ಯದೇಹಿ. 1674ರ ಸಂದರ್ಭದಲ್ಲಿ ವೀರಯೋದ್ಧಾ ಆಗಿ ಹಿಂದೂ ಸಾಮ್ರಾಜ್ಯ ವಿಸ್ತರಿಸಿದ ಶಿವಾಜಿ ‘ಛತ್ರಪತಿ’ ಆದರು. ದೆಹಲಿಯಿಂದ ತಂಜಾವೂರುವರೆಗೆ ಸಾಮ್ರಾಜ್ಯ ವಿಸ್ತರಿಸಿ, 3,331 ಕೋಟೆಗಳನ್ನು ಕೈವಶ ಮಾಡಿಕೊಂಡಿದ್ದರು.

    ತುಳಜಾಭವಾನಿಯ ಮಂದಿರವನ್ನು ಧ್ವಂಸಗೊಳಿಸಿ ‘ನನಗಾರೂ ಸಮನಿಲ್ಲ’ ಎಂದು ಆಕಾಶದೆತ್ತರಕ್ಕೆ ನೆಗೆದ ಅಫ್ಜಲನನ್ನು ಪಾತಾಳಕ್ಕೆ ನೂಕಿದ ಶಿವಾಜಿ ಸಾಹಸ ಸಹಚರರಿಗೆ ಸ್ಪೂರ್ತಿಯಾಯಿತು. ಈ ಗೆಲುವಿನ ನಂತರ ಮರಾಠಾಸಾಮ್ರಾಜ್ಯ ಮುಟ್ಟಿದ್ದೆಲ್ಲ ಚಿನ್ನವಾಯಿತು. ಪ್ರಭುರಕ್ಷಣೆಗಾಗಿ ಕಾದಾಡಿ, ವಿಜಯತೋಪು ಹಾರಾಡುವವರೆಗೂ ಉಸಿರನ್ನು ಹಿಡಿದಿಟ್ಟು ಹೋರಾಡಿದ ಬಾಜಿಪ್ರಭು ದೇಶಪಾಂಡೆಯ ಪಾವನಖಿಂಡಿ; ಮನೆಯ ಸೌಭಾಗ್ಯವನ್ನು ಪಣಕ್ಕಿಟ್ಟು, ಸ್ವರಾಜ್ಯದ ಉದಯಕ್ಕಾಗಿ ಪ್ರಾಣಾರ್ಪಣೆಗೈದ ತಾನಾಜಿ ಮಾಲಸುರೆಯ ಸಿಂಹಗಢದ ಹೋರಾಟವಂತೂ ಅವರ್ಣನೀಯ.

    ಮೊಘಲ್ ಪರಂಪರೆಯಲ್ಲೇ ಅತ್ಯಂತ ಕ್ರೂರಿಯಾದ ಔರಂಗಜೇಬನನ್ನು ಮಣಿಸುವುದು ಸುಲಭದ ಮಾತಲ್ಲ. ಶಹಿಸ್ತಾಖಾನನ ಗರ್ವಭಂಗ, ಮೊಘಲ್ ಅರ್ಥಕೇಂದ್ರ ಸೂರತ್ ಅನ್ನು ವಶಪಡಿಸಿದ್ದ ಸ್ವರಾಜ್ಯಸೈನ್ಯದ ಗುರಿ ಸ್ಪಷ್ಟವಾಗಿತ್ತು. ಆಗ್ರಾದಲ್ಲಿ ಮೊಘಲರಿಗೆ ಸಿಕ್ಕಿಬಿದ್ದ ಶಿವಾಜಿ, ಔರಂಗಜೇಬನ ಸೈನ್ಯಕ್ಕೆ ಚಳ್ಳೆಹಣ್ಣು ತಿನ್ನಿಸಿ ಮರಳಿದ್ದು ಪ್ರಾಯಶಃ ವಿಶ್ವದ ಇತಿಹಾಸದಲ್ಲೇ ಅಚ್ಚರಿಯ ಸಂಗತಿ. ಮರಾಠಾಸೈನ್ಯದ ದಾಳಿಗೆ ಸೋತು ಸುಣ್ಣಾಗಿದ್ದ ಮೊಘಲರು ದಕ್ಷಿಣದ ಸಹವಾಸವೇ ಬೇಡವೆಂದು ಕೈ ಮುಗಿದರು. ಶಿವಾಜಿ ಯುದ್ಧತಂತ್ರದೆದುರು ಇಂಗ್ಲಿಷರು, ಡಚ್ಚರು ಪೆಚ್ಚಾದರು. ಶಿವಾಜಿ ರಾಜ್ಯಸ್ಥಾಪನೆಯ ಮೂಲಕ ಹಿಂದೂ ಸಮಾಜದ ಸಹಸ್ರಮಾನದ ಕನಸು ನನಸಾಯಿತು. ಸಮರ್ಥ ರಾಮದಾಸ, ದಾದಾಜಿ ಕೊಂಡದೇವರಂತೂ, ಪಾಪಿಗಳ, ದೇವದ್ವೇಷಿಗಳ ನಿರ್ನಾಮವಾಗಿ ಆನಂದಭುವಿಯ ನಿರ್ವಣವಾಯಿತೆಂದು ಹಷೋದ್ಗಾರಗೈದರು.

    ಪೂರ್ವಜರು ಗದಗ ಜಿಲ್ಲೆಯವರು

    ಮರಾಠಿ ಸಾಹಿತಿ ಡಾ. ರಾಮಚಂದ್ರ ಚಿಂತಾಮಣಿ ಢೇರಿ ಛತ್ರಪತಿ ಶಿವಾಜಿ ಚರಿತ್ರೆ ಕುರಿತಾಗಿ ‘ಶಿಖರ ಸಿಂಗಣಾಪುರಚ ಶಂಭು ಮಹಾರಾಜ್’ ಎಂಬ ಸಂಶೋಧನಾತ್ಮಕ ಪುಸ್ತಕ ಬರೆದಿದ್ದಾರೆ. ಮರಾಠಿಯಲ್ಲಿರುವ ಈ ಪುಸ್ತಕವನ್ನು ಸರಜೂ ಕಾಟ್ಕರ್ ‘ಶಿವಾಜಿ ಮೂಲ ಕನ್ನಡ ನೆಲ’ ಹೆಸರಿನಲ್ಲಿ ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಈ ಪುಸ್ತಕ ಹಾಗೂ ಮೂಲ ಮರಾಠಿ ಪುಸ್ತಕದ ಪ್ರಕಾರ ಶಿವಾಜಿ ಕನ್ನಡಿಗರು. ಶಿವಾಜಿ ಪೂರ್ವಜರು ಈಗಿನ ಗದಗ ಜಿಲ್ಲೆಯ ಗದಗ ತಾಲೂಕಿನ ಸೊರಟೂರು ಗ್ರಾಮದವರು. ಸೊರಟೂರಿನ ‘ಬಳಿಯಪ್ಪ’ ಎಂಬಾತ ಶಿವಾಜಿ ಕುಟುಂಬದ ಮೂಲಪುರುಷ ಎಂಬುದಾಗಿ ತಿಳಿದುಬರುತ್ತದೆ.

    ಸಮರ್ಥ ರಾಮದಾಸರ ಮಾರ್ಗದರ್ಶನ

    ಶಿವಾಜಿ ಔರಂಗಜೇಬನ ಬಂಧನದಿಂದ ತಪ್ಪಿಸಿಕೊಂಡು ಆಗ್ರಾದಿಂದ ಬರುವಾಗ ಸಮರ್ಥ ರಾಮದಾಸರ ಮಠಗಳಲ್ಲಿ ಆಶ್ರಯ ಪಡೆದಿದ್ದರು. ರಾಜನಾದ ಬಳಿಕ ಶಿವಾಜಿ ಸಮರ್ಥ ರಾಮದಾಸರನ್ನು ಕಾಣಲು ಬಯಸಿ ಅವರ ಆಶ್ರಮಕ್ಕೆ ತೆರಳಿದಾಗ, ಸಂಜೆಯವರೆಗೆ ಕಾದರೂ ಸಮರ್ಥರ ದರ್ಶನವಾಗಲಿಲ್ಲ. ನಂತರ ಪ್ರತಾಪಗಢಕ್ಕೆ ಹಿಂತಿರುಗಿದರು. ಹೀಗೆ ಹಲವಾರು ಬಾರಿ ರಾಮದಾಸರ ಭೇಟಿಗೆ ಪ್ರಯತ್ನ ಪಟ್ಟಾಗ ದರುಶನವಾಗದೇ ನಿರಾಸೆಗೊಂಡರು. ಒಂದು ದಿನ ರಾತ್ರಿ ಶಿವಾಜಿ ತನ್ನ ಕುಲದೇವತೆಯಾದ ಭವಾನಿ ದೇವಿಯ ಮಂದಿರಕ್ಕೆ ಹೋಗಿ, ದೇವಿಮೂರ್ತಿ ಮುಂದೆ ಧ್ಯಾನಸ್ಥರಾದರು. ಆಗ ಶಿವಾಜಿಗೆ ಸ್ವಪ್ನದಲ್ಲಿ ಸಮರ್ಥ ರಾಮದಾಸರ ದರ್ಶನವಾಯಿತು. ಮತ್ತು ರಾಮದಾಸರು ಶಿವಾಜಿ ತಲೆಯ ಮೇಲೆ ಕೈಯಿಟ್ಟು ಪ್ರೀತಿಯಿಂದ ಆಶೀರ್ವದಿಸಿದರು. ಶಿವಾಜಿ ಆ ಕ್ಷಣದಿಂದ ರಾಮದಾಸರು ತನ್ನ ಗುರು ಎಂದು ಪರಿಗಣಿಸಿದರು. ಮುಂದಿನ ಎಲ್ಲ ರಾಜಕಾರ್ಯಗಳಲ್ಲಿ ರಾಮದಾಸರ ಮಾರ್ಗದರ್ಶನವಿಲ್ಲದೇ ಮುಂದುವರಿಯಲಿಲ್ಲ.

    ಮಾದರಿ ಆಡಳಿತ: ಶಿವಾಜಿ ಆಡಳಿತ ಭಾರತದ ಸ್ವರ್ಣಯುಗಗಳಲ್ಲೊಂದು. ಉತ್ಕೃಷ್ಟವಾದ ಪ್ರಜಾಪ್ರಭುತ್ವ ಸಿದ್ಧಾಂತವನ್ನು ಅಷ್ಟಪ್ರಧಾನರ ಮೂಲಕ ಸಾಧಿಸಿದ ಶಿವಾಜಿ ಮಹಾರಾಜರ ಆರ್ಥಿಕ ಶಿಸ್ತು ಇಂದಿಗೂ ಮಾದರಿ. ನ್ಯಾಯ, ಅಧ್ಯಾತ್ಮ, ಸೈನ್ಯ, ರಾಜಕೀಯ ವ್ಯವಹಾರ, ವಿದೇಶಿನೀತಿ ಲೆಕ್ಕಾಚಾರಗಳಲ್ಲಿ ಸಮಗ್ರ ಭಾರತಕ್ಕೆ ಅನ್ವಯವಾಗುವಂತೆ ಮಾರ್ಗದರ್ಶಿ ಸೂತ್ರವನ್ನು ಹಾಕಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts